ವೈದ್ಯಕೀಯ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ (ನೀಟ್) ಪೂರ್ವತಯಾರಿ ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆದಿದ್ದಾಳೆ ಎಂಬ ಕಾರಣಕ್ಕೆ ತಂದೆಯೊಬ್ಬ ಕ್ರೂರವಾಗಿ ಥಳಿಸಿದ್ದು, ಬಾಲಕಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ನಡೆದಿದೆ.
ಮೃತಪಟ್ಟ 17 ವರ್ಷದ ಬಾಲಕಿಯನ್ನು ಆಕೆ ತಂದೆ, ಖಾಸಗಿ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ 50 ವರ್ಷದ ಧೋಂಡಿರಾಮ್ ಭಗವಾನ್ ಭೋಸಲೆ ಎಂದು ಗುರುತಿಸಲಾದ ಆರೋಪಿಯನ್ನು ಬಂಧಿಸಿ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.
ಪೊಲೀಸರ ಪ್ರಕಾರ, 12 ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಬಲಿಪಶು ಸಾಧನಾ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಗೆ ತಯಾರಿ ನಡೆಸುತ್ತಿದ್ದಳು. ಇತ್ತೀಚೆಗೆ ನಡೆದ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಕಳಪೆ ಪ್ರದರ್ಶನ ನೀಡಿದ್ದಳು. ಸಾಧನಾಳ ಕಡಿಮೆ ಅಂಕಗಳಿಂದ ಕೋಪಗೊಂಡ ಧೋಂಡಿರಾಮ್ ಶುಕ್ರವಾರ ರಾತ್ರಿ ಮರದ ಕೋಲಿನಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆಕೆಯ ತಾಯಿ ಪ್ರೀತಿ ಭೋಸಲೆ (41) ಪೊಲೀಸ್ ದೂರು ದಾಖಲಿಸಿದ್ದಾರೆ.
ಈ ಹಲ್ಲೆಯಿಂದಾಗಿ ಸಾಧನಾ ತೀವ್ರವಾಗಿ ಗಾಯಗೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಮರುದಿನ ಬೆಳಿಗ್ಗೆ, ಆಕೆಯ ತಾಯಿ ಆಕೆಯನ್ನು ಆಸ್ಪತ್ರೆಗೆ ಸಾಗಿಸಿದರು. ಆಕೆಯ ಸ್ಥಿತಿ ಹದಗೆಟ್ಟಾಗ, ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಚಿಕಿತ್ಸೆಯ ಸಮಯದಲ್ಲಿ ಬಾಲಕಿ ಸಾವನ್ನಪ್ಪಿದ್ದಾಳೆ.
ತನ್ನ ಮಗಳು 10 ನೇ ತರಗತಿ ಪರೀಕ್ಷೆಯಲ್ಲಿ ಶೇ 95 ರಷ್ಟು ಅಂಕಗಳನ್ನು ಗಳಿಸಿದ್ದಳು, ವೈದ್ಯೆಯಾಗಬೇಕೆಂಬ ಆಕಾಂಕ್ಷೆ ಹೊಂದಿದ್ದಳು ಎಂದು ಪ್ರೀತಿ ಪೊಲೀಸರಿಗೆ ತಿಳಿಸಿದ್ದಾರೆ. ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದರ ಮೇಲೆ ಕುಟುಂಬದ ಭರವಸೆ ಇತ್ತು. ಆರಂಭಿಕ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಗಳಿಸಿದ ನಂತರ ಈ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ.
ಮಗಳ ಅಂತ್ಯಕ್ರಿಯೆಯನ್ನು ನೆರವೇರಿಸಿದ ನಂತರ, ಪ್ರೀತಿ ಪೊಲೀಸರನ್ನು ಸಂಪರ್ಕಿಸಿ ತನ್ನ ಪತಿಯ ವಿರುದ್ಧ ಔಪಚಾರಿಕ ದೂರು ದಾಖಲಿಸಿದರು. ಅವರ ಹೇಳಿಕೆಯ ಆಧಾರದ ಮೇಲೆ, ಧೋಂಡಿರಾಮ್ ಭೋಸಲೆ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 103(1) ಮತ್ತು ಬಾಲ ನ್ಯಾಯ ಕಾಯ್ದೆ, 2015 ರ ಸೆಕ್ಷನ್ 75 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಘಟನೆಯ ನಂತರ, ಉಪ-ವಿಭಾಗೀಯ ಪೊಲೀಸ್ ಅಧಿಕಾರಿ ವಿಪುಲ್ ಪಾಟೀಲ್ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ವಿನಯ್ ವಹೀರ್ ಅವರು ಅಪರಾಧ ಸ್ಥಳಕ್ಕೆ ಭೇಟಿ ನೀಡಿದರು. ಭೋಸಲೆ ಅವರನ್ನು ಭಾನುವಾರ ಅಟ್ಪಾಡಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು, ಜೂನ್ 24 ರವರೆಗೆ ಅವರನ್ನು ಪೊಲೀಸ್ ಕಸ್ಟಡಿಗೆ ಕಳುಹಿಸಲಾಯಿತು.
ಹೈದರಾಬಾದ್: ಜಾನುವಾರು ವ್ಯಾಪಾರಿಗಳ ಮೇಲೆ ದಾಳಿ; ಮೊಬೈಲ್-ನಗದು ದೋಚಿದ ನಕಲಿ ಗೋರಕ್ಷಕರು


