“ವಾಕ್ ಸ್ವಾತಂತ್ರ್ಯ ಎಂದರೆ ಇನ್ನೊಬ್ಬರ ಭಾವನೆಗಳಿಗೆ ನೋವುಂಟು ಮಾಡುವುದು ಎಂದಲ್ಲ” ಎಂದ ಕಲ್ಕತ್ತಾ ಹೈಕೋರ್ಟ್, ಸೋಷಿಯಲ್ ಮೀಡಿಯಾ ಇನ್‌ಫ್ಲ್ಯುಯೆನ್ಸರ್ ಹಾಗೂ ಕಾನೂನು ವಿದ್ಯಾರ್ಥಿನಿ ಶರ್ಮಿಸ್ತಾ ಪನೋಲಿಗೆ ಮಧ್ಯಂತರ ಜಾಮೀನು ನೀಡಲು ಮಂಗಳವಾರ (ಜೂ.3) ನಿರಾಕರಿಸಿದೆ.
ಶರ್ಮಿಸ್ತಾ ಅವರ ಪೋಸ್ಟ್ ಒಂದು ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿವೆ. ಭಾರತವು ವೈವಿಧ್ಯಮಯ ದೇಶವಾಗಿರುವುದರಿಂದ, ಇತರರನ್ನು ನೋಯಿಸಲು ವಾಕ್ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ನ್ಯಾಯಮೂರ್ತಿ ಪಾರ್ಥ ಸಾರಥಿ ಚಟರ್ಜಿ ಅವರು ಹೇಳಿದ್ದಾರೆ.
ಪ್ರವಾದಿ ಮುಹಮ್ಮದರನ್ನು ನಿಂದಿಸಿದ ಆರೋಪದ ಮೇಲೆ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಮತ್ತು ವಿವಾದಾತ್ಮಕ ವಿಡಿಯೋಗೆ ಸಂಬಂಧಿಸಿದಂತೆ ವಿವಿದೆಡೆ ದಾಖಲಾಗಿರುವ ಎಫ್‌ಐಆರ್‌ಗಳನ್ನು ಒಂದೆಡೆ ಕ್ರೋಢೀಕರಿಸುವಂತೆ ಕೋರಿ ಪನೋಲಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಚಟರ್ಜಿ ವಿಚಾರಣೆ ನಡೆಸಿದ್ದಾರೆ.
ಕೋಲ್ಕತ್ತಾದ ವಿಚಾರಣಾ ನ್ಯಾಯಾಲಯದ ಮೇ 31ರಂದು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದನ್ನೂ ಶರ್ಮಿಸ್ತಾ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಆದರೆ, ಮಧ್ಯಂತರ ಪರಿಹಾರ ನೀಡಲು ಹೈಕೋರ್ಟ್ ನಿರಾಕರಿಸಿದೆ.
ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ 5ಕ್ಕೆ ನಿಗದಿಪಡಿಸಿದೆ.
ಪುಣೆಯ ಸಿಂಬಿಯೋಸಿಸ್ ಕಾನೂನು ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಶರ್ಮಿಸ್ತಾ ಪನೋಲಿ, ಸಾಮಾಜಿಕ ಮಾಧ್ಯಮಗಳಾದ ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್‌ನಲ್ಲಿ ಮುಸ್ಲಿಂ ಸಮುದಾಯ ಮತ್ತು ಪ್ರವಾದಿ ಮುಹಮ್ಮದರ ವಿರುದ್ಧ ನಿಂದನಾತ್ಮಕ ಪೋಸ್ಟ್ ಹಾಕಿದ ಆರೋಪವಿದೆ.
ಮೇ 14ರಂದು ಹಾಕಿದ್ದ ತನ್ನ ಪೋಸ್ಟ್ ವಿವಾದಕ್ಕೆ ತಿರುಗುತ್ತಿದ್ದಂತೆ, ಅದನ್ನು ಡಿಲಿಟ್ ಮಾಡಿ ಎಕ್ಸ್‌ನಲ್ಲಿ ಕ್ಷಮೆಯಾಚಿಸಿದ್ದರು. ಆದರೆ, ಮೇ 15,2025 ರಂದು ಅವರ ವಿರುದ್ಧ ಕೊಲ್ಕತ್ತಾದಲ್ಲಿ ಎಫ್‌ಐಆರ್ ದಾಖಲಾಗಿತ್ತು. ಎರಡು ದಿನಗಳ ನಂತರ ಮೇ 17,2025 ರಂದು ಶರ್ಮಿಸ್ತಾ ವಿರುದ್ದ ಬಂಧನ ವಾರೆಂಟ್ ಹೊರಡಿಸಲಾಗಿತ್ತು. ಮೇ 30ರಂದು ಕೋಲ್ಕತ್ತಾ ಪೊಲೀಸರು ಗುರುಗ್ರಾಮದಲ್ಲಿ ಶರ್ಮಿಸ್ತಾ ಅವರನ್ನು ಬಂಧಿಸಿದ್ದರು.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತದ ಮಿಲಿಟರಿ ಪ್ರತಿಕ್ರಿಯೆಯ ಕುರಿತು ಪಾಕಿಸ್ತಾನಿ ಫಾಲೋವರ್ ಒಬ್ಬರು ಕೇಳಿದ್ದ ಪ್ರಶ್ನೆಗೆ ಉತ್ತರವಾಗಿ ಶರ್ಮಿಸ್ತಾ ಪನೋಲಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಪೋಸ್ಟ್ ಹಾಕಿದ್ದರು.
ಆ ವಿಡಿಯೋದಲ್ಲಿ, ಅವರು ಇಸ್ಲಾಂ ಮತ್ತು ಪ್ರವಾದಿ ಮುಹಮ್ಮದರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು. ಬಾಲಿವುಡ್ ನಟರು ಭಯೋತ್ಪಾದಕ ದಾಳಿಯ ವಿಷಯದಲ್ಲಿ ಮೌನವಾಗಿರುವುದನ್ನು ಟೀಕಿಸಿದ್ದರು.
ಸುಮಾರು 22 ವರ್ಷ ವಯಸ್ಸಿನ ಶರ್ಮಿಸ್ತಾ ಅವರಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಒಟ್ಟಾರೆಯಾಗಿ ಸುಮಾರು 2 ಲಕ್ಷ ಫಾಲೋವರ್ಸ್ ಇದ್ದಾರೆ.
‘ನೀವು ಭಾಷಾತಜ್ಞರೋ?’..ಕನ್ನಡ ತಮಿಳಿನಿಂದ ಹುಟ್ಟಿದೆ ಎಂದ ಕಮಲ್ ಹಾಸನ್‌ಗೆ ಹೈಕೋರ್ಟ್ ತರಾಟೆ


