ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷಕ್ಕೆ ಅಮೆರಿಕ ಅಧಿಕೃತವಾಗಿ ಎಂಟ್ರಿಯಾಗಿದೆ. ಇರಾನ್‌ನ ಮೂರು ಪರಮಾಣು ನೆಲೆಗಳ ಮೇಲೆ ಬಾಂಬ್ ದಾಳಿ ನಡೆಸಿರುವುದಾಗಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ (ಜೂ.22) ಹೇಳಿಕೊಂಡಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಟ್ರುಥ್ ಸೋಶಿಯಲ್‌ನಲ್ಲಿ ಪೋಸ್ಟ್ ಹಾಕಿರುವ ಅವರು, “ಅಮೆರಿಕದ ಪಡೆಗಳು ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್‌ನಲ್ಲಿರುವ ಇರಾನಿನ ಪರಮಾಣು ನೆಲೆಗಳ ಮೇಲೆ ‘ಅತ್ಯಂತ ಯಶಸ್ವಿ’ ದಾಳಿಗಳನ್ನು ನಡೆಸಿವೆ. ಎಲ್ಲಾ ಅಮೆರಿಕನ್ ವಿಮಾನಗಳು ಈಗ ಇರಾನಿನ ವಾಯುಪ್ರದೇಶದಿಂದ ಹೊರಗಿವೆ” ಎಂದು ತಿಳಿಸಿದ್ದಾರೆ.
“ಪ್ರಾಥಮಿಕ ತಾಣವಾದ ಫೋರ್ಡೋದಲ್ಲಿ ಪೂರ್ಣ ಪ್ರಮಾಣದಲ್ಲಿ ಬಾಂಬ್ ದಾಳಿ ಮಾಡಲಾಗಿದೆ. ಎಲ್ಲಾ ವಿಮಾನಗಳು ಸುರಕ್ಷಿತವಾಗಿ ವಾಪಸ್ ನೆಲೆಗಳಿಗೆ ಹೋಗುತ್ತಿವೆ. ನಮ್ಮ ಅಮೆರಿಕದ ಮಹಾನ್ ಯೋಧರಿಗೆ ಅಭಿನಂದನೆಗಳು. ಈ ರೀತಿ ಕಾರ್ಯಾಚರಣೆ ಮಾಡಬಹುದಾದ ಮತ್ತೊಂದು ಸೇನೆಯು ಜಗತ್ತಿನಲ್ಲಿ ಇಲ್ಲ. ಇದು ಶಾಂತಿಯ ಸಮಯ! ಈ ಬೆಳವಣಿಗೆಯ ಬಗ್ಗೆ ನೀವು ಗಮನ ಹರಿಸಿದ್ದಕ್ಕಾಗಿ ಧನ್ಯವಾದಗಳು,” ಎಂದು ಅವರು ಉಲ್ಲೇಖಿಸಿದ್ದಾರೆ.

ಪ್ರತೀಕಾರದ ಘೋಷಣೆ ಮಾಡಿದ ಇರಾನ್
ಇರಾನ್‌ನ ಮೂರು ಪರಮಾಣು ನೆಲೆಗಳಾದ ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್ ಮೇಲೆ ಅಮೆರಿಕ ವೈಮಾನಿಕ ದಾಳಿ ನಡೆಸಿದ ಬಳಿಕ, ಪಶ್ಚಿಮ ಏಷ್ಯಾದ ಪ್ರತಿಯೊಬ್ಬ ಅಮೆರಿಕನ್ ನಾಗರಿಕ ಅಥವಾ ಮಿಲಿಟರಿ ಸಿಬ್ಬಂದಿ ಈಗ ನಮ್ಮ ಗುರಿ ಎಂದು ಇರಾನ್‌ನ ಸರ್ಕಾರಿ ದೂರದರ್ಶನವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಎಚ್ಚರಿಕೆ ನೀಡಿರುವುದಾಗಿ news18.com ವರದಿ ಮಾಡಿದೆ.
“ಇರಾನ್‌ನ ವಾಯುಪ್ರದೇಶವನ್ನು ಉಲ್ಲಂಘಿಸುವ ಮೂಲಕ ಅಮೆರಿಕ ಇರಾನ್ ವಿರುದ್ಧ ಅಪರಾಧ ಮಾಡಿದೆ. ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಇದಕ್ಕೆ ಅವಕಾಶವಿಲ್ಲ. ಅಮೆರಿಕದ ಅಧ್ಯಕ್ಷರೇ, ನೀವು ದಾಳಿ ಪ್ರಾರಂಭಿಸಿದ್ದೀರಿ, ನಾವು ಕೊನೆಗೊಳಿಸುತ್ತೇವೆ” ಎಂದು ಇರಾನ್ ದೂರದರ್ಶನ ಯುಎಸ್ ನೆಲೆಗಳ ಗ್ರಾಫಿಕ್ ಅನ್ನು ಪ್ರದರ್ಶಿಸುತ್ತಾ ಹೇಳಿದೆ” ಎಂದು ವರದಿ ವಿವರಿಸಿದೆ.
ಇಸ್ರೇಲ್‌ನಲ್ಲಿ ತುರ್ತು ಪರಿಸ್ಥಿತಿ ವಿಸ್ತರಣೆ
ಅಮೆರಿಕ ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ಇಸ್ರೇಲ್‌ನಲ್ಲಿ ತುರ್ತು ಪರಿಸ್ಥಿತಿ ವಿಸ್ತರಿಸಲಾಗಿದೆ ಎಂದು timesofisrael.com ವರದಿ ಮಾಡಿದೆ.
ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಶುಕ್ರವಾರ ಘೋಷಿಸಿದ ರಾಷ್ಟ್ರವ್ಯಾಪಿ ತುರ್ತು ಪರಿಸ್ಥಿತಿಯನ್ನು ಜೂನ್ 30 ರವರೆಗೆ ವಿಸ್ತರಿಸಲು ಸಂಪುಟ ಅನುಮೋದನೆ ನೀಡಿದೆ ಎಂದು ವರದಿ ಹೇಳಿದೆ.
ಈ ವಿಸ್ತರಣೆಗೆ ಲಿಕುಡ್ ಎಂಕೆ ಯುಲಿ ಎಡೆಲ್‌ಸ್ಟೈನ್ ಅಧ್ಯಕ್ಷತೆಯ ನೆಸ್ಸೆಟ್ ವಿದೇಶಾಂಗ ವ್ಯವಹಾರ ಮತ್ತು ಭದ್ರತಾ ಸಮಿತಿಯ ಮತ್ತಷ್ಟು ಅನುಮೋದನೆಯ ಅಗತ್ಯವಿದೆ. ತುರ್ತು ಪರಿಸ್ಥಿತಿಯು ಸಚಿವ ಸಂಪುಟಕ್ಕೆ ನೆಸ್ಸೆಟ್ ಶಾಸನವನ್ನು ಉಲ್ಲಂಘಿಸಿ ನಿಯಮಗಳನ್ನು ಹೊರಡಿಸಲು ಅನುವು ಮಾಡಿಕೊಡುತ್ತದೆ ಎಂದು ವರದಿ ವಿವರಿಸಿದೆ.


