ಇಸ್ರೇಲ್ ಶುಕ್ರವಾರ ಇರಾನ್‌ನಾದ್ಯಂತ ದಾಳಿಗಳನ್ನು ನಡೆಸಿದೆ. ಅದು ಇರಾನ್‌ನ ಪರಮಾಣು ಕಾರ್ಯಕ್ರಮದ “ಹೃದಯ” ವನ್ನೆ ಗುರಿಯಾಗಿಸಿಕೊಂಡಿದೆ.
ಈ ದಾಳಿಗಳಲ್ಲಿ ಇರಾನ್‌ನ ಸಶಸ್ತ್ರ ಪಡೆಗಳ ಪ್ರಬಲ ಶಾಖೆಯಾದ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್‌ಗಳ (IRGC) ಮುಖ್ಯಸ್ಥ ಹೊಸೈನ್ ಸಲಾಮಿ ಮತ್ತು ಇತರ ಹಿರಿಯ ಮಿಲಿಟರಿ ವ್ಯಕ್ತಿಗಳು ಹಾಗೂ ಪರಮಾಣು ವಿಜ್ಞಾನಿಗಳು ಸಾವನ್ನಪ್ಪಿದ್ದಾರೆ ಎಂದು ಇರಾನಿನ ಸ್ಟೇಟ್ ಮಾಧ್ಯಮ ವರದಿ ಮಾಡಿದೆ. ಮಕ್ಕಳು ಸೇರಿದಂತೆ ನಾಗರಿಕರು ಸಹ ಕೊಲ್ಲಲ್ಪಟ್ಟವರಲ್ಲಿ ಸೇರಿದ್ದಾರೆ ಎಂದು ಈ ವರದಿ ಹೇಳಿದೆ. ಈ ವರದಿಗಳನ್ನು ಸ್ವತಂತ್ರವಾಗಿ ಪರಿಶೀಲಿಸಲು ಬಿಬಿಸಿಗೆ ಸಾಧ್ಯವಾಗುತ್ತಿಲ್ಲ.
ಇರಾನ್ ಶುಕ್ರವಾರ ಬೆಳಿಗ್ಗೆ ಇಸ್ರೇಲ್ ಕಡೆಗೆ ಸುಮಾರು 100 ಡ್ರೋನ್‌ಗಳನ್ನು ಹಾರಿಸಿದೆ ಎಂದು ಇಸ್ರೇಲ್ ಮಿಲಿಟರಿ ತಿಳಿಸಿದೆ. ಎಲ್ಲಾ ಡ್ರೋನ್‌ಗಳನ್ನು ತಡೆಹಿಡಿಯಲಾಗಿದೆ ಎಂದು ಇಸ್ರೇಲ್ ಮಾಧ್ಯಮ ವರದಿ ಮಾಡಿದೆ. ಇಸ್ರೇಲ್‌ನಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಈ ದಾಳಿಗಳಲ್ಲಿ ತಾನು ಭಾಗಿಯಾಗಿಲ್ಲ ಎಂದು ಅಮೆರಿಕ ಹೇಳಿದೆ. ಇರಾನ್‌ನ ಪ್ರಮುಖ ಪರಮಾಣು ಪುಷ್ಟೀಕರಣ ಕೇಂದ್ರ ಸೇರಿದಂತೆ ಬಹು ದಾಳಿಗಳು ವರದಿಯಾಗಿವೆ.
ದಾಳಿಗಳು ಯಾವಾಗ ಮತ್ತು ಎಲ್ಲಿ ನಡೆದವು?
ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಸ್ಥಳೀಯ ಸಮಯ 03:30ರ ಸುಮಾರಿಗೆ (01:00 BST) ಸ್ಫೋಟಗಳು ವರದಿಯಾಗಿವೆ. ಟೆಹ್ರಾನ್‌ನ ವಸತಿ ಪ್ರದೇಶಗಳು ಹಾನಿಗೊಳಗಾಗಿವೆ ಮತ್ತು ರಾಜಧಾನಿಯ ಈಶಾನ್ಯ ಭಾಗದಲ್ಲೂ ಸ್ಫೋಟಗಳ ಶಬ್ದ ಕೇಳಿಬಂದಿದೆ ಎಂದು ಇರಾನಿನ ಸ್ಟೇಟ್ ಟಿವಿ ತಿಳಿಸಿದೆ.
ಇಸ್ರೇಲ್‌ನಲ್ಲಿ ನಿವಾಸಿಗಳು ಅದೇ ಸಮಯದಲ್ಲಿ ವಾಯುದಾಳಿಯ ಸೈರನ್‌ಗಳಿಂದ ಎಚ್ಚರಗೊಂಡರು ಮತ್ತು ತುರ್ತು ಫೋನ್ ಎಚ್ಚರಿಕೆಗಳನ್ನು ಪಡೆದರು. ಇಸ್ರೇಲ್ ಸೇನೆಯು “ಇರಾನ್‌ನ ವಿವಿಧ ಪ್ರದೇಶಗಳಲ್ಲಿನ ಪರಮಾಣು ಗುರಿಗಳು ಸೇರಿದಂತೆ ಡಜನ್‌ಗಟ್ಟಲೆ ಮಿಲಿಟರಿ ಗುರಿಗಳನ್ನು” ಹೊಡೆದುರುಳಿಸಿದೆ” ಎಂದು ಹೇಳಿದೆ.
ಆರಂಭಿಕ ದಾಳಿಯ ಕೆಲ ಗಂಟೆಗಳ ನಂತರ, ರಾಜಧಾನಿಯಿಂದ ಸುಮಾರು 225 ಕಿಮೀ (140 ಮೈಲುಗಳು) ದಕ್ಷಿಣದಲ್ಲಿರುವ ನಟಾಂಝ್ ಪರಮಾಣು ಕೇಂದ್ರದಲ್ಲಿ ಸ್ಫೋಟ ಸಂಭವಿಸಿದೆ. ನಟಾಂಝ್ ನ್ಯೂಕ್ಲಿಯರ್ ಕೇಂದ್ರಕ್ಕೆ ಹಾನಿಯಾಗಿದೆ ಎಂದು ಜಾಗತಿಕ ಪರಮಾಣು ಕಾವಲು ಸಂಸ್ಥೆ ಹೇಳಿದೆ. ಇದನ್ನು ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (IAEA) ನಂತರ ದೃಢಪಡಿಸಿದೆ. ನಟಾಂಜ್ ಸ್ಥಳದಲ್ಲಿ ವಿಕಿರಣ ಮಟ್ಟದಲ್ಲಿ ಯಾವುದೇ ಹೆಚ್ಚಳವಾಗಿಲ್ಲ ಎಂದು ಇರಾನಿನ ಅಧಿಕಾರಿಗಳು ತಿಳಿಸಿದ್ದಾರೆ ಎಂದು IAEA ತಿಳಿಸಿದೆ.
ಪರಮಾಣು ಕೇಂದ್ರಗಳ ಮೇಲೆ ಎಂದಿಗೂ ದಾಳಿ ಮಾಡಬಾರದು ಮತ್ತು ಅಂತಹ ದಾಳಿಗಳು ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯವಾಗಿ ಪರಮಾಣು ಸುರಕ್ಷತೆ ಮತ್ತು ಭದ್ರತೆಗೆ ಗಂಭೀರ ಪರಿಣಾಮಗಳನ್ನು ಬೀರುತ್ತವೆ ಎಂದು ಐಎಇಎ ಮುಖ್ಯಸ್ಥ ರಾಫೆಲ್ ಗ್ರೊಸಿ ಹೇಳಿದರು.
ಎರಡು ದೇಶಗಳು ಮತ್ತಷ್ಟು ಉಲ್ಬಣಗೊಳ್ಳುವುದನ್ನು ತಪ್ಪಿಸಲು ಎಲ್ಲರು ಗರಿಷ್ಠ ಸಂಯಮವನ್ನು ಚಲಾಯಿಸಬೇಕು. ಪರಮಾಣು ಸೌಲಭ್ಯಗಳ ಸುರಕ್ಷತೆ ಮತ್ತು ಭದ್ರತೆಗೆ ಅಪಾಯವನ್ನುಂಟುಮಾಡುವ ಯಾವುದೇ ಮಿಲಿಟರಿ ಕ್ರಮವು ಇರಾನ್ ಮತ್ತು ಅದರಾಚೆಗಿನ ಜನರಿಗೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ ಎಂದು ಮಂಡಳಿಯ ಸದಸ್ಯರಿಗೆ ನೀಡಿದ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.

ಇಸ್ರೇಲಿನಿಂದ “ಆಪರೇಷನ್ ರೈಸಿಂಗ್ ಲಯನ್” ಪ್ರಾರಂಭ
‘ಆಪರೇಷನ್ ರೈಸಿಂಗ್ ಲಯನ್’ ಎಂದು ಕರೆಯಲ್ಪಡುವ ಈ ದಾಳಿಗಳು ಇಸ್ರೇಲ್‌ನ ಉಳಿವಿಗೆ ಇರಾನಿನ ಬೆದರಿಕೆಯನ್ನು ಹಿಮ್ಮೆಟ್ಟಿಸಲು ಉದ್ದೇಶಿತ ಮಿಲಿಟರಿ ದಾಳಿಯಾಗಿದೆ. ಈ ದಾಳಿಯು ಇರಾನ್ ಬೆದರಿಕೆಯನ್ನು ಹಿಮ್ಮೆಟ್ಟಿಸುವ ಗುರಿಯನ್ನು ಹೊಂದಿರುವುದರಿಂದ ಇದು ಎಷ್ಟು ದಿನಗಳವರೆಗೆ ಬೇಕಾದರೂ ಮುಂದುವರಿಯುತ್ತದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದರು.
ಇತ್ತೀಚಿನ ತಿಂಗಳುಗಳಲ್ಲಿ ಇರಾನ್ ತಾನು ಹಿಂದೆಂದೂ ತೆಗೆದುಕೊಳ್ಳದ ಕ್ರಮಗಳನ್ನು ತೆಗೆದುಕೊಂಡಿದೆ. ಅದು ಅಭಿವೃದ್ಧಿಪಡಿಸಿದ ಯುರೇನಿಯಂ ಅನ್ನು ಶಸ್ತ್ರಸಜ್ಜಿತಗೊಳಿಸಲು ಕ್ರಮಗಳನ್ನು ತೆಗೆದುಕೊಂಡಿದೆ. ನಾವು ದಾಳಿ ಮಾಡುವುದನ್ನು ನಿಲ್ಲಿಸಿದರೆ ಇರಾನ್ ಬಹಳ ಕಡಿಮೆ ಅವಧಿಯಲ್ಲಿ ಪರಮಾಣು ಶಸ್ತ್ರಾಸ್ತ್ರವನ್ನು ಉತ್ಪಾದಿಸಬಹುದು. ಅದು ಒಂದು ವರ್ಷವಾಗಬಹುದು. ಅದು ಕೆಲವೇ ತಿಂಗಳು ಆಗಬಹುದು, ಇಲ್ಲವೇ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಆಗಿರಬಹುದು. ನಾವು ದಾಳಿ ಮಾಡುವುದನ್ನು ಬಿಟ್ಟರೆ ಇಸ್ರೇಲ್‌ನ ಉಳಿವಿಗೆ ಪ್ರಸ್ತುತ ಅಪಾಯವಿದೆ ಎಂದು ಅವರು ತಿಳಿಸಿದರು.
ಇರಾನ್‌ನ ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಕ್ರಮವನ್ನು ಎದುರಿಸಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ನೆತನ್ಯಾಹು ಧನ್ಯವಾದ ಅರ್ಪಿಸಿದರು. ಇಸ್ರೇಲಿ ಮಿಲಿಟರಿ ಅಧಿಕಾರಿಯೊಬ್ಬರು ಬಿಬಿಸಿಗೆ ನೀಡಿದ ಮಾಹಿತಿಯ ಪ್ರಕಾರ, ಇರಾನ್ ಕೆಲವೇ ದಿನಗಳಲ್ಲಿ ಪರಮಾಣು ಬಾಂಬ್‌ಗಳನ್ನು ರಚಿಸಲು ಸಾಕಷ್ಟು ಪರಮಾಣು ಕಚ್ಚಾವಸ್ತುಗಳನ್ನು ಹೊಂದಿದೆ ಎಂದಿದ್ದಾರೆ.
ಇರಾನ್ ‘ಸಾರ್ವಭೌಮತ್ವ ರಕ್ಷಣೆ’ಯ ಪ್ರತಿಜ್ಞೆ
ಇರಾನ್ ಶುಕ್ರವಾರ ಬೆಳಿಗ್ಗೆ ಇಸ್ರೇಲ್ ಕಡೆಗೆ ಸುಮಾರು 100 ಡ್ರೋನ್‌ಗಳನ್ನು ಹಾರಿಸಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು (IDF) ತಿಳಿಸಿವೆ. ಎಲ್ಲಾ ಡ್ರೋನ್‌ಗಳನ್ನು ತಡೆಹಿಡಿಯಲಾಗಿದೆ ಎಂದು ಇಸ್ರೇಲ್ ಮಿಲಿಟರಿ ವರದಿ ಮಾಡಿದೆ.
ನಮ್ಮ ಸಶಸ್ತ್ರ ಪಡೆಗಳು ಇರಾನ್‌ನ ಸಾರ್ವಭೌಮತ್ವವನ್ನು ರಕ್ಷಿಸುವುದಕ್ಕೆ ಸಂಪೂರ್ಣ ಬಲದೊಂದಿಗೆ ಯಾವುದೇ ರೀತಿಯಾಗಿ ಹೋರಾಡುವುದಕ್ಕೆ ಹಿಂಜರಿಯುವುದಿಲ್ಲ ಎಂದು ಇರಾನ್‌ನ ವಿದೇಶಾಂಗ ಸಚಿವಾಲಯ ಹೇಳಿದೆ.
ಸಚಿವಾಲಯವು ಇಸ್ರೇಲ್‌ನ ದಾಳಿಗಳನ್ನು “ಆಕ್ರಮಣಕಾರಿ ಕೃತ್ಯಗಳು” ಮತ್ತು ಈ ಇಸ್ರೇಲ್ ದೇಶದ ಪ್ರಾಥಮಿಕ ಪೋಷಕನಾಗಿ ಅಮೆರಿಕ ಸರ್ಕಾರವು ಸಹ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ ಎಂದು ಒಂದು ಹೇಳಿಕೆಯಲ್ಲಿ ಹೇಳಿದೆ.
ಈ ದಾಳಿಯ ಹೊಣೆಯಿಂದ ದೂರ ಉಳಿದ ಅಮೆರಿಕ
ಇರಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಗಳಲ್ಲಿ ನಾವು ಭಾಗಿಯಾಗಿಲ್ಲ ಮತ್ತು ಯಾವುದೇ ಸಹಾಯವನ್ನು ನೀಡಿಲ್ಲ. ಈ ಪ್ರದೇಶದಲ್ಲಿ ಅಮೇರಿಕನ್ ಪಡೆಗಳನ್ನು ರಕ್ಷಿಸುವುದು ಅಮೆರಿಕಕ್ಕೆ ಪ್ರಮುಖ ಆದ್ಯತೆಯಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಹೇಳಿದರು.
ಪ್ರತಿಕ್ರಿಯಿಸದ ಟ್ರಂಪ್
ಟ್ರಂಪ್ ಇಷ್ಟಪಡಲಿ ಅಥವಾ ಇಲ್ಲದಿರಲಿ, ಇಸ್ರೇಲ್ ಈ ದಾಳಿಯನ್ನು ಆಯ್ಕೆ ಮಾಡಿಕೊಂಡಿದೆ. ಅಮೆರಿಕ-ಇರಾನ್ ಪರಮಾಣು ಮಾತುಕತೆಗಳಲ್ಲಿ ಮಧ್ಯಸ್ಥಿಕೆ ವಹಿಸುತ್ತಿರುವ ಒಮಾನ್, “ಈ ಉಲ್ಬಣ ಮತ್ತು ಇದರ ಪರಿಣಾಮಗಳಿಗೆ” ಇಸ್ರೇಲ್ ಅನ್ನು ಹೊಣೆಗಾರರನ್ನಾಗಿ ಮಾಡಿದೆ.
ದಾಳಿಗಳ ವರದಿಗಳು “ಕಳವಳಕಾರಿ” ಮತ್ತು ಫ್ರಾನ್ಸ್‌ನಂತೆಯೇ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಒತ್ತಾಯಿಸಲಾಗಿದೆ ಎಂದು ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಹೇಳಿದ್ದಾರೆ. ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಪೆನ್ನಿ ವಾಂಗ್ ಅವರು, ಈ ದಾಳಿಗಳು ಈಗಾಗಲೇ ಅಸ್ಥಿರವಾಗಿರುವ ಪ್ರದೇಶಗಳನ್ನು ಮತ್ತಷ್ಟು ಅಸ್ಥಿರಗೊಳಿಸುವ ಅಪಾಯವನ್ನುಂಟುಮಾಡುತ್ತವೆ ಎಂದು ಹೇಳಿದರು. ಜಪಾನ್, ಟರ್ಕಿ, ಇಂಡೋನೇಷ್ಯಾ ಮತ್ತು ಸೌದಿ ಅರೇಬಿಯಾ ಕೂಡ ದಾಳಿಗಳನ್ನು ಖಂಡಿಸಿವೆ.
ದಾಳಿಗಳು ತರಬಹುದಾದ ತೀವ್ರ ಪರಿಣಾಮಗಳ ಬಗ್ಗೆ ಚೀನಾವು “ತೀವ್ರ ಚಿಂತಿತವಾಗಿದೆ” ಎಂದು ಅದು ಹೇಳಿದೆ.
ಯಾವುದೇ ಕಾರಣಕ್ಕೂ ಮತ್ತಷ್ಟು ದಾಳಿಗೆ ಇಳಿಯುವುದನ್ನು ತಪ್ಪಿಸಲು ಗರಿಷ್ಠ ಸಂಯಮವನ್ನು ಕಾಯ್ದುಕೊಳ್ಳುವಂತೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಎರಡೂ ದೇಶದವರನ್ನು ಕೇಳಿಕೊಂಡಿದ್ದಾರೆ ಎಂದು ಅವರ ವಕ್ತಾರರು ಹೇಳಿದ್ದಾರೆ.
ಈ ದಾಳಿಯಲ್ಲಿ ಕೊಲ್ಲಲ್ಪಟ್ಟವರು ಯಾರು?
ಇರಾನಿನ ಸಶಸ್ತ್ರ ಪಡೆಗಳ ಮುಖ್ಯಸ್ಥರು, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ ಕಾರ್ಪ್ಸ್ (IRGC) ನ ಕಮಾಂಡರ್ ಮತ್ತು ಇರಾನ್‌ನ ತುರ್ತು ಕಮಾಂಡ್‌ನ ಕಮಾಂಡರ್ ಇರಾನ್‌ನಾದ್ಯಂತ ಇಸ್ರೇಲಿ ದಾಳಿಗೆ ಬಲಿಯಾಗಿದ್ದಾರೆ ಎಂದು ಐಡಿಎಫ್ ಹೇಳಿದೆ.
ಇಸ್ರೇಲಿನ ರಾತ್ರೋರಾತ್ರಿಯ ದಾಳಿಯು ಇರಾನಿನ ಜನರಲ್ ಸ್ಟಾಫ್‌ನ ಹಿರಿಯ ವ್ಯಕ್ತಿಗಳು ಮತ್ತು ಪರಮಾಣು ಕಾರ್ಯಕ್ರಮದ ನಾಯಕರು ಸೇರಿದಂತೆ 100ಕ್ಕೂ ಹೆಚ್ಚು ಗುರಿಗಳ ಮೇಲೆ ಕೇಂದ್ರೀಕರಿಸಿತ್ತು ಎಂದು ಅದು ಹೇಳಿದೆ.
ಕೊಲ್ಲಲ್ಪಟ್ಟವರಲ್ಲಿ IRGCಯ ಕಮಾಂಡರ್-ಇನ್-ಚೀಫ್ ಹೊಸೇನ್ ಸಲಾಮಿ, ಖತಮ್-ಅಲ್ ಅನ್ಬಿಯಾ ಕೇಂದ್ರ ಪ್ರಧಾನ ಕಚೇರಿಯ ಕಮಾಂಡರ್ ಘೋಲಮಾಲಿ ರಶೀದ್ ಮತ್ತು ಇರಾನ್‌ನ ಸಶಸ್ತ್ರ ಪಡೆಗಳ ಮುಖ್ಯಸ್ಥ ಮೊಹಮ್ಮದ್ ಬಘೇರಿ ಸೇರಿದ್ದಾರೆ ಎಂದು ಇರಾನ್ ಸ್ಟೇಟ್ ಮಾಧ್ಯಮ ವರದಿ ಮಾಡಿದೆ.
IRGC ಸಂಯೋಜಿತ ಸುದ್ದಿ ಸಂಸ್ಥೆ ತಸ್ನಿಮ್ ಆರು ಪರಮಾಣು ವಿಜ್ಞಾನಿಗಳು ಸಹ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಿದೆ. ಐವರ ಹೆಸರನ್ನು ಇಲ್ಲಿ ಕೊಡಲಾಗಿದೆ:
*ಇರಾನ್‌ನ ಪರಮಾಣು ಶಕ್ತಿ ಸಂಸ್ಥೆಯ ಮಾಜಿ ಮುಖ್ಯಸ್ಥ ಫೆರೆಡೂನ್ ಅಬ್ಬಾಸಿ
*ಇರಾನ್‌ನ ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮೊಹಮ್ಮದ್ ಮಹ್ದಿ ಟೆಹ್ರಾನ್ಚಿ
*ಇರಾನ್‌ನ ಶಾಹಿದ್ ಬೆಹೆಶ್ತಿ ವಿಶ್ವವಿದ್ಯಾಲಯದ ಪರಮಾಣು ಎಂಜಿನಿಯರಿಂಗ್ ಮುಖ್ಯಸ್ಥ ಅಬ್ದುಲ್ಹಮಿದ್ ಮಿನೌಚೆರ್
*ಶಾಹಿದ್ ಬೆಹೆಶ್ತಿ ವಿಶ್ವವಿದ್ಯಾಲಯದ ಪರಮಾಣು ಎಂಜಿನಿಯರಿಂಗ್ ಪ್ರಾಧ್ಯಾಪಕ ಅಹ್ಮದ್ ರೆಜಾ ಝೋಲ್ಫಾಘರಿ
*ಶಾಹಿದ್ ಬೆಹೆಶ್ತಿ ವಿಶ್ವವಿದ್ಯಾಲಯದ ಮತ್ತೊಬ್ಬ ಪರಮಾಣು ಪ್ರಾಧ್ಯಾಪಕ ಅಮೀರ್‌ಹೊಸೇನ್ ಫೆಖಿ
*ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹಿರಿಯ ಸಲಹೆಗಾರ ಅಲಿ ಶಮ್ಖಾನಿ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಇರಾನಿನ ವರದಿಗಳು ತಿಳಿಸಿವೆ. ಮಕ್ಕಳು ಸೇರಿದಂತೆ ನಾಗರಿಕರು ಸಹ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಮಾಧ್ಯಮ ವರದಿ ಮಾಡಿದೆ. ಈ ವರದಿಗಳನ್ನು ಸ್ವತಂತ್ರವಾಗಿ ಪರಿಶೀಲಿಸಲು ಬಿಬಿಸಿಗೆ ಸಾಧ್ಯವಾಗುತ್ತಿಲ್ಲ.
ಇರಾನ್‌ನ ಪರಮಾಣು ಕಾರ್ಯಕ್ರಮ ಎಂದರೆ ಏನು?
ಇರಾನ್ ತನ್ನ ಪರಮಾಣು ಕಾರ್ಯಕ್ರಮವು ನಾಗರಿಕ ಉದ್ದೇಶಗಳಿಗಾಗಿ ಮಾತ್ರ ಎಂದು ಬಹಳ ಹಿಂದಿನಿಂದಲೂ ಹೇಳಿಕೊಂಡು ಬಂದಿದೆ. ಇರಾನ್‌ನ ಸುತ್ತಲೂ ಇದು ಹಲವಾರು ಕೇಂದ್ರಗಳನ್ನು ಹೊಂದಿದೆ. ಅವುಗಳಲ್ಲಿ ಈಗ ಕೆಲವು ಇಸ್ರೇಲಿ ದಾಳಿಗಳಿಗೆ ಗುರಿಯಾಗಿವೆ. ಆದರೆ ಅನೇಕ ದೇಶಗಳು ಹೊಂದಿರುವ ಹಾಗೆಯೇ ಇರಾನ್‌ನ ಕಾರ್ಯಕ್ರಮವು ನಾಗರಿಕ ಉದ್ದೇಶಗಳಿಗಾಗಿ ಮಾತ್ರ ಎಂದು ಜಾಗತಿಕ ಪರಮಾಣು ಕಾವಲು ಸಂಸ್ಥೆ (IAEA)ಗೂ ಕೂಡ ಮನವರಿಕೆಯಾಗಿಲ್ಲ.
ಕಾವಲು ಸಂಸ್ಥೆಯ ಆಡಳಿತ ಮಂಡಳಿಯು 20 ವರ್ಷಗಳಲ್ಲಿ ಮೊದಲ ಬಾರಿಗೆ ಇರಾನ್ ತನ್ನ ಪ್ರಸರಣ ರಹಿತ ಕಟ್ಟುಪಾಡುಗಳನ್ನು ಉಲ್ಲಂಘಿಸಿದೆ ಎಂದು ಈ ವಾರ ಔಪಚಾರಿಕವಾಗಿ ಘೋಷಿಸಿತು.
ಘೋಷಿಸದ ಪರಮಾಣು ಸಾಮಾಗ್ರಿಗಳು ಮತ್ತು ಇರಾನ್‌ನ ಅಭಿವೃದ್ಧಿಪಡಿಸಿದ ಯುರೇನಿಯಂ ದಾಸ್ತಾನು ಬಗ್ಗೆ ಸಂಪೂರ್ಣ ಉತ್ತರಗಳನ್ನು ನೀಡುವಲ್ಲಿ ಇರಾನ್‌ನ “ಹಲವು ವೈಫಲ್ಯಗಳನ್ನು” ಅದು ಉಲ್ಲೇಖಿಸಿದೆ.
ಹಿಂದಿನ IAEA ವರದಿಯು ಇರಾನ್ ಯುರೇನಿಯಂ ಅನ್ನು 60% ಶುದ್ಧತೆಗೆ ಅಭಿವೃದ್ಧಿಪಡಿಸಿದೆ ಎಂದು ಹೇಳಿದೆ. ಇದು ಒಂಬತ್ತು ಪರಮಾಣು ಬಾಂಬ್‌ಗಳನ್ನು ತಯಾರಿಸಲು ಶಸ್ತ್ರಾಸ್ತ್ರ ದರ್ಜೆಯ ಯುರೇನಿಯಂಗೆ ಹತ್ತಿರದಲ್ಲಿದೆ.
ಇಂಗ್ಲೀಷ್ ಮೂಲ: ಬಿಬಿಸಿ
ಕನ್ನಡಕ್ಕೆ: ಪೃಥ್ವಿ ಕಣಸೋಗಿ
ಗಾಝಾ ನೆರವಿಗೆ ಉತ್ತರ ಆಫ್ರೀಕಾ ದೇಶಗಳ ಜನರ ಕಾಲ್ನಡಿಗೆ ರ‍್ಯಾಲಿ | ತಡೆದ ಈಜಿಫ್ಟ್


