ಹೊಸದಿಲ್ಲಿ: ಇರಾನ್ ಮತ್ತು ಇಸ್ರೇಲ್ ನಡುವೆ ಕದನವಿರಾಮ ಏರ್ಪಟ್ಟಿರುವುದನ್ನು ಭಾರತ ಸ್ವಾಗತಿಸಿದೆ. ಈ ಕದನವಿರಾಮಕ್ಕೆ ಅಮೆರಿಕ ಮತ್ತು ಕತಾರ್ ವಹಿಸಿದ ಪಾತ್ರವನ್ನು ಶ್ಲಾಘಿಸುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಂಗಳವಾರ (ಜೂನ್ 24) ಸಂಜೆ ತಿಳಿಸಿದೆ.
ಆದಾಗ್ಯೂ, ಈ ಪ್ರದೇಶದ ಒಟ್ಟಾರೆ ಭದ್ರತೆ ಕುರಿತು ಭಾರತಕ್ಕೆ ಇನ್ನೂ ಕಳವಳವಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಎರಡು ದಿನಗಳ ಹಿಂದೆ ಇರಾನಿನ ಪರಮಾಣು ಘಟಕಗಳ ಮೇಲೆ ಅಮೆರಿಕ ದಾಳಿ ನಡೆಸಿದ ಪ್ರತಿಕ್ರಿಯೆಯಾಗಿ, ಇರಾನ್ ಕತಾರ್‌ನಲ್ಲಿರುವ ಅಮೆರಿಕನ್ ಮಿಲಿಟರಿ ನೆಲೆಯ ಮೇಲೆ ಕ್ಷಿಪಣಿಗಳನ್ನು ಉಡಾಯಿಸಿತ್ತು. ಇದರ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಮುಂಜಾನೆ (ಭಾರತೀಯ ಕಾಲಮಾನದ ಪ್ರಕಾರ) ಇಸ್ರೇಲ್ ಮತ್ತು ಇರಾನ್ ನಡುವೆ “12 ದಿನಗಳ ಯುದ್ಧ” ಕೊನೆಗೊಳ್ಳಲಿದ್ದು, ಕದನವಿರಾಮಕ್ಕೆ ಮುಂದಾಗಲಿವೆ ಎಂದು ಘೋಷಿಸಿದರು. ಕತಾರ್‌ನ ಪ್ರಧಾನ ಮಂತ್ರಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ರಹಮಾನ್ ಅಲ್ ಥಾನಿ ಅವರು, ಅಮೆರಿಕದ ಕೋರಿಕೆಯ ಮೇರೆಗೆ ತಾವು ಇರಾನ್‌ನೊಂದಿಗೆ ಸಂಪರ್ಕ ಸಾಧಿಸಿದ್ದೇವೆ ಎಂದು ದೃಢಪಡಿಸಿದ್ದಾರೆ.
ಭಾರತವು ತನ್ನ ಹೇಳಿಕೆಯಲ್ಲಿ, ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷಗಳನ್ನು ಬಗೆಹರಿಸಲು “ಸಂವಾದ ಮತ್ತು ರಾಜತಾಂತ್ರಿಕತೆಗೆ ಬೇರೆ ಪರ್ಯಾಯವಿಲ್ಲ” ಎಂದು ಪುನರುಚ್ಚರಿಸಿದೆ. ಈ ಪ್ರಯತ್ನಗಳಲ್ಲಿ ತನ್ನ ಪಾತ್ರವನ್ನು ನಿರ್ವಹಿಸಲು ಭಾರತ ಸಿದ್ಧವಾಗಿದೆ ಎಂದು ಹೇಳಿದ್ದು, ಎಲ್ಲಾ ಸಂಬಂಧಿತ ಪಕ್ಷಗಳು ಶಾಂತಿ ನೆಲಸುವತ್ತ ಕೆಲಸ ಮಾಡುತ್ತವೆ ಎಂದು ಆಶಿಸಿದೆ.
ಆದಾಗ್ಯೂ, ಕದನವಿರಾಮ ಜಾರಿಗೆ ಬರಬೇಕಿದ್ದ ಕೆಲವೇ ಕ್ಷಣಗಳಲ್ಲಿ ಅದರ ಕುರಿತ ವರದಿ ಅಸ್ಪಷ್ಟವಾಯಿತು. ಇರಾನ್ ತನ್ನ ಮೇಲೆ ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ಇಸ್ರೇಲ್ ಆರೋಪಿಸಿತು. ಇದಕ್ಕೆ ಪ್ರತೀಕಾರವಾಗಿ, ಇರಾನ್ ಬಳಿಯ ರೇಡಾರ್ ಸೌಲಭ್ಯವನ್ನು ನಾಶಪಡಿಸಿರುವುದಾಗಿ ಇಸ್ರೇಲ್ ಹೇಳಿಕೊಂಡಿತು. ಆದರೆ, ಇರಾನ್ ಕದನವಿರಾಮವನ್ನು ಉಲ್ಲಂಘಿಸಿರುವುದನ್ನು ನಿರಾಕರಿಸಿದೆ.
ಟ್ರಂಪ್ ಮತ್ತು ಇಸ್ರೇಲಿ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ನಡುವಿನ ಮಾತುಕತೆಯ ನಂತರ ಇಸ್ರೇಲ್ ಇರಾನ್ ಮೇಲೆ ಹೆಚ್ಚುವರಿ ದಾಳಿಗಳಿಂದ ದೂರ ಉಳಿದಿದೆ ಎಂದು ನೆತನ್ಯಾಹು ಅವರ ಕಚೇರಿ ಮೂಲಗಳು ತಿಳಿಸಿವೆ.
ಆದರೆ, ಟ್ರಂಪ್ ಅವರು ಎರಡೂ ದೇಶಗಳು ಕದನವಿರಾಮವನ್ನು ಉಲ್ಲಂಘಿಸಿವೆ ಎಂದು ಹೇಳಿದ್ದಾರೆ. ಒಪ್ಪಂದವು ಜಾರಿಗೆ ಬಂದ ತಕ್ಷಣ ಅಂದರೆ ಅದು ಸಂಪೂರ್ಣವಾಗಿ ಜಾರಿಗೆ ಬರುವ ಮೊದಲು ಇಸ್ರೇಲ್ “ನಾನು ಹಿಂದೆಂದೂ ನೋಡಿರದಂತಹ ಅತ್ಯಂತ ದೊಡ್ಡ ಪ್ರಮಾಣದ ಬಾಂಬ್‌ಗಳನ್ನು” ಹಾಕಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ.
“ಇಸ್ರೇಲ್‌ನ ಇಂತಹ ನಡೆ ಬಗ್ಗೆ ನಾನು ಸಂತೋಷವಾಗಿಲ್ಲ” ಎಂದು ಟ್ರಂಪ್ ಸುದ್ದಿಗಾರರಿಗೆ ತಿಳಿಸಿದರು. ಇರಾನ್ ಬಗ್ಗೆ ಅತೃಪ್ತಿ ಹೊಂದಿದ್ದರೂ, ಇಸ್ರೇಲ್ ಬಗ್ಗೆ ತಮಗೆ ವಿಶೇಷವಾಗಿ ಬೇಸರವಾಗಿದೆ ಎಂದು ಅವರು ಹೇಳಿದರು.
“ಈ ಎರಡು ದೇಶಗಳು ಎಷ್ಟು ಸಮಯದಿಂದ ಮತ್ತು ಎಷ್ಟು ಕಠಿಣವಾಗಿ ಹೋರಾಡುತ್ತಿವೆ ಎಂದರೆ ಅವು ಏನು ಮಾಡುತ್ತಿವೆ ಎಂದು ಅವರಿಗೆ ತಿಳಿದಿಲ್ಲ. ನಿಮಗೆ ಅದು ಅರ್ಥವಾಗುತ್ತಿದೆಯೇ?” ಎಂದು ಟ್ರಂಪ್ ಸುದ್ದಿಗಾರರಿಗೆ ಪ್ರಶ್ನಿಸಿದ್ದಾರೆ.
ನಂತರ ಅವರು, “ಇಸ್ರೇಲ್ ಇರಾನ್ ಮೇಲೆ ದಾಳಿ ಮಾಡುವುದಿಲ್ಲ. ಎಲ್ಲಾ ವಿಮಾನಗಳು ಹಿಂದಿರುಗಿ ಹೋಗುತ್ತವೆ. ಯಾರಿಗೂ ನೋವುಂಟು ಮಾಡುವುದಿಲ್ಲ, ಕದನವಿರಾಮ ಜಾರಿಯಲ್ಲಿದೆ” ಎಂದು ಸ್ಪಷ್ಟಪಡಿಸಿದರು.
ಇರಾನ್ ಮತ್ತು ಇಸ್ರೇಲ್ ನಡುವಿನ ಈ ಸಂಘರ್ಷವು ಜೂನ್ 13ರಂದು ಪ್ರಾರಂಭವಾಗಿದೆ. ಇರಾನ್ ಅಣು ಶಸ್ತ್ರಾಸ್ತ್ರಗಳನ್ನು ಪಡೆಯುವ ಹಂಚಿನಲ್ಲಿತ್ತು ಎಂದು ಆರೋಪಿಸಿ ಇಸ್ರೇಲ್ ಇರಾನ್‌ನಲ್ಲಿ ಮಿಲಿಟರಿ ಮತ್ತು ಅಣು ಗುರಿಗಳ ಮೇಲೆ ದಾಳಿ ಮಾಡಿದೆ. ಇದು ತನ್ನ ಅಸ್ತಿತ್ವಕ್ಕೆ ಬೆದರಿಕೆ ಎಂದು ಇಸ್ರೇಲ್ ಹೇಳಿದೆ.
ಜೂನ್ 13ರ ಘಟನೆಯ ನಂತರ, ಉಭಯ ದೇಶಗಳು ಪರಸ್ಪರ ಕ್ಷಿಪಣಿಗಳನ್ನು ಉಡಾಯಿಸಿದವು. ಎರಡೂ ಕಡೆ ಸಾವುಗಳು ಸಂಭವಿಸಿದವು. ಅಮೆರಿಕವು ಭಾನುವಾರದಂದು ಇರಾನ್‌ನಲ್ಲಿರುವ ಮೂರು ಪ್ರಮುಖ ಪರಮಾಣು ಕೇಂದ್ರಗಳ ಮೇಲೆ ಬಾಂಬ್ ದಾಳಿ ಮಾಡುವ ಮೂಲಕ ಯುದ್ಧಕ್ಕೆ ಪ್ರವೇಶಿಸಿತು. ಟ್ರಂಪ್ ಈ ಗುರಿಗಳನ್ನು ‘ಸಂಪೂರ್ಣವಾಗಿ ನಾಶಪಡಿಸಲಾಗಿದೆ’ ಎಂದು ಹೇಳಿಕೊಂಡಿದ್ದಾರೆ.
ತನ್ನ ಪರಮಾಣು ಕೇಂದ್ರಗಳ ಮೇಲಿನ ಅಮೆರಿಕ ದಾಳಿಯ ಪ್ರತಿಕ್ರಿಯೆಯಾಗಿ, ಇರಾನ್ ದೇಶವು ಕತಾರ್‌ನಲ್ಲಿರುವ ಅಮೆರಿಕದ ಅಲ್ ಉದೈಡ್ ವಾಯುನೆಲೆಯ ಮೇಲೆ ಸೋಮವಾರದಂದು ಕ್ಷಿಪಣಿ ದಾಳಿಯನ್ನು ನಡೆಸಿತು.


