ಡಮಾಸ್ಕಸ್‌ನ ಚರ್ಚ್‌ನಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 22 ಜನರು ಸಾವನ್ನಪ್ಪಿದ್ದಾರೆ ಮತ್ತು 63 ಜನರು ಗಾಯಗೊಂಡಿದ್ದಾರೆ ಎಂದು ಸಿರಿಯಾದ ಆರೋಗ್ಯ ಸಚಿವಾಲಯ ತಿಳಿಸಿದೆ.
ದ್ವೀಲಾ ಸಮೀಪದ ಗ್ರೀಕ್ ಆರ್ಥೊಡಾಕ್ಸ್ ಚರ್ಚ್‌ನಲ್ಲಿ ಭಾನುವಾರ (ಜೂ.22) ಸಂಜೆ ಪ್ರಾರ್ಥನೆ ನಡೆಯುತ್ತಿದ್ದಾಗ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದಾನೆ. ನಂತರ ತನ್ನ ದೇಹಕ್ಕೆ ಕಟ್ಟಿಕೊಂಡಿದ್ದ ಸ್ಪೋಟಕವನ್ನು ಸ್ಪೋಟಿಸಿದ್ದಾನೆ ಎಂದು ಬಿಬಿಸಿ ವರದಿ ಮಾಡಿದೆ.
ದಾಳಿಕೋರ ಭಯೋತ್ಪಾದಕ ಗುಂಪು ಇಸ್ಲಾಮಿಕ್ ಸ್ಟೇಟ್ (ಐಎಸ್)ಗೆ ಸೇರಿದವನು ಎಂದು ಸಚಿವಾಲಯ ಹೇಳಿದೆ. ಆದರೆ, ಐಎಸ್ ಇದುವರೆಗೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.
ಚರ್ಚ್ ಒಳಗಿನಿಂದ ತೆಗೆದ ಫೋಟೋಗಳು ಮತ್ತು ವಿಡಿಯೋಗಳಲ್ಲಿ ತೀವ್ರವಾಗಿ ಹಾನಿಗೊಳಗಾದ ಬಲಿಪೀಠ, ಒಡೆದ ಗಾಜಿನಿಂದ ಆವೃತವಾದ ಬೆಂಚುಗಳು ಮತ್ತು ಗೋಡೆಗಳಲ್ಲಿ ರಕ್ತದ ಕಲೆಗಳು ನೋಡಬಹುದು.
“ಯಾರೋ ಹೊರಗಿನಿಂದ ಆಯುಧ ಹಿಡಿದು ಚರ್ಚ್ ಒಳಗೆ ಪ್ರವೇಶಿಸಿ ಗುಂಡು ಹಾರಿಸಲು ಪ್ರಾರಂಭಿಸಿದರು” ಎಂದು ಪ್ರತ್ಯಕ್ಷದರ್ಶಿ ಲಾರೆನ್ಸ್ ಮಾಮರಿ ಹೇಳಿರುವುದಾಗಿ ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ದಾಳಿಕೋರ ತನ್ನನ್ನು ತಾನು ಸ್ಪೋಟಿಸಿಕೊಳ್ಳಲುವ ಮೊದಲು ಜನರು ಆತನನ್ನು ತಡೆಯಲು ಪ್ರಯತ್ನಿಸಿದ್ದಾರೆ ಎಂದು ವರದಿ ತಿಳಿಸಿದೆ.
ಹತ್ತಿರದ ಅಂಗಡಿಯಲ್ಲಿದ್ದ ಜಿಯಾದ್ ಎಂಬ ಮತ್ತೊಬ್ಬ ವ್ಯಕ್ತಿ, “ಗುಂಡಿನ ಸದ್ದು ಕೇಳಿಬಂದಿದ್ದು, ನಂತರ ಗಾಜುಗಳು ಹಾರಿಹೋಗುವ ರೀತಿ ಸ್ಫೋಟ ಸಂಭವಿಸಿದೆ. ಚರ್ಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರವೇಶದ್ವಾರದವರೆಗೂ ಮರದ ಬೆಂಚುಗಳ ಅವಶೇಷಗಳು ಬಿದ್ದಿರುವುದನ್ನು ನಾವು ನೋಡಿದ್ದೇವೆ” ಎಂದು ಹೇಳಿದ್ದಾರೆ.
ಡಿಸೆಂಬರ್‌ನಲ್ಲಿ ಇಸ್ಲಾಮಿಸ್ಟ್ ನೇತೃತ್ವದ ಬಂಡಾಯ ಪಡೆಗಳು ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಅವರನ್ನು ಪದಚ್ಯುತಗೊಳಿಸಿ, 13 ವರ್ಷಗಳ ವಿನಾಶಕಾರಿ ಅಂತರ್ಯುದ್ಧವನ್ನು ಕೊನೆಗೊಳಿಸಿದ ನಂತರ ಡಮಾಸ್ಕಸ್‌ನಲ್ಲಿ ನಡೆದ ಮೊದಲ ದಾಳಿ ಇದಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಚರ್ಚ್ ಪ್ರವೇಶದ್ವಾರದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, ಕಟ್ಟಡದ ಒಳಗೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿದ್ದ ಜನರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ಹೇಳಿವೆ.
ಸಿರಿಯಾದ ವಿಶ್ವಸಂಸ್ಥೆಯ ವಿಶೇಷ ರಾಯಭಾರಿ ಗೀರ್ ಪೆಡರ್ಸನ್ ಅವರ ಕಚೇರಿಯು ದಾಳಿಯನ್ನು ಖಂಡಿಸಿದ್ದು, “ಭಯೋತ್ಪಾದನೆ, ಉಗ್ರವಾದ, ಪ್ರಚೋದನೆ ಮತ್ತು ಯಾವುದೇ ಸಮುದಾಯವನ್ನು ಗುರಿಯಾಗಿಸಿಕೊಳ್ಳುವುದನ್ನು ತಿರಸ್ಕರಿಸುವಲ್ಲಿ ಸಿರಿಯನ್ನರು ಒಂದಾಗಬೇಕು” ಎಂದು ಆಗ್ರಹಿಸಿದೆ.
ಇರಾನ್-ಅಮೆರಿಕ ಸಂಘರ್ಷದ ನಡುವೆ ಗಾಝಾದಲ್ಲಿನ ನೋವು ಮರೆಯದಿರಿ: ಜಗತ್ತಿಗೆ ಪೋಪ್ ಲಿಯೋ ಕರೆ


