ಹೊಸದಿಲ್ಲಿ: ಇಸ್ರೇಲ್ ಮತ್ತು ಅಮೆರಿಕ ಇರಾನ್‌ನ ಅಣು ಸ್ಥಾವರಗಳ ಮೇಲೆ ದಾಳಿ ನಡೆಸಿದ ನಂತರ, ವಿಶ್ವಸಂಸ್ಥೆ ಸಂಬಂಧಿತ ಅಣು ನಿಗಾ ಸಂಸ್ಥೆ (IAEA) ಒದಗಿಸುತ್ತಿರುವ ಮಾಹಿತಿಗಳನ್ನು ಭಾರತ ಹತ್ತಿರದಿಂದ ಗಮನಿಸುತ್ತಿದೆ. ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಚರ್ಚೆ ಹಾಗೂ ರಾಜತಾಂತ್ರಿಕತೆಯ ಮೂಲಕ ಶೀಘ್ರವಾಗಿ ಮರುಸ್ಥಾಪಿಸಲು ಭಾರತ ಒತ್ತಾಯಿಸುತ್ತಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಗುರುವಾರ (ಜೂನ್ 26) ನಡೆದ ಸಚಿವಾಲಯದ ವಾರದ ಪತ್ರಿಕಾಗೋಷ್ಠಿಯಲ್ಲಿ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, ಇರಾನ್‌ನಲ್ಲಿರುವ ಅಣು ವಿಜ್ಞಾನಿಗಳ ಮೇಲಿನ ಇಸ್ರೇಲ್ ದಾಳಿಯ ಬಗ್ಗೆ ಭಾರತದ ನಿಲುವಿನ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇಸ್ರೇಲ್ ಮತ್ತು ಅಮೆರಿಕ ದಾಳಿ ಮಾಡಿದ ತಾಣಗಳಲ್ಲಿನ ವಿಕಿರಣ ಮಟ್ಟಗಳ ಕುರಿತು ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (IAEA) ನೀಡುತ್ತಿರುವ ಮಾಹಿತಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಹೇಳಿದರು.
ಇರಾನ್‌ನಲ್ಲಿ ಗುರಿಯಾಗಿಸಿದ ಸ್ಥಾವರಗಳಲ್ಲಿ ಯಾವುದೇ ಅಣು ವಸ್ತುವಾಗಲಿ, ಅಥವಾ ಕಡಿಮೆ ಪ್ರಮಾಣದ ನೈಸರ್ಗಿಕ ಅಥವಾ ಕಡಿಮೆ ಸಮೃದ್ಧಗೊಳಿಸಿದ ಯುರೇನಿಯಂ ಆಗಲಿ ಇರಲಿಲ್ಲ ಎಂಬುದನ್ನು ನಾವು ಗಮನಿಸಿದ್ದೇವೆ. ದಾಳಿಗೊಳಗಾದ ಕಟ್ಟಡಗಳ ಹೊರಗೆ ಯಾವುದೇ ವಿಕಿರಣ ಮಾಲಿನ್ಯವಿಲ್ಲ ಎಂಬ ನಿಗಾ ಸಂಸ್ಥೆಯ ಅಂದಾಜನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ಜೈಸ್ವಾಲ್ ಸ್ಪಷ್ಟಪಡಿಸಿದರು.
ಅಲ್ಲಿನ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಶೀಘ್ರವಾಗಿ ಮರುಸ್ಥಾಪಿಸಲು, ಚರ್ಚೆ ಮತ್ತು ರಾಜತಾಂತ್ರಿಕತೆಯ ಹಾದಿಗೆ ಮರಳುವಂತೆ ನಾವು ಒತ್ತಾಯಿಸುತ್ತೇವೆ ಎಂದು ಜೈಸ್ವಾಲ್ ತಿಳಿಪಡಿಸಿದರು. ಅಮೆರಿಕದ ದಾಳಿಗಳ ನಂತರ ಪ್ರದೇಶದ ಸ್ಥಿರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ತಮ್ಮ ಸಚಿವಾಲಯದ ಹಿಂದಿನ ಹೇಳಿಕೆಯನ್ನು ಅವರು ಉಲ್ಲೇಖಿಸಿದರು. ಜೊತೆಗೆ, ಅಮೆರಿಕ ಮತ್ತು ಕತಾರ್ ಮಧ್ಯಸ್ಥಿಕೆಯಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಕದನವಿರಾಮವನ್ನು ಸ್ವಾಗತಿಸಿದರು.
ಸಂಘರ್ಷದ ಆರಂಭ ಮತ್ತು ಅಂತರರಾಷ್ಟ್ರೀಯ ಪ್ರತಿಕ್ರಿಯೆ
ಜೂನ್ 13ರಂದು ತನ್ನ ‘ಆಪರೇಷನ್ ರೈಸಿಂಗ್ ಲಯನ್’ ಕಾರ್ಯಾಚರಣೆಯ ಭಾಗವಾಗಿ ಇರಾನ್‌ನ ಅಣು ಸ್ಥಾವರಗಳು ಸೇರಿದಂತೆ ಇತರ ಗುರಿಗಳ ಮೇಲೆ ಇಸ್ರೇಲ್ ದಾಳಿ ಮಾಡಲು ಪ್ರಾರಂಭಿಸಿತು. ಇರಾನ್ ಅಣುಬಾಂಬ್ ಪಡೆಯುವ ಅಂಚಿನಲ್ಲಿದೆ ಎಂಬ ಆರೋಪದ ಮೇಲೆ ಇದನ್ನು ಆರಂಭಿಸಲಾಯಿತು, ಆದರೆ ಟೆಹ್ರಾನ್ ತನ್ನ ಅಣು ಕಾರ್ಯಕ್ರಮ ಕೇವಲ ನಾಗರಿಕ ಉದ್ದೇಶಗಳಿಗಾಗಿ ಮಾತ್ರ ಎಂದು ಹೇಳುತ್ತಿದೆ.
ಇಸ್ರೇಲಿನ ದಾಳಿಯ ನಂತರ ಉಭಯ ದೇಶಗಳು ಪರಸ್ಪರ ಕ್ಷಿಪಣಿಗಳನ್ನು ಹಾರಿಸಿದವು. ಭಾನುವಾರ (ಜೂ.21) ಅಮೆರಿಕ ಸಂಘರ್ಷಕ್ಕೆ ಪ್ರವೇಶಿಸಿತು; ಅದರ ವಾಯುಪಡೆಯು ಫೋರ್ಡೋ, ನಟಾನ್ಜ್ ಮತ್ತು ಇಸ್ಫಹಾನ್‌ನಲ್ಲಿರುವ ಮೂರು ಪ್ರಮುಖ ಇರಾನಿನ ಅಣು ಸ್ಥಾವರಗಳ ಮೇಲೆ ಬಾಂಬ್ ದಾಳಿ ನಡೆಸಿತು. ಇರಾನ್ ಕತಾರ್‌ನಲ್ಲಿರುವ ಅಮೆರಿಕದ ವಾಯುನೆಲೆಯ ಮೇಲೆ ದಾಳಿ ನಡೆಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿತು. ಒಂದು ದಿನದ ನಂತರ ಅಮೆರಿಕ ಮತ್ತು ಕತಾರ್ ಮಧ್ಯಸ್ಥಿಕೆಯಲ್ಲಿ ಕದನವಿರಾಮವು ಯುದ್ಧವನ್ನು ಕೊನೆಗೊಳಿಸಿತು.
ಸಂಘರ್ಷದ ಸಮಯದಲ್ಲಿ ಹಲವು ಬಾರಿ ಕಳವಳ ವ್ಯಕ್ತಪಡಿಸಿದ್ದ ಭಾರತ, ಇಸ್ರೇಲ್ ಅಥವಾ ಅಮೆರಿಕದ ವಿರುದ್ಧ ಯಾವುದೇ ಹೇಳಿಕೆಯನ್ನು ನೀಡಿರಲಿಲ್ಲ. ಭಾರತ ಸದಸ್ಯನಾಗಿರುವ ಶಾಂಘೈ ಸಹಕಾರ ಸಂಘಟನೆ (SCO) ಇಸ್ರೇಲ್‌ನ ಇರಾನ್ ಮೇಲಿನ ದಾಳಿಗಳನ್ನು ಬಲವಾಗಿ ಖಂಡಿಸಿತ್ತು, ಆದರೆ ಭಾರತವು ಆ ಹೇಳಿಕೆಯಿಂದ ದೂರ ಉಳಿದಿತ್ತು.
ಆದಾಗ್ಯೂ, ಭಾರತವು ಸದಸ್ಯನಾಗಿರುವ ಬ್ರಿಕ್ಸ್ (BRICS) ಒಕ್ಕೂಟವು ಇರಾನ್ ಮೇಲಿನ ದಾಳಿಗಳ ಬಗ್ಗೆ “ತೀವ್ರ ಕಳವಳ” ವ್ಯಕ್ತಪಡಿಸಿ ಅವುಗಳನ್ನು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ಕರೆದಾಗ, ಭಾರತ ಅಂತಹ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ಇರಾನ್‌ನಿಂದ ಭಾರತಕ್ಕೆ ಕೃತಜ್ಞತೆ
ಹೊಸದಿಲ್ಲಿಯಲ್ಲಿರುವ ಇರಾನ್ ರಾಯಭಾರ ಕಚೇರಿಯು ಬುಧವಾರ ಒಂದು ಹೇಳಿಕೆಯನ್ನು ಪೋಸ್ಟ್ ಮಾಡಿದ್ದು, “ಇರಾನ್‌ನೊಂದಿಗೆ ದೃಢವಾಗಿ ಮತ್ತು ಗಟ್ಟಿಯಾಗಿ ನಿಂತಿದ್ದ ಭಾರತದ ಎಲ್ಲಾ ಉದಾತ್ತ ಮತ್ತು ಸ್ವಾತಂತ್ರ್ಯ-ಪ್ರಿಯ ಜನರಿಗೆ ಹೃತ್ಪೂರ್ವಕ ಕೃತಜ್ಞತೆ” ವ್ಯಕ್ತಪಡಿಸಿದೆ.
ಭಾರತದ ಜನರು ಮತ್ತು ಸಂಸ್ಥೆಗಳು ತೋರಿಸಿದ ನೈಜ ಮತ್ತು ಅಮೂಲ್ಯ ಬೆಂಬಲಕ್ಕಾಗಿ ನಾವು ಮತ್ತೊಮ್ಮೆ ನಮ್ಮ ಪ್ರಾಮಾಣಿಕ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತೇವೆ” ಎಂದು ಅದು X (ಹಿಂದಿನ ಟ್ವಿಟರ್) ನಲ್ಲಿ ಹೇಳಿದೆ.
ಅಣು ಕಾರ್ಯಕ್ರಮದ ಹಾನಿ: IAEA ವರದಿ ಮತ್ತು ಅಮೆರಿಕದ ಪ್ರತಿಕ್ರಿಯೆ
ಇರಾನ್‌ನ ಅಣು ತಾಣಗಳ ಮೇಲಿನ ದಾಳಿಗಳು ವಿವಿಧ ಮಟ್ಟಗಳಲ್ಲಿ ಸಮೃದ್ಧಗೊಳಿಸಿದ ಯುರೇನಿಯಂ ಹೊಂದಿರುವ ಸ್ಥಾವರಗಳ ಒಳಗೆ ಕೆಲವು ಸ್ಥಳೀಯ ವಿಕಿರಣ ಮತ್ತು ರಾಸಾಯನಿಕ ಬಿಡುಗಡೆಗೆ ಕಾರಣವಾಗಿವೆ. ಆದರೆ, ಈ ಸ್ಥಳಗಳ ಹೊರಗೆ ವಿಕಿರಣ ಹೆಚ್ಚಳದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು IAEA ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.
ಏತನ್ಮಧ್ಯೆ, IAEA ಸಂಸ್ಥೆಯ ಮಹಾನಿರ್ದೇಶಕ ರಫೆಲ್ ಗ್ರೋಸ್ಸಿ, ದಾಳಿಗಳ ಪರಿಣಾಮವಾಗಿ ಇರಾನ್‌ನ ಅಣು ಕಾರ್ಯಕ್ರಮ “ತೀವ್ರ ಹಾನಿ” ಅನುಭವಿಸಿದೆ ಎಂದು ಅಂದಾಜಿಸಿದ್ದಾರೆ.
ದಾಳಿಗಳು ದೇಶದ ಅಣು ಕಾರ್ಯಕ್ರಮವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿವೆಯೇ ಎಂದು ಫ್ರೆಂಚ್ ಪ್ರಸಾರಕ RFI ಕೇಳಿದಾಗ, “ನಾನು ಅಮೆರಿಕ ಧ್ವಂಸಗೊಳಿಸಿದೆ ಎಂದು ಹೇಳುವುದು ಅತಿರೇಕವಾಗುತ್ತದೆ” ಎಂದು ಗ್ರೋಸ್ಸಿ ಹೇಳಿದರು. ಆದಾಗ್ಯೂ, ಇರಾನ್ ತನ್ನ ಹೆಚ್ಚಿನ ಯುರೇನಿಯಂ ಸಮೃದ್ಧಗೊಳಿಸುವಿಕೆ ಮತ್ತು ಪರಿವರ್ತನೆ ಚಟುವಟಿಕೆಗಳನ್ನು ಮೂರು ಪ್ರಮುಖ ತಾಣಗಳಲ್ಲಿ ಕೇಂದ್ರೀಕರಿಸಿದ್ದರಿಂದ ಕಾರ್ಯಕ್ರಮವು “ಅತ್ಯಂತ ತೀವ್ರ ಹಾನಿ” ಅನುಭವಿಸಿರುತ್ತದೆ ಎಂದು ಅವರು ಹೇಳಿದರು.
ಅಮೆರಿಕವು ‘ಬಂಕರ್ ಬಸ್ಟರ್’ ಬಾಂಬ್‌ಗಳಿಂದ ದಾಳಿ ನಡೆಸಿದೆ ಎಂದು ವರದಿಯಾಗಿರುವ ಫೋರ್ಡೋ ನೆಲದಡಿಯ ತಾಣದಲ್ಲಿನ ಸೆಂಟ್ರಿಫ್ಯೂಜ್‌ಗಳು ಇನ್ನು ಮುಂದೆ ಕಾರ್ಯನಿರ್ವಹಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಗ್ರೋಸ್ಸಿ ತಿಳಿಯಪಡಿಸಿದರು.
ದಾಳಿಗಳಿಂದಾಗಿ ಇರಾನ್‌ನ ಅಣು ಕಾರ್ಯಕ್ರಮಕ್ಕೆ ಎಷ್ಟು ದೊಡ್ಡ ನಷ್ಟವಾಗಿದೆ ಎಂಬ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಇರುವುದರಿಂದ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ತಮ್ಮ ಸೇನೆಯ ‘ಬಂಕರ್ ಬಸ್ಟರ್’ ಬಾಂಬ್ ದಾಳಿಯಿಂದ ಇರಾನ್‌ನ ಮೂರು ಪ್ರಮುಖ ತಾಣಗಳು ಸಂಪೂರ್ಣವಾಗಿ ಮತ್ತು ಒಟ್ಟಾಗಿ ನಾಶವಾಗಿವೆ ಎಂದು ಹೇಳಿಕೊಂಡಿದ್ದರು. ಆದರೆ, ಇರಾನ್ ಈ ದಾಳಿಯಿಂದ ನಮ್ಮ ಪರಮಾಣು ಕಾರ್ಯಕ್ರಮವು ಕೇವಲ ಕೆಲವೇ ತಿಂಗಳುಗಳ ಹಿನ್ನಡೆ ಅನುಭವಿಸಿದೆ ಎಂಬ ಗುಪ್ತಚರ ವರದಿಗಳನ್ನು ನಿರಾಕರಿಸಿದೆ.
ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್‌ಸೆತ್ ಗುರುವಾರ, ತಮ್ಮ ದೇಶವು ಬಾಂಬ್ ದಾಳಿ ನಡೆಸುವ ಮೊದಲು ಇರಾನ್ ಯಾವುದೇ ಹೆಚ್ಚು ಸಮೃದ್ಧಗೊಳಿಸಿದ ಯುರೇನಿಯಂ ಅನ್ನು ಗುರಿಯಾಗಿಸಿದ ಸ್ಥಾವರಗಳಿಂದ ಸ್ಥಳಾಂತರಿಸಿದೆ ಎಂಬ ಬಗ್ಗೆ ತಮಗೆ ತಿಳಿದಿಲ್ಲ ಎಂದು ಹೇಳಿದರು.


