ಇಸ್ರೇಲ್ ಮತ್ತು ಇರಾನ್ ಪೂರ್ಣ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಮುಂಜಾನೆ (ಭಾರತೀಯ ಕಾಲಮಾನ- ಜೂನ್ 24, 3.32 AM) ಘೋಷಣೆ ಮಾಡಿದ್ದರು.
ಆದರೆ, ಇರಾನ್ ಇದನ್ನು ಅಲ್ಲಗಳೆದಿದೆ. “ದಾಳಿ ಪ್ರಾರಂಭಿಸಿದ್ದು ಇಸ್ರೇಲ್, ಅವರು ನಿಲ್ಲಿಸದೆ ನಾವು ನಿಲ್ಲಿಸುವುದಿಲ್ಲ. ನಾವು ಶರಣಾಗುವುದಿಲ್ಲ. ಕೊನೆಯವೆರೆಗೂ ಹೋರಾಡುತ್ತೇವೆ” ಎಂದಿದೆ.
ಇತ್ತೀಚಿನ ವರದಿಗಳ ಪ್ರಕಾರ, ಟ್ರಂಪ್ ಕದನ ವಿರಾಮದ ಕುರಿತು ಘೋಷಣೆ ಮಾಡಿದ ಬಳಿಕ ಇರಾನ್ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.
ಇಸ್ರೇಲ್‌ನ ದಕ್ಷಿಣ ನಗರವಾದ ಬೀರ್‌ಶೆಬಾ ಮೇಲೆ ಇರಾನ್ ಹಲವು ಕ್ಷಿಪಣಿಗಳ ಮೂಲಕ ದಾಳಿ ಮಾಡಿದೆ. ಇದರಿಂದ ಕನಿಷ್ಠ 3 ಮಂದಿ ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಮಾಧ್ಯಮಗಳು ತಿಳಿಸಿವೆ.
ಇರಾನ್-ಇಸ್ರೇಲ್ ಪೂರ್ಣ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಈ ಮೂಲಕ 12 ದಿನಗಳ ಯುದ್ಧ ಕೊನೆಗೊಂಡಿದೆ ಎಂದು ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ, “ಇಸ್ರೇಲ್ ಜೊತೆ ಕದನ ವಿರಾಮದ ಬಗ್ಗೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ. ಇಸ್ರೇಲ್ ತನ್ನ ಅಕ್ರಮಣ ನಿಲ್ಲಿಸಿದರೆ ಇರಾನ್ ನಿಲ್ಲಿಸಲಿದೆ ಎಂದು ಹೇಳಿದ್ದಾರೆ. ಇದಕ್ಕೆ ಈವರೆಗೆ ಇಸ್ರೇಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ನಡುವೆ ಇರಾನ್ ಇಸ್ರೇಲ್ ಮೇಲೆ ದಾಳಿ ಮಾಡಿರುವ ಬಗ್ಗೆ ವರದಿಯಾಗಿದೆ.
ನಿನ್ನೆ (ಜೂ.23) ರಾತ್ರಿ ಇರಾನ್ ಕತಾರ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಭಾನುವಾರ (ಜೂ. 22) ಇರಾನ್‌ನ ಮೂರು ಪರಮಾಣು ನೆಲೆಗಳ ಮೇಲೆ ಅಮೆರಿಕ ನಡೆಸಿದ ದಾಳಿಗೆ ಪ್ರತೀಕಾರವಾಗಿ ಇರಾನ್ ಈ ದಾಳಿ ನಡೆಸಿದೆ.
ಜೂನ್ 13ರಿಂದ ನಡೆಯುತ್ತಿರುವ ಇಸ್ರೇಲ್-ಇರಾನ್ ಸಂಘರ್ಷದಿಂದ, ಇರಾನ್‌ನಲ್ಲಿ ಇದುವರೆಗೆ 13 ಮಕ್ಕಳು ಸೇರಿದಂತೆ 400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 3,056 ಜನರು ಗಾಯಗೊಂಡಿದ್ದಾರೆ ಎಂದು ಅಲ್ಲಿನ ಸರ್ಕಾರ ಹೇಳಿಕೊಂಡಿದೆ. ಇಸ್ರೇಲ್‌ನಲ್ಲಿ, ಇರಾನ್ ದಾಳಿಯಿಂದ ಕನಿಷ್ಠ 24 ಜನರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ಆದರೆ, ಎರಡೂ ರಾಷ್ಟ್ರಗಳಲ್ಲಿ ಸಾವು-ನೋವುಗಳ ಸಂಖ್ಯೆ ಇನ್ನೂ ಹೆಚ್ಚಿದೆ. ಎರಡೂ ಕಡೆಯ ಸರ್ಕಾರಗಳು ಸರಿಯಾದ ಮಾಹಿತಿ ಬಹಿರಂಗಪಡಿಸುತ್ತಿಲ್ಲ ಎಂದು ಮಾನವ ಹಕ್ಕು ಸಂಘಟನೆಗಳು ಹೇಳಿಕೊಂಡಿವೆ.


