ತಪ್ಪಾಗಿ ಬಾಂಗ್ಲಾದೇಶದ ಗಡಿಯಾಚೆಗೆ ತಳ್ಳಿದ್ದ ನಾಲ್ವರು ಪಶ್ಚಿಮ ಬಂಗಾಳದ ನಿವಾಸಿಗಳನ್ನು ವಾಪಸ್ ಕರೆತರಲಾಗಿದೆ ಎಂದು ವರದಿಯಾಗಿದೆ.
ಮುರ್ಷಿದಾಬಾದ್ ಜಿಲ್ಲೆಯ ಇಬ್ಬರು, ಬರ್ಧಮಾನ್ ಜಿಲ್ಲೆಯ ಒಬ್ಬ ವ್ಯಕ್ತಿಯನ್ನು ಗಡಿಪಾರು ಮಾಡಲಾಗಿತ್ತು. ಅಧಿಕಾರಿಗಳು ಅವರ ಪೌರತ್ವ ದಾಖಲೆಗಳನ್ನು ಸಾಭೀತುಪಡಿಸಿದ ಬಳಿಕ ವಾಪಸ್ ಕರೆತರಲಾಗಿದೆ.
ಮುರ್ಷಿದಾಬಾದ್ ಜಿಲ್ಲಾ ಪೊಲೀಸರು, ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ಬಾಂಗ್ಲಾದೇಶ ಗಡಿ ಕಾವಲು ಪಡೆ (ಬಿಜಿಬಿ) ಸಹಯೋಗದೊಂದಿಗೆ ನಾಲ್ವರನ್ನು ಮರಳಿ ಕರೆತರುವ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು ಎಂದು ವರದಿಗಳು ಹೇಳಿವೆ.
ಮುರ್ಷಿದಾಬಾದ್‌ನ ಮೆಹಬೂಬ್ ಶೇಖ್ (ಭಗವಂಗೋಲಾ), ನಜೀಮುದ್ದೀನ್ ಮಂಡಲ್ (ಹರಿಹರಪರಾ), ಮಿನಾರುಲ್ ಶೇಖ್ (ಬೆಲ್ಡಂಗಾ) ಮತ್ತು ಮುಸ್ತಫಾ ಕಮಲ್ ಶೇಖ್ (ಮಾಂಟೆಸ್ವರ್, ಬರ್ಧಮಾನ್) ಅವರನ್ನು ಆರಂಭದಲ್ಲಿ ಬಾಂಗ್ಲಾದೇಶಿ ಪ್ರಜೆಗಳೆಂದು ಶಂಕಿಸಿ ಮುಂಬೈನಲ್ಲಿ ಬಂಧಿಸಲಾಗಿತ್ತು. ಬಳಿಕ ಸರಿಯಾಗಿ ಪರಿಶೀಲನೆ ನಡೆಸದೆ ಅವರನ್ನು ಸಿಲಿಗುರಿಯಲ್ಲಿ ಬಿಎಸ್‌ಎಫ್‌ಗೆ ಹಸ್ತಾಂತರಿಸಲಾಗಿತ್ತು. ನಂತರ ಬಾಂಗ್ಲಾದೇಶದ ಗಡಿಯಾಚೆಗೆ ತಳ್ಳಲಾಗಿತ್ತು.
ನಾಲ್ವರನ್ನು ಗಡಿಪಾರು ಮಾಡಲಾಗಿದೆ ಎಂದು ಗೊತ್ತಾದ ಬಳಿಕ, ಮುರ್ಷಿದಾಬಾದ್ ಪೊಲೀಸರು ತಕ್ಷಣ ತನಿಖೆ ಆರಂಭಿಸಿದ್ದರು. ನಾಲ್ವರ ಭಾರತೀಯ ಪೌರತ್ವ ಸಾಭೀತುಪಡಿಸಲು ಸ್ಥಳೀಯ ವಿಚಾರಣೆಗಳನ್ನು ನಡೆಸಿದ್ದರು. ಅಧಿಕೃತ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಿ ಬಿಎಸ್‌ಎಫ್‌ಗೆ ಸಲ್ಲಿಸಿದ್ದರು.
ಬಳಿಕ ಬಿಎಸ್‌ಎಫ್ ಮತ್ತು ಬಿಜಿಬಿ ನಡುವಿನ ನಿರಂತರ ಸಮನ್ವಯದ ಮೂಲಕ ಬಾಂಗ್ಲಾದೇಶ ಅಧಿಕಾರಿಗಳೊಂದಿಗೆ ತುರ್ತು ಧ್ವಜ ಸಭೆ ನಡೆಸಲಾಗಿದೆ. ಮಾತುಕತೆಯ ನಂತರ, ನಾಲ್ವರು ವ್ಯಕ್ತಿಗಳನ್ನು ಕೂಚ್ ಬೆಹಾರ್‌ನಲ್ಲಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.
ನಾಲ್ವರ ಪೈಕಿ ಮೆಹಬೂಬ್ ಶೇಖ್ ಅವರ ಪೌರತ್ವ ದಾಖಲೆಗಳನ್ನು ಸಲ್ಲಿಸಿದರೂ, ಗಡಿಯಾಚೆಗೆ ತಳ್ಳಲಾಗಿದೆ ಎಂದು ಇತ್ತೀಚೆಗೆ ವರದಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಭಾರತೀಯರನ್ನು ಬಾಂಗ್ಲಾದೇಶದ ಅಕ್ರಮ ವಲಸಿಗರು ಎಂದು ಗಡಿಯಾಚೆಗೆ ತಳ್ಳಿ, ಬಳಿಕ ವಾಪಸ್ ಕರೆತರುವ ಪ್ರಕರಣಗಳು ಪ್ರತಿದಿನವೂ ವರದಿಯಾಗುತ್ತಿದೆ. ಕಳೆದ ಒಂದು ತಿಂಗಳಲ್ಲಿ ಭಾರತದ ವಿವಿಧ ರಾಜ್ಯಗಳ ಸುಮಾರು 2000 ಜನರನ್ನು ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಲಾಗಿದೆ ಎಂದು ವರದಿಗಳು ಹೇಳಿವೆ.
ಬಂಗಾಳಿ ಭಾಷಿಕರನ್ನು ಬಾಂಗ್ಲಾದೇಶಿಗಳು ಎಂದು ಬಿಜೆಪಿ ಹಣೆಪಟ್ಟಿ ಕಟ್ಟುತ್ತಿದೆ: ಸಿಎಂ ಮಮತಾ


