ದೇವನಹಳ್ಳಿಯು ಟಿಪ್ಪು ಸುಲ್ತಾನ್ ಹಾಗೂ ಕೆಂಪೇಗೌಡರ ಜನ್ಮಸ್ಥಳ. ಈ ಇಬ್ಬರೂ ರೈತರ ಬದುಕಿಗಾಗಿ, ಈ ನೆಲಕ್ಕಾಗಿ ತಮ್ಮ ಜೀವನ ಮುಡುಪಾಗಿಟ್ಟವರು. ಇಂತಹ ಸ್ಥಳದ ಫಲವತ್ತಾದ ಭೂಮಿಯನ್ನು ಸರ್ಕಾರ ಕಬಳಿಸುವುದನ್ನು ವಿರೋಧಿಸಿ, ಕಳೆದ ಮೂರೂವರೆ ವರ್ಷದಿಂದ ಅನೇಕ ರೀತಿಯ ಹೋರಾಟವನ್ನು ನಾವು ಮಾಡಿದ್ದೇವೆ ಎಂದು ಕಾರಳ್ಳಿ ಶ್ರೀನಿವಾಸ್ ಹೇಳಿದರು.
ಅವರು ಇಂದು ದೇವನಹಳ್ಳಿ ಚಲೋ ಕಾರ್ಯಕ್ರಮದಲ್ಲಿ ಮಾತನಾಡಿ, ಇಲ್ಲಿನ ಈ ಚಳವಳಿಯನ್ನು ಹೋರಾಟಗಾರರು ಕಟ್ಟಿದ್ದಲ್ಲ, ಇದು ಇಲ್ಲಿನ ಸಂತ್ರಸ್ತ ರೈತರು ಕಟ್ಟಿದ ಹೋರಾಟವಾಗಿದೆ. ಈ ಹೋರಾಟವನ್ನು ಎಲ್ಲ ಜಾತಿಯ ಜನರು ಸೇರಿ ಕಟ್ಟಿದ್ದಾರೆ. ಇದೊಂದು ರಾಜ್ಯದಲ್ಲಿ ಮಾದರಿ ಹೋರಾಟವಾಗಿದೆ ಎಂದರು.
ಇಡೀ ದೇಶದಲ್ಲಿ ನಮಗೆ ಹೋರಾಟದ ಅನೇಕ ಮಾದರಿಗಳಿವೆ. ಇದು ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರು ಕಟ್ಟಿದ ಮತ್ತೊಂದು ಮಾದರಿ ಹೋರಾಟ. ಈ ಹೋರಾಟಕ್ಕೆ ದೇಶದ ಅನೇಕ ನಾಯಕರು, ಸಾಹಿತಿಗಳು, ಕಲಾವಿದರು ನಮಗೆ ಬೆಂಬಲ ನೀಡಿದ್ದಾರೆ ಎಂದು ಸಭೆಯಲ್ಲಿ ಸ್ಮರಿಸಿದರು.
ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾವು ಅನೇಕರು ಬಂಧನಕ್ಕೊಳಗಾಗಿದ್ದು ಮಾತ್ರವಲ್ಲದೆ ಪೊಲೀಸರಿಂದ ಲಾಠಿ ಬೂಟಿನ ಒದೆತ ತಿಂದಿದ್ದೇವೆ. ಅ ಸಂದರ್ಭದಲ್ಲಿ ನಾವು ಅನೇಕರು ಕೈಮುರಿದುಕೊಂಡು, ಕಣ್ಣುಕಳೆದುಕೊಂಡಾಗ ಆಗಿನ ಕಾಂಗ್ರೆಸ್ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಫ್ರೀಡಂಪಾರ್ಕಿನಲ್ಲಿ ನಮಗೆ ಬೆಂಬಲ ನೀಡಿ ಮಾತನಾಡಿದ್ದರು ಎಂದು ಹೇಳಿದರು.
ಈಗ ಸರ್ಕಾರ ಬದಲಾಗಿದೆ. ಈ ಕಾಂಗ್ರೆಸ್ ಸರಕಾರದ ಅನೇಕ ಮಂತ್ರಿಗಳು ಬಿಜೆಪಿ ಸರಕಾರವಿದ್ದಾಗ ನಾವು ನಡೆಸುತ್ತಿದ್ದ ಧರಣಿ ಸ್ಥಳಕ್ಕೆ ಅನೇಕ ಬಾರಿ ಬಂದಿದ್ದಾರೆ. ಪ್ರತಿ ಸಲ ನಾನು ರೈತರಪರ, ಭೂಮಿ ಸ್ವಾಧೀನ ಮಾಡಿಕೊಳ್ಳುವುದಕ್ಕೆ ಬಿಡುವುದಿಲ್ಲ ಎಂದು ಇಂದಿಗೂ ಹೇಳುತ್ತಿರುವ ಎಂಬಿ ಪಾಟೀಲ್ ಅವರು ಈಗ ರೈತರನ್ನು ಕಂಡರೆ ಸಿಡಿಮಿಡಿಗೊಳ್ಳುತ್ತಿದ್ದಾರೆ. ಇದು ವಿಪರ್ಯಾಸ ಎಂದು ಅವರು ತಿಳಿಸಿದರು.
ಬಿಜೆಪಿ ನೇರವಾಗಿ ನಮಗೆ ಚೂರಿ ಹಾಕಿದರೆ, ಕಾಂಗ್ರೆಸ್ ಹಿಂದಿನಿಂದ ಚೂರಿ ಹಾಕುತ್ತಿದೆ. ಸರ್ಕಾರ ಬದಲಾದರೂ ಅವರ ನೀತಿಗಳ ಮಾತ್ರ ಬದಲಾಗಿಲ್ಲ. ಇದೇ ಸರ್ಕಾರ ಈಗ 10 ಹಳ್ಳಿಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಿದೆ. ಹಲವು ಸುತ್ತಿನ ಸಭೆಗಳಲ್ಲಿ ಮುಂದಿನ ಸಭೆಗಳಲ್ಲಿ ತೀರ್ಮಾನ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದರು. ಪ್ರತಿನಿತ್ಯ ಸಮಾಜವಾದ, ದಲಿತರಪರ, ರೈತರ ಪರವಾದ ಮಾತುಗಳನ್ನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ನಾವು ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
13 ಹಳ್ಳಿಗಳ ಜನಗಳ ಕೈಯಲ್ಲಿದ್ದ ಹೋರಾಟವನ್ನು ಇಡೀ ರಾಜ್ಯದ ಜನಗಳ ಹೆಗಲಿಗೆ ಹಾಕುತ್ತಿದ್ದೇವೆ. ಈ ಹೋರಾಟ ಸೋತರೆ ಈ ನಾಡಿನ ದಲಿತ, ಮಹಿಳಾ, ಕಾರ್ಮಿಕ ಹಾಗೂ ದುಡಿಯುವ ಜನರ ಸೋಲು. ಆದರೆ ನಮಗೆ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ. ಈ ದೇಶದ ಜನಚಳವಳಿಗೆ ಸೋಲು ಇಲ್ಲ. ಆಳುವ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಹೋರಾಟಗಾರರು ಹೋರಾಟ ಮಾಡುತ್ತಲೇ ಬಂದಿದ್ದಾರೆ. ಇಲ್ಲಿಗೆ ಆಗಮಿಸಿರುವ ರಾಜ್ಯದ ಜನರು ಹೋರಾಟವನ್ನು ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿದರು.
ನಾವು ಇಲ್ಲಿ ಕಾರ್ಯಕ್ರಮ ಮಾಡಿ ಮನೆಗೆ ಹೋಗುವುದಿಲ್ಲ, ಸರ್ಕಾರ ನಮಗೆ ನ್ಯಾಯ ಕೊಡುವ ತೀರ್ಮಾನಕ್ಕೆ ಬರುವವರೆಗೂ ಇಲ್ಲೇ ಇರುತ್ತೇವೆ. ನಾವು ಊರಲ್ಲಿ ಇರಬೇಕು ಅಥವಾ ಜೈಲಿನಲ್ಲಿ ಇರಬೇಕು. ನಿರ್ಧಾರ ಸರ್ಕಾರಕ್ಕೆ ಬಿಟ್ಟದ್ದು ಎಂದರು.
Emergency @50 | ಪ್ರಜಾಪ್ರಭುತ್ವ ಇತಿಹಾಸದ ಅತ್ಯಂತ ಕರಾಳ ಅಧ್ಯಾಯ: ಪ್ರಧಾನಿ ಮೋದಿ


