ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ದಲಿತ ಯುವಕ ಜಯಕುಮಾರ್ ಸಜೀವ ದಹನ ಪ್ರಕರಣದ ತನಿಖೆ ಚುರುಕುಗೊಂಡಿದೆ.
ಇಂದು (ಜೂ.21, ಶನಿವಾರ) ಘಟನಾ ಸ್ಥಳಕ್ಕೆ ಸಿಐಡಿ ತನಿಖಾ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಜಯಕುಮಾರ್ ಅವರ ಮನೆಗೂ ಭೇಟಿ ನೀಡಿರುವ ತಂಡ, ಅವರ ಪತ್ನಿಯಿಂದ ಮಾಹಿತಿ ಪಡೆದುಕೊಂಡಿದೆ.
ಬಳಿಕ, ಕೆ.ಆರ್ ಪೇಟೆ ಐಬಿಗೆ ಆಗಮಿಸಿರುವ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದವರ ಹೇಳಿಕೆ ಪಡೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಬೆಂಗಳೂರಿನಿಂದ ಸಿಐಡಿ ಡಿವೈಎಸ್‌ಪಿ ಉಮೇಶ್ ಹಾಗೂ ಸಬ್ ಇನ್‌ಸ್ಪೆಕ್ಟರ್ ದೇವರಾಜ್ ಕತ್ತರಘಟ್ಟಕ್ಕೆ ತೆರಳಿದ್ದು, ಅವರಿಗೆ ಸ್ಥಳೀಯ ಪೊಲೀಸರು ಸಾಥ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಜಯಕುಮಾರ್ ಅವರ ಸಾವಿನ ಹಿಂದೆ ಸ್ಥಳೀಯರ ಪೊಲೀಸರ ನಿರ್ಲಕ್ಷ್ಯದ ಆರೋಪವನ್ನು ದಲಿತ, ಪ್ರಗತಿಪರ ಸಂಘಟನೆಗಳು ಮಾಡಿದ್ದವು. ಮೇ 27ರಂದು ಬೃಹತ್ ಕೆ.ಆರ್ ಪೇಟೆ ಚಲೋ ನಡೆಸಿದ್ದ ಸಂಘಟನೆಗಳು, ಪೊಲೀಸರನ್ನು ಅಮಾನತು ಮಾಡಿ, ಅವರ ವಿರುದ್ದ ಉನ್ನತ ಮಟ್ಟದ ತನಿಖೆ ನಡೆಸುವಂತೆ ಆಗ್ರಹಿಸಿತ್ತು.
ದಲಿತ ಯುವಕ ಜಯಕುಮಾರ್ ಅವರನ್ನು ಹುಲ್ಲಿನ ಮೆದೆಗೆ ದೂಡಿ ಸಜೀವವಾಗಿ ಸುಟ್ಟಿರುವ ಆರೋಪವಿದೆ. ಜಯಕುಮಾರ್ ಜಮೀನಿನಲ್ಲಿ ಕಳೆದ ಐದಾರು ವರ್ಷಗಳಿಂದ ಅಕ್ರಮವಾಗಿ ಹುಲ್ಲುಮೆದೆ ಹಾಕಿದ್ದಲ್ಲದೆ ಮಾನಸಿಕವಾಗಿ, ದೈಹಿಕವಾಗಿ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ, ಮೇ 16ರಂದು ಜಯಕುಮಾರ್ ಕೆ.ರ್.ಪೇಟೆ ಪೊಲೀಸ್ ಠಾಣೆಯಲ್ಲಿ ಅನಿಲ್ ಕುಮಾರ್ ಎಂಬಾತನ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ದೂರು ನೀಡಿದ್ದರು. ಮರುದಿನವೇ ಅವರನ್ನು ಅಮಾನುಷವಾಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಸ್ತುತ, ಆರೋಪಿ ಅನಿಲ್ ಕುಮಾರ್ ನ್ಯಾಯಾಂಗ ಬಂಧನಲ್ಲಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ಸುಳ್ಳಿನ ಚಕ್ರವರ್ತಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್


