ಆರೋಗ್ಯ ಸೌಲಭ್ಯಗಳ ಕೊರತೆಯಿಂದ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿ 24 ವರ್ಷದ ಆದಿವಾಸಿ ಮಹಿಳೆಯೊಬ್ಬರು ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ್ದು, ಮಗುವಿನ ಹೊಕ್ಕುಳ ಬಳ್ಳಿಯನ್ನು ಸ್ಥಳೀಯರು ಕಲ್ಲಿನಿಂದ ಕತ್ತರಿಸಿದ್ದಾರೆ ಎಂದು ಹೇಳಲಾಗ್ತಿದೆ.
ವರದಿಗಳ ಪ್ರಕಾರ, ಮೇ 25 ಶಾಂತಾಬಾಯಿ ಬರೇಲಾ ಎಂಬ 24 ವರ್ಷದ ಮಹಿಳೆಯ ಹೆರಿಗೆ ದಿನಾಂಕ ಆಗಿತ್ತು. ಆದರೆ, ಮೇ 21ರಂದು ಆಕೆಗೆ ಹೊಟ್ಟೆಯಲ್ಲಿ ತೀವ್ರ ನೋವು ಕಾಣಿಸಿಕೊಂಡಿದೆ. ಈ ವೇಳೆ ಗಂಡ ವಿಶ್ವನಾಥ್ ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದಾರೆ. ಸುಮಾರು 30 ನಿಮಿಷ ಕಾದರೂ ಆಂಬ್ಯುಲೆನ್ಸ್ ಬಂದಿರಲಿಲ್ಲ. ಹಾಗಾಗಿ, ವಿಶ್ವನಾಥ್ ಹೆಂಡತಿಯನ್ನು ಬೈಕ್‌ನಲ್ಲಿ ಕುಳ್ಳಿರಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇನ್ನೇನು ಆಸ್ಪತ್ರೆ ತಲುಪಲು ಒಂದೂವರೆ ಕಿಲೋ ಮೀಟರ್ ಇರುವಾಗ ಮಹಿಳೆಗೆ ರಸ್ತೆಯಲ್ಲೇ ಹೆರಿಗೆಯಾಗಿದೆ.
ಇದಕ್ಕೆ ಸಂಬಂಧಿಸಿದ್ದು ಎನ್ನಲಾದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಮೂರ್ನಾಲ್ಕು ಮಹಿಳೆಯರು ಸೀರೆಯನ್ನು ಅಡ್ಡಲಾಗಿ ಹಿಡಿದು ರಸ್ತೆ ಬದಿಯಲ್ಲಿ ಮಹಿಳೆ ಹೆರಿಗೆ ಮಾಡಿಸಿದ ದೃಶ್ಯವಿದೆ. ಮಹಿಳೆಯ ಗಂಡ ಎನ್ನಲಾದ ವ್ಯಕ್ತಿಯೂ ಅಲ್ಲೇ ನಿಂತಿರುವುದನ್ನು ಕಾಣಬಹುದು.
In Maharashtra’s Jalgaon district, an Adivasi woman was forced to give birth on the roadside due to the non-availability of an ambulance and medical assistance. pic.twitter.com/5P3FQRXgXj
— The Dalit Voice (@ambedkariteIND) May 31, 2025
ಜಲಗಾಂವ್ ಜಿಲ್ಲೆಯ ಚೋಪ್ರಾ ತಾಲೂಕಿನ ಬೋರ್ಮೆ ಗ್ರಾಮದ ಆದಿವಾಸಿ ಮಹಿಳೆಗೆ ರಸ್ತೆಯಲ್ಲಿ ಹೆರಿಗೆಯಾಗಿದೆ. ಈಕೆಯ ಮನೆಯಿಂದ ಸುಮಾರು 55 ಕಿಲೋ ಮೀಟರ್ ದೂರದ ವಿಜಾಪುರ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಅಲ್ಲಿಗೆ ತಲುಪಲು ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬಂದಿರಲಿಲ್ಲ ಎಂದು ವರದಿಗಳು ಹೇಳಿವೆ.
ಮಹಿಳೆಗೆ ರಸ್ತೆಯಲ್ಲೇ ಹೆರಿಗೆಯಾಗಿದ್ದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಜನರಿಗೆ ಅಗತ್ಯ ಆರೋಗ್ಯ ಸೌಲಭ್ಯಗಳನ್ನು ಒದಗಿಸಿಕೊಡದ ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ವಂಚಿತ್ ಬಹುಜನ ಅಘಾಡಿ ಪಕ್ಷದ ಸಂಸ್ಥಾಪಕ ಪ್ರಕಾಶ್ ಅಂಬೇಡ್ಕರ್ ಈ ಘಟನೆ ಸಂಬಂಧ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
“ಮಹಿಳೆ ರಸ್ತೆಯಲ್ಲೇ ಮಗುವಿನ ಜನ್ಮ ನೀಡಿದ್ದು ಮಾತ್ರವಲ್ಲದೆ, ಮಗುವಿನ ಹೊಕ್ಕುಳ ಬಳ್ಳಿಯನ್ನು ಕಲ್ಲಿನ ಕತ್ತರಿಸಲಾಗಿದೆ. ಇದು ಕೇವಲ ದುರಂತ ಘಟನೆಯಲ್ಲ. ಇದು ದಶಕಗಳ ರಾಜಕೀಯ ವೈಫಲ್ಯದ ಖಂಡನೀಯ ದೋಷಾರೋಪಣೆಯಾಗಿದೆ. ಅಭಿವೃದ್ಧಿಯ ಭವ್ಯ ಭರವಸೆಗಳ ಹೊರತಾಗಿಯೂ, ತಳ ಮಟ್ಟದ ಜನರಿಗೆ ಅತ್ಯಂತ ಮೂಲಭೂತ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ಪ್ರಸ್ತುತ ಬಿಜೆಪಿ ನೇತೃತ್ವದ ಸರ್ಕಾರವು ಸಂಪೂರ್ಣವಾಗಿ ವಿಫಲವಾಗಿದೆ” ಎಂದು ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ.
“ಬಿಜೆಪಿ, ಶಿವಸೇನೆ, ಕಾಂಗ್ರೆಸ್, ಎನ್‌ಸಿಪಿ ಅಥವಾ ಇತರ ಸರ್ಕಾರಗಳು ಹಿಂದುಳಿದವರ ಆರೋಗ್ಯ ಮೂಲಸೌಕರ್ಯವನ್ನು ವ್ಯವಸ್ಥಿತವಾಗಿ ನಿರ್ಲಕ್ಷಿಸಿವೆ. ಈ ಪಕ್ಷಗಳು ಆಸ್ಪತ್ರೆಗಳ ಬದಲಿಗೆ ಮತ ಬ್ಯಾಂಕುಗಳನ್ನು ನಿರ್ಮಿಸಿಕೊಂಡಿದ್ದಾರೆ. ಉಳಿದಿರುವುದು ದುರ್ಬಲಗೊಂಡ ಮೂಲಸೌಕರ್ಯವಾಗಿದ್ದು, ತಳಮಟ್ಟದ ಜನರಿಗೆ ಹೆಚ್ಚು ಅಗತ್ಯವಿರುವಾಗ ಅದು ಅವರ ಕೈಬಿಡುತ್ತದೆ. ಸರ್ಕಾರಗಳು ಸಾರ್ವಜನಿಕ ಆರೋಗ್ಯವನ್ನು ಹಕ್ಕಲ್ಲ, ಘೋಷಣೆಯಾಗಿ ಪರಿಗಣಿಸಿದಾಗ ಮಾತ್ರ ಇದು ಸಂಭವಿಸುತ್ತದೆ. ಬೆಲೆಯನ್ನು ರಕ್ತದಲ್ಲಿ ಪಾವತಿಸಲಾಗುತ್ತಿದೆ. ಆರೋಗ್ಯ ಉಪಕರಣಗಳು ಇರಬೇಕಾದ ಸ್ಥಳಗಳಲ್ಲಿ ಕಲ್ಲುಗಳಿವೆ” ಎಂದು ಹೇಳಿದ್ದಾರೆ.
In Maharashtra’s Jalgaon district, an Adivasi woman was forced to give birth on the roadside due to the non-availability of an ambulance and medical assistance.
As if that ordeal weren’t harrowing enough, what followed was even more disturbing — the newborn’s umbilical cord had… pic.twitter.com/9VlSsIwEmH— Prakash Ambedkar (@Prksh_Ambedkar) May 29, 2025
ರಸ್ತೆಯಲ್ಲಿ ದಾರಿಹೋಕರು ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರತಿಭಾ ಶಿಂಧೆ ಆರೋಪಿಸಿದ್ದಾರೆ. ಇದನ್ನು ಅಲ್ಲಗಳೆದಿರುವ ಜಿಲ್ಲಾಧಿಕಾರಿ ಆಯುಷ್ ಪ್ರಸಾದ್, ಅಂಗನವಾಡಿ ಕಾರ್ಯಕರ್ತೆ ಮತ್ತು ಸೂಲಗಿತ್ತಿಯೊಬ್ಬರು ಹೆರಿಗೆ ಮಾಡಿಸಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಆಸ್ಪತ್ರೆಗೆ ಬರುವ ಮಾರ್ಗ ಮಧ್ಯೆ ಹೆರಿಗೆ ನೋವು ಹೆಚ್ಚಾದ ಕಾರಣ ತರಬೇತಿ ಪಡೆದ ಸೂಲಗಿತ್ತಿ ಮತ್ತು ಅಂಗನವಾಡಿ ಸಹಾಯಕಿ ಹೆರಿಗೆ ಮಾಡಿಸಿದ್ದಾರೆ. ಹೆರಿಗೆಯಾದ ಬಳಿಕ ಮಹಿಳೆಯನ್ನು ಮತ್ತು ಮಗುವನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆತರಲಾಗಿದೆ ಎಂದು ಹೇಳಿದ್ದಾರೆ.
ಜಿಲ್ಲಾಧಿಕಾರಿಯ ಹೇಳಿಕೆ ಸುಳ್ಳು ಎಂದಿರುವ ಪ್ರತಿಭಾ ಶಿಂಧೆ, “ಯಾವುದೇ ಅಂಗನವಾಡಿ ಸಹಾಯಕಿ ಅಥವಾ ಸೂಲಗಿತ್ತಿ ಸ್ಥಳದಲ್ಲಿ ಇರಲಿಲ್ಲ. ಆಸ್ಪತ್ರೆಯಿಂದ ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬಂದಿರಲಿಲ್ಲ. ಹಾಗಾಗಿ ಮಹಿಳೆಯ ಪತಿ ಬೈಕ್ಸ್‌ನಲ್ಲಿ ಆಕೆಯನ್ನು ಕರೆದೊಯ್ಯಲು ಮುಂದಾಗಿದ್ದರು. ಈ ವೇಳೆ ಮಾರ್ಗ ಮಧ್ಯ ಹೆರಿಗೆಯಾಗಿದೆ. ಸ್ಥಳೀಯ ಮಹಿಳೆಯರು ಮಹಿಳೆಯರ ನೆರವಿಗೆ ಬಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಘಟನೆಯು ಜಿಲ್ಲೆಯ ಸಾರ್ವಜನಿಕ ಆರೋಗ್ಯ ರಕ್ಷಣಾ ವ್ಯವಸ್ಥೆಯಲ್ಲಿನ ಗಂಭೀರ ಕೊರೆತೆಯನ್ನು ತೋರಿಸುತ್ತದೆ ಎಂದಿರುವ ಶಿಂಧೆ, ಜಲಗಾಂವ್ ಜಿಲ್ಲೆಯಿಂದ ಮೂವರು ಮಂತ್ರಿಗಳಿದ್ದರೂ ಇಂತಹ ಅವ್ಯವಸ್ಥೆ ಇರುವುದು ದುರಂತ ಎಂದು ಕಿಡಿಕಾರಿದ್ದಾರೆ.
ಪ್ರಕರಣದ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿ ಮತ್ತು ಸಿವಿಲ್ ಸರ್ಜನ್ ಮೂಲಕ ತನಿಖೆಗೆ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಸಾದ್ ತಿಳಿಸಿದ್ದಾರೆ.
ದಲಿತ ಕುಟುಂಬದ ಮದುವೆ ಮೆರವಣಿಗೆ ಮೇಲೆ ದಾಳಿ; ಮೂರು ದಶಕಗಳ ನಂತರ 32 ಜನರಿಗೆ ಶಿಕ್ಷೆ ಪ್ರಕಟ


