ಬೆಂಗಳೂರು: ದೇವನಹಳ್ಳಿ ರೈತರ ಭೂ ಸತ್ಯಾಗ್ರಹ ಹೋರಾಟ ಸ್ವಾತಂತ್ರ್ಯ ಉದ್ಯಾನವನದಲ್ಲಿ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಈ ಮಹತ್ವದ ಹೋರಾಟಕ್ಕೆ ನಾಡಿನ ಪ್ರಮುಖ ಚಿಂತಕರು, ಹೋರಾಟಗಾರರು ಮತ್ತು ವಿವಿಧ ಸಂಘಟನೆಗಳ ನಾಯಕರು ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಭೂ ಸತ್ಯಾಗ್ರಹದ ಕಾಂ. ಬಯ್ಯಾರೆಡ್ಡಿ ವೇದಿಕೆಯಲ್ಲಿ ಮಾತನಾಡಿದ ಸಿಪಿಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಕೆ.ಪ್ರಕಾಶ್, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಈ ಹೋರಾಟ ಮಹಾಭಾರತದ ಕುರುಕ್ಷೇತ್ರ ಯುದ್ಧದಂತಿದೆ. ಹಾಗಾದರೆ, ಸರ್ಕಾರ ಯಾರ ಪರ ನಿಲ್ಲಬೇಕು? ಪಾಂಡವರ ಪರವೋ, ಕೌರವರ ಪರವೋ? ದುರದೃಷ್ಟವಶಾತ್, ಸರ್ಕಾರ ಪಾಂಡವರ ಪರವಾಗಿ ಕಾಣಿಸುತ್ತಿಲ್ಲ, ಅದು ಕೌರವರ ವೇಷ ತೊಟ್ಟುಕೊಂಡು ಆಟವಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಫ್ಯಾಕ್ಟರಿ ಉಳಿಯಬೇಕು ಎನ್ನುತ್ತಿದ್ದಾರೆ” ಎಂದು ನೇರವಾಗಿ ಕುಟುಕಿದರು.
ದೇವನಹಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಫಾಕ್ಸ್‌ಕಾನ್ (Foxconn) ಕಂಪೆನಿ ಮೊಬೈಲ್ ಫೋನ್ ತಯಾರಿಕಾ ಘಟಕವನ್ನು ಸ್ಥಾಪಿಸುತ್ತಿದೆ. ಇಂತಹ ಕೈಗಾರಿಕೆಗಳಿಗೆ 6,000 ಕೋಟಿ ರೂ. ಸಬ್ಸಿಡಿ ನೀಡುವ ಸರ್ಕಾರದ ಘೋಷಣೆಯನ್ನು ಪ್ರಕಾಶ್ ಬಲವಾಗಿ ವಿರೋಧಿಸಿದರು. “ಸಾಮಾನ್ಯ ಜನರಿಗೆ ಒಂದು ಹೊತ್ತಿನ ಊಟಕ್ಕೂ ಸಂಕಷ್ಟವಿದೆ. ರೈತರು ತಮ್ಮ ಭೂಮಿಯನ್ನು ಉಳಿಸಿಕೊಡಿ ಎಂದು ಆಗ್ರಹಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ವಿದೇಶಿ ಕಂಪನಿಗಳಿಗೆ ಸಾವಿರಾರು ಕೋಟಿ ಸಬ್ಸಿಡಿ ನೀಡುವುದು ಯಾವ ರೀತಿಯ ಕೈಗಾರಿಕಾ ನೀತಿ? ರಾಜ್ಯದ ಜನರ ತೆರಿಗೆ ಹಣವನ್ನು ಬಂಡವಾಳಗಾರರಿಗೆ ಉಚಿತವಾಗಿ ನೀಡಲು ಫ್ಯಾಕ್ಟರಿಗಳು ಬೇಕೆ?” ಎಂದು ಕಿಡಿಕಾರಿದರು. “ಸಿದ್ದರಾಮಯ್ಯನವರೇ, ನೀವು ಮಾಡುತ್ತಿರುವ ಕೆಲಸವನ್ನು ರಾಜ್ಯದ ಜನತೆ ಕಣ್ಣುಮುಚ್ಚಿಕೊಂಡು ನೋಡುತ್ತಿಲ್ಲ. ಇಂತಹ ಫ್ಯಾಕ್ಟರಿಗಳು ನಮಗೆ ಬೇಕಾಗಿಲ್ಲ” ಎಂದು ಎಚ್ಚರಿಕೆ ನೀಡಿದರು.
ಕೋಲಾರದ ನರಸಾಪುರ ಬಳಿ ಇರುವ ವಿಸ್ಟ್ರಾನ್ ಕಂಪನಿಯು ಈಗ ಟಾಟಾ ಎಲೆಕ್ಟ್ರಾನಿಕ್ಸ್ ಒಡೆತನದಲ್ಲಿದೆ. ಈ ಘಟಕವನ್ನು ಉದಾಹರಿಸಿದ ಪ್ರಕಾಶ್, “ಅಲ್ಲಿ 30 ಸಾವಿರಕ್ಕೂ ಹೆಚ್ಚು ರೈತಾಪಿ ವರ್ಗದ ಯುವಕ-ಯುವತಿಯರು ಕೆಲಸ ಮಾಡುತ್ತಿದ್ದಾರೆ. ಆದರೆ, ಅದರಲ್ಲಿ ಕೇವಲ ಒಂದು ಸಾವಿರ ಮಂದಿಗೆ ಮಾತ್ರ ಖಾಯಂ ಉದ್ಯೋಗವಿದೆ. ಕೋಲಾರ, ಮಾಲೂರು, ಹೊಸಕೋಟೆ ಸುತ್ತಮುತ್ತಲಿನ ಮಕ್ಕಳಿಗೆ ಅರೆಕಾಲಿಕ, ಅಶ್ಲೀಲ ಕೆಲಸ, ಪುಕ್ಕಟೆ ಸಂಬಳಕ್ಕೆ ದುಡಿಸಿಕೊಳ್ಳುವ ನೀತಿಯನ್ನು ಸಿದ್ದರಾಮಯ್ಯ ಮತ್ತು ಎಂ.ಬಿ. ಪಾಟೀಲ್ ನೇತೃತ್ವದ ಸರ್ಕಾರ ಜಾರಿಗೆ ತಂದಿದೆ. ಸರ್ಕಾರವೇ 6-7 ಸಾವಿರ ಕೋಟಿ ರೂ. ಸಬ್ಸಿಡಿ ಕೊಟ್ಟು ಇಂತಹ ಕಂಪನಿಗಳಿಗೆ ಮತ್ತಷ್ಟು ಲೂಟಿ ಮಾಡಲು ಉತ್ತೇಜನ ನೀಡುತ್ತಿದೆ. ಇದನ್ನೇ ನಾವು ನಿಮ್ಮಿಂದ, ಕಾಂಗ್ರೆಸ್ ಸರ್ಕಾರದಿಂದ ನಿರೀಕ್ಷಿಸಿದ್ದು? ನೀವು ಯಾರ ಪರವಾಗಿ ಇದ್ದೀರಿ?” ಎಂದು ತೀವ್ರವಾಗಿ ಪ್ರಶ್ನಿಸಿದರು.
ಈ ಭೂ ಸತ್ಯಾಗ್ರಹ ವೇದಿಕೆಗೆ ಹಿರಿಯ ವಕೀಲರಾದ ಪ್ರೊ. ರವಿವರ್ಮಕುಮಾರ್, ಚಿಂತಕರಾದ ಡಾ.ಜಿ. ರಾಮಕೃಷ್ಣ, ಪ್ರೊ.ಮರುಳಸಿದ್ಧಪ್ಪ, ಜಾನಪದ ಅಕಾಡೆಮಿಯ ಅಧ್ಯಕ್ಷರೂ ಆಗಿದ್ದ ಹಿರಿಯ ಕಲಾವಿದ ಪಿಚ್ಚಳ್ಳಿ ಶ್ರೀನಿವಾಸ್, ಹಿರಿಯ ಚಿಂತಕ ಸುಬ್ಬು ಹೊಲೆಯಾರ್ ಮುಂತಾದ ಅನೇಕರು ಭೇಟಿ ನೀಡಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ರಾಜಕಾರಣಿಗಳಾದ ಮಹಿಮಾ ಪಟೇಲ್ ಮತ್ತು ಬಿ.ಆರ್. ಪಾಟೀಲ್ ಅವರೂ ಸಹ ರಾಜಕಾರಣಿಗಳಾಗಿರದೆ, ಹೋರಾಟಗಾರರಾಗಿ ರೈತರಿಗೆ ಬೆಂಬಲ ನೀಡಲು ಬಂದಿರುವುದಾಗಿ ಹೇಳಿದ್ದಾರೆ. ವಿವಿಧ ಚಳುವಳಿಗಳ ಮುಖಂಡರಾದ ಸಿದ್ಧನಗೌಡ ಪಾಟೀಲ್, ಮಾವಳ್ಳಿ ಶಂಕರ್, ಸಾತಿ ಸುಂದರೇಶ್, ಮೀನಾಕ್ಷಿ ಸುಂದರಂ, ಬಡಗಲಪುರ ನಾಗೇಂದ್ರ, ವರಲಕ್ಷ್ಮಿ, ಚುಕ್ಕಿ ನಂಜುಂಡಸ್ವಾಮಿ, ಕ್ಲಿಫ್ಟನ್ ರೊಜಾರಿಯೋ, ನಿರ್ಮಲ, ಕೆಜೆಎಸ್ ಮರಿಯಪ್ಪ ಮೊದಲಾದವರು ಹೋರಾಟದಲ್ಲಿ ಭಾಗವಹಿಸಿದ್ದರು.
ಜುಲೈ 4ಕ್ಕೆ ‘ನಾಡ ಉಳಿಸಿ ಸಮಾವೇಶ’: ದೇವನಹಳ್ಳಿ ಭೂಸ್ವಾಧೀನ ಕೈಬಿಡುವಂತೆ ರೈತರಿಂದ ಆಗ್ರಹ


