ಉತ್ತರಪ್ರದೇಶದ ಬಾರಾಬಂಕಿ ಜಿಲ್ಲೆಯಿಂದ ಸುಮಾರು 20ರಿಂದ 25 ಯುವಕರು ಇಸ್ರೇಲ್‌ನಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಈಗ ಅವರು ಇಸ್ರೇಲ್ -ಇರಾನ್ ಸಂಘರ್ಷದಿಂದಾಗಿ ಪ್ರತಿದಿನ ಕ್ಷಿಪಣಿ ದಾಳಿಯ ಅಪಾಯವನ್ನು ಎದುರಿಸಬೇಕಾಗಿದೆ. ಭಾರತದಲ್ಲಿರುವ ಈ ಕಾರ್ಮಿಕರ ಕುಟುಂಬಗಳು ಕೂಡ ಈಗ ಆತಂಕದೊಂದಿಗೆ ಬದುಕು ದೂಡುವಂತಾಗಿದೆ.
ಪ್ರತಿ ಬಾರಿ ಇಸ್ರೆಲ್‌ನಲ್ಲಿರುವ ತಮ್ಮವರಿಗೆ ಕರೆ ಮಾಡುವಾಗ ಅಲ್ಲಿನ ಸೈರನ್‌ಗಳು ಅಥವಾ ಸ್ಫೋಟಗಳು ಕೇಳುತ್ತವೆ. ಇದರಿಂದಾಗಿ ನಮಗೆ ಭಯವಾಗುತ್ತಿದೆ ಎಂದು ದಿವಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಸಾಲೆಹ್ ನಗರ ಕಾಲೋನಿಯ ನಿವಾಸಿ ರಾಜು ಸಿಂಗ್ ಹೇಳಿದರು.
ಇಸ್ರೇಲ್‌ನಲ್ಲಿ ಕೆಲಸಮಾಡುತ್ತಿರುವವರಲ್ಲಿ ಸಾಲೆಹ್ ನಗರದಿಂದ ರಾಜು ಸಿಂಗ್ ಅವರ ಸೋದರಳಿಯ ಕೆ.ಪಿ.ಸಿಂಗ್, ಜನೀಂದ್ರ ಪ್ರತಾಪ್ ಸಿಂಗ್ (ಅವರ ಚಿಕ್ಕಪ್ಪನ ಮಗ), ಲಲಿತ್ ಸಿಂಗ್ (ಅವರ ಅಣ್ಣನ ಮಗ), ಮತ್ತು ನೆರೆಹೊರೆಯವರಾದ ಮೋನೋ, ಸಂಜಯ್, ಮಂಗಳ್ ಸಿಂಗ್ ಮತ್ತು ದಿನೇಶ್ ಸಿಂಗ್ ಸೇರಿದಂತೆ ಇತರರು ಇದ್ದಾರೆ. ಒಟ್ಟಾರೆ ಗ್ರಾಮದಿಂದ ಸುಮಾರು 20ರಿಂದ 25 ಯುವಕರು ಕಳೆದ ಒಂದು ವರ್ಷದಿಂದ ಕಾರ್ಮಿಕರಾಗಿ ಇಸ್ರೇಲ್‌ನಲ್ಲಿದ್ದಾರೆ.
ಅವರ ಮಾಸಿಕ ಸಂಬಳ 1 ಲಕ್ಷದಿಂದ 1.5 ಲಕ್ಷ ರೂಪಾಯಿಗಳವರೆಗೆ ಇದೆ. ಸಂಪಾದನೆ ಚೆನ್ನಾಗಿದೆ. ಆದರೆ ಪರಿಸ್ಥಿತಿ ತುಂಬಾ ಅಪಾಯಕಾರಿಯಾಗಿದೆ ಎಂದು ರಾಜು ಸಿಂಗ್ ವಿವರಿಸುತ್ತಾರೆ.
ತಮ್ಮ ಮಗ ರಾಕೇಶ್ ಕೂಡ ಸುಮಾರು ಒಂದು ವರ್ಷದಿಂದ ಇಸ್ರೇಲ್‌ನಲ್ಲಿದ್ದಾನೆ ಎಂದು ಕಾಲೋನಿಯ ಮತ್ತೊಬ್ಬ ನಿವಾಸಿ ವಿನೋದ್ ಸಿಂಗ್ ಹೇಳಿದರು.
ನನ್ನ ಮಗ ರಾಕೇಶ್ ನನಗೆ ಕರೆ ಮಾಡಿ ತಾವು ಎಲ್ಲರೂ ಸುರಕ್ಷಿತವಾಗಿರುವುದಾಗಿ ತಿಳಿಸಿದ್ದಾನೆ ಎಂದು ವಿನೋದ್ ಸಿಂಗ್ ಹೇಳಿದರು. “ಸೈರನ್‌ಗಳು ಮೊಳಗಿದಾಗಲೆಲ್ಲಾ ನಾವು ತಕ್ಷಣ ಬಂಕರ್‌ಗಳಿಗೆ ಓಡುತ್ತೇವೆ. ಇಲ್ಲಿ ಪ್ರತಿದಿನ ಸುಮಾರು150ರಿಂದ 200 ಕ್ಷಿಪಣಿಗಳು ಬೀಳುತ್ತಿವೆ ಎಂದು ತನ್ನ ಮಗ ತಿಳಿಸಿದ್ದಾನೆ” ಎಂದು ವಿನೋದ್ ಮಾಹಿತಿ ನೀಡಿದರು.
ರಾಕೇಶ್ ಅವರು ಭಾರತದಲ್ಲಿರುವ ತನ್ನ ಕುಟುಂಬದೊಂದಿಗೆ ಕೆಲವು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಅವರ ಇಸ್ರೇಲ್‌ನ ಉದ್ಯೋಗದಾತರು ಕೆಲಸ ಸ್ಥಳದಿಂದ ವಿಡಿಯೋಗಳನ್ನು ಕಳುಹಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದ್ದಾರೆ. ಇವರು ಕಳುಹಿಸಿರುವ ಕೆಲ ವಿಡಿಯೋಗಳಲ್ಲಿ ಬಾಂಬ್ ದಾಳಿಗಳು ಮತ್ತು ಕ್ಷಿಪಣಿ ದಾಳಿ ನಡೆಯುತ್ತಿರುವುದು ನೋಡಬಹುದಾಗಿದೆ.
ಇವರೆಲ್ಲಾ ಕಳೆದ 4 ದಿನಗಳಿಂದ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದ್ದಾರೆ. ಯುದ್ದ ಎಂದರೆ ಯುದ್ಧ. ಅವರು ಸುರಕ್ಷಿತವಾಗಿದ್ದಾರೆ ಎಂದು ಹೇಳಿದರೂ, ನಮಗೆ ನಮ್ಮದೆ ಆದ ಭಯವಿದೆ ಎಂದು ರಾಜು ಸಿಂಗ್ ಹೇಳಿದರು.
ಇಸ್ರೇಲ್‌ಗೆ ಭಾರತದ ಈ ಯುವ ಕಾರ್ಮಿಕರು ಹೋಗಿರುವುದು ಭಾರತ ಮತ್ತು ಇಸ್ರೇಲ್ ಸರಕಾರಗಳ ನಡುವಿನ ದೊಡ್ಡ ಒಪ್ಪಂದದ ಭಾಗವಾಗಿದೆ. ಇಸ್ರೇಲ್‌ನಲ್ಲಿ ಭಾರತೀಯ ನಿರ್ಮಾಣ ಕಾರ್ಮಿಕರನ್ನುನೇಮಿಸಿಕೊಳ್ಳಲು ಒಪ್ಪಂದಕ್ಕೆ ಸಹಿ ಹಾಕಿದ ನಂತರ, ಭಾರತದ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮವು ಉತ್ತರಪ್ರದೇಶದ ಹಲವಾರು ಜಿಲ್ಲೆಗಳಿಂದ ನುರಿತ ಕಾರ್ಮಿಕರನ್ನು ಇಸ್ರೇಲ್‌ಗೆ ಕಳುಹಿಸಿದೆ.
ತಮ್ಮ ಮಕ್ಕಳು ಅಲ್ಲಿ ಉತ್ತಮ ಸಂಬಳವನ್ನು ಗಳಿಸುತ್ತಾರೆ ಎಂದು ಕುಟಂಬಗಳು ಹೆಮ್ಮೆಪಡುತ್ತಿದ್ದರೂ, ನಡೆಯುತ್ತಿರುವ ಸಂಘರ್ಷದ ನಡುವೆ ಅವರ ಸುರಕ್ಷತೆಯ ಬಗ್ಗೆ ಚಿಂತಿಸುತ್ತಿದ್ದಾರೆ.


