ಮುರ್ಷಿದಾಬಾದ್: ಏಪ್ರಿಲ್ 11 ಮತ್ತು 12 ರಂದು ಮುರ್ಷಿದಾಬಾದ್‌ನ ಸಮ್‌ಶೇರ್‌ಗಂಜ್‌ನಲ್ಲಿ ನಡೆದ ಕೋಮು ಹಿಂಸಾಚಾರದ ನಂತರ ಭಾರೀ ಪೊಲೀಸ್ ನಿರ್ಲಕ್ಷ್ಯ, ಕೋಮು ತಾರತಮ್ಯ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗಳು ನಡೆದಿವೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (APCR) ಮತ್ತು ಬಂದಿ ಮುಕ್ತಿ ಸಮಿತಿ ಜಂಟಿಯಾಗಿ ನಡೆಸಿದ ಸತ್ಯಶೋಧನಾ ಸಮಿತಿಯು ಆರೋಪಿಸಿದೆ.
ವಕ್ಫ್ ಚಳುವಳಿಯ ಸುತ್ತಲಿನ ವಿವಾದದಿಂದ ಈ ಹಿಂಸಾಚಾರ ಹುಟ್ಟಿಕೊಂಡಿತು ಎನ್ನಲಾಗಿದೆ. ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, ಗಲಭೆ ಸಂದರ್ಭದಲ್ಲಿ ಅಂಗಡಿ ಮುಗ್ಗಟ್ಟುಗಳಿಗೆ, ವಾಹನಗಳಿಗೆ ವ್ಯಾಪಕವಾಗಿ ಬೆಂಕಿ ಹಚ್ಚುವಿಕೆ, ಲೂಟಿ, ಮತ್ತು ಹಲವರಿಗೆ ಗಾಯಗಳಾಗಿವೆ ಎಂದು ಈ ಸತ್ಯಶೋಧನಾ ಸಮಿತಿಯು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಈ ಸಂದರ್ಭದಲ್ಲಿ ಪೊಲೀಸರು ಸಮಯಕ್ಕೆ ಸರಿಯಾಗಿ ಮಧ್ಯಪ್ರವೇಶಿಸಿದ್ದರೆ ಹಿಂಸಾಚಾರದ ವಿಸ್ತರಣೆಯನ್ನು ತಡೆಯಬಹುದಿತ್ತು ಎಂದು ಕಂಡುಬಂದಿದೆ. ಎಲ್ಲಾ ಸಮುದಾಯಗಳ ಸಂತ್ರಸ್ತರು, ಪೊಲೀಸರ ಆರಂಭಿಕ ಕ್ರಮವು ಹಿಂಸಾಚಾರವನ್ನು ತಡೆಯಬಹುದಿತ್ತು ಎಂದು ಒಕ್ಕೊರಲಿನಿಂದ ಹೇಳಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹರ್ಗೋಬಿಂದ್ ದಾಸ್ ಮತ್ತು ಚಂದನ್ ದಾಸ್ ಎಂಬ ಇಬ್ಬರು ಸಂತ್ರಸ್ತರು ಮೂರು ಗಂಟೆಗಳಿಗೂ ಹೆಚ್ಚು ಕಾಲ ವೈದ್ಯಕೀಯ ನೆರವು ಸಿಗದೆ ಜಾಫರಾಬಾದ್‌ನಲ್ಲಿ ಮೃತಪಟ್ಟಿದ್ದಾರೆ ಎಂಬ ಆರೋಪವೂ ಇದೆ ಎಂದು ಸಮಿತಿ ಹೇಳಿದೆ.
ಗಡಿ ಭದ್ರತಾ ಪಡೆ (BSF) ಸಿಬ್ಬಂದಿಯ ಭಾಗವಹಿಸುವಿಕೆಯ ಬಗ್ಗೆಯೂ ಸಮಿತಿಯು ಗಂಭೀರ ಕಳವಳ ವ್ಯಕ್ತಪಡಿಸಿದೆ. ಇಜಾಜ್ ಅಹ್ಮದ್ ಎಂಬುವವರು ಈ ಗಲಭೆಯಲ್ಲಿ ಕೊಲ್ಲಲ್ಪಟ್ಟರು ಮತ್ತು ಕನಿಷ್ಠ 13 ಮುಸ್ಲಿಂ ನಿವಾಸಿಗಳು ಗುಂಡೇಟುಗಳಿಂದ ಗಾಯಗೊಂಡಿದ್ದಾರೆ ಎಂದು ಅದು ಹೇಳಿದೆ. ಕೆಲವು ಬಿಎಸ್‌ಎಫ್ ಪಡೆಗಳು ಚಪ್ಪಲಿಗಳನ್ನು ಧರಿಸಿದ್ದವು. ಇದು ಅಸಾಮಾನ್ಯ ದೃಶ್ಯವಾಗಿತ್ತು ಮತ್ತು ಈ ರೀತಿ ಚಪ್ಪಲಿ ಧರಿಸಿದವರು ಬಲಪಂಥೀಯ ಉಗ್ರಗಾಮಿ ಸದಸ್ಯರಾಗಿದ್ದು ಅವರು ಬಿಎಸ್‌ಎಫ್ ಸಿಬ್ಬಂದಿಯಂತೆ ನಟಿಸಿರಬಹುದು ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.
ಮುಸ್ಲಿಂ ನಾಗರಿಕರನ್ನು ಮತ್ತು ಅಪ್ರಾಪ್ತ ವಯಸ್ಕರರನ್ನು ಸರಿಯಾದ ಕಾನೂನು ಪ್ರಕ್ರಿಯೆ ಇಲ್ಲದೆ ಅಕ್ರಮವಾಗಿ ಪೊಲೀಸರು ಬಂಧಿಸಿದ್ದಾರೆ ಎಂದು ಸತ್ಯಶೋಧನಾ ಸಮಿತಿ ಆರೋಪಿಸಿದೆ. ರಾತ್ರಿ ವೇಳೆ ದಾಳಿಗಳನ್ನು ನಡೆಸಲಾಗಿದ್ದು ಆರೆಸ್ಟ್ ವಾರೆಂಟ್ ಗಳನ್ನು ನೀಡಲಾಗಿಲ್ಲ ಮತ್ತು ಬಂಧಿತರನ್ನು 24 ಗಂಟೆಗಳ ಕಾನೂನು ಮಿತಿಗಿಂತ ಹೆಚ್ಚು ಕಾಲ ಪೊಲೀಸ್ ವಶದಲ್ಲಿ ಇರಿಸಿ, ಹಿಂಸಾಚಾರಕ್ಕೆ ಒಳಪಡಿಸಲಾಗಿದೆ ಎಂದೂ ಆರೋಪಿಸಲಾಗಿದೆ.
ಸುಮಾರು 300 ದೂರುಗಳ (FIRs) ಪರಿಶೀಲನೆ ಮಾಡಿದಾಗ ಪ್ರತಿ ದೂರಿನಲ್ಲಿ “ಕಾಪಿ-ಪೇಸ್ಟ್” ಮಾಡಲಾಗಿದೆ. ಕೇವಲ ಹೆಸರುಗಳನ್ನು ಮಾತ್ರ ಬದಲಾಯಿಸಲಾಗಿದೆ ಎಂದು ಸಮಿತಿ ಹೇಳಿದೆ. ಇದು ಸುಳ್ಳು ಮತ್ತು ಇಸ್ಲಾಮೋಫೋಬಿಕ್ ದೂರುಗಳ ಸೂಚನೆಯಾಗಿದೆ ಎಂದು ಅದು ಹೇಳಿದೆ. ಎಫ್‌ಐಆರ್‌ನಲ್ಲಿನ ನಿರೂಪಣೆಗಳು ದಲಿತರು ಮತ್ತು ಮುಸ್ಲಿಮರ ನಡುವೆ ಭಿನ್ನಾಭಿಪ್ರಾಯ ಮೂಡಿಸುವ ಉದ್ದೇಶವನ್ನು ಸೂಚಿಸಿವೆ. ಇದು ಹಿಂದೂ ರಾಷ್ಟ್ರೀಯವಾದಿ ಸಂಘಟನೆಗಳ ತಂತ್ರ ಎಂದು ಸಮಿತಿಯು ಆರೋಪಿಸಿದೆ.
ಸತ್ಯಶೋಧನಾ ವರದಿಯು ಈ ಕೆಳಗಿನಂತೆ ಶಿಫಾರಸ್ಸು ಮಾಡಿದೆ
1.ನಿಷ್ಪಕ್ಷಪಾತ ನ್ಯಾಯಾಂಗ ತನಿಖೆ
2.ಬಿಎಸ್‌ಎಫ್ ಗುಂಡಿನ ದಾಳಿಗೆ ಬಲಿಯಾದವರಿಗೆ ಪರಿಹಾರ
3.ಸುಳ್ಳು ಆರೋಪಗಳ ಅಡಿಯಲ್ಲಿ ಬಂಧಿತರಾದವರ ಬಿಡುಗಡೆ
4.ಅನಿಯಂತ್ರಿತ ಪೊಲೀಸ್ ದಾಳಿಗಳನ್ನು ಕೊನೆಗೊಳಿಸುವುದು. ಜಿಲ್ಲಾಡಳಿತವು ಪ್ರಜಾಪ್ರಭುತ್ವ ಸಭೆಗಳ ಮೇಲಿನ ನಿಷೇಧವನ್ನು ತೆಗೆದುಹಾಕಬೇಕು ಮತ್ತು ವಕೀಲರನ್ನು ನೇಮಿಸಿಕೊಳ್ಳಲು ಸಾಧ್ಯವಾಗದ ವಿಚಾರಣಾಧೀನ ಕೈದಿಗಳಿಗೆ ಕಾನೂನು ನೆರವು ಖಚಿತಪಡಿಸಬೇಕು ಎಂದು ಅದು ಒತ್ತಾಯಿಸಿದೆ.
ಇರಾನ್ ಅಣು ಸ್ಥಾವರಗಳ ವಿಕಿರಣ ಮಟ್ಟಗಳ ಮೇಲೆ ಭಾರತದ ಸೂಕ್ಷ್ಮ ನಿಗಾ: ಇರಾನ್‌ನಿಂದ ಭಾರತಕ್ಕೆ ಕೃತಜ್ಞತೆ


