ಅಸ್ಸಾಂನ ಬಿಜೆಪಿ ಸರ್ಕಾರ ನಡೆಸುತ್ತಿರುವ ದಮನ ಕಾರ್ಯಾಚರಣೆಯ ಸಮಯದಲ್ಲಿ ಅಧಿಕಾರಿಗಳ ಕಣ್ತಪ್ಪಿನಿಂದಾಗಿ ಭಾರತೀಯ ಮಹಿಳೆಯೊಬ್ಬರನ್ನು ‘ಬಾಂಗ್ಲಾದೇಶಕ್ಕೆ ಗಡಿಪಾರು’ ಮಾಡಿದ ಘಟನೆ ನಡೆದಿದ್ದು, ನಂತರ ಅವರ ದಾಖಲೆಗಳು ‘ಹೊಂದಾಣಿಕೆಯಾಗುತ್ತಿಲ್ಲ’ ಎಂದು ಕಂಡುಕೊಂಡ ನಂತರ ಹಿಂತಿರುಗಿಸಲಾಯಿತು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಕಣ್ತಪ್ಪಿನಿಂದ ಭಾರತೀಯ ಮಹಿಳೆಯನ್ನು
ಸಂತ್ರಸ್ತ ಮಹಿಳೆಯನ್ನು ರಹೀಮಾ ಬೇಗಂ (50) ಎಂದು ಗುರುತಿಸಲಾಗಿದೆ. ಅಸ್ಸಾಂನ ಗೋಲಾಘಾಟ್ ಜಿಲ್ಲೆಯಲ್ಲಿ ಅವರನ್ನು ಪೊಲೀಸರು ಬಂಧಿಸಿ, ಭದ್ರತಾ ಪಡೆಗಳು ಬಾಂಗ್ಲಾದೇಶ ಗಡಿಗೆ ಕರೆದೊಯ್ದಿದ್ದಾರೆ ಎಂದು ಹೇಳಲಾಗಿದೆ ಎಂದು ವರದಿ ಹೇಳಿದೆ. ಅವರ ಪ್ರಕರಣದಲ್ಲಿ ದೋಷವಿದೆ ಎಂದು ಕಂಡಕೊಂಡು ಅಧಿಕಾರಿಗಳು ಅವರನ್ನು ವಾಪಸ್ ಕರೆತರುವ ಮೊದಲೇ ಅವರು ಭಾರತ ಗಡಿ ದಾಟಿ ಬಾಂಗ್ಲಾದೇಶದ ನೆಲದಲ್ಲಿ ಸಂಕಷ್ಟಕ್ಕೊಳಗಾದರು ಎಂದು ಅದು ತಿಳಿಸಿದೆ.
ರಾಜ್ಯದ ವಿದೇಶಿಯರ ನ್ಯಾಯಮಂಡಳಿಗಳು (FTs) ವಿದೇಶಿಯರೆಂದು ಘೋಷಿಸಲಾದ ಜನರ ಮೇಲೆ ನಡೆಯುತ್ತಿರುವ ದಮನ ಕಾರ್ಯಾಚರಣೆಯ ಭಾಗವಾಗಿ ಕಳೆದ ಕೆಲವು ವಾರಗಳಲ್ಲಿ ಅಸ್ಸಾಂನಲ್ಲಿ ಬಂಧಿಸಲ್ಪಟ್ಟ ಹಲವಾರು ಜನರಲ್ಲಿ ರಹೀಮಾ ಬೇಗಂ ಕೂಡಾ ಒಬ್ಬರಾಗಿದ್ದಾರೆ.
ಅವರ ವಕೀಲರ ಪ್ರಕಾರ, ಕಳೆದ ತಿಂಗಳು ವಿದೇಶಿಯರ ನ್ಯಾಯಮಂಡಳಿಯು ಬೇಗಂ ಅವರ ಕುಟುಂಬವು ಮಾರ್ಚ್ 25, 1971 ರ ಮೊದಲು ಭಾರತವನ್ನು ಪ್ರವೇಶಿಸಿತ್ತು ಎಂದು ತೀರ್ಪು ನೀಡಿದೆ, ಇದು ಅಸ್ಸಾಂನಲ್ಲಿ ಪೌರತ್ವಕ್ಕೆ ಅಂತಿಮ ದಿನಾಂಕವಾಗಿದೆ.
ಶುಕ್ರವಾರದಂದು ಸುಪ್ರೀಂಕೋರ್ಟ್ ಆದೇಶವನ್ನು ಜಾರಿಗೊಳಿಸಿ ಮಾತನಾಡಿದ್ದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ರಾಜ್ಯ ಸರ್ಕಾರವು ಘೋಷಿತ ವಿದೇಶಿಯರನ್ನು ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಬಾಂಗ್ಲಾದೇಶಕ್ಕೆ ಗಡಿಪಾರು ಮಾಡುತ್ತಿದೆ ಎಂದು ದೃಢಪಡಿಸಿದ್ದಾರೆ.
ಗೋಲಾಘಾಟ್‌ನ ತನ್ನ ಗ್ರಾಮದಲ್ಲಿರುವ ಮನೆಗೆ ಬೇಗಂ ಅವರು ಮೇ 30ರ ಶುಕ್ರವಾರ ಸಂಜೆ ಮರಳಿದ್ದಾರೆ. ಅವರನ್ನು ಮೇ 27ರ ಮಂಗಳವಾರ ರಾತ್ರಿ ಇತರ ಜನರ ಗುಂಪಿನೊಂದಿಗೆ “ಬಾಂಗ್ಲಾದೇಶಕ್ಕೆ ಗಡಿಪಾರು” ಮಾಡಲಾಗಿತ್ತು ಎಂದು ಆರೋಪಿಸಲಾಗಿರೆ.
“ಭಾನುವಾರ ಬೆಳಿಗ್ಗೆ (ಮೇ 25) ಸುಮಾರು ಬೆಳಗಿನ ಜಾವ 4 ಗಂಟೆಗೆ, ನಾವು ಇನ್ನೂ ಮಲಗಿದ್ದಾಗ, ಪೊಲೀಸರು ನಮ್ಮ ಮನೆಗೆ ಬಂದು ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಪೊಲೀಸ್ ಠಾಣೆಗೆ ಹಾಜರಾಗಲು ಹೇಳಿದರು. ಬೆಳಿಗ್ಗೆ ಅಲ್ಲಿ ಕಳೆದ ನಂತರ, ಅವರು ನನ್ನನ್ನು ಇತರ ಕೆಲವರೊಂದಿಗೆ ಗೋಲಾಘಾಟ್ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಕರೆದೊಯ್ದರು. ನಾನು ನನ್ನ ದಾಖಲೆಗಳನ್ನು ತೆಗೆದುಕೊಂಡು ಹೋದೆ, ಮತ್ತು ಅವರು ನಮ್ಮ ಬೆರಳಚ್ಚುಗಳನ್ನು ಸಂಗ್ರಹಿಸಿದರು. ನಾವು ಇಡೀ ದಿನ ಅಲ್ಲೇ ಇದ್ದೆವು. ರಾತ್ರಿ, ಅವರು ನಮ್ಮನ್ನು ವಾಹನದಲ್ಲಿ ಬೇರೆಡೆಗೆ ಕರೆದೊಯ್ದರು,” ಎಂದು ಅವರು ಹೇಳಿದ್ದು, ತಮ್ಮನ್ನು ಎಲ್ಲಿಗೆ ಕರೆದೊಯ್ಯಲಾಗುತ್ತಿದೆ ಎಂದು ಅವರಿಗೆ ತಿಳಿದಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.
“ಬೇಗಂ ಅವರನ್ನು ಕೆರೆದೊಯ್ಯುವಾಗ ನಮ್ಮ ಇಬ್ಬರು ಹೆಣ್ಣುಮಕ್ಕಳು ಮನೆಯದ್ದರು. ಅವರು ತಮ್ಮ ತಾಯಿಯನ್ನು ರಾತ್ರಿಯಲ್ಲಿ ಕರೆದೊಯ್ಯುವುದನ್ನು ನೋಡಿದ್ದಾರೆ. ಆದರೆ ಇಷ್ಟು ದಿನ ಅವರು ಎಲ್ಲಿದ್ದಾರೆಂದು ಯಾರೂ ನಮಗೆ ಹೇಳಲಿಲ್ಲ” ಎಂದು ಅವರ ಬೇಗಂ ಅವರ ಪತಿ ಮಾಲೆಕ್ ಅಲಿ ಹೇಳಿದ್ದಾರೆ.
“ಮಂಗಳವಾರ ತಡರಾತ್ರಿ, ಅವರು ನಮ್ಮನ್ನು ಕೆಲವು ಕಾರುಗಳಲ್ಲಿ ಕೂರಿಸಿ ಗಡಿಯ ಬಳಿ ಕರೆದೊಯ್ದರು” ಎಂದು ಬೇಗಂ ಅವರು ಆರೋಪಿಸಿದ್ದಾರೆ.
“ನಮ್ಮೊಂದಿಗಿದ್ದ ಭದ್ರತಾ ಪಡೆಗಳು ನಮಗೆ ಕೆಲವು ಬಾಂಗ್ಲಾದೇಶದ ಕರೆನ್ಸಿಗಳನ್ನು ನೀಡಿ, ನಮ್ಮನ್ನು ಗಡಿ ದಾಟಲು ಮತ್ತು ಹಿಂತಿರುಗದಂತೆ ಹೇಳಿದರು. ಎಲ್ಲವೂ ನಮ್ಮ ಮೊಣಕಾಲಿನವರೆಗೆ ಮಣ್ಣು ಮತ್ತು ನೀರಿನಿಂದ ತುಂಬಿದ ಭತ್ತದ ಗದ್ದೆಗಳಾಗಿದ್ದವು. ನಮಗೆ ಏನು ಮಾಡಬೇಕೆಂದು ತಿಳಿಯಲಿಲ್ಲ; ನಾವು ಒಂದು ಹಳ್ಳಿಯನ್ನು ತಲುಪುವವರೆಗೆ ಭತ್ತದ ಗದ್ದೆಗಳ ನಡುವೆ ನಡೆದೆವು. ಆದರೆ ಅಲ್ಲಿನ ಜನರು ನಮ್ಮನ್ನು ಓಡಿಸಿದರು ಮತ್ತು ಅವರ ಗಡಿ ಪಡೆಗಳು ನಮ್ಮನ್ನು ಕರೆದವು, ನಮಗೆ ತುಂಬಾ ಹೊಡೆದವು ಮತ್ತು ನಾವು ಬಂದ ಸ್ಥಳಕ್ಕೆ ಹಿಂತಿರುಗಲು ಹೇಳಿದವು.” ಎಂದು ಮಹಿಳೆ ಹೇಳಿದ್ದಾರೆ.
“ನಾವು ಎರಡೂ ಬದಿಗಳಿಗೆ ಹೋಗಲು ಸಾಧ್ಯವಾಗದ ಕಾರಣ ನಾವು ಇಡೀ ದಿನ ಭತ್ತದ ಗದ್ದೆಯಲ್ಲಿ ನಿಂತು ಅದರಿಂದ ನೀರು ಕುಡಿಯುತ್ತಿದ್ದೆವು. (ಗುರುವಾರ ಸಂಜೆ), ಭಾರತದ ಕಡೆಯ ಪಡೆಗಳು ನಮ್ಮನ್ನು ಹಿಂದಕ್ಕೆ ಕರೆದು, ಬಾಂಗ್ಲಾದೇಶದ ಕರೆನ್ಸಿಯನ್ನು ತೆಗೆದುಕೊಂಡು, ವಾಹನಗಳಲ್ಲಿ ಕೂರಿಸಿ ಕೊಕ್ರಝಾರ್‌ಗೆ ಕರೆದೊಯ್ದವು. ಉಳಿದ ಜನರಿಗೆ ಏನಾಯಿತು ಎಂದು ನನಗೆ ತಿಳಿದಿಲ್ಲ, ಆದರೆ ನನ್ನನ್ನು ಗೋಲಾಘಾಟ್‌ಗೆ ಕರೆತರಲಾಯಿತು. ಇದು ನನಗೆ ಏಕೆ ಸಂಭವಿಸಿತು ಎಂದು ನನಗೆ ತಿಳಿದಿಲ್ಲ; ನನ್ನಲ್ಲಿ ಎಲ್ಲಾ ದಾಖಲೆಗಳಿವೆ. ಎರಡು ವರ್ಷಗಳಿಗೂ ಹೆಚ್ಚು ಕಾಲ ಹೋರಾಡಿದ ನಂತರ ವಿದೇಶಿಯರ ನ್ಯಾಯಮಂಡಳಿಯಲ್ಲಿನ ನನ್ನ ಪ್ರಕರಣವನ್ನು ಪೂರ್ಣಗೊಳಿಸಿದೆ.” ಎಂದು ಅವರು ಹೇಳಿದ್ದಾರೆ.
ಈ ನಡುವೆ ಬೇಗಂ ಅವರ ಪತಿಗೆ ಶುಕ್ರವಾರ ಮಧ್ಯಾಹ್ನ ಗೋಲಾಘಾಟ್ ಪಟ್ಟಣದಿಂದ ಅವರನ್ನು ಕರೆದುಕೊಂಡು ಹೋಗಲು ಕರೆ ಬಂತು ಎಂದು ವರದಿ ಉಲ್ಲೇಖಿಸಿದೆ.
ಜೋರ್ಹತ್ ವಿದೇಶಿಯರ ನ್ಯಾಯಮಂಡಳಿಯಲ್ಲಿ ಬೇಗಂ ಅವರ ಪ್ರಕರಣವನ್ನು ನಿರ್ವಹಿಸಿದ ವಕೀಲೆ ಲಿಪಿಕಾ ದೇಬ್ ಮಾತನಾಡಿ, “ಬೇಗಂ ಅವರ ಕುಟುಂಬವು ಭಾನುವಾರ ನನಗೆ ಕರೆ ಮಾಡಿ, ಅವರನ್ನು ವಿದೇಶಿಯರು ಎಂದು ಶಂಕಿಸಲಾಗಿರುವ ಇತರರೊಂದಿಗೆ ಕರೆದೊಯ್ಯಲಾಗಿದೆ ಎಂದು ಹೇಳಿದರು” ಎಂದು ಹೇಳಿದ್ದಾರೆ.
“ನ್ಯಾಯಮಂಡಳಿ ಅವರನ್ನು ‘ಪೋಸ್ಟ್-ಸ್ಟ್ರೀಮ್’ ಎಂದು ಘೋಷಿಸಿತು. ಇದನ್ನು ಜನವರಿ 1, 1966 ಮತ್ತು ಮಾರ್ಚ್ 25, 1971 ರ ನಡುವೆ ಭಾರತಕ್ಕೆ ಪ್ರವೇಶ ಮಾಡಿರುವ ಪ್ರಕರಣಗಳನ್ನು ಉಲ್ಲೇಖಿಸಲು ಬಳಸಲಾಗುತ್ತದೆ. ಅದರ ನಂತರ ಆ ವ್ಯಕ್ತಿ ಅಸ್ಸಾಂನ ಸಾಮಾನ್ಯ ನಿವಾಸಿಯಾಗುತ್ತಾರೆ. ಅಲ್ಲಿ ಪೌರತ್ವ ಕಾಯ್ದೆಯ ಸೆಕ್ಷನ್ 6A(3) ರ ಪ್ರಕಾರ, ಆ ವ್ಯಕ್ತಿಯನ್ನು ಸಂಬಂಧಿತ ವಿದೇಶಿಯರ ನೋಂದಣಿ ಕಚೇರಿಯಲ್ಲಿ (FRRO) 30 ದಿನಗಳಲ್ಲಿ ನೋಂದಾಯಿಸಿಕೊಳ್ಳಬೇಕು. ಕಾಯಿದೆಯ ಪ್ರಕಾರ, ಅಂತಹ ವ್ಯಕ್ತಿಯ ಹೆಸರನ್ನು 10 ವರ್ಷಗಳ ಕಾಲ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ, ಆದರೆ ಆ ಸಮಯದಲ್ಲಿ ಅವರು ‘ಭಾರತದ ನಾಗರಿಕರಂತೆ ಅದೇ ಹಕ್ಕುಗಳು ಮತ್ತು ಬಾಧ್ಯತೆಗಳನ್ನು’ ಹೊಂದಿರುತ್ತಾರೆ. ಅವಧಿಯ ಕೊನೆಯಲ್ಲಿ, ಅವರನ್ನು ಎಲ್ಲಾ ಉದ್ದೇಶಗಳಿಗೂ ಭಾರತದ ಪ್ರಜೆ ಎಂದು ಪರಿಗಣಿಸಲಾಗುತ್ತದೆ.” ಎಂದು ವಕೀಲೆ ಲಿಪಿಕಾ ಅವರು ಹೇಳಿದ್ದಾರೆ.
“ನಾವು ಬೇಗಂ ಅವರನ್ನು ನೋಂದಾಯಿಸಿದ್ದ ಜೋರ್ಹತ್‌ನಲ್ಲಿರುವ ಪೊಲೀಸರು ಮತ್ತು FRRO ಕಚೇರಿಯಲ್ಲಿ ಪರಿಶೀಲಿಸಿದಾಗ ಅವರ ಪ್ರಮಾಣಪತ್ರದಲ್ಲಿನ ನೋಂದಣಿ ಸಂಖ್ಯೆಯಲ್ಲಿನ ಒಂದು ಅಂಕಿಯಲ್ಲಿ ಹೊಂದಾಣಿಕೆಯಾಗುತ್ತಿಲ್ಲ ಎಂದು ಕಂಡುಕೊಂಡೆವು. ಹೊಂದಾಣಿಕೆಯಾಗದ ಬಗ್ಗೆ ನಾವು ಎಸ್‌ಪಿಯನ್ನು ಸಂಪರ್ಕಿಸಿದ್ದೇವೆ ಮತ್ತು ಈಗ ಅವರು ಹಿಂತಿರುಗಿದ್ದಾರೆ. ಆದರೆ ಪರಿಶೀಲನೆ ಸಂಪೂರ್ಣವಾಗಿ ನಡೆಯದಿರುವುದು ದುರದೃಷ್ಟಕರ. ಹೊಂದಾಣಿಕೆಯಾಗದಿದ್ದರೆ, ಅಧಿಕಾರಿಗಳು ನೋಂದಣಿ ಕಚೇರಿಗೆ ಕರೆ ಮಾಡಿ ಪರಿಶೀಲಿಸಬೇಕಾಗಿತ್ತು, ”ಎಂದು ವಕೀಲೆ ಹೇಳಿದ್ದಾರೆ. ಕಣ್ತಪ್ಪಿನಿಂದ ಭಾರತೀಯ ಮಹಿಳೆಯನ್ನು
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಏಳು ವರ್ಷಗಳ ವಿಳಂಬ; ಜನಗಣತಿ ವೇಳಾಪಟ್ಟಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ
ಏಳು ವರ್ಷಗಳ ವಿಳಂಬ; ಜನಗಣತಿ ವೇಳಾಪಟ್ಟಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

