ಗುಂಟೂರು ಹೊರವಲಯದಲ್ಲಿ ಕಾರು ಹರಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ವೈಎಸ್‌ಆರ್‌ಸಿ ಪಕ್ಷದ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಮತ್ತು ಇತರರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಜೂನ್ 18ರಂದು ಅಪಘಾತ ನಡೆದಿದೆ. 65 ವರ್ಷ ವಯಸ್ಸಿನ ಚೀಲಿ ಸಿಂಗಯ್ಯ ಎಂಬವರು ಸಾವಿಗೀಡಾಗಿದ್ದಾರೆ.
ಭಾನುವಾರ (ಜೂ.22) ಜಗನ್ ಅವರ ಬೆಂಗಾವಲು ವಾಹನದ ಚಾಲಕ ರಮಣ ರೆಡ್ಡಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚೀಲಿ ಸಿಂಗಯ್ಯ ಅವರು ತಮ್ಮ ವಾಹನದ ಅಡಿಗೆ ಸಿಲುಕಿಕೊಂಡ ನಂತರವೂ, ರಮಣ ರೆಡ್ಡಿ ವಾಹನ ನಿಲ್ಲಿಸದೆ ತೆರಳಿದ್ದಾರೆ ಎಂದು ಆರೋಪಿಸಲಾಗಿದೆ.
“ಮಾಜಿ ಸಿಎಂ ವೈ.ಎಸ್ ಜಗನ್ ಮೋಹನ್ ರೆಡ್ಡಿ ಅವರ ಬೆಂಗಾವಲು ವಾಹನದ ಚಕ್ರಕ್ಕೆ ಸಿಲುಕಿ ಸಿಂಗಯ್ಯ ಅವರು ಸಾವಿಗೀಡಾಗಿದ್ದಾರೆ ಎಂಬುದಕ್ಕೆ ನಮ್ಮ ಬಳಿ ಸಾಕ್ಷ್ಯಗಳಿವೆ. ಅದಕ್ಕೆ ಅನುಗುಣವಾಗಿ ನಾವು ಪ್ರಕರಣದ ಸೆಕ್ಷನ್‌ಗಳನ್ನು ಬದಲಾಯಿಸಿದ್ದೇವೆ. ಅಲ್ಲದೆ, ಜಗನ್ ಮೋಹನ್ ರೆಡ್ಡಿ, ಬೆಂಗಾವಲು ವಾಹನ ಚಾಲಕ ರಮಣ ರೆಡ್ಡಿ, ಮಾಜಿ ಸಚಿವರಾದ ವೈ.ವಿ ಸುಬ್ಬಾರೆಡ್ಡಿ ಮತ್ತು ವಿಡದಲ ರಜಿನಿ, ಮಾಜಿ ಶಾಸಕ ಪೆರ್ಣಿ ವೆಂಕಟರಾಮಯ್ಯ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ” ಎಂದು ಗುಂಟೂರು ಎಸ್ಪಿ ಸತೀಶ್ ಕುಮಾರ್ ಹೇಳಿದ್ದಾರೆ.
ಒಂದು ವರ್ಷದ ಹಿಂದೆ ಆತ್ಮಹತ್ಯೆ ಮಾಡಿಕೊಂಡ ತಮ್ಮ ಪಕ್ಷದ ಕಾರ್ಯಕರ್ತನ ಕುಟುಂಬವನ್ನು ಭೇಟಿ ಮಾಡಲು ಜಗನ್ ಮೋಹನ್ ರೆಡ್ಡಿ ಅವರು ಬೆಂಗಾವಲು ವಾಹನಗಳೊಂದಿಗೆ ಪಲ್ನಾಡು ಜಿಲ್ಲೆಯ ಸತ್ತೇನಪಲ್ಲಿಗೆ ತೆರಳುತ್ತಿದ್ದಾಗ ಸಿಂಗಯ್ಯ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಅಪಘಾತಕ್ಕೆ ಖಾಸಗಿ ವಾಹನವೇ ಕಾರಣ ಎಂಬ ಪ್ರಕರಣದ ಅಂಶವನ್ನು ಪರಿಷ್ಕರಿಸಲಾಗಿದೆ ಎಂದಿದ್ದಾರೆ.
ಪೊಲೀಸರ ಹೇಳಿಕೆಯಲ್ಲಿನ ಬದಲಾವಣೆಯನ್ನು ವೈಎಸ್‌ಆರ್‌ಸಿ ಪಕ್ಷ ಪ್ರಶ್ನಿಸಿದ್ದು, ಅಪಘಾತಕ್ಕೀಡಾದ ವಾಹನವು ಜಗನ್ ಅವರ ಬೆಂಗಾವಲು ಪಡೆಯ ಭಾಗವಾಗಿರಲಿಲ್ಲ. ಅದು ಖಾಸಗಿ ವಾಹನ ಎಂದು ಗುಂಟೂರು ಎಸ್‌ಪಿ ಬುಧವಾರ ಹೇಳಿದ್ದಾರೆ ಎಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋಗಳಲ್ಲಿ ಜಗನ್ ಮೋಹನ್ ರೆಡ್ಡಿ ಅವರು ನಿಂತುಕೊಂಡು ಜನರತ್ತ ಕೈಬೀಸುತ್ತಿದ್ದ ಕಾರಿನ ಚಕ್ರದಡಿಗೆ ವ್ಯಕ್ತಿಯೊಬ್ಬರು ಸಿಲುಕಿರುವುದನ್ನು ನೋಡಬಹುದು.
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಸಿಂಗಯ್ಯ ಅವರ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಬಿಎನ್‌ಎಸ್ ಸೆಕ್ಷನ್ 106(1) (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿಯಲ್ಲಿ ಆರಂಭದಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಸಿಸಿಟಿವಿ ದೃಶ್ಯಾವಳಿಗಳು, ಡ್ರೋನ್ ದೃಶ್ಯಗಳು ಮತ್ತು ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಶೀಲಿಸಲಾಗಿದೆ. ಸಿಂಗಯ್ಯ ಅವರ ಮೇಲೆ ಜಗನ್ ಅವರ ಬೆಂಗಾವಲು ಪಡೆ ವಾಹನ ಹರಿದಿದ್ದು, ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಪೊಲೀಸರು ಬಿಎನ್‌ಎಸ್ ಸೆಕ್ಷನ್ 105 (ಕೊಲೆಗೆ ಸಮಾನವಲ್ಲದ ನರಹತ್ಯೆ) ಮತ್ತು ಸೆಕ್ಷನ್ 49(ಹತ್ಯೆಗೆ ಪ್ರೇರಣೆ) ಅಡಿಯಲ್ಲಿ ಪ್ರಕಣ ದಾಖಲಿಸಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ವಿಧಾನಸಭೆ ಉಪಚುನಾವಣೆ | ಕೇರಳದ ನಿಲಂಬೂರಿನಲ್ಲಿ ಯುಡಿಎಫ್ ಅಭ್ಯರ್ಥಿ ಆರ್ಯಡನ್ ಶೌಕತ್‌ಗೆ ಭರ್ಜರಿ ಜಯ


