ಹಿರಿಯ ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ಅವರ ಅಮಾನತು ಆದೇಶವನ್ನು ರದ್ದುಗೊಳಿಸಿ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ಮಂಗಳವಾರ (ಜು.1) ಬೆಳಿಗ್ಗೆ ಆದೇಶಿಸಿದೆ.
ಜೂನ್ 4ರಂದು ಆರ್‌ಸಿಬಿ ವಿಜಯೋತ್ಸವದ ವೇಳೆ 11 ಜನರು ಸಾವನ್ನಪ್ಪಿದ ಕಾಲ್ತುಳಿತ ದುರಂತಕ್ಕೆ ಹೊಣೆಮಾಡಿ ಸರ್ಕಾರ ಅಮಾನತು ಮಾಡಿದ ಪೊಲೀಸ್ ಅಧಿಕಾರಿಗಳಲ್ಲಿ ವಿಕಾಸ್ ಕುಮಾರ್ ಕೂಡ ಒಬ್ಬರು.
ಬೆಂಗಳೂರು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದ ಭದ್ರತಾ ಉಸ್ತುವಾರಿ ವಹಿಸಿದ್ದ ವಿಕಾಸ್ ಕುಮಾರ್ ಅವರನ್ನು ಬೇಜವ್ದಾರಿಯ ಕಾರಣ ನೀಡಿ ಸರ್ಕಾರ ಅಮಾನತು ಮಾಡಿತ್ತು.
ಇದನ್ನು ಪ್ರಶ್ನಿಸಿ ಅವರು ಸಿಎಟಿ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಕೆ ಶ್ರೀವಾತ್ಸವ ಮತ್ತು ಸಂತೋಷ್ ಮೆಹ್ರಾ ಅವರಿದ್ದ ಪೀಠ ಸರ್ಕಾರದ ಆದೇಶ ರದ್ದುಗೊಳಿಸಿ ಆದೇಶಿಸಿದೆ. ಅಲ್ಲದೆ, ಅವರನ್ನು ಮೂಲಸ್ಥಾನಕ್ಕೆ ಮರು ನೇಮಿಸಲು ಮತ್ತು ಹಿಂದಿನ ಎಲ್ಲಾ ಭತ್ಯೆ, ಸೌಲಭ್ಯ ಒದಗಿಸಲು ಸೂಚಿಸಿದೆ.
ವಿಕಾಸ್ ಕುಮಾರ್ ಪರ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ವಾದಿಸಿದ್ದರು. ಸಿಎಟಿ ಆದೇಶವನ್ನು ಸರ್ಕಾರ ಹೈಕೋರ್ಟ್‌ನಲ್ಲಿ ಪ್ರಶ್ನಿಸುವ ಸಾಧ್ಯತೆಯಿದೆ.
ವಿಕಾಸ್ ಕುಮಾರ್ ಜೊತೆಗೆ ಕಾಲ್ತುಳಿತ ದುರಂತಕ್ಕೆ ಹೊಣೆಯಾಗಿಸಿ ಬೆಂಗಳೂರು ನಗರ ಪೊಲೀಸ್ ಹೆಚ್ಚುವರಿ ಮಹಾನಿರ್ದೇಶಕ ಮತ್ತು ಆಯುಕ್ತ ಡಾ. ಬಿ. ದಯಾನಂದ, ಬೆಂಗಳೂರು ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತ ಶೇಖರ್ ಎಚ್ ತೆಕ್ಕಣ್ಣನವರ್, ಕಬ್ಬನ್ ಪಾರ್ಕ್ ಸಹಾಯಕ ಪೊಲೀಸ್ ಆಯುಕ್ತ ಸಿ ಬಾಲಕೃಷ್ಣ, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎ.ಕೆ ಗಿರೀಶ್ ಅವರನ್ನು ಸರ್ಕಾರ ಅಮಾನತು ಮಾಡಿದೆ.
ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಹೆಚ್ಚಳ: ವರದಿ ಪಡೆಯುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ


