ಅಹಮದಾಬಾದ್: ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಬದುಕುಳಿದಿದ್ದ ಏಕೈಕ ವ್ಯಕ್ತಿ ವಿಶ್ವಾಸ್ ಕುಮಾರ್ ರಮೇಶ್ ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಅವರೊಂದಿಗೆ ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮೃತ ಸಹೋದರನ ಅಂತ್ಯಸಂಸ್ಕಾರದಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
40 ವರ್ಷದ ಬ್ರಿಟಿಷ್ ಉದ್ಯಮಿಯಾಗಿರುವ ವಿಶ್ವಾಸ್, ಮಂಗಳವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದು, ತಾನು ಬದುಕುಳಿದಿದ್ದು ಹೇಗೆಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ವಿಶ್ವಾಸ್ ಅವರು ದೂರದರ್ಶನಕ್ಕೆ ನೀಡಿದ ಸಂದರ್ಶನದಲ್ಲಿ, ಅಹಮದಾಬಾದ್‌ನಿಂದ ಲಂಡನ್‌ನ ಗ್ಯಾಟ್‌ವಿಕ್ ವಿಮಾನ ನಿಲ್ದಾಣಕ್ಕೆ 9 ತಾಸುಗಳ ಪ್ರಯಾಣ ಮಾಡಬೇಕಾಗಿದ್ದ ವಿಮಾನವು ಟೇಕ್‌ಆಫ್ ಆದ ಕೆಲವೇ ಸೆಕೆಂಡ್ ಗಳಲ್ಲಿ ನಿಂತುಹೋಗಿತ್ತು (stalled) ಎಂದು ಹೇಳಿದ್ದರು.
ನನ್ನ ಆಸನ ಸಂಖ್ಯೆ 11ಎ, ವಿಮಾನದ ಎಡಭಾಗದಲ್ಲಿರುವ ತುರ್ತು ನಿರ್ಗಮನ ದ್ವಾರದ(ಎಮರ್ಜೆನ್ಸಿ ಡೋರ್) ಹತ್ತಿರವಿತ್ತು. ಅದೃಷ್ಟವಶಾತ್, ನಾನು ಕುಳಿತಿದ್ದ ವಿಮಾನದ ಭಾಗವು ವಿಮಾನ ತುರ್ತು ಭೂಸ್ಪರ್ಶ ಮಾಡಿದ ನಂತರ ಹಾಸ್ಟೆಲ್ ಆವರಣದ ನೆಲಮಹಡಿಗೆ ಬಿದ್ದಿತು. ಅಲ್ಲಿ ವಿಮಾನದ ಬಾಗಿಲು ಮುರಿದಿರುವುದನ್ನು ನಾನು ನೋಡಿದೆ. ಆದರ ಮೂಲಕ ಹೊರಹೋಗಲು ಪ್ರಯತ್ನಿಸಬಹುದು ಎಂದು ನನಗೆ ನಾನೇ ಹೇಳಿಕೊಂಡೆ. ಕೊನೆಗೆ ನಾನು ವಿಮಾನದಿಂದ ಪಾರಾಗಿ ಹೊರಬಂದೆ ಎಂದು ವಿಶ್ವಾಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ವಿಮಾನ ಅಪಘಾತವಾದ ತಕ್ಷಣ ಸ್ಥಳೀಯರು ಚಿತ್ರೀಕರಿಸಿದ ವೈರಲ್ ವಿಡಿಯೋದಲ್ಲಿ ವಿಶ್ವಾಸ್ ಅವರು ಅಪಘಾತದಲ್ಲಿ ಗಾಯಗೊಂಡ ನಂತರ ಆಂಬ್ಯುಲೆನ್ಸ್ ಕಡೆಗೆ ನಡೆದುಕೊಂಡು ಹೋಗುತ್ತಿರುವುದು ಕಾಣುತ್ತದೆ.
ವಿಶ್ವಾಸ ಅವರ ಸಹೋದರ ಅಜಯ್ ಅವರ ಪಾರ್ಥಿವ ಶರೀರವನ್ನು ಡಿಎನ್‌ಎ ಪರೀಕ್ಷೆಯ ಮೂಲಕ ಗುರುತು ದೃಢಪಡಿಸಿದ ನಂತರ ಬುಧವಾರ ಮುಂಜಾನೆ ಕುಟುಂಬಕ್ಕೆ ಹಸ್ತಾಂತರಿಸಲಾಯಿತು ಎಂದು ಅಹಮದಾಬಾದ್ ಸಿವಿಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಕೇಶ್ ಜೋಶಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ವಿಶ್ವಾಸ್ ಅವರ ಕುಟುಂಬವು ಈಗಾಗಲೇ ಇಂಗ್ಲೆಂಡಿನಿಂದ ಭಾರತಕ್ಕೆ ಬಂದಿಳಿದಿದೆ. ವಿಶ್ವಾಸ್ ಅವರು ಚೇತರಿಸಿಕೊಂಡ ನಂತರ ಮಂಗಳವಾರ ಸಂಜೆ 7:30ಕ್ಕೆ ನಾವು ಅವರನ್ನುಬಿಡುಗಡೆಗೊಳಿಸಿದೆವು ಮತ್ತು ಅವರ ಸಹೋದರನ ಪಾರ್ಥಿವ ಶರೀರವನ್ನು ಡಿಎನ್‌ಎ ಹೊಂದಾಣಿಕೆಯಿಂದ ಗುರುತಿಸಿ, ನಂತರ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು ಎಂದು ಅವರು ಹೇಳಿದರು.
ದಿಯು ಕೇಂದ್ರಾಡಳಿತ ಪ್ರದೇಶದವರಾದ ವಿಶ್ವಾಸ್ ಮತ್ತು ಅಜಯ್ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಸ್ವಲ್ಪ ಸಮಯ ಕಳೆದ ನಂತರ ಲಂಡನ್‌ಗೆ ಹಿಂದಿರುಗುತ್ತಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ವಿಡಿಯೋದಲ್ಲಿ ದಿಯು ಜಿಲ್ಲೆಯ ಸ್ಮಶಾನಭೂಮಿಗೆ ತನ್ನ ಸಹೋದರನ ಪಾರ್ಥಿವ ಶರೀರವನ್ನು ವಿಶ್ವಾಸ್ ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿರುವುದು ಕಾಣುತ್ತದೆ.

ಅಜಯ್ ಅವರ ಅಂತ್ಯಸಂಸ್ಕಾರವನ್ನು ಬುಧವಾರ ಬೆಳಿಗ್ಗೆ ದಿಯುನಲ್ಲಿ ಅವರ ಕುಟುಂಬ ನಡೆಸಿತು ಮತ್ತು ವಿಶ್ವಾಸ್ ಕೂಡ ಅಲ್ಲಿ ಉಪಸ್ಥಿತರಿದ್ದರು ಎಂದು ಸ್ಥಳೀಯ ಅಧಿಕಾರಿಗಳು ದೃಢಪಡಿಸಿದ್ದಾರೆ.
ಜೂನ್ 12ರಂದು ಮಧ್ಯಾಹ್ನ 1:39 ಕ್ಕೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು 242 ಪ್ರಯಾಣಿಕರೊಂದಿಗೆ ಹೊರಟ ಕೆಲವೇ ಕ್ಷಣಗಳಲ್ಲಿ ಅಹಮದಾಬಾದ್‌ನ ವೈದ್ಯಕೀಯ ಕಾಲೇಜು ಸಂಕೀರ್ಣಕ್ಕೆ ಅಪ್ಪಳಿಸಿತು.


