ಬೆಂಗಳೂರು: ವಿವಾದಾತ್ಮಕ ವಕ್ಫ್ ತಿದ್ದುಪಡಿ ಕಾಯಿದೆ-2025ರ ರದ್ಧತಿಗೆ ಕೋರಿ ರಾಜ್ಯಾದ್ಯಂತ ಮುಸ್ಲಿಂ ನಿಯೋಗಗಳು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿವೆ.
ಸೋಮವಾರದಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ರಾಜ್ಯ ಘಟಕವು, ಈ ಕಾಯಿದೆಯು ಸಂವಿಧಾನದ ಮೇಲಿನ ನೇರ ಆಕ್ರಮಣ ಎಂದು ಖಂಡಿಸಿದೆ. ಇದು ಪ್ರಜಾಪ್ರಭುತ್ವ ವಿರೋಧಿ, ಅಲ್ಪಸಂಖ್ಯಾತ ವಿರೋಧಿಯಾಗಿದ್ದು ಇದನ್ನು ತಕ್ಷಣವೇ ಹಿಂಪಡೆಯಲು ರಾಷ್ಟ್ರಪತಿಗಳಿಗೆ ಉದ್ದೇಶಿಸಿ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದೆ.
ಈ ಪತ್ರಿಕಾಗೋಷ್ಠಿಯನ್ನು ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಅಭಿಯಾನದ ಯಶಸ್ವಿ ಮುಕ್ತಾಯದ ಭಾಗವಾಗಿ ನಡೆಸಲಾಗಿದೆ ಎಂದು ಮಂಡಳಿಯು ತಿಳಿಸಿದೆ.
ತಿದ್ದುಪಡಿಯ ಕಾಯಿದೆಯ ಧಾರ್ಮಿಕ ಪರಿಣಾಮಗಳನ್ನು ಮಂಡಳಿ ಸದಸ್ಯರು ವಿವರಿಸಿದರು. ಈ ಕಾಯಿದೆಯು ವಕ್ಫ್ ಆಸ್ತಿಗಳ ಮೇಲೆ ಸರಕಾರಕ್ಕೆ ಹೆಚ್ಚಿನ ಅಧಿಕಾರವನ್ನು ನೀಡುತ್ತದೆ. ಮುಸ್ಲಿಂ ಧಾರ್ಮಿಕ, ಶೈಕ್ಷಣಿಕ ಮತ್ತು ದತ್ತಿ ಸಂಸ್ಥೆಗಳ ಸ್ವಾಯತ್ತತೆಗೆ ತೀವ್ರ ಬೆದರಿಕೆಯನ್ನು ಒಡ್ಡುತ್ತದೆ ಎಂದು ಸಮಿತಿಯು ಎಚ್ಚರಿಸಿದೆ.
ಈ ತಿದ್ದುಪಡಿಯು 1995ರ ವಕ್ಫ್ ಕಾಯಿದೆಯ ಆಶಯವನ್ನು ಮಾತ್ರವಲ್ಲದೆ, ಸಂವಿಧಾನದ 25, 26 ಮತ್ತು 29ನೇ ವಿಧಿಗಳ ಉಲ್ಲಂಘನೆಯಾಗಿದೆ. ಈ ವಿಧಿಗಳು ಧಾರ್ಮಿಕ ಸ್ವಾತಂತ್ರ್ಯ ಮತ್ತು ಸರಕಾರದ ಹಸ್ತಕ್ಷೇಪವಿಲ್ಲದೆ ಅಲ್ಪಸಂಖ್ಯಾತರಿಗೆ ತಮ್ಮ ಸಂಸ್ಥೆಗಳನ್ನು ನಿರ್ವಹಿಸುವ ಹಕ್ಕನ್ನು ಖಾತರಿಪಡಿಸುತ್ತದೆ ಎಂದು ಸಮಿತಿಯ ಸದಸ್ಯರು ಹೇಳಿದರು.
ವಕ್ಫ್ ಆಸ್ತಿಗಳು ಖಾಸಗಿ ಆಸ್ತಿಗಳಲ್ಲ. ಅವು ಧಾರ್ಮಿಕ ಟ್ರಸ್ಟ್ ಗಳಾಗಿವೆ. ಅವು ಸಮುದಾಯದ ಪ್ರಯೋಜನಕ್ಕಾಗಿ ಮತ್ತು ಅಲ್ಲಾಹನ ಸಲುವಾಗಿ ಶಾಶ್ವತವಾಗಿ ಇರುವಂತಹವುಗಳಾಗಿವೆ. ಅವುಗಳನ್ನು ನೇರವಾಗಿ ಸರಕಾರದ ನಿಯಂತ್ರಣಕ್ಕೆ ತರುವುದು ಸಂವಿಧಾನಿಕ ಕಾನೂನು ಮತ್ತು ಇಸ್ಲಾಮಿಕ್ ನ್ಯಾಯಶಾಸ್ತ್ರ ಎರಡನ್ನೂ ಉಲ್ಲಂಘಿಸಿದಂತಾಗುತ್ತದೆ ಅವರು ತಿಳಿಸಿದರು.
ಕಾಯಿದೆಯನ್ನು ರದ್ದುಗೊಳಿಸದಿದ್ದರೆ ರಾಜ್ಯಾದ್ಯಂತ ಶಾಂತಿಯುತ ಚಳುವಳಿಯನ್ನು ಸಮಿತಿಯು ಘೋಷಿಸಿತು.
ಸಮಿತಿಯ ಮೊಹಮ್ಮದ್ ಯೂಸುಫ್ ಕನ್ನಿ ಅವರು ಮಾತನಾಡಿ, ಜೂನ್ 23ರಂದು ಬೆಂಗಳೂರಿನಲ್ಲಿ ನಾಗರಿಕ ಸಮಾಜದ ಸಭೆಯನ್ನು ಆಯೋಜಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಭಿಯಾನದ ಕರ್ನಾಟಕ ಕ್ರಿಯಾ ಸಮಿತಿಯ ಸಂಚಾಲಕ ಮೊಹಮ್ಮದ್ ಯೂಸುಫ್ ಕನ್ನಿ, ಸಹ-ಸಂಚಾಲಕ ಸೈಯದ್ ಶಫೀವುಲ್ಲಾ, ಜಮಾಅತೆ ಇಸ್ಲಾಮಿ ಹಿಂದ್ (ಕರ್ನಾಟಕ) ಅಧ್ಯಕ್ಷ ಡಾ. ಮೊಹಮ್ಮದ್ ಸಾದ್ ಬೆಳಗಾಮಿ, ಎಐಎಂಪಿಎಲ್‌ಬಿ ಸದಸ್ಯ ಆಸಿಮ್ ಅಫ್ರೋಜ್ ಸೇಠ್ ಮತ್ತು ಮಾಧ್ಯಮ ಉಸ್ತುವಾರಿ ಮೊಹಮ್ಮದ್ ಫರ್ಕಾನ್ ಅವರು ಉಪಸ್ಥಿತರಿದ್ದರು.
ಏರ್ ಇಂಡಿಯಾ ಪತನ: 90 ದಿನಗಳಲ್ಲಿ ವರದಿ ಸಲ್ಲಿಸಲು ಉನ್ನತ ಮಟ್ಟದ ಸಮಿತಿ ರಚನೆ


