ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಹಾಕಿ ಸಾರ್ವಜನಿಕವಾಗಿ ಅವಮಾನಿಸಿದ್ದಲ್ಲದೆ, ಹಲ್ಲೆ ನಡೆಸಿರುವ ಘಟನೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ದು ಅವರು ಪ್ರತಿನಿಧಿಸುವ ಕುಪ್ಪಂ ಕ್ಷೇತ್ರದಲ್ಲಿ ನಡೆದಿದೆ.
ಸಾಲ ಮರುಪಾವತಿ ವಿಚಾರಕ್ಕೆ ದುಷ್ಕೃತ್ಯ ಎಸಗಲಾಗಿದೆ. ಆರೋಪಿಯನ್ನು ಮುನಿಕಣ್ಣಪ್ಪ ಎಂದು ಗುರುತಿಸಲಾಗಿದ್ದು, ಸಂತ್ರಸ್ತ ಮಹಿಳೆಯ ಹೆಸರು ಸಿರಿಷಾ ಎಂದು ತಿಳಿದು ಬಂದಿದೆ.
ವರದಿಗಳ ಪ್ರಕಾರ, ಸಿರಿಷಾ ಅವರ ಪತಿ ತಿಮ್ಮರಾಯಪ್ಪ ಅವರು ಮೂರು ವರ್ಷಗಳ ಹಿಂದೆ ಮುನಿಕಣ್ಣಪ್ಪ ಅವರಿಂದ 80,000 ರೂಪಾಯಿ ಸಾಲ ಪಡೆದಿದ್ದರು. ಸಾಲ ಮರುಪಾವತಿಸಲು ವಿಫಲವಾದ ನಂತರ, ತಿಮ್ಮರಾಯಪ್ಪ ಅವರು ಸಿರಿಷಾ ಮತ್ತು ಮಕ್ಕಳನ್ನು ತ್ಯಜಿಸಿ, ಮರುಪಾವತಿಯ ಹೊರೆಯನ್ನು ಅವರ ಮೇಲೆ ಹೊರಿಸಿ ಹೋಗಿದ್ದರು.
ತನ್ನ ಮಕ್ಕಳನ್ನು ಸಾಕಲು ಮತ್ತು ಸಾಲ ಮರುಪಾವತಿಸಲು ಸಿರಿಷಾ ಅವರು ದಿನಗೂಲಿ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದರೂ, ಪಾವತಿ ವಿಳಂಬ ಮಾಡಿದ್ದಕ್ಕಾಗಿ ಮುನಿಕಣ್ಣಪ್ಪ ಮರಕ್ಕೆ ಕಟ್ಟಿ ಹಾಕಿ ಸಾರ್ವಜನಿಕವಾಗಿ ಅವಮಾನಿಸಿದ್ದಾನೆ. ಅಲ್ಲದೆ, ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಸೋಮವಾರ ಮಧ್ಯಾಹ್ನ ಸಿರಿಷಾ ಅವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಮುನಿಕಣ್ಣಪ್ಪ ಆಕೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ನಂತರ ಬಲವಂತವಾಗಿ ಎಳೆದೊಯ್ದು ಬೇವಿನ ಮರಕ್ಕೆ ಕಟ್ಟಿಹಾಕಿ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ವರದಿಯಾಗಿದೆ.
ಘಟನೆಯನ್ನು ತಮ್ಮ ಫೋನ್‌ಗಳಲ್ಲಿ ರೆಕಾರ್ಡ್ ಮಾಡಲು ಪ್ರಯತ್ನಿಸಿದ ಗ್ರಾಮಸ್ಥರ ಮೇಲೂ ಮುನಿಕಣ್ಣಪ್ಪ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಸ್ಥಳೀಯ ನಿವಾಸಿಗಳು ತಕ್ಷಣ ಕುಪ್ಪಂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಿಎನ್‌ಎಸ್‌ನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ದಾಖಲಾದ ಬೆನ್ನಲ್ಲೇ ಮುನಿಕಣ್ಣಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.
ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ತನ್ನ ಕ್ಷೇತ್ರದಲ್ಲಿ ನಡೆದಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೊಂದಿಗೆ ಸಿಎಂ ಚರ್ಚೆ ನಡೆಸಿದ್ದಾರೆ.
ಇಂತಹ ಅನಾಗರಿಕ ಕೃತ್ಯಗಳು ಎಂದಿಗೂ ಪುನರಾವರ್ತನೆಯಾಗದಂತೆ ನೋಡಿಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಸಂತ್ರಸ್ತೆಯ ಕುಟುಂಬಕ್ಕೆ ಸಂಪೂರ್ಣ ಬೆಂಬಲ ನೀಡುವಂತೆ ಜಿಲ್ಲಾ ಅಧಿಕಾರಿಗಳಿಗೆ ಆದೇಶಿಸಿದ್ದೇನೆ ಎಂದು ಸಿಎಂ ಹೇಳಿದ್ದಾರೆ.
“ಇದು ಗಂಭೀರ ಅನ್ಯಾಯ. ಅಪರಾಧಿಗಳು ಕಠಿಣ ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಮಹಿಳೆಯರ ಮೇಲಿನ ಇಂತಹ ಕ್ರೌರ್ಯವನ್ನು ನಾವು ಸಹಿಸುವುದಿಲ್ಲ” ಎಂದಿದ್ದಾರೆ.
ಘಟನೆ ಕುರಿತು ಗೃಹ ಸಚಿವೆ ವಂಗಲಪುಡಿ ಅನಿತಾ ಮತ್ತು ಟಿಡಿಪಿ ಎಂಎಲ್‌ಸಿ ಕಂಚರ್ಲ ಶ್ರೀಕಾಂತ್ ಪ್ರತಿಕ್ರಿಯಿಸಿದ್ದಾರೆ.
ಗೃಹ ಸಚಿವರು ಸಂತ್ರಸ್ತೆ ಜೊತೆ ವಿಡಿಯೋ ಕರೆಯ ಮೂಲಕ ಮಾತನಾಡಿದ್ದು, ಆಕೆಗೆ ಧೈರ್ಯ ಹೇಳಿದ್ದಾರೆ. ಅಮಾನವೀಯ ಕೃತ್ಯವನ್ನು ಅವರು ಬಲವಾಗಿ ಖಂಡಿಸಿದ್ದಾರೆ. ಸರ್ಕಾರದಿಂದ ಆಕೆಗೆ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ.


