ಬುಧವಾರ ದೇವನಹಳ್ಳಿಯಲ್ಲಿ ನಡೆದ ಚನ್ನರಾಯಪಟ್ಟಣ ರೈತರ ಹೋರಾಟಗಾರರ ಮೇಲಿನ ಪೊಲೀಸರ ದೌರ್ಜನ್ಯದ ಹಿಂದೆ ಕೈಗಾರಿಕ ಸಚಿವ ಎಂ.ಬಿ. ಪಾಟೀಲ್ ಇದ್ದಾರೆ ಎಂದು ‘ಸಂಯುಕ್ತ ಹೋರಾಟ – ಕರ್ನಾಟಕ’ ಆರೋಪಿಸಿದ್ದು, ರೈತರ ಭೂಮಿ ವಾಪಾಸು ಆಗುವವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ಧಿಷ್ಠಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಶುಕ್ರವಾರ ಪ್ರಾರಂಭಿಸುವುದಾಗಿ ಹೇಳಿದೆ. ಗುರುವಾರ ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ‘ಸಂಯುಕ್ತ ಹೋರಾಟ – ಕರ್ನಾಟಕ’ ಈ ತೀರ್ಮಾನ ತಿಳಿಸಿದೆ. ಚನ್ನರಾಯಪಟ್ಟಣ ರೈತರಿಗಾಗಿ
ದೇವನಹಳ್ಳಿ ಚಲೋ ಹೋರಾಟದಲ್ಲಿ ನಡೆದ ಬೆಳವಣಿಗೆ ಮತ್ತು ರೈತ ಹೋರಾಟದ ಮುಂದಿನ ನಡೆಗಳ ಬಗ್ಗೆ ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ‘ಸಂಯುಕ್ತ ಹೋರಾಟ – ಕರ್ನಾಟಕ’ದ ಮುಖಂಡ, ರೈತ ನಾಯಕ ಬಡಗಲಪುರ ನಾಗೇಂದ್ರ, “ಡಿಸಿಪಿ ಸಚಿತ್ ಕುಮಾರ್ ಹೋರಾಟ ಒಡೆಯಲು ಬ್ರಿಟಿಷರ ರೀತಿಯಲ್ಲಿ ನಡೆದುಕೊಂಡರು. ಹೋರಾಟಗಾರರ ಬಂಧನದ ವೇಳೆ ಮಹಿಳೆ, ಮಕ್ಕಳು ಮತ್ತು ವೃದ್ಧರ ಜೊತೆಗೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಅವರನ್ನು ಅಮಾನುತುಗೊಳಿಸಿ ತನಿಖೆಗೆ ಒಳಪಡಿಸಬೇಕು” ಎಂದು ಆಗ್ರಹಿಸಿದರು.
ಹೋರಾಟವನ್ನು ಹತ್ತಿಕ್ಕಲು ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಸರ್ಕಾರಗಳು ಇಂತಹ ಪ್ರಯತ್ನಗಳು ಮಾಡುತ್ತಲೇ ಬಂದಿದೆ. ಆದರೆ ಹೋರಾಟಗಾರರನ್ನು ಈ ರೀತಿ ಅನಾನುಷವಾಗಿ ಪೊಲೀಸರು ಎಲ್ಲೂ ನಡೆಸಿಕೊಂಡಿಲ್ಲ ಎಂದು ಬಡಗಲಪುರ ನಾಗೇಂದ್ರ ಅವರು ಹೇಳಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ಪ್ರತಿಭಟನೆ ಮಾಡಬೇಕು ಎಂದು ಜನರ ಮೂಲಭೂತ ಹಕ್ಕಾಗದ ಪ್ರತಿಭಟನೆಯ ಹಕ್ಕನ್ನು ಕಿತ್ತುಕೊಳ್ಳುವ ತಪ್ಪನ್ನು ಹೈಕೋರ್ಟ್ ಕೂಡಾ ಮಾಡಿದೆ ಎಂದು ಅವರು ಕರ್ನಾಟಕ ಹೈಕೋರ್ಟ್ ಆದೇಶವನ್ನು ಆಕ್ಷೇಪ ಮಾಡಿದರು.
“ವಿಪಕ್ಷದಲ್ಲಿ ಇದ್ದಾಗ ಸಿದ್ದರಾಮಯ್ಯ ಅವರು ಹೋರಾಟಗಾರರ ಪರವಾಗಿ ನಿಂತು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಅಧಿಸೂಚನೆ ವಾಪಾಸು ಪಡೆಯುತ್ತೇವೆ ಎಂದು ಹೇಳಿದ್ದರು. ಆದರೆ ಸರ್ಕಾರ ಬಂದ ನಂತರ ಅವರ ಸರ್ಕಾರವೆ ರೈತರ ಭೂಮಿಯನ್ನು ಕಿತ್ತುಕೊಳ್ಳುವ ಅಂತಿಮ ಅಧಿಸೂಚನೆ ಹೊರಡಿಸಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ದೇವನಹಳ್ಳಿಯ ಹೊರಾಟವನ್ನು ಹತ್ತಿಕ್ಕಲು ಸರ್ಕಾರ ಪೊಲೀಸ್ ಬಲವನ್ನು ಬಳಸಿ ರಾಕ್ಷಸ ರೂಪದಲ್ಲಿ ವರ್ತಿಸಿತು. ಇಷ್ಟು ದೊಡ್ಡ ಪ್ರತಿಭಟನೆ ನಡೆದರೂ ಸರ್ಕಾರ ಯಾವುದೇ ಹೇಳಿಕೆ ನೀಡಿರಲಿಲ್ಲ. ನಮ್ಮನ್ನು ಬಂಧಿಸಿದ ನಂತರ ಕರೆ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅವರು ಒಂದು ವಾರ ಸಮಯ ಕೇಳಿದ್ದರು. ಹಾಗಾಗಿಯೆ ಬಂಧನಕ್ಕೆ ಒಳಗಾಗಿದ್ದ ನಾವು ಬಿಡುಗಡೆ ಹೊಂದಿದ್ದೇವೆ” ಎಂದು ಹೇಳಿದರು.
“ಅದಾಗ್ಯೂ, ನಮ್ಮ ಹೋರಾಟವನ್ನು ಯಾವುದೇ ಕಾರಣಕ್ಕೂ ನಾವು ಕೈಬಿಡೊಲ್ಲ. ನಾಳೆಯಿಂದ ಸಂಯುಕ್ತ ಹೋರಾಟ ಕರ್ನಾಟಕ ಅಹೋರಾತ್ರಿ ಧರಣಿ ಸತ್ಯಾಗ್ರಹ ಪ್ರಾರಂಭ ಮಾಡುತ್ತದೆ. ಭೂಮಿ ವಾಪಾಸು ಪಡೆಯುವರೆಗೆ ಈ ಹೋರಾಟ ಮುಂದುವರೆಯಲಿದ್ದು, ಭೂಮಿ ತಂಟೆಗೆ ಬಂದ ಯಾವುದೇ ಸರ್ಕಾರಕ್ಕೂ, ಪಕ್ಷಕ್ಕೂ ಉಳಿಗಾಲವಿಲ್ಲ” ಎಂದು ಕಿಡಿ ಕಾರಿದರು.
ಸಂಯುಕ್ತ ಹೋರಾಟ ಕರ್ನಾಟಕ ಇದರ ನಾಯಕಿ ಎಸ್. ವರಲಕ್ಷ್ಮಿ ಮಾತನಾಡಿ, ವಿಧಾನಸಭಾ ಚುನಾವಣೆ ಮುಂಚೆ ಹೋರಾಟಕ್ಕೆ ಭೇಟಿ ಕೊಟ್ಟು ರೈತರ ಪರವಾಗಿ ಮಾತನಾಡಿದ್ದ ಸಿದ್ದರಾಮಯ್ಯ, ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಬೇಡಿಕೆ ಪರಿಗಣಿಸುತ್ತೇವೆ ಎಂದು ಹೇಳಿದ್ದರು. ಅದರಂತೆ ಅವರ ಈ ವೈಯಕ್ತಿಕ ಬದ್ಧತೆಯನ್ನು ಅವರು ಈಡೇರಿಸಬೇಕಿದೆ ಎಂದು ಆಗ್ರಹಿಸಿದರು.
“ರೈತ ಹೋರಾಟದ ಬಗ್ಗೆ ನಾಲ್ಕೈದು ಸುತ್ತಿನ ಚರ್ಚೆ ಆಗಿವೆ. ಹೋರಾಟದ ಹಿಂದಿನ ದಿನ ಇಬ್ಬರು ಮಂತ್ರಿಗಳು ಪತ್ರಿಕಾಗೋಷ್ಠಿ ನಡೆಸಿ 500 ಎಕರೆ ಭೂಮಿಯನ್ನು ಬಿಡಲು ಸಾಧ್ಯ ಎಂದು ಹೇಳುತ್ತಾರೆ. ಮುಖ್ಯಮಂತ್ರಿ ಹೇಳಿಕೆ ನೀಡುವುದಕ್ಕಿಂತ ಮುಂಚೆ ತರಾತುರಿಯಲ್ಲಿ ಅವರ ಪತ್ರಿಕಾಗೋಷ್ಠಿ ಮಾಡಿದ್ದು ಏಕೆ?” ಎಂದು ವರಲಕ್ಷ್ಮಿ ಅವರು ಪ್ರಶ್ನಿಸಿದರು.
“ನಿನ್ನೆಯ ಹೋರಾಟದ ವೇಳೆ ಪೊಲೀಸರು ಅತ್ಯಂತ ಅಮಾನುಷವಾಗಿ ನಡೆದುಕೊಂಡಿದ್ದಾರೆ. ಹೋರಾಟದ ಕನ್ವಿನರ್ ಅವರನ್ನು ವೇದಿಕೆಗೆ ಹತ್ತಿ ಕುತ್ತಿಗೆ ಹಿಡಿದು ಕೆಳಗಡೆ ದಬ್ಬಿದ್ದಾರೆ. ಕಾಂಗ್ರೆಸ್‌ನ ಸಿದ್ದರಾಮಯ್ಯ ಸರ್ಕಾರ ಹೀಗೆ ನಡೆದುಕೊಳ್ಳುತ್ತದೆ ಎಂದು ನಾವು ಭಾವಿಸಿರಲಿಲ್ಲ. ನಿಮ್ಮ ಮಾತನ್ನು ನಡೆಸಿಕೊಡಿ ಎಂದಷ್ಟೇ ನಾವು ಹೇಳಿದ್ದೇವೆ. ನಾವು ಅವರ ನಿಮ್ಮ ಮೇಲೆ ನಂಬಿಕೆ ಇಟ್ಟಿದ್ದೆವು, ಆದರೆ ಅವರು ನಮ್ಮನ್ನು ನಡೆಸಿಕೊಂಡಿದ್ದು ಸರಿಯಲ್ಲ. ಆದರೂ, ಸಭೆ ಕರೆಯುತ್ತೇವೆ ಎಂದು ಒಂದು ವಾರ ಸಮಯ ಕೇಳಿದ್ದಾರೆ. ಕಾದು ನೋಡೋಣ, ನಮ್ಮ ಬೇಡಿಕೆಯನ್ನು ಈಡೇರಿಸಿ ಎಂದಷ್ಟೆ ಮಾತ್ರ ನಾವು ಕೇಳಿಕೊಳ್ಳುತ್ತೇವೆ” ಎಂದು ಹೇಳಿದರು.
ಹೋರಾಟಗಾರ ನೂರ್ ಶ್ರೀಧರ್ ಮಾತನಾಡಿ, ನಿನ್ನೆಯ ಪೊಲೀಸರ ನಡೆಗೆ ಕಾರಣ ಯಾರು? ಪೊಲೀಸರಿಗೆ ಹೀಗೆ ಆದೇಶ ನೀಡಿದವರು ಯಾರು? ಇದರ ಹಿಂದೆ ದೊಡ್ಡ ಲಾಭಿ, ಡೀಲ್ ಇದೆ ಎಂದ ಅವರು, “ನಿನ್ನೆಯ ಪೊಲೀಸರ ನಡೆಯ ಹಿಂದೆ ಸಚಿವ ಎಂ.ಬಿ. ಪಾಟೀಲ್ ಇದ್ದಾರೆ. ಸಿದ್ದರಾಮಯ್ಯ ಅವರು ಒಪ್ಪಿದರೂ, ಸಚಿವ ಎಂ.ಬಿ. ಪಾಟೀಲ್ ಅವರು ರೈತರ ಭೂಮಿಯನ್ನು ಬಿಡುವಂತೆ ಕಾಣುತ್ತಿಲ್ಲ” ಎಂದು ನೇರವಾಗಿ ಆರೋಪಿಸಿದರು.
ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ, “ಸರ್ಕಾರ ಹೆಸರಿಗಷ್ಟೇ ಇರೋದು. ಇದೊಂದು ಭ್ರಮೆ. ಆಡಳಿತ ಕಾರ್ಪೊರೇಟ್ ಕಂಪೆನಿಗಳ ಕೈಯ್ಯಲ್ಲಿದೆ. ಸಿದ್ದರಾಮಯ್ಯ ಅವರ ಮೇಲಿನ ನಂಬಿಕೆಯನ್ನು ಮತ್ತೊಮ್ಮೆ ನಾವು ಪರಿಶೀಲನೆ ಮಾಡಬೇಕಿದೆ. ಎಂ.ಬಿ. ಪಾಟೀಲ್ ಅವರು ಕೈಗಾರಿಕಾ ಸಚಿವರಂತೆ ನಡೆದುಕೊಳ್ಳುತ್ತಿಲ್ಲ, ಬದಲಾಗಿ ಕೈಗಾರಿಕೆಗಳ ಗುತ್ತಿಗೆಗಾರರಂತೆ ನಡೆದುಕೊಳ್ಳುತ್ತಿದ್ದಾರೆ” ಎಂದು ಹೇಳಿದರು.
ಕೆಐಎಡಿಬಿ ಎನ್ನುವ ಕಾಯ್ದೆಯ ತಂದು, ರಿಯಲ್ ಎಸ್ಟೇಟ್ ಕುಳಗಳ ದುಷ್ಟ ಕೂಟವನ್ನು ಸರ್ಕಾರ ರಚನೆ ಮಾಡಿದೆ. ಕೆಐಎಡಿಬಿ ಈಗ ಒಂದು ದಳ್ಳಾಲಿ ಕೇಂದ್ರದಾಗಿದ್ದು, ಅದನ್ನು ಮುಚ್ಚಬೇಕಿದೆ ಎಂದು ಅವರು ಆಗ್ರಹಿಸಿದರು. ಚನ್ನರಾಯಪಟ್ಟಣ ರೈತರಿಗಾಗಿ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಜುಲೈ 4ರಂದು ಚನ್ನರಾಯಪಟ್ಟಣ ರೈತರ ಜೊತೆ ಸಭೆ : ಸಿಎಂ ಸಿದ್ದರಾಮಯ್ಯ ಭರವಸೆ
ಜುಲೈ 4ರಂದು ಚನ್ನರಾಯಪಟ್ಟಣ ರೈತರ ಜೊತೆ ಸಭೆ : ಸಿಎಂ ಸಿದ್ದರಾಮಯ್ಯ ಭರವಸೆ

