“ತಮಿಳಿನಿಂದ ಕನ್ನಡ ಹುಟ್ಟಿದೆ” ಎಂಬ ತನ್ನ ಹೇಳಿಕೆಯ ಹಿಂದೆ ಯಾವುದೇ ದುರುದ್ದೇಶ ಇಲ್ಲದಿರುವುದರಿಂದ ನಾನು ಕ್ಷಮೆ ಕೋರುವುದಿಲ್ಲ ಎಂದು ನಟ ಕಮಲ್ ಹಾಸನ್ ಹೈಕೋರ್ಟ್ ಮುಂದೆ ಹೇಳಿದ್ದಾರೆ ಎಂದು ವರದಿಯಾಗಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (ಕೆಎಫ್‌ಸಿಸಿ) ಜೊತೆಗೆ ಸಮಾಲೋಚನೆ ನಡೆಸುವವರೆಗೆ ಕರ್ನಾಟಕದಲ್ಲಿ ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಚಿತ್ರ ಬಿಡುಗಡೆ ಮಾಡದಿರಲು ರಾಜ್‌ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಸಂಸ್ಥೆ ನಿರ್ಧರಿಸಿದೆ. ಈ ವಿಚಾರವನ್ನು ಹೈಕೋರ್ಟ್‌ಗೆ ತಿಳಿಸಿದೆ. ಹಾಗಾಗಿ, ಕೋರ್ಟ್ ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿದೆ.
ಕಮಲ್ ಹಾಸನ್ ಹೇಳಿಕೆ ಕನ್ನಡಿಗರಲ್ಲಿ ಆಕ್ರೋಶ ಉಂಟು ಮಾಡಿರುವ ಹಿನ್ನೆಲೆ, ‘ಥಗ್ ಲೈಫ್’ ಚಿತ್ರ ಬಿಡುಗಡೆ ಕರ್ನಾಟಕದಲ್ಲಿ ಅವಕಾಶ ಮತ್ತು ಸೂಕ್ತ ಭದ್ರತೆ ಒದಗಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲು ಕೋರಿ ರಾಜ್‌ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ ನಾರಾಯಣ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಇಂದು (ಮಂಗಳವಾರ) ವಿಚಾರಣೆ ನಡೆಸಿತು.
ಮಧ್ಯಾಹ್ನದ ಊಟದ ವಿರಾಮಕ್ಕೂ ಮುನ್ನ ವಿ ನಾರಾಯಣ್ ಅವರ ಅರ್ಜಿಯನ್ನು ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಕೋರುವ ಮೂಲಕ ವಿವಾದಕ್ಕೆ ಅಂತ್ಯ ಹಾಡಲು ಮೌಖಿಕ ಸಲಹೆ ನೀಡಿತ್ತು.
ಈ ಸಂಬಂಧ ಕಮಲ್ ಹಾಸನ್ ಅವರ ಸೂಚನೆ ಪಡೆದು ವಾದಿಸುವುದಾಗಿ ಪೀಠಕ್ಕೆ ತಿಳಿಸಿದ್ದ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ಅವರು, ಮಧ್ಯಾಹ್ನದ ನಂತರದ ವಿಚಾರಣೆಯಲ್ಲಿ ಕೆಎಫ್‌ಸಿಸಿಗೆ ಕಮಲ್ ಹಾಸನ್ ಬರೆದಿರುವ ಪತ್ರವನ್ನು ಓದಿದರು. “ಸದ್ಯಕ್ಕೆ ಕರ್ನಾಟಕದಲ್ಲಿ ಚಿತ್ರ ಬಿಡುಗಡೆ ಮಾಡದಿರಲು ಕಮಲ್ ಹಾಸನ್ ತೀರ್ಮಾನಿಸಿದ್ದಾರೆ. ಹೀಗಾಗಿ, ಪೊಲೀಸ್ ರಕ್ಷಣೆ ಕೋರುವುದಿಲ್ಲ, ಈ ನಡುವೆ, ಕೆಎಫ್‌ಸಿಸಿ ಜೊತೆ ಸಮಾಲೋಚನೆ ನಡೆಸಲು ಅವರು ನಿರ್ಧರಿಸಿದ್ದಾರೆ” ಎಂದು ಹೇಳಿದ್ದಾರೆ.
ಧ್ಯಾನ್ ಚಿನ್ನಪ್ಪ ಅವರು, “ಕನ್ನಡ ನಾಡು ಮತ್ತು ಕರ್ನಾಟಕದ ಬಗ್ಗೆ ಪ್ರೀತಿ ಇದೆ ಎಂದು ಕಮಲ್ ಹಾಸನ್ ಹೇಳಿದ್ದಾರೆ. ದುರುದ್ದೇಶವಿದ್ದರೆ ಮಾತ್ರ ಕ್ಷಮೆ ಕೋರಬೇಕು ಎಂದು ಕೆಎಫ್‌ಸಿಸಿಗೆ ಬರೆದಿರುವ ಪತ್ರದಲ್ಲಿ ಅವರು ಘೋಷಣೆ ಮಾಡಿದ್ದಾರೆ, ಸ್ಪಷ್ಟನೆ ನೀಡಿಲ್ಲ. ಕರ್ನಾಟಕದಲ್ಲಿ ಚಿತ್ರ ಬಿಡುಗಡೆಯನ್ನು ವಿಳಂಬಿಸಬಹುದು ಎಂದಿದ್ದಾರೆ. ಹೀಗಾಗಿ, ಸಿನಿಮಾ ಬಿಡುಗಡೆಗೆ ಪೊಲೀಸರ ರಕ್ಷಣೆಯ ವಿಚಾರ ಮುಂದು ಮಾಡುವುದಿಲ್ಲ. ಕೆಎಫ್‌ಸಿಸಿ ಜೊತೆ ಸಮಾಲೋಚನೆ ನಡೆಸಲಾಗುವುದು ಎಂದಿದ್ದಾರೆ” ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಪೀಠವ “ಅಹಂ ಮುಂದೆ ಮಾಡಿದ್ದೀರಿ. ಅದು ಕಮಲ್ ಹಾಸನ್ ಅಥವಾ ಬೇರೆ ಯಾರೇ ಆಗಿರಬಹುದು. ಇದು ಜನರ ಭಾವನೆಗಳಿಗೆ ಹಾನಿ ಮಾಡುವ ವಿಚಾರವಾಗಿದೆ. ಕಮಲ್ ಹಾಸನ್ ಹೇಳಿಕೆಯಿಂದ ಇಷ್ಟೆಲ್ಲಾ ಆಗಿದ್ದು, ಇದೆಲ್ಲವನ್ನೂ ಅವರ ಹೇಳಿಕೆಯೇ ನಿಲ್ಲಿಸಬಹುದು. ಕೆಎಫ್‌ಸಿಸಿಗೆ ಬರೆದಿರುವ ಪತ್ರದಲ್ಲಿ ಕ್ಷಮೆ ವಿಚಾರ ಹೊರತುಪಡಿಸಿ ಉಳಿದೆಲ್ಲವೂ ಇದೆ” ಎಂದಿದೆ.
ಅಂತಿಮವಾಗಿ ಕೇಂದ್ರ, ರಾಜ್ಯ ಸರ್ಕಾರ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿದೆ.
‘ನೀವು ಭಾಷಾತಜ್ಞರೋ?’..ಕನ್ನಡ ತಮಿಳಿನಿಂದ ಹುಟ್ಟಿದೆ ಎಂದ ಕಮಲ್ ಹಾಸನ್‌ಗೆ ಹೈಕೋರ್ಟ್ ತರಾಟೆ


