ಹಿರಿಯ ನಟ ಕಮಲ್ ಹಾಸನ್ ನಟಿಸಿರುವ ‘ಥಗ್ ಲೈಫ್’ ಚಿತ್ರ ಬಿಡುಗಡೆಗೆ “ನ್ಯಾಯಾಂಗೇತರ ತಡೆ” ಹೇರಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಮಂಗಳವಾರ ಕರ್ನಾಟಕ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ ಎಂದು ವರದಿಯಾಗಿದೆ.
ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಮತ್ತು ನ್ಯಾಯಮೂರ್ತಿ ಮನಮೋಹನ್ ಅವರನ್ನೊಳಗೊಂಡ ಪೀಠವು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿ, ಬುಧವಾರದೊಳಗೆ ಪ್ರತಿ-ಅಫಿಡವಿಟ್ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
“ಗುಂಪುಗಳು ಮತ್ತು ಗೂಂಡಾ ಗುಂಪುಗಳು ಬೀದಿಗಳಲ್ಲಿ ಓಡಾಡಲು ನಾವು ಬಿಡುವುದಿಲ್ಲ. ಕಾನೂನಿನ ನಿಯಮ ಜಾರಿಯಲ್ಲಿರಬೇಕು. ಯಾರಾದರೂ ಹೇಳಿಕೆ ನೀಡಿದ್ದರೆ, ಅದನ್ನು ಹೇಳಿಕೆಯ ಮೂಲಕ ಎದುರಿಸಿ. ಯಾರಾದರೂ ಬರೆದಿದ್ದರೆ, ಬರೆದು ತೋರಿಸಿ” ಎಂದು ನ್ಯಾಯಾಲಯ ಹೇಳಿದೆ.
ಕನ್ನಡ ಭಾಷೆಯ ಕುರಿತು ನಟ ಕಮಲ್ ಹಾಸನ್ ನೀಡಿದ ಹೇಳಿಕೆಯನ್ನು ವಿರೋಧಿಸಿ ಕನ್ನಡ ಪರ ಗುಂಪುಗಳು ಪ್ರತಿಭಟನೆ ನಡೆಸಿದ ನಂತರ ಮಣಿರತ್ನಂ ನಿರ್ದೇಶನದ ಚಿತ್ರ ಬಿಡುಗಡೆಯನ್ನು ಕರ್ನಾಟಕದಲ್ಲಿ ತಡೆ ಹಿಡಿಯಲಾಗಿದೆ. ಚೆನ್ನೈನಲ್ಲಿ ನಡೆದ ಚಿತ್ರದ ಆಡಿಯೋ ಬಿಡುಗಡೆ ಸಂದರ್ಭದಲ್ಲಿ, ನಟ-ರಾಜಕಾರಣಿ ಕನ್ನಡ “ತಮಿಳಿನಿಂದ ಹುಟ್ಟಿದೆ” ಎಂದು ಹೇಳಿದ್ದರು.
ತನ್ನ ಹೇಳಿಕೆಗೆ ಕಮಲ್ ಹಾಸನ್ ಕ್ಷಮೆಯಾಚಿಸಲು ನಿರಾಕರಿಸಿರುವುದು ಕನ್ನಡ ಪರ ಗುಂಪುಗಳನ್ನು ಮತ್ತಷ್ಟು ಕೆರಳಿಸಿತ್ತು. ಹಾಗಾಗಿ, ಕಮಲ್ ಹಾಸನ್ ಕ್ಷಮೆಯಾಚಿಸುವವರೆಗೆ ಚಿತ್ರವನ್ನು ರಾಜ್ಯದಲ್ಲಿ ಪ್ರದರ್ಶಿಸುವುದಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ಘೋಷಿಸಿತ್ತು.
ಜೂನ್ 5ರಂದು ಕರ್ನಾಟಕ ಹೊರತುಪಡಿಸಿ ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಥಗ್ ಲೈಫ್ ಬಿಡುಗಡೆಯಾಗಿದೆ.
ಸಿಬಿಎಫ್‌ಸಿ ಪ್ರಮಾಣಪತ್ರ ಹೊಂದಿರುವ ಯಾವುದೇ ಚಿತ್ರದ ಪ್ರದರ್ಶನಕ್ಕೆ ಅವಕಾಶ ಒದಗಿಸಿಕೊಡುವ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿದೆ ಎಂದು ನ್ಯಾಯಾಲಯ ಒತ್ತಿ ಹೇಳಿದೆ.
“ಜನರು ಚಿತ್ರವನ್ನು ನೋಡದೇ ಇರಬಹುದು. ಅದು ಬೇರೆ ವಿಷಯ. ಜನರು ಚಿತ್ರವನ್ನು ನೋಡಲೇಬೇಕು ಎಂದು ನಾವು ಯಾವುದೇ ಆದೇಶವನ್ನು ಹೊರಡಿಸುತ್ತಿಲ್ಲ. ಆದರೆ, ಚಿತ್ರವನ್ನು ಬಿಡುಗಡೆ ಮಾಡಬೇಕು” ಎಂದಿದೆ.
ಕಮಲ್ ಹಾಸನ್ ತಮ್ಮ ಹೇಳಿಕೆಗಳಿಗೆ ಕ್ಷಮೆಯಾಚಿಸುವಂತೆ ನಿರ್ದೇಶಿಸಿದ ಕರ್ನಾಟಕ ಹೈಕೋರ್ಟ್ ಆದೇಶಕ್ಕೂ ನ್ಯಾಯಾಲಯ ಅಸಮ್ಮತಿ ವ್ಯಕ್ತಪಡಿಸಿದೆ. “ಇದು ಹೈಕೋರ್ಟ್‌ನ ಕೆಲಸವಲ್ಲ” ಎಂದು ನ್ಯಾಯಮೂರ್ತಿ ಭುಯಾನ್ ಹೇಳಿದ್ದಾರೆ.
ಕರ್ನಾಟಕದ ಜನರು ನಟನ ಮಾತನ್ನು ಒಪ್ಪದೇ ಇರಬಹುದು. ಆದರೆ, ಅವರು ಬೆದರಿಕೆ ಹಾಕಬಾರದಿತ್ತು. ಬೆಂಗಳೂರಿನ ಎಲ್ಲಾ ಪ್ರಬುದ್ದ ಜನರು ಕಮಲ್ ಹಾಸನ್ ಅವರ ಹೇಳಿಕೆಯನ್ನು ತಪ್ಪು ಎಂದು ಹೇಳಬಹುದು. ಆದರೆ, ಬೆದರಿಕೆ ಏಕೆ ಹಾಕಬೇಕಿತ್ತು? ಎಂದು ನ್ಯಾಯಮೂರ್ತಿ ಭುಯಾನ್ ಕೇಳಿದ್ದಾರೆ.
“ಕನ್ನಡವು ತಮಿಳಿನಿಂದ ಹುಟ್ಟಿದೆ” ಎಂಬ ನಟ ಕಮಲ್ ಹಾಸನ್ ಅವರ ಹೇಳಿಕೆಯನ್ನು ಹೈಕೋರ್ಟ್ ತೀವ್ರವಾಗಿ ಟೀಕಿಸಿತ್ತು. “ಒಂದೇ ಒಂದು ಕ್ಷಮೆಯಾಚನೆಯಿಂದ ಸಮಸ್ಯೆ ಬಗೆಹರಿಯುತ್ತಿತ್ತು” ಎಂದು ಹೇಳಿತ್ತು.
ಕರ್ನಾಟಕದಲ್ಲಿ ‘ಥಗ್ ಲೈಫ್’ ಚಿತ್ರ ಬಿಡುಗಡೆಯ ತಡೆಯನ್ನು ಪ್ರಶ್ನಿಸಿ ಎಂ ಮಹೇಶ್ ರೆಡ್ಡಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದೆ.


