ತಮಿಳುನಾಡಿನ ಪ್ರತಿಷ್ಠಿತ ಅಣ್ಣಾ ವಿಶ್ವ ವಿದ್ಯಾಲಯದ ಲೈಂಗಿಕ ದೌರ್ಜನ್ಯ ಪ್ರಕರಣದ ಏಕೈಕ ಅಪರಾಧಿ 37 ವರ್ಷದ ಜ್ಞಾನಶೇಖರನ್‌ಗೆ ಚೆನ್ನೈನ ಮಹಿಳಾ ನ್ಯಾಯಾಲಯ ಸೋಮವಾರ (ಜೂ.2) 30 ವರ್ಷಗಳ ವಿನಾಯಿತಿ ಇಲ್ಲ ಜೀವಾವಧಿ ಶಿಕ್ಷೆ ವಿಧಿಸಿದೆ.
ಕಳೆದ ವಾರ, ನ್ಯಾಯಾಲಯವು ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 64(1) (ಅತ್ಯಾಚಾರ) ಸೇರಿದಂತೆ 11 ನಿಬಂಧನೆಗಳ ಅಡಿಯಲ್ಲಿ ಜ್ಞಾನಶೇಖರನ್ ದೋಷಿ ಎಂದು ಘೋಷಿಸಿತ್ತು. ಇಂದು (ಸೋಮವಾರ) ಶಿಕ್ಷೆ ಪ್ರಮಾಣ ಘೋಷಿಸುವುದಾಗಿ ತಿಳಿಸಿತ್ತು.
ಸೋಮವಾರ ಪುಳಲ್‌ನ ಕೇಂದ್ರ ಕಾರಾಗೃಹದಿಂದ ಪೊಲೀಸ್ ವ್ಯಾನ್‌ನಲ್ಲಿ ಜ್ಞಾನಶೇಖರನ್ ಅವರನ್ನು ನ್ಯಾಯಾಲಯದ ಆವರಣಕ್ಕೆ ಬಿಗಿ ಭದ್ರತೆಯ ನಡುವೆ ಕರೆತರಲಾಗಿತ್ತು. ವಿಚಾರಣಾ ನ್ಯಾಯಾಲಯದ (ಮಹಿಳಾ ನ್ಯಾಯಾಲಯ) ನ್ಯಾಯಾಧೀಶೆ ಎಂ. ರಾಜಲಕ್ಷ್ಮಿ ಅವರ ಮುಂದೆ ಅವರನ್ನು ಹಾಜರುಪಡಿಸಲಾಗಿತ್ತು.
ಶಿಕ್ಷೆಯನ್ನು ಓದಿದ ನ್ಯಾಯಾಧೀಶರು, “ಬಿಎನ್‌ಎಸ್‌ನ ಸೆಕ್ಷನ್ 64(1) ರ ಅಡಿಯಲ್ಲಿನ ಅಪರಾಧಕ್ಕಾಗಿ ನಿಮಗೆ ಕನಿಷ್ಠ 30 ವರ್ಷಗಳ ಅವಧಿಗೆ ವಿನಾಯಿತಿ ಇಲ್ಲದ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತಿದೆ. ಅಲ್ಲದೆ, ಈ ಸೆಕ್ಷನ್ ಅಡಿಯಲ್ಲಿ 25,000 ರೂಪಾಯಿ ದಂಡವನ್ನು ವಿಧಿಸಲಾಗುತ್ತಿದೆ. ನೀವು ದಂಡವನ್ನು ಪಾವತಿಸಲು ವಿಫಲವಾದರೆ, ಹೆಚ್ಚುವರಿಯಾಗಿ ಮೂರು ತಿಂಗಳ ಕಾಲ ಸರಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ” ಎಂದು ಹೇಳಿದ್ದಾಗಿ ವರದಿಯಾಗಿದೆ.
ಅಪರಾಧ ಸಾಬೀತಾದ ಕಾರಣ ನ್ಯಾಯಾಲಯವು ಒಂದು ತಿಂಗಳಿನಿಂದ 10 ವರ್ಷಗಳವರೆಗೆ ಪ್ರತ್ಯೇಕ ಶಿಕ್ಷೆಯನ್ನು ನೀಡಿದೆ ಮತ್ತು ಬಿಎನ್‌ಎಸ್, ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ತಮಿಳುನಾಡು ಮಹಿಳಾ ಕಿರುಕುಳ ನಿಷೇಧ ಕಾಯ್ದೆಯ 10 ಸೆಕ್ಷನ್‌ಗಳ ಅಡಿಯಲ್ಲಿ ಹೆಚ್ಚಿನ ದಂಡವನ್ನು ವಿಧಿಸಿದೆ. ಎಲ್ಲಾ ಶಿಕ್ಷೆಗಳು ಏಕಕಾಲದಲ್ಲಿ ಜಾರಿಯಲ್ಲಿರುತ್ತವೆ ಮತ್ತು ಜ್ಞಾನಶೇಖರ್‌ಗೆ ಒಟ್ಟು 90,000 ರೂಪಾಯಿ ದಂಡ ವಿಧಿಸಲಾಗಿದೆ.
ಪ್ರಕರಣದ ಸಂತ್ರಸ್ತೆಗೆ ರಾಜ್ಯ ಸರ್ಕಾರ ಪರಿಹಾರ ನೀಡಬೇಕೆಂದು ನ್ಯಾಯಾಧೀಶರು ಆದೇಶಿಸಿದ್ದಾರೆ.
ಏನಿದು ಪ್ರಕರಣ?
ಈ ಪ್ರಕರಣ ಡಿಸೆಂಬರ್ 23, 2024ರಂದು ನಡೆದ ಘಟನೆಗೆ ಸಂಬಂಧಿಸಿದೆ. ಪ್ರಕರಣದ ಸಂತ್ರಸ್ತೆ 19 ವರ್ಷದ ವಿದ್ಯಾರ್ಥಿನಿ ಮತ್ತು ಆಕೆಯ ಸ್ನೇಹಿತ ಅಣ್ಣಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಒಟ್ಟಿಗೆ ಕುಳಿತಿದ್ದರು. ಈ ವೇಳೆ ಬಿರಿಯಾನಿ ಅಂಗಡಿ ನಡೆಸುತ್ತಿದ್ದ ಜ್ಞಾನಶೇಖರನ್ ಸಂಜೆ ಕ್ಯಾಂಪಸ್‌ಗೆ ಪ್ರವೇಶಿಸಿ, ಇಬ್ಬರನ್ನು ಬ್ಲ್ಯಾಕ್‌ಮೇಲ್ ಮಾಡಿ, ನಿರ್ಜನ ಸ್ಥಳದಲ್ಲಿ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಆರೋಪಪಟ್ಟಿಯ ಪ್ರಕಾರ, ಆತ ತನ್ನ ಫೋನ್‌ನಲ್ಲಿ ಕೃತ್ಯದ ವಿಡಿಯೋವನ್ನು ಕೂಡ ಸೆರೆಹಿಡಿದಿದ್ದಾನೆ.
ರಾಜ್ಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದ ಈ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯನ್ನು ಮದ್ರಾಸ್ ಹೈಕೋರ್ಟ್ ನೇಮಿಸಿದ್ದ ಮಹಿಳಾ ಅಧಿಕಾರಿಗಳನ್ನು ಒಳಗೊಂಡಿದ್ದ ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸಿತ್ತು. ಏಕೈಕ ಅಪರಾಧಿ ಜ್ಞಾನಶೇಖರ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು.
ಜ್ಞಾನಶೇಖರನ್ ವಿರುದ್ಧ ಕಾನೂನಿನ 11 ನಿಬಂಧನೆಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ಅವುಗಳಲ್ಲಿ ಬಿಎನ್‌ಎಸ್ ಸೆಕ್ಷನ್ 331(6) (ರಾತ್ರಿಯಲ್ಲಿ ಅತಿಕ್ರಮಣ ಮಾಡುವುದು), 126(2) (ಯಾವುದೇ ವ್ಯಕ್ತಿಯನ್ನು ತಪ್ಪಾಗಿ ತಡೆಹಿಡಿಯುವುದು), 140(4) (ವ್ಯಕ್ತಿಯನ್ನು ತೀವ್ರ ನೋಯಿಸುವ ಸಲುವಾಗಿ ಅಪಹರಿಸುವುದು), 75(2) (ಲೈಂಗಿಕ ಕಿರುಕುಳ) 64(1) (ಅತ್ಯಾಚಾರ) ಜೊತೆಗೆ ಬಿಎನ್‌ಎಸ್, ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ತಮಿಳುನಾಡು ಮಹಿಳಾ ಕಿರುಕುಳ ನಿಷೇಧ ಕಾಯ್ದೆಯ ಇತರ ನಿಬಂಧನೆಗಳ ಸೇರಿವೆ.
ಉತ್ತರ ಪ್ರದೇಶ| ಬಿಜೆಪಿ ನಾಯಕಿ ಮಗನ 130 ಅಶ್ಲೀಲ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್


