Homeಕರ್ನಾಟಕದೇವನಹಳ್ಳಿ ಭೂಸ್ವಾಧೀನ ಮಾಡಿದರೆ ಸರಕಾರಕ್ಕೆ ಎಚ್ಚರಿಕೆ: ಸಂಯುಕ್ತ ಹೋರಾಟದ ನಾಯಕರೊಂದಿಗೆ ವಿಶೇಷ ಸಂದರ್ಶನ

ದೇವನಹಳ್ಳಿ ಭೂಸ್ವಾಧೀನ ಮಾಡಿದರೆ ಸರಕಾರಕ್ಕೆ ಎಚ್ಚರಿಕೆ: ಸಂಯುಕ್ತ ಹೋರಾಟದ ನಾಯಕರೊಂದಿಗೆ ವಿಶೇಷ ಸಂದರ್ಶನ

- Advertisement -
- Advertisement -

ಜೂನ್ 25ರಂದು ದೇವನಹಳ್ಳಿ ಪಟ್ಟಣದಲ್ಲಿ ನಡೆದ ‘ದೇವನಹಳ್ಳಿ ಚಲೋ’ ಪ್ರತಿಭಟನೆಯ ನಂತರ, ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟವು ಹೊಸ ಮಜಲನ್ನು ಪಡೆದುಕೊಂಡಿದೆ. ಸಂಯುಕ್ತ ಹೋರಾಟದ ಬೆಂಬಲ ಪಡೆದ ಬಳಿಕ, ಚನ್ನರಾಯಪಟ್ಟಣ ಹೋಬಳಿ ಮತ್ತು ದೇವನಹಳ್ಳಿ ತಾಲ್ಲೂಕಿಗೆ ಸೀಮಿತವಾಗಿದ್ದ ಈ ಹೋರಾಟ ಇಂದು ರಾಜ್ಯಮಟ್ಟಕ್ಕೆ ವ್ಯಾಪಿಸಿದೆ. 13 ಹಳ್ಳಿಗಳ ರೈತರಿಗೆ ರಾಜ್ಯದಾದ್ಯಂತ ಎಲ್ಲಾ ಜನಪರ ಸಂಘಟನೆಗಳು ಬೆಂಬಲಕ್ಕೆ ನಿಂತಿವೆ. ಜೂನ್ 25ರ ಹೋರಾಟ ಮತ್ತು ಮುಖ್ಯಮಂತ್ರಿಗಳ ಭರವಸೆ ಬಳಿಕ, ಪ್ರತಿಭಟನೆ ಬೆಂಗಳೂರಿನ ಫ್ರೀಡಂ ಪಾರ್ಕ್‌ಗೆ ಸ್ಥಳಾಂತರಗೊಂಡಿದೆ. ಇದರ ಬಗ್ಗೆ ಮಾತನಾಡಲು ಸಂಯುಕ್ತ ಹೋರಾಟದ ಮುಖಂಡರು ಮತ್ತು ಜನಶಕ್ತಿಯ ರಾಜ್ಯಾಧ್ಯಕ್ಷರಾದ ನೂರ್ ಶ್ರೀಧರ್ ಅವರು ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಯು. ಬಸವರಾಜ್ ಅವರು ನಮ್ಮ ಜೊತೆಗಿದ್ದಾರೆ. ಅವರನ್ನು ಸಂದರ್ಶನಕ್ಕೆ ಸ್ವಾಗತಿಸುತ್ತೇನೆ. ಸರ್ ನಮಸ್ಕಾರ.

ನಾನುಗೌರಿ: ಚನ್ನರಾಯಪಟ್ಟಣ ಹೋಬಳಿಯ ರೈತರ, ಅಂದರೆ ದೇವನಹಳ್ಳಿ ರೈತ ಚಳವಳಿಯ ಹಿನ್ನೆಲೆಯನ್ನು ಈಗ ಪರಿಚಯ ಮಾಡಿಕೊಡಬೇಕಾಗಿಲ್ಲ. ಇವತ್ತು ಇಡೀ ರಾಜ್ಯದ ಜನಗಳಿಗೆ ಇದು ಪರಿಚಯವಾಗಿದೆ. ಜೂನ್ 25ನಂತರ ಇದು ರಾಜ್ಯವ್ಯಾಪಿ ಪ್ರತಿಭಟನೆಯಾಗಿ ಪರಿವರ್ತನೆಯಾಗಿದೆ. ಈಗ ನಾನು ನಿಮ್ಮನ್ನು ನೇರವಾಗಿ ಪ್ರಶ್ನೆ ಕೇಳುತ್ತೇನೆ. ದೇವನಹಳ್ಳಿ ಚಲೋನ ಪರಿಣಾಮ ಏನು?

ನೂರ್ ಶ್ರೀಧರ್: ದೇವನಹಳ್ಳಿ ಚಲೋ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಅವರು ಬಹಳ ಒತ್ತಡದಲ್ಲಿದ್ದಾರೆ, ಅದು ಗ್ಯಾರಂಟಿ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಒತ್ತಡದಲ್ಲಿದ್ದಾರೆ. ಯಾಕೆಂದರೆ ದೇವನಹಳ್ಳಿ ಸರ್ಕಾರಕ್ಕೆ ಸತ್ವ ಪರೀಕ್ಷೆಯಾಗಿದೆ. ಜುಲೈ 4ಕ್ಕೆ ದಿನಾಂಕವನ್ನು ನೀಡಿದ್ದಾರೆ. ಈ ದಿನಾಂಕವನ್ನು ಕೊಡಲೇಬೇಕಾದ ಸಂದರ್ಭವನ್ನು ದೇವನಹಳ್ಳಿ ಚಲೋ ಸೃಷ್ಟಿ ಮಾಡಿದೆ. ದೇವನಹಳ್ಳಿ ಚಲೋ ನಡೆಯದಿದ್ದರೆ, ಅಷ್ಟು ಗಟ್ಟಿಯಾಗಿ ಹೋರಾಟ ನಡೆಯದಿದ್ದರೆ, ಪೊಲೀಸ್ ದೌರ್ಜನ್ಯ ನಡೆದರೂ ಕೂಡ ಅದು ಚದುರದೆ ಆಳುವವರನ್ನು ಬಗ್ಗಿಸುವ ಸಂಕಲ್ಪವಾಗಿ ನಡೆಯುತ್ತಿರಲಿಲ್ಲ.

ಈ ಹೋರಾಟದ ನಿಜವಾದ ಶಕ್ತಿ ಹೊರಗಿನವರಿಗೆ ಗೊತ್ತಿಲ್ಲ. ಲಾಠಿ ಚಾರ್ಜ್ ಆದರೂ ಹೋರಾಟ ನಡೆಯಿತು ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ. ಆದರೆ, ಹೋರಾಟದ ದಿನ ಒಬ್ಬ ಹೋರಾಟಗಾರನೂ ಅಲ್ಲಿಂದ ಹೊರಡಲು ಸಿದ್ಧವಿರಲಿಲ್ಲ. ಅಂದು ನಮ್ಮನ್ನು ಬಂಧಿಸಿ ಯಲಹಂಕದ ಯಾವುದೋ ಪೊಲೀಸ್ ತರಬೇತಿ ಮೈದಾನದಲ್ಲಿ ಇರಿಸಿದ್ದರು. ಆಗ ನಮ್ಮನ್ನು ಕೇಳಲು ಬಂದಾಗ, ಯಾರು ನಮ್ಮ ಮೇಲೆ ಲಾಠಿ ಚಾರ್ಜ್ ಮಾಡಿದ್ದರೋ ಆ ಡಿಸಿಪಿಯನ್ನು ನಾವು ಸಂಪೂರ್ಣವಾಗಿ ಬಹಿಷ್ಕರಿಸಿದೆವು, “ಅವರು ಇಲ್ಲಿಗೆ ಬರುವ ಹಾಗಿಲ್ಲ, ಔಟ್” ಎಂದು ಹೇಳಿದೆವು. “ಒಬ್ಬ ಪೊಲೀಸ್ ಅಧಿಕಾರಿಗೆ ಇರಬೇಕಾದ ಕನಿಷ್ಠ ಘನತೆ, ಕನಿಷ್ಠ ಸೂಕ್ಷ್ಮತೆ ನಿಮಗಿಲ್ಲ. ನಿಮ್ಮೊಂದಿಗೆ ಮಾತನಾಡುವಂತದ್ದು ಏನೂ ಇಲ್ಲ” ಎಂದು ಸ್ಪಷ್ಟಪಡಿಸಿದೆವು. ನಂತರ ಐಜಿ ಅವರು ಬಂದರು. ಅವರು ಬಂದಾಗಲೂ “ಸರ್, ಏನು ಮಾಡಬೇಕು?” ಎಂದು ಕೇಳಿದರು. ನಾವು “ಮಾಡಲಿಕ್ಕೇನಿದೆ ನೀವು ಹೇಳಿ, ನೀವಲ್ಲವೇ ಬಂಧಿಸಿ ಕರೆದುಕೊಂಡು ಬಂದಿರುವುದು?” ಎಂದು ಪ್ರಶ್ನಿಸಿದೆವು. “ಇಲ್ಲ ಸರ್, ಇದಕ್ಕೆ ಏನಾದರೂ ಮಾಡಬೇಕು” ಎಂದಾಗ, ನಾವು “ಎರಡೇ ಆಯ್ಕೆಗಳಿವೆ” ಎಂದೆವು. “ಒಂದು, ನಮ್ಮನ್ನು ವಾಪಸ್ ದೇವನಹಳ್ಳಿಯಲ್ಲಿ ನಾವು ಹೋರಾಟ ಮಾಡುತ್ತಿದ್ದ ಸ್ಥಳಕ್ಕೆ ಕರೆದುಕೊಂಡು ಹೋಗಿ ಬಿಡಿ. ಇಲ್ಲ ನಮ್ಮನ್ನು ಜೈಲಿಗೆ ಕಳುಹಿಸಿ.”

ಜೈಲಿಗೆ ಕಳುಹಿಸಿದರೆ ನಾವು ಜಾಮೀನು ತೆಗೆದುಕೊಳ್ಳುವುದಿಲ್ಲ ಎಂದು ಮೊದಲೇ ತೀರ್ಮಾನ ಮಾಡಿದ್ದೆವು. ಇದನ್ನು ನಾವು ಮೊದಲೇ ಘೋಷಿಸಿದ್ದೆವು. ಸಂಯುಕ್ತ ಹೋರಾಟ ಕರ್ನಾಟಕದ ಎಲ್ಲಾ ಹಿರಿಯರು ಒಂದು ವಾರಕ್ಕೆ ಬೇಕಾದಷ್ಟು ಸಾಮಾನುಗಳನ್ನು, ಔಷಧಗಳನ್ನು ಸಮೇತ ಇಟ್ಟುಕೊಂಡು ಬಂದಿದ್ದರು. ತೀರ್ಮಾನವಾಗಿತ್ತು, ಸಂಯುಕ್ತ ಹೋರಾಟ ಕರ್ನಾಟಕದಲ್ಲಿ ಇಂತಹದ್ದೇನಾದರೂ ಆದರೆ ಬಂಧನಕ್ಕೊಳಗಾಗೋಣ, ಆದರೆ ಯಾರು ಜಾಮೀನು ತೆಗೆದುಕೊಳ್ಳುವುದು ಬೇಡ. ಇದೊಂದು ರೀತಿಯಲ್ಲಿ ಸರ್ಕಾರಕ್ಕೆ ಸವಾಲಾಗಿತ್ತು: ಎಲ್ಲಾ ಹೋರಾಟಗಾರರನ್ನು ಜೈಲಿನಲ್ಲಿಟ್ಟು ಅದು ಹೇಗೆ ಅವರು ಭೂಸ್ವಾಧೀನ ಮಾಡುತ್ತಾರೆ ನೋಡೋಣ. ಅವರಿಗೂ ಇದು ಗೊತ್ತಿತ್ತು. ಹಾಗಾಗಿಯೇ ನಮ್ಮನ್ನು ಬಂಧಿಸಿ ಜೈಲಿನಲ್ಲಿ ಇಡುವುದಕ್ಕೂ ಸಿದ್ಧವಿರಲಿಲ್ಲ, ದೇವನಹಳ್ಳಿಗೆ ವಾಪಸ್ ಕರೆದುಕೊಂಡು ಹೋಗಲಿಕ್ಕೂ ಸಿದ್ಧವಿರಲಿಲ್ಲ. ನಾವು ಎರಡೇ ಪಟ್ಟು ಹಿಡಿದಿದ್ದೆವು: ಎರಡರಲ್ಲಿ ಯಾವುದಾದರೂ ಒಂದನ್ನು ಮಾಡಿ. ನಾವು ಯಾವುದೇ ಬೇಡಿಕೆ ಇಡುತ್ತಿಲ್ಲ. “ನಿಮ್ಮ ಕೈಯ್ಯಲ್ಲಿ ಇದ್ದೇವಲ್ಲ, ಕರೆದುಕೊಂಡು ಹೋಗಿ ಜೈಲಿನಲ್ಲಿ ಇರಿಸಿ. ಆದರೆ ನೀವು ಹೀಗೆ ಹೊರಗೆ ಹೋಗಿ ಎಂದರೆ ನಾವು ಹೋಗುವುದಿಲ್ಲ. ನಮ್ಮನ್ನು ನೀವು ಬಂಧಿಸಿದ್ದೀರಿ, ನಾವು ಇಲ್ಲಿಯೇ ಇರುವವರು.”

ಇದು ಎಷ್ಟು ಇಕ್ಕಟ್ಟನ್ನು ಸೃಷ್ಟಿ ಮಾಡಿತು ಎಂದರೆ, ಅಷ್ಟೊತ್ತಿನಲ್ಲಿ, ರಾತ್ರಿ ಹೊತ್ತಿನಲ್ಲಿ, ಮುಖ್ಯಮಂತ್ರಿಗಳ ಕಡೆಯಿಂದ ಫೋನ್ ಮಾಡಿಸಿದರು. ಆಗ ಪೊಲೀಸರಿಗೆ ಬೇರೆ ಗತಿ ಇಲ್ಲದಾಯಿತು. ಮುಖ್ಯಮಂತ್ರಿಯವರು ಕೇಳಿಕೊಂಡರು: “ಇದನ್ನು ಬಗೆಹರಿಸೋಣ, ಸಕಾರಾತ್ಮಕವಾಗಿ ಬಗೆಹರಿಸೋಣ, ರೈತರ ಪರವಾಗಿ ಮಾಡೋಣ, ದಯವಿಟ್ಟು ರೀಕಾಲ್ ಮಾಡಿ” ಎಂದರು. ನಾವು “ಹೇಗೆ ರೀಕಾಲ್ ಮಾಡಬೇಕು? ಏನಾದರೂ ಒಂದು ಬೇಕಲ್ಲ? ಮುಖ್ಯಮಂತ್ರಿಗಳು ನಮಗೆ ವೈಯಕ್ತಿಕವಾಗಿ ಫೋನ್ ಮಾಡಬಹುದು. ಆದರೆ ಇದು ನಮ್ಮ ವೈಯಕ್ತಿಕ ವಿಷಯವಲ್ಲ. ನಮ್ಮ ಸಂಘಟನೆಗೂ ಮುಖ್ಯಮಂತ್ರಿಗಳಿಗೂ ಅಥವಾ ವ್ಯಕ್ತಿಗತವಾದ ನಮ್ಮಗಳ ವಿಷಯವಲ್ಲ. ಇದು ರಾಜ್ಯದ ವಿಷಯವಾಗಿ ಪರಿವರ್ತನೆಯಾಗಿದೆ. ಸರ್ಕಾರ ರಾಜ್ಯಕ್ಕೆ ಉತ್ತರಿಸಬೇಕಲ್ಲವೇ? ನೀವು ರಾಜ್ಯಕ್ಕೆ ನಿಮ್ಮ ನಿಲುವೇನು ಎಂದು ಹೇಳಿ” ಎಂದು ಕೇಳಿದೆವು. ಆಗ ಅವರು “ಪ್ರಕ್ರಿಯೆ ಮಾಡಲು ನಮಗೆ ಸ್ವಲ್ಪ ಸಮಯ ಬೇಕು” ಎಂದಾಗ, ನಾವು “ನಂತರ ನಾವು ಹೇಳುತ್ತೇವೆ” ಎಂದೆವು. ಬಳಿಕ ನಮ್ಮ ಸಮಿತಿಯವರು ಚರ್ಚೆ ಮಾಡಿಕೊಂಡೆವು. ಆಗ ನಮಗೆ ಮುಖ್ಯಮಂತ್ರಿಗಳು ಇಷ್ಟು ಕೇಳಿರುವುದರಿಂದ ಅವರನ್ನು ಸಂಪೂರ್ಣವಾಗಿ ಕಡೆಗಣಿಸಬಾರದು, ಅವರ ಮಾತಿಗೆ ಒಂದು ಗೌರವ ಕೊಡಬೇಕು ಎಂದು ಅನ್ನಿಸಿತು. ಆದರೆ ಅದೇ ಸಂದರ್ಭದಲ್ಲಿ, ಎಲ್ಲ ಆಗಿಬಿಡುತ್ತದೆ ಎಂದು ನಂಬಿಕೊಂಡು ಗಂಟುಮೂಟೆ ಕಟ್ಟಿಕೊಂಡು ಹೋಗಬಾರದು. ಹಾಗಾಗಿ, ಮುಖ್ಯಮಂತ್ರಿಗೆ ಗೌರವವನ್ನು ಕೊಡಬೇಕು, ಆದರೆ ಹೋರಾಟವನ್ನು ಮುಂದುವರಿಸುತ್ತಾ ಒತ್ತಡವನ್ನು ನಿರ್ಮಿಸಿಕೊಳ್ಳಬೇಕು ಎಂಬ ತೀರ್ಮಾನಕ್ಕೆ ಬಂದೆವು. ಆ ಕಾರಣಕ್ಕೋಸ್ಕರವೇ ನಾವು ಹೋರಾಟವನ್ನು ಕೈಬಿಡಲಿಲ್ಲ, ಬದಲಾಗಿ ಸ್ಥಳಾಂತರಿಸಿದೆವು. ಅಂದರೆ, ಇದು ಪೊಲೀಸರು ಚಲ್ಲಾಪಿಲ್ಲಿ ಮಾಡಿದ್ದಲ್ಲ. ಪೊಲೀಸರನ್ನು ಇಕ್ಕಟ್ಟಿಗೆ ಸಿಕ್ಕಿಸಿ, ಸಭೆ ನಡೆಯಲೇಬೇಕಾದ ದಿನಾಂಕವನ್ನು ನಿಗದಿಪಡಿಸಿದೆವು. ಆದರೆ ಈ ದಿನಾಂಕ, ಇಡೀ ದೇವನಹಳ್ಳಿಯ ಜನ, ಎಲ್ಲಾ ಸಂಘಟನೆಗಳು, ಇಡೀ ಕರ್ನಾಟಕದ ಜನ ಏನಾಗುತ್ತದೆ ಎಂದು ಕಾಯುತ್ತಿದ್ದಾರೆ. ಆದರೆ ಅಲ್ಲಿಗೆ ಏನು ಉತ್ತರ ಹೇಳಬೇಕು ಎಂದು ತಿಳಿಯದ ಸ್ಥಿತಿಯಲ್ಲಿ ಸರ್ಕಾರ ಇದೆ. ಅಂತಹ ಒಂದು ಒತ್ತಡವನ್ನುಂಟು ಮಾಡುವುದರಲ್ಲಿ ದೇವನಹಳ್ಳಿ ಚಲೋ ಖಂಡಿತ ಯಶಸ್ವಿಗೊಂಡಿದೆ.

ನಾನುಗೌರಿ: ಒಟ್ಟಾರೆ 13 ಹಳ್ಳಿಗಳ ಒಗ್ಗಟ್ಟನ್ನು ಮುರಿಯಬೇಕು ಎಂದು ಸಚಿವರು, ಅಂದರೆ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವರು ಮತ್ತು ಕೈಗಾರಿಕಾ ಸಚಿವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದನ್ನು ನೀವು ಗಮನಿಸಿದ್ದೀರಿ. ಈಗ ಹಳ್ಳಿ ಜನರ ಮನಸ್ಥಿತಿ ಮತ್ತು ಸಂಯುಕ್ತ ಹೋರಾಟದ ಸಂಘಟನೆಗಳ ಮನಸ್ಥಿತಿ ಏನಿದೆ?

ನೂರ್ ಶ್ರೀಧರ್: ಆ ಹಳ್ಳಿಯ ಜನರ ಮನಸ್ಥಿತಿಯನ್ನು ಈ ರಾಜ್ಯದ, ಈ ದೇಶದ ರಾಜಕಾರಣಿಗಳು ಅರ್ಥಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನನಗೂ ಅರ್ಥವಾಗಿರಲಿಲ್ಲ. ನಾನು ದೇವನಹಳ್ಳಿಯ ರೈತರ ಮನಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದು ಇತ್ತೀಚೆಗೆ. ಆ ಹೋರಾಟ ಪ್ರಾರಂಭದಿಂದಲೂ ನಾನು ಜೊತೆಗಿದ್ದೆ, ಸುಮಾರು ಬಾರಿ ಹೋಗಿಬಂದಿದ್ದೇನೆ, ನಿರಂತರ ಫೋನ್ ಸಂಪರ್ಕದಲ್ಲಿದ್ದೇನೆ. ಆದರೂ ನನಗೂ ಅರ್ಥವಾಗಿರಲಿಲ್ಲ. ಅರ್ಥವಾಗಿದ್ದು ಇತ್ತೀಚೆಗೆ, ಅಲ್ಲಿಗೆ ಹೋಗಿ ನೋಡಿದಾಗ.

ಹೊರಗಿನವರಿಗೆ ಏನನಿಸುತ್ತದೆ ಹೇಳಿ? ಯಾವುದಾದರೂ ಒಂದು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಹೋದಾಗ ಅದನ್ನು ಬೇಡ ಎಂದು ಯಾರಾದರೂ ವಿರೋಧಿಸಿದರೆ, ಸಾಮಾನ್ಯವಾಗಿ ನಮಗೆಲ್ಲಾ ಏನನಿಸುತ್ತದೆ? ಅವರಿಗೆ ಬೆಲೆ ಕಡಿಮೆ ಸಿಗುತ್ತದೆ, ಸರ್ಕಾರ ಸ್ವಾಧೀನಪಡಿಸಿಕೊಂಡರೆ ಹೆಚ್ಚು ಪರಿಹಾರ ನೀಡುವುದಿಲ್ಲ. ಕಡಿಮೆ ಬೆಲೆ ಸಿಗುತ್ತದೆ. ಹಾಗಾಗಿ ರೈತರು ಅದಕ್ಕೆ ಒಪ್ಪದೆ ಹೀಗೆಲ್ಲಾ ಮಾಡುತ್ತಾರೆ, ಹೊರಗಿನ ಮಾರುಕಟ್ಟೆಯಲ್ಲಿ ಮಾಡಿಕೊಂಡರೆ ಅವರಿಗೆ ಹೆಚ್ಚಿನ ಮೌಲ್ಯ ಸಿಗುತ್ತದೆ ಎಂದು. ನಿಜವಾಗಿಯೂ ಎಂ.ಬಿ. ಪಾಟೀಲ್‌ರೂ ಹಾಗೆಯೇ ಅರ್ಥಮಾಡಿಕೊಂಡಿದ್ದಾರೆ. ಅದಕ್ಕೆ ಅವರು ಆಫರ್ ಮಾಡುತ್ತಿರುವುದು: “ನೀವು ಒಂದು ಎಕರೆ ಕೊಟ್ಟರೆ 10 ಸ್ಕ್ವೇರ್ ಫೀಟ್ ಡೆವಲಪ್ಡ್ ಏರಿಯಾ ಕೊಡುತ್ತೇವೆ. ಅಲ್ಲಿ ನೀವು ಕಮರ್ಷಿಯಲ್ ಆಕ್ಟಿವಿಟಿ ಮಾಡಿಕೊಳ್ಳಬಹುದು” ಎಂದು. ವಾಸ್ತವದಲ್ಲಿ ಅದು ಅಲ್ಲವೇ ಅಲ್ಲ. ದೇವನಹಳ್ಳಿಯಲ್ಲಿ ನಡೆಯುತ್ತಿರುವ ಈ ಹೋರಾಟವು ಹೆಚ್ಚಿನ ಹಣದ ಚೌಕಾಸಿಗಾಗಿ ನಡೆಯುತ್ತಿರುವ ಹೋರಾಟವಲ್ಲ. ಹೆಚ್ಚು ದರಕ್ಕೆ ಭೂಮಿ ಮಾರಿಕೊಳ್ಳುವುದಕ್ಕಾಗಿಯೂ ಅಲ್ಲ. ವಾಸ್ತವದಲ್ಲಿ, ಭೂಮಿಯನ್ನು, ಕೃಷಿಯನ್ನು, ಗ್ರಾಮೀಣ ಬದುಕನ್ನು, ಹಳ್ಳಿಯ ಸಂಬಂಧಗಳನ್ನು ಕಾಪಾಡಿಕೊಳ್ಳುವುದಕ್ಕೋಸ್ಕರ ನಡೆಯುತ್ತಿರುವ ಸಂಘರ್ಷ.

ಯಾಕೆಂದರೆ, ಅವರ ಕಣ್ಣಮುಂದೆಯೇ ತಮ್ಮ ಸುತ್ತಮುತ್ತ ಹಳ್ಳಿಗಳು ಭೂಸ್ವಾಧೀನದಿಂದ ನಾಶವಾಗಿರುವುದನ್ನು ನೋಡಿದ್ದಾರೆ. ಛಿದ್ರಗೊಳ್ಳುವುದನ್ನು ನೋಡಿದ್ದಾರೆ. ಇದಕ್ಕೂ ಮೊದಲು ಅಲ್ಲಿ 6 ಸಾವಿರ ಎಕರೆ ಭೂಮಿಯನ್ನು ಈಗಾಗಲೇ ಸರ್ಕಾರ ವಶಪಡಿಸಿಕೊಂಡಿದೆ. ಇವರ ಸುತ್ತಮುತ್ತ ಇರುವ, ಈ ಹಳ್ಳಿಯ ಸಂಬಂಧಿಕರೇ ಇರುವಂತಹ ಹಳ್ಳಿಗಳು, ಕ್ಯಾರಂ ಬೋರ್ಡಿಗೆ ಹೊಡೆದರೆ ಕಾಯಿಗಳು ಹೇಗೆ ಹಾರುತ್ತವಲ್ಲ, ಹಾಗೆ ಚೆಲ್ಲಾಪಿಲ್ಲಿಯಾಗಿವೆ. ನಾವು ಚನ್ನರಾಯಪಟ್ಟಣಕ್ಕೆ, ಅಂದರೆ ಈ ಹೋರಾಟಕ್ಕಿಂತ ಮೊದಲು ಜೂನ್ 24ರಂದು, ದೇವನಹಳ್ಳಿ ಚಲೋ ಹಿಂದಿನ ದಿನ ಹೋದಾಗ, ಇದೇ ಪಕ್ಕದ ಹಳ್ಳಿಗಳಲ್ಲಿ ವಿಮಾನ ನಿಲ್ದಾಣಕ್ಕೆ ವಶಪಡಿಸಿಕೊಂಡ ಜಾಗದಿಂದ ಚೆಲ್ಲಾಪಿಲ್ಲಿಯಾಗಿರುವ ಸಂತ್ರಸ್ತ ಕುಟುಂಬಗಳು ನಮ್ಮನ್ನು ಹುಡುಕಿಕೊಂಡು ಬಂದಿದ್ದರು. “ನಾವು ನಿಮ್ಮನ್ನು ಹುಡುಕಿಕೊಂಡು ಬಂದಿದ್ದೇವೆ” ಎಂದು. ಅವರು ಕಣ್ಣೀರು ಹಾಕಿಕೊಂಡು ತಮ್ಮ ಕಥೆಗಳನ್ನೆಲ್ಲಾ ಹೇಳಿದರು. ನಾವು ಹೋದವರಿಗೆ ಅಂತಹ ಕಥೆಗಳನ್ನು ಸಹಿಸಿಕೊಳ್ಳಲು ಕಷ್ಟವಾಗಬೇಕಾದರೆ, ಇವರು ಅಂತಹ ಸಾವಿರಾರು ಕಥೆಗಳನ್ನು ಕೇಳಿದ್ದಾರೆ. ಆ ಕಥೆಗಳನ್ನು ನೋಡಿ, “ಈ ನರಕದ ಬದುಕು ನಮಗೆ ಬೇಡ” ಎಂದು ತೀರ್ಮಾನ ಮಾಡಿದ್ದಾರೆ. ಕಷ್ಟವೋ, ನಷ್ಟವೋ, ಕೃಷಿಯಲ್ಲಿ ಬಹಳ ಸಂತಸದಿಂದ ಇದ್ದೇವೆಂದಲ್ಲ. ಆದರೆ, ಕಷ್ಟವೋ, ನಷ್ಟವೋ, ಇಡೀ ಹಳ್ಳಿಯಾಗಿ ನಾವು ಒಟ್ಟಿಗೆ ನಮ್ಮ ನೆಲದಲ್ಲಿ, ನಮ್ಮ ಕಾಲ ಮೇಲೆ, ನಮ್ಮ ಸ್ವಂತದ ಬದುಕನ್ನು ನಡೆಸುತ್ತೇವೆ. “ಈ ಅನಾಥ ಬದುಕು ನಮಗೆ ಬೇಡ” ಎಂದು ತೀರ್ಮಾನ ಮಾಡಿದ್ದಾರೆ. ಹಾಗಾಗಿಯೇ, ಇದೊಂದು ರೀತಿಯಲ್ಲಿ ತಮ್ಮ ಪಾರಂಪರಿಕ ಬದುಕನ್ನು ಉಳಿಸಿಕೊಳ್ಳುವುದಕ್ಕೋಸ್ಕರ ಅವರು ನಡೆಸುತ್ತಿರುವ ಸಂಘರ್ಷ. ಈ ಬಂಡವಾಳಶಾಹಿ ಅಭಿವೃದ್ಧಿಯ ಮಾದರಿಯನ್ನು ತಿರಸ್ಕರಿಸುತ್ತಿರುವ ಸಂಘರ್ಷ. ಇದು ರಾಜಕಾರಣಿಗಳಿಗೆ ಅಷ್ಟು ಸುಲಭವಾಗಿ ಅರ್ಥವಾಗುವುದಿಲ್ಲ.

ಎರಡನೇ ವಿಚಾರವನ್ನು ಕೂಡ, ವಿಭಜಿಸಲು ಪ್ರಯತ್ನಿಸುತ್ತಿರುವುದು, ಅಂದರೆ “10 ಹಳ್ಳಿ, 3 ಹಳ್ಳಿ” ಎಂಬುದು ರೈತರಲ್ಲಿ ಒಡಕುಂಟು ಮಾಡುವ ಸಂಚು. 13 ಹಳ್ಳಿಗಳಲ್ಲಿ 3 ಹಳ್ಳಿಗಳ ಭೂಮಿಯನ್ನು ರದ್ದುಗೊಳಿಸಿರುವುದು ಎಂದರೆ, ಯಾವ ಹಳ್ಳಿಯ ಜನ ಈ ಹೋರಾಟಕ್ಕೆ ನಾಯಕತ್ವ ಕೊಡುತ್ತಿದ್ದರೋ ಆ ಹಳ್ಳಿಯ ಜನರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ಸರ್ಕಾರ ರದ್ದುಮಾಡಿ ರೈತರ ನಡುವೆ ಒಡಕನ್ನು ತರಲು ಹೊರಟಿದೆ. ಈ ಮೂರು ಹಳ್ಳಿಗಳಲ್ಲಿ ಚನ್ನರಾಯಪಟ್ಟಣವೂ ಸೇರಿದೆ. ಈ ಮೂರು ಹಳ್ಳಿಗಳನ್ನು ರದ್ದುಪಡಿಸಿರುವುದಕ್ಕೆ ಯಾವುದೇ ಲಾಜಿಕ್ ಅಥವಾ ಮಾನದಂಡವಿಲ್ಲ. ಇದನ್ನು ಎಂ.ಬಿ. ಪಾಟೀಲ್‌ರು ಹೇಳಲಿ. “ಈ ಮೂರು ಹಳ್ಳಿಗಳನ್ನು ಈ ಕಾರಣಕ್ಕೆ ರದ್ದುಪಡಿಸುತ್ತಿದ್ದೇವೆ” ಎಂದು ಹೇಳಲಿ. “ನೀನು ಗಲಾಟೆ ಮಾಡುತ್ತಿದ್ದೀಯಾ? ನಿನಗೆ ಸ್ವಲ್ಪ ಕೊಟ್ಟು ಬಿಡುತ್ತೇನೆ, ನೀನು ಬಾಯಿ ಮುಚ್ಚಿಕೋ, ಉಳಿದಿದ್ದನ್ನು ನಾವು ನೋಡಿಕೊಂಡು ಹೋಗುತ್ತೇವೆ” ಎಂದು. ಇದು ಇವರ ತಂತ್ರ. ಈಗ ಏನಾಗುತ್ತದೆ? ಒಂದು ವೇಳೆ ಆ ಮೂರು ಹಳ್ಳಿಯವರು ಒಪ್ಪಿಕೊಂಡು ಹೊರಟುಬಿಟ್ಟರೆ, ಉಳಿದ ಹಳ್ಳಿಯವರೆಲ್ಲಾ ಅವರ ಮೇಲೆ ತಿರುಗಿಬೀಳುತ್ತಾರೆ: “ನನ್ನ ಮಕ್ಕಳಾ, ನೀವೆಲ್ಲಾ ನಮ್ಮನ್ನು ಕರೆದುಕೊಂಡು ಬಂದುಬಿಟ್ಟು, ನಮ್ಮನ್ನು ಸೇರಿಸಿ ಹುರಿದುಂಬಿಸಿ, ಎಲ್ಲರೂ ಸೇರಿ ಹೋರಾಟ ಮಾಡಿಸಿ, ಈಗ ನಿಮ್ಮದು ಮಾಡಿಕೊಂಡು ನೀವು ಹೊರಟುಹೋದ್ರಿ” ಅಂತ. ಆ ಮೂರು ಹಳ್ಳಿಗಳಿಗೂ ಮತ್ತು ಹತ್ತು ಹಳ್ಳಿಗಳಿಗೂ ಜಗಳ ಹಚ್ಚಿದರೆ, ಅವರ ಐಕ್ಯತೆ ಮುರಿದುಬೀಳುತ್ತದೆ. ಆಗ ಸರ್ಕಾರ ಹೇಗೆ ಬೇಕಾದರೂ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಹುದಲ್ಲವೇ? ಬ್ರಿಟಿಷರು ಕಲಿಸಿದ ಅದೇ ನೀಚ ಕಾರ್ಯತಂತ್ರವನ್ನು ಇಟ್ಟುಕೊಂಡೇ ಇದನ್ನು ಮಾಡಿದ್ದಾರೆ.

ಆದರೆ, ಈ ರಾಜಕಾರಣಿಗಳು ದೇವನಹಳ್ಳಿಯ ಜನರ ಹೋರಾಟವನ್ನು ಅರ್ಥಮಾಡಿಕೊಳ್ಳಲಿಲ್ಲ. ಆ 13 ಹಳ್ಳಿಗಳು ಮೂರುವರೆ ವರ್ಷಗಳಿಂದ ಸತತವಾಗಿ ಹೋರಾಟ ಮಾಡುತ್ತಾ ಮಾಡುತ್ತಾ ಅವರು ಬಿಡಿಬಿಡಿ ಹಳ್ಳಿಗಳಾಗಿಲ್ಲ. ಅದೆಲ್ಲಾ ಸೇರಿ ಒಂದು ದೊಡ್ಡ ಕುಟುಂಬವಾಗಿಬಿಟ್ಟಿದೆ. ಅವರು ಒಂದೇ ಕುಟುಂಬದ ಮಕ್ಕಳಾದ ಹಾಗೆ ಆಗಿಬಿಟ್ಟಿದ್ದಾರೆ. ಅಷ್ಟು ಚೆನ್ನಾಗಿದ್ದಾರೆ. ಆ ಊರು ವಿಚಿತ್ರ. ಗೌಡ ಸಮುದಾಯದ ಪ್ರಾಬಲ್ಯವಿದೆ, ಅಂದರೆ ಗೌಡ ಸಮುದಾಯ ಹೆಚ್ಚಿನ ಜನಸಂಖ್ಯೆಯಲ್ಲಿದೆ. ಆದರೆ ಎಲ್ಲಾ ಜಾತಿಯವರೂ ಇದ್ದಾರೆ. ಎಲ್ಲಾ ಜಾತಿಯವರೂ ಸಮಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂಘಟನೆಯ ನಾಯಕತ್ವದಲ್ಲಿ ಕೂಡ, ಅಂದರೆ ದಲಿತ ನಾಯಕತ್ವದಲ್ಲಿ ಕೂಡ ಗೌಡ ಸಮುದಾಯದವರು ಕೆಲಸ ಮಾಡುತ್ತಿದ್ದಾರೆ. ನಮಗೆ ಹೊರಗೆ ಈ ರೀತಿಯ ಉದಾಹರಣೆಗಳು ಸಿಗುವುದಿಲ್ಲ. ನಮಗೆ ಆಶ್ಚರ್ಯ ಅನಿಸುತ್ತದೆ. ಅದೊಂದು ಮಾದರಿ ಹೋರಾಟ. ಅಂತಹ ಒಂದು ಐಕ್ಯತೆ ಇರುವುದರಿಂದ ಸರಕಾರ ಕೆರಳಿಬಿಟ್ಟಿದೆ. ಈಗಲೂ ಕೂಡ ಏನು ಹೋರಾಟ ನಡೆಯುತ್ತಿದೆಯಲ್ಲ, ಇವರು ಯಾವ ಮೂರು ಹಳ್ಳಿಗಳನ್ನು ಬಿಟ್ಟಿದ್ದಾರೆ ಎಂದು ಹೇಳುತ್ತಿದ್ದಾರಲ್ಲ, ಆ ಮೂರು ಹಳ್ಳಿಯವರೇ ಅನೇಕ ಜನ ಇದರ ನಾಯಕತ್ವದಲ್ಲಿದ್ದಾರೆ. ಅದು ಅದರ ಶಕ್ತಿ. ಈ ಐಕ್ಯತೆಯನ್ನು ಇವರು ಮುರಿಯುವುದಕ್ಕೆ ಆಗುವುದಿಲ್ಲ. ಹಣ ಕೊಟ್ಟು ಅವರನ್ನು ವಿಭಜಿಸಲು ಆಗುವುದಿಲ್ಲ. ಅದು ಬಹಳ ಉನ್ನತ ಮಟ್ಟದಲ್ಲಿರುವಂತಹ ಒಂದು ಸಾತ್ವಿಕ ಮಟ್ಟವನ್ನು ತಲುಪಿದ್ದಾರೆ. ನಿಜವಾಗಿಯೂ ನನ್ನ ಹೃದಯದಿಂದ ನನಗೆ ಅನಿಸುವುದೇನೆಂದರೆ, ಆ ದೇವನಹಳ್ಳಿಯವರು ಭೂ ತಪಸ್ವಿಗಳು. ಅವರು ತಪಸ್ಸು ಮಾಡಿದ್ದಾರೆ. ತಪಸ್ಸು ಒಂದು ದೊಡ್ಡ ಶಕ್ತಿಯನ್ನು ಕೊಡುತ್ತದೆ. ಆ ತಪಸ್ಸಿನಿಂದ ಅಂತಹ ಶಕ್ತಿಯನ್ನು ಅವರು ಪಡೆದುಕೊಂಡಿದ್ದಾರೆ. ಅಂತಹ ಶಕ್ತಿಯನ್ನು ಸರ್ಕಾರ ಮುರಿಯುವುದಕ್ಕೆ ಆಗುವುದಿಲ್ಲ. ಅಂತಹ ಶಕ್ತಿಯೇ ಈ ಸರ್ಕಾರವನ್ನು ಮಣಿಸುತ್ತದೆ. ಸಂಯುಕ್ತ ಹೋರಾಟ ಇದೆಯಲ್ಲ, ಇದು ಅವರಿಗೆ ಬೆಂಬಲ. ಈ ಹೋರಾಟದ ಮೂಲ ಶಕ್ತಿ ಇರುವುದು ಅಲ್ಲಿ. ಆ ಶಕ್ತಿಯನ್ನು ಅರ್ಥಮಾಡಿಕೊಳ್ಳುವಷ್ಟು ಚೈತನ್ಯವನ್ನು ಈ ರಾಜಕಾರಣಿಗಳಿಂದ ನಾವು ನಿರೀಕ್ಷೆ ಮಾಡಲು ಸಾಧ್ಯವಿಲ್ಲ.

ನಾನುಗೌರಿ: ಯು. ಬಸವರಾಜ್ ಸರ್, ಪ್ರಾಂತ ರೈತ ಸಂಘವೂ ಕೂಡ ಹೋರಾಟದಲ್ಲಿ ಆರಂಭದಿಂದಲೂ ಇದೆ. ಜೂನ್ 25ನಂತರ ನೀವು ನೋಡುತ್ತಿದ್ದೀರಿ, ಜನರಲ್ಲಿ ಒಂದಷ್ಟು ಸಕಾರಾತ್ಮಕ ಅಂಶಗಳು ಬರುತ್ತಿವೆ. ದೇವನಹಳ್ಳಿ ಜನರಿಗೆ ನಿಜವಾಗಲೂ ಭೂಮಿ ಉಳಿಯುತ್ತದೆಯೇ?

ಯು. ಬಸವರಾಜ್: ಈಗ ನಾವು ದೇವನಹಳ್ಳಿಯ ಭೂಮಿ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಈ ರೀತಿಯ ಬಲವಂತದ ಭೂಸ್ವಾಧೀನ ನಡೆಯುವುದಕ್ಕೆ ನಾವು ಬಿಡುವುದಿಲ್ಲ ಎಂದು ಹೋರಾಟವನ್ನು ಆರಂಭ ಮಾಡಿದ್ದೇವೆ. ಇದರ ಪ್ರಾಥಮಿಕ ವಿಚಾರ ದೇವನಹಳ್ಳಿ ಭೂಮಿಯನ್ನು ನಾವು ವಾಪಸ್ ಪಡೆದುಕೊಳ್ಳಬೇಕು ಅನ್ನುವಂತದ್ದು. ಈಗಾಗಲೇ ನಾವು ಒಂದಷ್ಟು ಗೆಲುವನ್ನು ಸಾಧಿಸಿದ್ದೇವೆ. ಸರ್ಕಾರ ಒಂದು ಹೆಜ್ಜೆ ಹಿಂದಕ್ಕೆ ಸರಿದಿದೆ. ಆಗಲೇ ನೂರ್ ಹೇಳಿದರಲ್ಲ, 500 ಎಕರೆ ಭೂಮಿಯನ್ನು ಸರ್ಕಾರ ಬಿಟ್ಟುಕೊಡಲು ಒಪ್ಪಿದೆ ಎಂದು. ಅದು ನಮ್ಮ ರೈತರ ಶಕ್ತಿಯನ್ನು ತೋರಿಸುತ್ತಿದೆ. ಆದರೆ ಸರ್ಕಾರದ ತಲೆಯಲ್ಲಿ ಬೇರೆ ಇರಬಹುದು – ಈ ಚಳುವಳಿಯನ್ನು ಒಡಕು ಮಾಡಬೇಕು ಎನ್ನುವಂತಹ ವಿಚಾರ ಇರಬಹುದು. ಆದರೆ ಅದು ಇನ್ನೊಂದು ಮುಖ ಏನು ತೋರಿಸುತ್ತಿದೆ ಎಂದರೆ, ಸರ್ಕಾರ ತನ್ನ ಸೋಲನ್ನು ಒಪ್ಪಿಕೊಳ್ಳುತ್ತಿದೆ ಅನ್ನುವಂತಹದ್ದಾಗಿದೆ. ಹಾಗಾಗಿ ನಾವು ಇದನ್ನು ಇನ್ನಷ್ಟು ತೀವ್ರಗೊಳಿಸಿ, ಸಂಪೂರ್ಣವಾಗಿ ದೇವನಹಳ್ಳಿಯ ಭೂಮಿಯನ್ನು ವಾಪಸ್ ತೆಗೆದುಕೊಳ್ಳಬೇಕು ಎಂಬುದು ನಮ್ಮ ಉದ್ದೇಶ.

ಇದಕ್ಕೆ ಕಾರಣವೇನೆಂದರೆ, ಬ್ರಿಟಿಷರು ಹಿಂದೆ 1990ರ ದಶಕದಲ್ಲಿ ಒಂದು ಬಲವಂತದ ಭೂಸ್ವಾಧೀನ ಕಾಯ್ದೆಯನ್ನು ಮಾಡಿದ್ದರು. ಯಾಕೆಂದರೆ ಅವರೇ ಸರ್ಕಾರ, ಅವರದೇ ರಾಜ್ಯಭಾರ ಇತ್ತು. ಆದ್ದರಿಂದ ಅವರು ಯಾವ ಜಮೀನು ಬೇಕಾದರೂ, ಯಾವ ಕ್ಷಣದಲ್ಲಿ ಬೇಕಾದರೂ, ಹೇಗೆ ಬೇಕಾದರೂ ಸ್ವಾಧೀನ ಮಾಡಬೇಕು ಎಂದು ಒಂದು ಕಾನೂನು ಮಾಡಿಕೊಂಡಿದ್ದರು. ಅದರ ಆಧಾರದಲ್ಲಿ ಸ್ವತಂತ್ರ ಬಂದಮೇಲೂ ಕೂಡ ಆ ಕಾನೂನು ಹಾಗೆಯೇ ಉಳಿಸಿಕೊಂಡಿದ್ದರು. ಅದು ‘ಪ್ರಿನ್ಸಿಪಲ್ ಆಕ್ಟ್’ ಎಂದು ಕರೆಯುತ್ತೇವೆ. ಅದರ ಆಧಾರದಲ್ಲಿ ರಾಜ್ಯದಲ್ಲಿ ಕೆಐಡಿಬಿ ಆಕ್ಟ್ 1961 ಅನ್ನು ಮಾಡಿದ್ದಾರೆ. ಅದು ಬ್ರಿಟಿಷರು ಮಾಡಿದ ಕಾಯ್ದೆಯ ಪಡಿಯಚ್ಚು. ಈಗ 2013ರಲ್ಲಿ ಕೇಂದ್ರ ಹೊಸ ಭೂಸ್ವಾಧೀನ ಕಾಯ್ದೆಯನ್ನು ಮಾಡಿದೆ. ಅದು ಈಗ ಪ್ರಿನ್ಸಿಪಲ್ ಆಕ್ಟ್. ಆದರೆ, ಅದರ ಆಧಾರದಲ್ಲಿ ಕರ್ನಾಟಕ ಸರ್ಕಾರ ಅದನ್ನು ತಿದ್ದುಪಡಿ ಮಾಡಲಿಲ್ಲ. ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ರಾಜ್ಯದ ಇತರ ಭೂಸಂತ್ರಸ್ತರು ಆ ವಿಷಯದಲ್ಲಿ ನಾವು ಹೋರಾಟವನ್ನು ಮಾಡಿದ್ದೇವೆ. 2010ರಿಂದ ಹೋರಾಟ ನಡೆಸುತ್ತಿದ್ದೇವೆ: “ಇದು ಬೇಡ. ಕೆಐಡಿಬಿ ಆಕ್ಟ್‌ನಿಂದ ನೀವು ಭೂಸ್ವಾಧೀನ ಮಾಡುವುದರಿಂದ ಕೈಗಾರಿಕೆ ಸ್ಥಾಪನೆ ಮಾಡಲಿಕ್ಕೂ ಆಗುವುದಿಲ್ಲ, ಕೈಗಾರಿಕೆಯಿಂದ ಜನರಿಗೆ ಉದ್ಯೋಗ ಕೊಡಲಿಕ್ಕೂ ಆಗುವುದಿಲ್ಲ. ಇದು ಕೇವಲ ರಿಯಲ್ ಎಸ್ಟೇಟ್ ದಂಧೆ ಮಾಡಲು ಪ್ರಯೋಜನವಾಗುತ್ತದೆ. ರೈತರಿಗೆ ಯಾವುದೇ ನ್ಯಾಯವನ್ನು ಇದು ಕೊಡುವುದಿಲ್ಲ” ಎಂದು ಅಂದಿನಿಂದ ನಾವು ಹೋರಾಟ ಮಾಡುತ್ತಾ ಇದ್ದೇವೆ. ನಾವು ಕೇಂದ್ರ ಸರ್ಕಾರವನ್ನು ಒತ್ತಾಯ ಮಾಡುತ್ತಾ ಇದ್ದೇವೆ. ರಾಜ್ಯ ಸರ್ಕಾರ ತಿದ್ದುಪಡಿ ಮಾಡಲಿಲ್ಲ. ಅದು ಹಾಗೆಯೇ ಉಳಿಸಿಕೊಂಡು ಬಂದಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಎರಡು ಮುಖಗಳಿವೆ. ಅಖಿಲ ಭಾರತ ಮಟ್ಟದ ನಾಯಕರು ಏನು ಹೇಳುತ್ತಾರೆಂದರೆ, “ನಾವು ರೈತರಿಗೆ ನ್ಯಾಯ ಕೊಡಿಸುವಂತಹ ಭೂಸ್ವಾಧೀನ ಕಾಯ್ದೆ 2013 ಅನ್ನು ತಂದಿದ್ದೀವಿ” ಅಂತ. “ರೈತರಿಗೆ ಒಳ್ಳೆಯ ಬೆಲೆಯನ್ನು ಕೊಡುತ್ತೇವೆ, ಅವರಿಗೆ ಉದ್ಯೋಗವನ್ನು ಕೊಡುತ್ತೇವೆ, ಅದಕ್ಕೆ ಬೇಕಾಗಿದ್ದನ್ನೆಲ್ಲಾ ನಾವು ಮಾಡಿದ್ದೇವೆ” ಅಂತ ಅವರು ಹೇಳುತ್ತಾರೆ. ಆದರೆ ಅವರದೇ ಸರ್ಕಾರ ಸಿದ್ದರಾಮಯ್ಯನವರ ಸರ್ಕಾರ ಹಿಂದೆ ಇದ್ದಾಗಲೂ ಅವರು ಆ ಕಾಯ್ದೆಯನ್ನು ‘ಟಚ್’ ಮಾಡುತ್ತಿಲ್ಲ. ಅವರು ಅದರ ಆಧಾರದಲ್ಲಿ ಹೋದರೆ, ಶೇಕಡಾ 80ರಷ್ಟು ಜನ ಅದನ್ನು ಒಪ್ಪಿಲ್ಲ ಎಂದರೆ ವಾಪಸ್ ಕೊಡಬೇಕು ಅಂತ ಇರುವುದು. ಆದರೆ ಆ ಕಾಯ್ದೆಯಡಿಯಲ್ಲಿ ನಾವು ಮಾಡಿಲ್ಲ, ನಾವು ಮಾಡುತ್ತಿರುವುದು ಕೆಎಐಡಿಬಿ ಕಾಯ್ದೆಯಡಿಯಲ್ಲಿ ಮಾಡಿದ್ದೇವೆ. ಒಂದು ಸಾರಿ ಸ್ವಾಧೀನ ಮಾಡಿದರೆ ಮುಗಿಯಿತು ಅನ್ನುವಂತಹ ವಾದವನ್ನು ಅವರು ಇಡುತ್ತಿದ್ದಾರೆ. ಅಂದರೆ, ಇದು ಬಲವಂತದ ಭೂಸ್ವಾಧೀನ. ಆದ್ದರಿಂದ, ಈ ಬಲವಂತದ ಭೂಸ್ವಾಧೀನವನ್ನು ಇಡೀ ರಾಜ್ಯದಲ್ಲಿ ಎಲ್ಲೂ ಮಾಡಬಾರದು ಅನ್ನುವಂತಹ ಒಂದು ಪ್ರಕ್ರಿಯೆಯನ್ನು, ಹೋರಾಟವನ್ನು ನಡೆಸುತ್ತಾ, ಖಂಡಿತ ಇದರಲ್ಲಿ ನಾವು ಗೆಲುವನ್ನು ಸಾಧಿಸುತ್ತೇವೆ. ಅದು ನಾವು ಅದರಲ್ಲಿ ಇಟ್ಟುಕೊಂಡಿರುವಂತಹ ಒಂದು ವಿಶ್ವಾಸ.

ಸರ್ಕಾರ ಯಾವ ಮಟ್ಟಕ್ಕೆ ಹೋಗಿದೆ ಎಂದು ಮೊನ್ನೆ ಜೂನ್ 25ರಂದು ದೇವನಹಳ್ಳಿಯಲ್ಲಿ ನೀವು ನೋಡಿದ್ದೀರಿ. ಜನರಲ್ಲಿ, ರೈತರಲ್ಲಿ ಒಂದು ಭಯಭೀತಿ ಹುಟ್ಟಿಸುವಂತಹ ಒಂದು ಪ್ರಯತ್ನ ಮಾಡಿದರು. ಅವರು ವಾಟರ್ ಜೆಟ್ ತಂದುಕೊಂಡಿದ್ದರು, ಹತ್ತಾರು ಪೊಲೀಸ್ ವ್ಯಾನ್‌ಗಳನ್ನು ತಂದಿದ್ದರು, ನೂರಾರು ಜನ ಪೊಲೀಸರನ್ನು ಅಣಿನೆರೆಸಿದ್ದರು – ನಾವು ಕೇವಲ ಒಂದು ರಾಜ್ಯಮಟ್ಟದ ಸಮಾವೇಶ ಮಾಡಿದೆವು. ಸರ್ಕಾರ ಆ ಪ್ರಮಾಣದಲ್ಲಿ ಹೆದರಿಕೊಂಡಿದೆ ಎನ್ನುವಂತಹದ್ದು ಬಹಳ ಸ್ಪಷ್ಟವಾಗಿದೆ. ಆದ್ದರಿಂದ ನಾವು ಜಯವನ್ನು ಸಾಧಿಸುತ್ತೇವೆ. ಈ ವಿಷಯ ಬಗೆಹರಿಯದೇ ಹೋದರೆ, ನಾವು ಬಗೆಹರಿಯುತ್ತದೆ ಎಂದು ಬಹಳ ಸಕಾರಾತ್ಮಕವಾಗಿ ಯೋಚನೆಯನ್ನು ಮಾಡುತ್ತಾ ಇದ್ದೇವೆ. ಸರ್ಕಾರ, ಅಂದರೆ ಮುಖ್ಯಮಂತ್ರಿಗಳು, ಇದೇ ದೇವನಹಳ್ಳಿ ರೈತರ ಹತ್ತಿರ ಎರಡು ಮೂರು ಬಾರಿ ಬಂದು ಅವರೇ ಸ್ವತಃ ಭರವಸೆಯನ್ನು ಕೊಟ್ಟಿದ್ದಾರೆ. “ನಾವು ಅಧಿಕಾರಕ್ಕೆ ಬಂದರೆ ರೈತರ ಪರವಾಗಿ ಇತ್ಯರ್ಥ ಮಾಡುತ್ತೇವೆ” ಎಂದು. ಈಗಲೂ ಎರಡು ಮೂರು ಸಭೆಗಳಲ್ಲೂ “ನೋಡೋಣ, ಅದನ್ನು ಸರಿಪಡಿಸುತ್ತೇವೆ” ಎಂದಿದ್ದಾರೆ. ಹೀಗಾಗಿ, ವಿಶ್ವಾಸ ಇಟ್ಟುಕೊಂಡಿದ್ದೇವೆ. ಒಂದು ವೇಳೆ ಅವರೇನಾದರೂ ಇದನ್ನು ಸರಿಯಾಗಿ ಇತ್ಯರ್ಥ ಮಾಡಲಿಲ್ಲ, ರೈತರ ಪರವಾಗಿ ಭೂಮಿಯನ್ನು ಡಿನೋಟಿಫೈ ಮಾಡಿ ಬಿಟ್ಟುಕೊಡಲಿಲ್ಲ ಎಂದು ಹೇಳಿದರೆ, ರಾಜ್ಯಮಟ್ಟಕ್ಕೆ ನಾವು ಒಂದು ದೊಡ್ಡ ಹೋರಾಟವಾಗಿ ಇದನ್ನು ತೆಗೆದುಕೊಂಡು ಹೋಗುತ್ತೇವೆ. ಆಗ ಸರ್ಕಾರ ಬರಿ ದೇವನಹಳ್ಳಿಯಲ್ಲಿ ಮಾತ್ರವಲ್ಲ, ಇಡೀ ರಾಜ್ಯಾದ್ಯಂತ ಭೂಸ್ವಾಧೀನ ಮಾಡುವುದಕ್ಕೆ ಒಂದು ದೊಡ್ಡ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ. ಆ ಎಚ್ಚರಿಕೆಯನ್ನು ಸರ್ಕಾರ ವಹಿಸಿ ಈಗ ನ್ಯಾಯ ಕೊಡಬೇಕು ಎಂದು ನಾವು ಒತ್ತಾಯ ಮಾಡುತ್ತೇವೆ.

ನಾನುಗೌರಿ:  ವಿಧಾನಸಭಾ ಚುನಾವಣೆಗೆ, ಲೋಕಸಭಾ ಚುನಾವಣೆಯಲ್ಲಿ ಸಂಯುಕ್ತ ಹೋರಾಟ-ಕರ್ನಾಟಕವು ಕಾಂಗ್ರೆಸ್‌ ಅನ್ನು ಬೆಂಬಲಿಸಿತ್ತು. ಅಂದರೆ, ಒಂದು ಕೋಮುವಾದಿ ಸರ್ಕಾರ ಅಧಿಕಾರದಲ್ಲಿ ಇರಬಾರದು, ಒಂದು ಜನಪರವಾದ ಆಡಳಿತ ಬರಬೇಕು ಎಂದು ಹೇಳಿದ್ದರು. ಸಂಯುಕ್ತ ಹೋರಾಟದ ಮುಖಂಡರು ಮುಖ್ಯಮಂತ್ರಿಗಳಿಗೆ ಆಪ್ತರಿದ್ದಾರೆ, ಅವರು ನಮ್ಮ ಜೊತೆ ಮಾತನಾಡಲು ಬರುತ್ತಾರೆ, ಸಿಗುತ್ತಾರೆ ಅನ್ನುವ ತರಹದ ಸಲುಗೆ ಅಥವಾ ಒಂದು ‘ನೆಗ್ಲಿಜೆನ್ಸಿ’ ಮನಸ್ಥಿತಿ ಏನಾದರೂ ಸರ್ಕಾರಕ್ಕೆ ಇದೆಯಾ? ಅಂತಹ ಚರ್ಚೆಯೂ ಈಗ ಚಾಲ್ತಿಯಲ್ಲಿದೆ.

ನೂರ್ ಶ್ರೀಧರ್: ಸಂಯುಕ್ತ ಹೋರಾಟ ಎಂದೂ ಕಾಂಗ್ರೆಸ್ ಅನ್ನು ಬೆಂಬಲಿಸಿಲ್ಲ. ಇದನ್ನು ಮೊದಲು ನಿಮಗೆ ಸ್ಪಷ್ಟಪಡಿಸುತ್ತೇನೆ. ಸಂಯುಕ್ತ ಹೋರಾಟವು ರೈತ ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ತರುತ್ತಿರುವ ಬಿಜೆಪಿಯನ್ನು ಶಿಕ್ಷಿಸಬೇಕು ಎಂದು ನಿಲುವು ತೆಗೆದುಕೊಂಡಿತ್ತು. ರಾಷ್ಟ್ರ ಮಟ್ಟದ ಸಂಯುಕ್ತ ಕಿಸಾನ್ ಮೋರ್ಚಾದು ಅದೇ ನಿಲುವು. ನಾವು, ಕರ್ನಾಟಕದಲ್ಲಿ ಯಾರು ಹೋರಾಟಗಾರರಾಗಿದ್ದೇವೆಯೋ, ನಾವು ಕಾಂಗ್ರೆಸ್‌ನ ಭಟ್ಟಂಗಿಗಳಾಗಿ, ಕಾಂಗ್ರೆಸ್‌ನ ಕೆಲಸಕ್ಕಾಗಿ ಕೆಲಸ ಮಾಡಿದವರಲ್ಲ. ಸರ್ವಾಧಿಕಾರಿ, ಫ್ಯಾಸಿಸ್ಟ್ ಬಿಜೆಪಿಯನ್ನು ಸೋಲಿಸಲು ಕೆಲಸ ಮಾಡಿದವರು ನಾವು. ನಮ್ಮ ಕೆಲಸ ಖಂಡಿತ ಕಾಂಗ್ರೆಸ್‌ನವರಿಗೆ ಉಪಯೋಗವಾಗಿದೆ. ಕಾಂಗ್ರೆಸ್ ಗೆಲ್ಲುವುದರಲ್ಲಿ ಕರ್ನಾಟಕದ ಹೋರಾಟಗಾರರ ಕೊಡುಗೆ ಖಂಡಿತ ಇದೆ.

ಕಾಂಗ್ರೆಸ್ ದೇವನಹಳ್ಳಿಯನ್ನು ಹೇಗೆ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲವೋ ಎಂದು ನಾನು ಹೇಳಿದ್ದೇನೆಯೋ, ಅದೇ ರೀತಿಯಲ್ಲಿ ಈ ಹೋರಾಟಗಾರರ ಮನಸ್ಸನ್ನು ಅವರು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ನಾವು ಬಿಜೆಪಿಯವರ ವಿರುದ್ಧ ಕೆಲಸ ಮಾಡಿದ್ದೆವು ಎಂದರೆ ನಾವು ಕಾಂಗ್ರೆಸ್‌ನ ಬಾಲಂಗೋಚಿಗಳು ಎಂದು ಅವರು ಅಂದುಕೊಂಡಿರಬಹುದು. ಬಹಳ ಮುಂಚಿನಿಂದಲೂ ಅಂದುಕೊಂಡಿದ್ದಾರೆ. “ನಮ್ಮವರು, ನಮಗೆ ಬೆಂಬಲಿಸಿದವರು, ನಮ್ಮ ಪರವಾಗಿರುವವರು’’ ಎಂದು ಕಾಂಗ್ರೆಸ್‌ ಸರಕಾರ ಅಂದುಕೊಳ್ಳಬಾರದು.   ನಾವು ಬಿಜೆಪಿ ವಿರುದ್ಧದ ಹೋರಾಟದಲ್ಲಿ ಒಂದಿಷ್ಟು ಕೈಗೂಡಿಸಿ ಕೆಲಸ ಮಾಡಿದ್ದೇವೆ. ಯಾಕೆಂದರೆ, ಆ ಶಕ್ತಿ ಅಧಿಕಾರಕ್ಕೆ ಬರಬಾರದು. ಅದು ಇಡೀ ಈ ಪ್ರಜಾಪ್ರಭುತ್ವದ ಬುನಾದಿಗೆ ಕೈ ಹಾಕುತ್ತಿರುವ ಶಕ್ತಿಯಾಗಿರುವುದರಿಂದ ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂಬ ವಿಚಾರದಲ್ಲಿ ಅದು ಆಗಿತ್ತು. ಆದರೆ ಜನಹಿತದ ಪ್ರಶ್ನೆಗೆ ಬಂದರೆ, ಸಂಯುಕ್ತ ಹೋರಾಟ ಯಾವುದೇ ಕಾರಣಕ್ಕೂ ಯಾರ ಜೊತೆ ರಾಜಿ ಮಾಡಿಕೊಳ್ಳುವುದಿಲ್ಲ. ಜನಹಿತವೇ ಮುಖ್ಯ. ಆಳುವವರು ಯಾರೇ ಅಧಿಕಾರಕ್ಕೆ ಬಂದಿರಲಿ, ಅವರನ್ನು ಪ್ರಶ್ನೆ ಮಾಡಲೇಬೇಕು, ಹೋರಾಟ ಮಾಡಲೇಬೇಕು. ಇದು ನಮಗೆ ಸ್ಪಷ್ಟವಾಗಿ ಬಂದಿದೆ. ಇದು ಬಿಜೆಪಿ-ಕಾಂಗ್ರೆಸ್ ನಡುವಿನ ಹೋರಾಟವಲ್ಲ. ಇದು ಆಳುವವರಿಗೂ ಮತ್ತು ಜನಸಾಮಾನ್ಯರಿಗೂ ನಡುವಿನ ಸಂಘರ್ಷ. ಇದು ಬಂಡವಾಳಕ್ಕೂ ಮತ್ತು ದುಡಿಯುವವರಿಗೂ ನಡುವಿನ ಸಂಘರ್ಷ. ಇದು ಒಂದು ನೆಲದ ಪರಂಪರೆಗೂ ಮತ್ತು ಇನ್ನೊಂದು ಬಂಡವಾಳಶಾಹಿಯ ನಾಗರಿಕ ಅಭಿವೃದ್ಧಿಯ ಮಾದರಿಗೂ ನಡುವೆ ನಡೆಯುತ್ತಿರುವ ಸಂಘರ್ಷ. ಈ ಹೋರಾಟದಲ್ಲಿ ಸಂಯುಕ್ತ ಹೋರಾಟ ಸದಾ ನೀತಿಬದ್ಧವಾಗಿರುತ್ತದೆ.

ಯಾರಾದರೂ ನಾವು ಸಡಿಲವಾಗಬಹುದು, ಸಡಿಲ ನಿಲುವು ತರಬಹುದು, ನಾವು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬಾರದು, ಮುಖ್ಯಮಂತ್ರಿಯನ್ನು ಇಕ್ಕಟ್ಟಿಗೆ ಸಿಲುಕಿಸಬಾರದು ಎಂದು ಹೇಳಿ ಕೊನೆಗೆ ನಾವು ಸ್ವಲ್ಪ ಏನೋ ಒಂದು ‘ಲೂಸ್’ ಆಗಿ ಮಾಡಬಹುದು ಎಂಬ ಭ್ರಮೆ ಯಾರಿಗೇ ಇದ್ದರೂ ಕೂಡ ಅದು ಖಂಡಿತ ಆಗುವುದಿಲ್ಲ. ಇದನ್ನು ಈಗಲೇ ಬೇಕಾದರೆ ಸ್ಪಷ್ಟಪಡಿಸುತ್ತೇನೆ. ನಮ್ಮಲ್ಲಿ ಲವಲೇಶವೂ ರಾಜಿ ಮನೋಭಾವ ಇರುವುದಿಲ್ಲ. ಇದೇ ಸಂದರ್ಭದಲ್ಲಿ ಸರಕಾರವು ಒಂದು ವೇಳೆ ಏನಾದರೂ ಸಣ್ಣ ಮಟ್ಟದ ಜನತೆಗೆ ದ್ರೋಹ ಮಾಡುವಂತಹ ಪ್ರಯತ್ನ ನಡೆದರೆ, ಇದರ ಪರಿಣಾಮವನ್ನು ಸರ್ಕಾರ ಬಹಳ ಗಂಭೀರವಾಗಿ ಎದುರಿಸಬೇಕಾಗುತ್ತದೆ.

ಕೆಲವರು, ಬರೀ ಸರ್ಕಾರದವರು ಮಾತ್ರವಲ್ಲ, ನಮ್ಮ ಪ್ರಗತಿಪರ ವಲಯದಲ್ಲೇ ತುಂಬಾ ತಪ್ಪು ತಿಳಿದುಕೊಂಡು ಏನೇನೋ ಮಾತನಾಡುತ್ತಿರುವುದು ನಡೆಯುತ್ತಿದೆ. ಅದು ಅವರದ್ದು ಕೂಡ ಅಜ್ಞಾನ. ಒಂದು ನೀತಿಬದ್ಧ ಹೋರಾಟವನ್ನು ಅನೀತಿಬದ್ಧವಾಗಿ ಹೇಳಬಾರದು. ಕರ್ನಾಟಕದ ಜನಪರ ಚಳವಳಿ ಒಂದು ಬಹಳ ತಾತ್ವಿಕ ಬುನಾದಿ ಮೇಲೆ ಬಂದಿದೆ. ಅದು ಒಂದು ಕಮ್ಯುನಿಸ್ಟ್ ಪರಂಪರೆಯಲ್ಲೋ, ಅಂಬೇಡ್ಕರ್‌ವಾದದ ಪರಂಪರೆಯಲ್ಲೋ, ಸಮಾಜವಾದದ ಪರಂಪರೆಯಲ್ಲೋ ವಿಕಸನಗೊಂಡು ಬಂದಿರುವಂತಹ ನಾಯಕತ್ವವಿದು. ಈ ನಾಯಕತ್ವದಲ್ಲಿ ಸುಮಾರು ಜನರು ‘ಮಾರಾಟಗಾರರು’ ಆಗಿ ಹೋಗಿಬಿಟ್ಟಿದ್ದಾರೆ. ಹೋರಾಟಗಾರರಾಗಿ ಬಂದಿರುವಂತಹವರು ಇದರೊಳಗೆ ಇದ್ದಾರೆ. ಇದೊಂದು ರೀತಿಯ ‘ಕ್ವಾಲಿಟಿ ಕ್ರೀಮ್’ ಇದು. ಈ ‘ಕ್ವಾಲಿಟಿ ಕ್ರೀಮ್’ ರಾಜಿ ಮಾಡಿಕೊಳ್ಳುತ್ತಿದೆ ಎಂದು ಅವರು ನಿರೀಕ್ಷೆ ಮಾಡಿದರೆ ಅದು ಹಸಿಹಸಿ ಸುಳ್ಳು. ಬಹಳ ನಿರ್ಣಾಯಕ ಹೋರಾಟ ನಡೆಯುತ್ತದೆ, ಜನಹಿತಕ್ಕೋಸ್ಕರ. ಜನಹಿತವೇ ಇದನ್ನು ರಕ್ಷಣೆ ಮಾಡಿಕೊಳ್ಳುತ್ತದೆ.

ನಾನುಗೌರಿ: ಈಗ ಚನ್ನರಾಯಪಟ್ಟಣ, ಅಂದರೆ ದೇವನಹಳ್ಳಿ ಭೂಮಿಗೆ ಸಂಬಂಧಿಸಿ ಒಂದು ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಸರ್ಕಾರ ಜೂನ್ 25ರಿಂದ ಜುಲೈ 4ರವರೆಗೆ ಅಂದರೆ ಒಂದು ಒಂಬತ್ತು-ಹತ್ತು ದಿನಗಳ ದೀರ್ಘಕಾಲದ ಸಮಯವನ್ನು ತೆಗೆದುಕೊಂಡಿದೆ. ಸಮಯವೂ ಕೆಲವು ರೈತರಿಗೆ ಆತಂಕ ಮೂಡಿಸಿದೆ. ಇಷ್ಟು ದಿನದಲ್ಲಿ ಏನಾಗಿಬಿಡುತ್ತೋ ಅನ್ನುವುದು. ಅಂದರೆ, ದಿನದ ನಿಮ್ಮ ನಿರೀಕ್ಷೆ ಏನಿದೆ?

ನೂರ್ ಶ್ರೀಧರ್: ಇಲ್ಲ, ಒಂದು, ನಮಗೆ ಅದು ಏನು ದೀರ್ಘಕಾಲ ಅಂತ ಅನಿಸಿಲ್ಲ. ಅದಕ್ಕೊಂದು ಲಾಜಿಕ್ ಇದೆ. ನಾವು ಯಾಕೆ ಒಪ್ಪಿಕೊಳ್ಳುತ್ತಿದ್ದೀವಿ? ಲಾಜಿಕ್ ಏನಪ್ಪಾ ಅಂದರೆ, ಈ ತೀರ್ಮಾನವನ್ನು ಬರೀ ಮುಖ್ಯಮಂತ್ರಿಗಳು ಒಬ್ಬರೇ ತೆಗೆದುಕೊಳ್ಳಲು ಆಗುವುದಿಲ್ಲ. ಇದೊಂದು ಸಚಿವ ಸಂಪುಟ ತೆಗೆದುಕೊಳ್ಳಬೇಕಾಗಿರುವ ತೀರ್ಮಾನ. ಒಂದು ಕ್ಯಾಬಿನೆಟ್ ತೀರ್ಮಾನ ಹೋಗಿ ನಮ್ಮ ಮೀಟಿಂಗ್ ನಮಗೂ ಗ್ಯಾರಂಟಿ ಅಲ್ಲ. ಕ್ಯಾಬಿನೆಟ್ ತೀರ್ಮಾನ ಮಾಡಿ ಮುಖ್ಯಮಂತ್ರಿಗಳು ಬಂದು ನಮ್ಮ ಜೊತೆ ಮತ್ತೆ ಮಾತನಾಡಿ, “ಎಲ್ಲಾ ಸರಿ ಆಯಿತು, ಹೋಗಿ” ಎಂದು ಹೇಳಿ ಎದ್ದು ಬಂದರೆ, ಮುಂದಿನ ಕ್ಯಾಬಿನೆಟ್ ತೀರ್ಮಾನದಲ್ಲಿ ಅದೇ ನಿಲ್ಲುತ್ತದೆ ಅಂತ ಏನು ಗ್ಯಾರಂಟಿ?

ಹಾಗಾಗಿ, ಈಗ ಜುಲೈ 2ನೇ ತಾರೀಖಿಗೆ ನಂದಿಬೆಟ್ಟದಲ್ಲಿ ವಿಶೇಷ ಕ್ಯಾಬಿನೆಟ್ ಅಧಿವೇಶನವಿದೆ. ಅದಕ್ಕಾಗಿ ಅವರು ಜುಲೈ 4 ಎಂದು ಹೇಳಿದರೆ, ನಾವು ಒಪ್ಪಿಕೊಂಡಿದ್ದು ಏನಪ್ಪಾ ಅಂದರೆ, ಒಳ್ಳೆಯದು ಏನಿದೆಯೋ ಅದು ಕ್ಯಾಬಿನೆಟ್ ಅಲ್ಲಿ ಚರ್ಚೆ ಆಗಿ ಬರಬೇಕು. ಆದರೆ ಒಂದು ವೇಳೆ ಇವರು ಅದನ್ನು ಸುಮ್ಮನೆ ಜುಲೈ 4 ಎಂದು ಇಟ್ಟುಕೊಂಡು, ಜುಲೈ 2ರಂದು ಇದನ್ನು ಗಂಭೀರವಾಗಿ ಚರ್ಚೆನೇ ಮಾಡದೆ ಹೋದರೆ? ಚರ್ಚೆಗೆ ತೆಗೆದುಕೊಂಡರೂ ಕೂಡ ಇದು ಬಹಳ ಅನೇಕ ಸಂಕೀರ್ಣ ವಿಚಾರಗಳನ್ನು ಒಳಗೊಂಡಿದೆ, ಮುಂದಿನ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡುತ್ತೇವೆ ಎಂದು ತೀರ್ಮಾನ ಮಾಡಿಕೊಂಡರೆ? ಅಥವಾ ವಾದ-ವಿವಾದಗಳು ತುಂಬಾ ನಡೆದುಬಿಟ್ಟು, ಅಷ್ಟು ಬಗೆಹರಿಸಲಿಕ್ಕೆ ಆಗದೆ ಮತ್ತೆ ಬಂದು ಜುಲೈ 4ರಂದು ಅಡ್ಡಗೋಡೆ ಮೇಲೆ ದೀಪ ಇಟ್ಟ ಹಾಗೆ ಉತ್ತರ ಕೊಟ್ಟರೆ – ಇವೆಲ್ಲಾ ಪ್ರಶ್ನೆಗಳಿವೆ. ಆದರೆ, ಜೂನ್ 25ರಿಂದ ಜುಲೈ 4ರೊಳಗೆ ಆ ಒಂದು ಕ್ಯಾಬಿನೆಟ್ ಮೂಲಕ ಹಾದುಹೋಗಬೇಕಾಗಿರುವಂತದ್ದು ಲಾಜಿಕ್ ಇತ್ತು. ಹಾಗಾಗಿ ಇದು ಸುದೀರ್ಘವಲ್ಲ, ಇದು ಅಗತ್ಯವಿದ್ದಂತಹ ಪ್ರಕ್ರಿಯೆ.

ನಾನುಗೌರಿ: ಜುಲೈ 4ಸಭೆಯಲ್ಲಿ ಮುಖ್ಯಮಂತ್ರಿಯಿಂದ ಏನನ್ನು ನಿರೀಕ್ಷೆ ಮಾಡುತ್ತೀರಿ?

ಯು. ಬಸವರಾಜ್: ಅದರಲ್ಲಿ, ಕ್ಯಾಬಿನೆಟ್‌ನಲ್ಲಿ ಅವರು ತೀರ್ಮಾನ ಮಾಡಬೇಕು. “ಭೂಮಿ ಬಿಟ್ಟು ಕೊಡುತ್ತೇವೆ” ಎಂದು ಹೇಳಬೇಕು, “ಡಿನೋಟಿಫಿಕೇಶನ್ ಮಾಡುತ್ತೇವೆ” ಎಂದು ಅದಕ್ಕೆ ಸಮಯ ಕೊಡಿ ಎಂದು ಕೇಳಿದರೆ ಮಾತ್ರ ಈ ಹೋರಾಟ ನಾವು ಅಲ್ಲಿಗೆ ನಿಲ್ಲಿಸೋದಕ್ಕೆ ಅವಕಾಶ ಇದೆ. ನಾವು ಯಶಸ್ವಿಯಾಗಿದ್ದೇವೆ. ಈ ಜುಲೈ 2ರಂದು ಕ್ಯಾಬಿನೆಟ್ ಏನು ನಡೆಯುತ್ತಿದೆಯೋ, ಅಲ್ಲಿ ಈ ವಿಷಯ ಚರ್ಚೆಗೆ ಬರಬೇಕು. ಚರ್ಚೆಗೆ ಬಂದು ತೀರ್ಮಾನ ಆದರೆ ಮಾತ್ರ ಮುಖ್ಯಮಂತ್ರಿ ಹೊರಗಡೆ ಬಂದು 4ನೇ ತಾರೀಖು ಏನಾದರೂ ಮಾತನಾಡೋದಕ್ಕೆ ಸಾಧ್ಯವಿದೆ.

ಅಲ್ಲಿ ತೀರ್ಮಾನ ಏನು ಮಾಡಿರಬೇಕೆಂದರೆ, ಈಗ ಫೈನಲ್ ನೋಟಿಫಿಕೇಶನ್ ಆಗಿದೆ. ಅಂದರೆ ಭೂಸ್ವಾಧೀನಕ್ಕೆ ಸಂಬಂಧಪಟ್ಟು ಫೈನಲ್ ನೋಟಿಫಿಕೇಶನ್ ಮಾಡಿದ್ದಾರೆ. ಈಗ ಉಳಿದಿರುವುದು ಏನು, ಸರ್ಕಾರದ ಹತ್ತಿರ ಡಿನೋಟಿಫೈ ಮಾಡಬೇಕು. “ಡಿನೋಟಿಫೈ ಮಾಡುತ್ತೇವೆ, ರೈತರು ಹೇಳುತ್ತಿರುವುದು ಸರಿಯಿದೆ, ಅವರ ಜಮೀನು ಅವರಿಗೆ ಕೊಡುತ್ತೇವೆ” ಎಂದು ಹೇಳಿ ಕ್ಯಾಬಿನೆಟ್ ತೀರ್ಮಾನ ಮಾಡಿ ಡಿನೋಟಿಫೈಗೆ ಹೋಗಬೇಕು. ಅದು ಆಗದೇನೆ ಮುಖ್ಯಮಂತ್ರಿಗಳು ಬಂದು “ಇನ್ನೂ ಸ್ವಲ್ಪ ಸಮಯ ಕೊಡಿ, ಇನ್ನೊಂದು ಕೊಡಿ” ಅಥವಾ “ಹಾಗೆ ಮಾಡೋಣ, ಹೀಗೆ ಮಾಡೋಣ” ಎಂದು ಹೇಳಿದರೆ, ಅದು ಬಗೆಹರಿಯದೇ ಇರುವಂತಹ ವಿಚಾರ. ಆಗ ನಾವು ಮುಂದೆ ಹೋರಾಟಕ್ಕೆ ಹೋಗಬೇಕಾಗುತ್ತದೆ. ನಾವು ಹಾಗೆ ಮಾಡುವುದಿಲ್ಲ. ನಮ್ಮ ಎಲ್ಲ ಒತ್ತಡ, ಇಡೀ ರಾಜ್ಯಾದ್ಯಂತ ಗಮನ ಸೆಳೆದಿರುವಂತಹ ಒತ್ತಡ. ನೀವು ನೋಡಿದ್ದೀರಿ, ಈಗ ಎಂ.ಬಿ. ಪಾಟೀಲರು ಒಂದು ಲೇಖನವೇ ಬರೆದಿದ್ದಾರೆ – ನಮ್ಮ ಒತ್ತಡಕ್ಕೆ ಮಣಿದು. “ನಾವು ಈ ಕಾರಣಕ್ಕೆ ನಾವು ಹೀಗೆ ಮಾಡುತ್ತೇವೆ” ಅಂತ ಪಾಟೀಲರು ಹೇಳಿದ್ದಾರೆ. ಪತ್ರಿಕಾಗೋಷ್ಠಿಯನ್ನೂ ಕೂಡ ಮಾಡಿದರು. ಅಷ್ಟು ಒತ್ತಡ ಈಗ ಸರ್ಕಾರದ ಮೇಲೆ ಬಂದಿದೆ. ಬಂದಮೇಲೆ ಏನಾದರೂ ಒಂದು ನಿರ್ಣಯವನ್ನು ಹೇಳಲೇಬೇಕಲ್ಲ. ನಾವು ಕಾಯುತ್ತಿದ್ದೇವೆ. ನಾವು ಸಕಾರಾತ್ಮಕ ನಿರ್ಣಯ ಬರುತ್ತದೆ ಎಂದು ಕಾಯುತ್ತಿದ್ದೇವೆ.

ನಾನುಗೌರಿ: ಕೊನೆಯ ಪ್ರಶ್ನೆ. ಜುಲೈ 4ರಲ್ಲಿ ರೈತರಿಗಾಗಬಹುದಾದ ನಕಾರಾತ್ಮಕ ಅಂಶ ಯಾವುದು? ಸಕಾರಾತ್ಮಕವಾಗಿ ಆಗಲೇಬೇಕಾಗಿರುವುದು ಏನು?

ನೂರ್ ಶ್ರೀಧರ್: ನಾನು ಹೀಗೆ ಹೇಳುತ್ತೇನೆ. ರೈತರಿಗಂತೂ ಯಾವುದು ನೆಗೆಟಿವ್ ಆಗುವುದಿಲ್ಲ. ಸರ್ಕಾರಕ್ಕೆ ಆಗಬಹುದಾದಂತಹ ನೆಗೆಟಿವ್ ಏನು, ಸರ್ಕಾರಕ್ಕೆ ಆಗಬಹುದಂತಹ ಪಾಸಿಟಿವ್ ಏನು ಎಂದು ನೋಡೋಣ. ಸರ್ಕಾರದ ಸಕಾರಾತ್ಮಕ ಅಂಶದಿಂದ ಶುರು ಮಾಡೋಣ. ನೆಗೆಟಿವ್‌ನಿಂದ ಶುರು ಮಾಡುವುದು ಬೇಡ. ಸರ್ಕಾರ ಒಂದು ವೇಳೆ ಬಂದು, “ಬೇರೆ ಬೇರೆ ಪ್ರಕ್ರಿಯೆಯಲ್ಲಿ ನಾವು ಇದನ್ನು ತಕ್ಷಣವೇ ಗ್ರಹಿಸುವುದರಲ್ಲಿ ಸ್ವಲ್ಪ ತೊಡಕುಗಳು ಇದ್ದವು. ಆದರೆ ಇವತ್ತು ರೈತರ ಈ ಹೋರಾಟ, ಮತ್ತು ಎಲ್ಲಾ ಜನಪರ ಚಳವಳಿಗಳು ಇಟ್ಟಿರುವಂತಹ ಒತ್ತಾಸೆ, ಹಾಗೂ ನಿಜವಾಗಲೂ ದೇವನಹಳ್ಳಿ ಹೋಬಳಿಯಲ್ಲಿ ಈಗಾಗಲೇ ಸಾಕಷ್ಟು ಭೂಮಿ ಸ್ವಾಧೀನವಾಗಿದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಾವು ಅದನ್ನು ಡಿನೋಟಿಫೈ ಮಾಡಲು ಹೋಗುತ್ತೇವೆ, ಅದನ್ನು ಕೈಬಿಡುತ್ತೇವೆ” ಎಂಬ ತೀರ್ಮಾನ ಮಾಡಿದರೆ, ನಿಜ ಹೇಳಬೇಕೆಂದರೆ ದೇವನಹಳ್ಳಿಯ ಜನರು ಒಳಗೊಂಡಂತೆ ಇಡೀ ರಾಜ್ಯ ಬಹಳ ದೊಡ್ಡ ಹಬ್ಬ ಆಚರಿಸುತ್ತದೆ. ಅಷ್ಟು ಸಂತೋಷಪಡುತ್ತದೆ. ಮುಖ್ಯಮಂತ್ರಿಯನ್ನು, ಈ ಸರ್ಕಾರವನ್ನು ಬಹಳ ಅಭಿನಂದಿಸುತ್ತದೆ. ಯಾವಾಗಲೂ ಕೂಡ, ಒಂದು ತಪ್ಪನ್ನು ಯಾರಾದರೂ ಒಬ್ಬರು ತಿಳಿದು ತಿಳಿದಲ್ಲೇನೋ ತಪ್ಪು ಆಯಿತು ಎಂದು ಹೇಳಿದರೆ, “ಯಾಹೋ ನೋಡಿ” ಎಂದು ಯಾರೂ ನಗುವುದಿಲ್ಲ. ಬಹಳ ಖುಷಿ ಪಡುತ್ತಾರೆ, ಹೆಮ್ಮೆ ಪಡುತ್ತಾರೆ. “ಛೇ! ಇದಕ್ಕೊಂದು ಧೈರ್ಯ ಬೇಕಪ್ಪ!” ಅಂತ. “ಹೀಗೆ ಮಾಡಿದರಲ್ಲ” ಅಂತ. ಎಲ್ಲರೂ ‘ಸಲಾಮ್’ ಹೇಳುತ್ತಾರೆ. ಸರ್ಕಾರ ಮಾಡಿದರೆ ಖಂಡಿತವಾಗಲೂ ನಾವು ಧನ್ಯವಾದಗಳನ್ನು ಹೇಳಿ ಮುಖ್ಯಮಂತ್ರಿಗಳಿಗೆ ಆ ದಿನ ಹೋಗುತ್ತೇವೆ. ಯಾಕೆಂದರೆ ಅಂದು ಹೇಗೂ ಕೂಡ ಸಾವಿರಾರು ಜನ ಇರುತ್ತಾರೆ. ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ದೊಡ್ಡ ಸಮಾವೇಶ ನಡೆಯುತ್ತದೆ. ಅಂದು ಅದನ್ನು ಮಾಡಿಕೊಂಡು ಹೋಗುತ್ತೇವೆ.

ಒಂದು ವೇಳೆ ಹಾಗೆ ಸರ್ಕಾರ ಮಾಡಲಿಲ್ಲವೆಂದರೆ, ಅವರು ಏನಾದರೂ “ನಾವು ಅದನ್ನು ಮುಂದುವರಿಸುತ್ತೇವೆ” ಎಂದು ಎಂ.ಬಿ. ಪಾಟೀಲ್‌ ಅವರು ಹೇಳಿದ ಹಾಗೆ ಹೇಳಿದರೆ, ಮುಗಿಯಿತು. ಅದು ಸ್ಪೋಟವಾಗಿಬಿಡುತ್ತದೆ. ಇಡೀ ಕರ್ನಾಟಕದಲ್ಲಿ ರೋಷ ಉಕ್ಕಿ ಬಂದುಬಿಡುತ್ತದೆ. ಹಾಗೆ ಏನಾದರೂ ಹೇಳಿದರೆ ಅಂದು ಹಾಗೆ ಹೇಳುವುದಿಲ್ಲ. ನಮಗೂ ಕೂಡ ಆ ಧೈರ್ಯ ಮಾಡುತ್ತಾರೆ ಅಥವಾ ಸಿದ್ದರಾಮಯ್ಯನವರು ಇದ್ದೂ ಕೂಡ ಅದಕ್ಕೆ ಅವಕಾಶ ಕೊಡುತ್ತಾರೆ ಅಂತ ನಮಗೆ ಅನ್ನಿಸುವುದಿಲ್ಲ. ಹಾಗೆ ಆಗುವುದಿಲ್ಲ. ಆದರೆ, ಅಡ್ಡಗೋಡೆಯ ಮೇಲೆ ದೀಪ ಇಟ್ಟ ಹಾಗೆ “ಟೆಕ್ನಿಕಲ್ ಸಮಸ್ಯೆಗಳಿವೆ, ಅದಕ್ಕೆ ಕಾಲ ಬೇಕಾಗುತ್ತದೆ, ಅದಕ್ಕೆ ಲೀಗಲ್ ಅಭಿಪ್ರಾಯಕ್ಕೆ ಕಳುಹಿಸಿದ್ದೀವಿ, ಅದಕ್ಕೆಲ್ಲಾ ಕೂಡ ಇನ್ನೊಂದು ಯಾವುದೋ ಸಮಿತಿಯ ಒಂದು ವರದಿ ಬರಬೇಕು” ಇವೆಲ್ಲಾ ಹೇಳಿ, ಇಂತಹ ಟೆಕ್ನಿಕಲ್ ಕಾರಣಗಳನ್ನು ತೋರಿಸಿ ಮುಂದಕ್ಕೆ ಹಾಕುವಂತಹ ಪ್ರಯತ್ನ ಇರುತ್ತದೆ. ಇದಕ್ಕೆ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಇಂತಹ ಒಂದು ತೀರ್ಮಾನ ಬಂದರೆ, ಈ ಸರ್ಕಾರ ದೊಡ್ಡ ಸಮಸ್ಯೆಗೆ ಸಿಲುಕಿಕೊಳ್ಳುತ್ತದೆ. ಸರ್ಕಾರಕ್ಕೆ ಇದರ ಸಮಸ್ಯೆಯ ಪರಿಮಾಣ ಅರ್ಥವಾಗುತ್ತಿಲ್ಲ. ಅದು ಎಷ್ಟು ಗಂಭೀರವಾಗಿರುತ್ತದೆ ಅಂತ ಅವರಿಗೆ ಅರ್ಥವಾಗುತ್ತಿಲ್ಲ.

ಈ ಸರಿ, ಇದು ಯಾವುದೋ ಒಂದು ಸಂಘಟನೆ ಎಲ್ಲೋ ಒಂದು ಬಂದು ಹೋರಾಟ ಮಾಡುತ್ತಿರುವ ಮಾತಲ್ಲ. ಇದು ದೇವನಹಳ್ಳಿಯ ಜನರ ಇಡೀ 1180 ದಿನಗಳ ಕಾಲ ಏನು ಹೋರಾಟ ಮಾಡಿ ಬಂದಿದ್ದಾರಲ್ಲ, ಅದು ಒಂದು ಹಂತಕ್ಕೆ ಪಕ್ವಗೊಂಡು ಕೊನೆ ಹಂತಕ್ಕೆ ಬಂದು ನಿಂತಿದೆ. ಈಗ ನಾವು ‘ಮಾಡು ಇಲ್ಲವೆ ಮಡಿ’ ಹೋರಾಟ ಮಾಡುತ್ತೇವೆ. ನಾವು ಬೇಕಾದರೆ ಎಲ್ಲರೂ ಜೈಲಿಗೆ ಅಂದು ಹೋಗುತ್ತೇವೆ. ಪ್ರಾಣ ಬೇಕಾದರೂ ಬಿಡುತ್ತೇವೆ. ಸುಮ್ಮನೆ ಕೆಲ ಭಾಷಣಕಾರರು ಹೇಳುತ್ತಾರಲ್ಲ ಹಾಗಲ್ಲ. ನಿಜವಾಗಿಯೂ ಸರಕಾರ ಏನು ಬೇಕಾದರೂ ಮಾಡಿದರೂ ಬಿಡುವುದಿಲ್ಲ ಅನ್ನುವಷ್ಟು ಗಟ್ಟಿ ಶಕ್ತಿಯಾಗಿ ಗ್ರಾಮೀಣ ಜನರು ಇದ್ದಾರೆ. ಇದು ನಂಬರ್ ಒಂದಾಗಿದೆ.

ಎರಡನೆಯದು, ಸಂಯುಕ್ತ ಹೋರಾಟ ಕರ್ನಾಟಕವು ಸಂಕಲ್ಪವಾಗಿ ಒಂದು ತೀರ್ಮಾನ ತೆಗೆದುಕೊಂಡಿದೆ. ಏನೇ ಆದರೂ ಬಿಡುವುದಿಲ್ಲ ಎಂದು ತೀರ್ಮಾನ ಮಾಡಿದೆ. ನಮಗೆಲ್ಲಾ ಎಷ್ಟೆಷ್ಟು ಕೆಲಸಗಳು ಇದ್ದವು ಎಂದು ಅಂದುಕೊಂಡಿದ್ದೀರಿ? ಒಂದೊಂದು ಸಂಘಟನೆಗೂ ಎಷ್ಟೆಲ್ಲಾ ಕೆಲಸ ಕಾರ್ಯಗಳಿದ್ದವು, ಎಷ್ಟು ಕಾರ್ಯಕ್ರಮಗಳು ಇದ್ದವು ನಮಗೆ. ಕಳೆದ ಒಂದು ತಿಂಗಳಿನಿಂದ ನಮ್ಮೆಲ್ಲಾ ಸಂಘಟನೆಗಳ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದೇವೆ. ಜುಲೈ 9ಕ್ಕೆ ರಾಷ್ಟ್ರ ಮಟ್ಟದ ಸಾರ್ವತ್ರಿಕ ಮುಷ್ಕರವಿದೆ. ಎಲ್ಲಾ ಕಡೆ ಕಾರ್ಮಿಕ ಸಂಘಟನೆಗಳನ್ನು ಸಿದ್ಧ ಮಾಡಬೇಕಾಗಿತ್ತು. ರೈತ-ಕಾರ್ಮಿಕರು ಸೇರಿ ಮಾಡಬೇಕಾಗಿತ್ತು. ಆದರೂ ಸುಮಾರು ಸಭೆಗಳಿದ್ದವು. ಎಲ್ಲವನ್ನೂ ರದ್ದು ಮಾಡಿದ್ದೇವೆ. ವಿದ್ಯಾರ್ಥಿ ಸಂಘಟನೆಗಳು, ಮಹಿಳಾ ಸಂಘಟನೆಗಳು ತಮ್ಮ ಸಭೆ, ಸಮಾರಂಭಗಳನ್ನು ರದ್ದು ಮಾಡಿವೆ. ಎಲ್ಲರೂ ದೇವನಹಳ್ಳಿ ಮೇಲೆ ಬಂದು ಕುಳಿತುಕೊಂಡಿದ್ದೇವೆ. ಯಾಕೆ? ಯಾಕಿಷ್ಟು? ಎಲ್ಲರೂ, ಎಲ್ಲವನ್ನೂ ರದ್ದು ಮಾಡಿ ದೇವನಹಳ್ಳಿಯಲ್ಲಿ ಬಂದು ಕುಳಿತುಕೊಂಡಿದ್ದೇವೆ. ಯಾಕೆಂದರೆ ದೇವನಹಳ್ಳಿ ಅನ್ನುವುದು ಬರಿ ದೇವನಹಳ್ಳಿಯ ಪ್ರಶ್ನೆಯಲ್ಲ. ದೇವನಹಳ್ಳಿ ಅನ್ನುವುದು ಈ ಸರ್ಕಾರದ ನಡೆತೆಯನ್ನು ಪ್ರಶ್ನೆ ಮಾಡುವಂತಹ ಹೋರಾಟ. ಹಾಗಾಗಿ ಸರ್ಕಾರ ಒಂದು ವಿಚಾರದಲ್ಲಿ ಆದರೂ ಕಮಿಟ್ ಆಗಲೇಬೇಕು. ಅದು ಈ ಅನ್ಯಾಯವನ್ನು ಜನತೆಗೆ ಮಾಡಲಿಕ್ಕೆ ಯಾವುದೇ ಕಾರಣಕ್ಕೂ ನಾವೆಲ್ಲಾ ಇದ್ದು ಅವಕಾಶ ಮಾಡಿಕೊಡಬಾರದು. ಹಾಗಾಗಿ ನಮ್ಮೆಲ್ಲಾ ಕಾರ್ಯಕ್ರಮಗಳು ಅಸ್ತವ್ಯಸ್ತವಾದರೂ ಪರವಾಗಿಲ್ಲ. ಅದನ್ನೆಲ್ಲಾ ಅಂತಃಶಕ್ತಿಯನ್ನು ಸೇರಿಸಿ ಹೋರಾಟವನ್ನು ಗೆಲ್ಲಬೇಕು ಅಂತ ನಿಂತಿದ್ದೇವೆ. ನಾವು ವಾಪಸ್ ಹೋಗುವುದಿಲ್ಲ. ಖಂಡಿತ ಹೋಗುವುದಿಲ್ಲ. ಯಾವುದೇ ಕಾರಣಕ್ಕೂ ವಾಪಸ್ಸು ಹೋಗುವುದಿಲ್ಲ. ಹಾಗಾಗಿ ಈ ಸಂಕಲ್ಪ ಏನಿದೆಯಲ್ಲ, ಎರಡನೆಯದು ಇಡೀ ರಾಜ್ಯದ ಜನರ ಬೆಂಬಲ ಇದೆ ದೇವನಹಳ್ಳಿಗೆ. ಎಲ್ಲರೂ ನೋಡುತ್ತಾ ಇದ್ದಾರೆ. ಹಾಗಾಗಿ ಇದು ಸುಮ್ಮನೆ ಹೀಗೆ ಕಾಲ ತಳ್ಳಿಕೊಂಡು ಹೋಗುವುದಲ್ಲ. ಮತ್ತೆ ಮುಂದಕ್ಕೆ ಹಾಕುತ್ತೇವೆ, ಇನ್ನೊಂದು ದಿವಸ ಮೆರವಣಿಗೆ ಕೊಡುತ್ತೇವೆ ಎಂದು ಸರಕಾರ ಎಂದರೆ ಆಗುವುದಿಲ್ಲ. ನಾವು ಹೋರಾಟ ರೂಪಗಳನ್ನು ಬದಲಾಯಿಸುವುದನ್ನು ಕಲಿತಿದ್ದೇವೆ, ಸರ್ಕಾರವನ್ನು ಹೇಗೆ ಇಕ್ಕಟ್ಟಿಗೆ ಸಿಲುಕಿಸಬೇಕೆಂಬುದು ನಮಗೆ ಚೆನ್ನಾಗಿ ಗೊತ್ತಿದೆ. ಇದು ಏನಿದೆಯೋ, ಇನ್ನೆಂತಹ ‘ಪಂಚಿಂಗ್’ ಹೋರಾಟಗಳು ಮಾಡುತ್ತೇವೆ ಎಂಬುದನ್ನು ಸರ್ಕಾರ ನಿರೀಕ್ಷೆ ಮಾಡಲಿಕ್ಕೂ ಸಾಧ್ಯವಿಲ್ಲ. ಅಂತಹ ಹೋರಾಟದ ರೂಪ ಬರುತ್ತದೆ. ಆದರೆ ಅಂತಹದ್ದು ಆಗದಿರಲಿ, ಯು. ಬಸವರಾಜು ಅವರು ಹೇಳಿದಂತೆ ಸರಕಾರದ ಕಡೆಯಿಂದ ಅದು ಒಳ್ಳೆಯ ಫಲಿತಾಂಶ ಬರಲಿ. ಸರ್ಕಾರ ಹಾಗೆ ಮಾಡದಿರಲಿ, ಮಾಡುವುದಿಲ್ಲ. ಯಾಕೆಂದರೆ ಅದಕ್ಕೂ ಗೊತ್ತಾಗುತ್ತದೆ ಬಿಕ್ಕಟ್ಟುಗಳಿವೆ ಅಂತ. ನಾವು ಇನ್ನೂ ಸಕಾರಾತ್ಮಕ ಮನಸ್ಥಿತಿಯಲ್ಲಿಯೇ ಇದ್ದೇವೆ. ಆದರೆ ನಮ್ಮ ಮನಸ್ಥಿತಿ ನಮಗೂ ತಯಾರಾಗುತ್ತಾ ಇರುತ್ತದೆ. ಒಂದು ವೇಳೆ ಹಾಗೆ ಆದರೆ, ಅದು ನಮ್ಮೊಳಗೇ ಬರುತ್ತದೆ. ಅದಕ್ಕೆ ನಾವು ಮಾನಸಿಕವಾಗಿ ಈಗಾಗಲೇ ಎಲ್ಲದಕ್ಕೂ ತಯಾರಿ ನಡೆಸಿದ್ದೇವೆ.

 ನಾನುಗೌರಿ: ಜುಲೈ 4ನೇ ತಾರೀಖು ಸಮಾವೇಶದ ರೂಪರೇಷೆ ಹೇಗಿರುತ್ತದೆ?

ನೂರ್ ಶ್ರೀಧರ್: ನಿಜ ಹೇಳಬೇಕೆಂದರೆ, ನಾವು ಇನ್ನೂ ಪರಿಪೂರ್ಣವಾಗಿ ಅಂತಿಮಗೊಳಿಸಿಲ್ಲ. ಆದರೆ, ಏನಪ್ಪಾ ಅಂದರೆ, ಇದು ಒಟ್ಟು ನಾವು ಹೇಗೆ ನೋಡುತ್ತಿದ್ದೇವೆಂದರೆ, ದೇವನಹಳ್ಳಿಯ ಹೋರಾಟ ಇಡೀ ನಾಡನ್ನು ಉಳಿಸುವ ಹೋರಾಟ. ಬಸವರಾಜ್ ಅವರು ಹೇಳಿದಂತೆ, ಬರೀ ದೇವನಹಳ್ಳಿಯಲ್ಲಿ ಮಾತ್ರವಲ್ಲ, ಭೂಸ್ವಾಧೀನಗಳು ಎಲ್ಲಾ ಕಡೆ ಆಗುತ್ತಿವೆ. ಬೆಂಗಳೂರು ಸುತ್ತಮುತ್ತ ಅಂತೂ ಎಲ್ಲಾ ವಿನಾಶಕಾರಿಯಾಗಿ ನಡೆಯುತ್ತಿದೆ. ನಿನ್ನೆ (ಜೂನ್ 30) ದಿನ್ನೂರಿನಲ್ಲಿ ಹೋಗಿಬಿಟ್ಟು 300ಕ್ಕೂ ಹೆಚ್ಚು ಮನೆಗಳನ್ನು ಧ್ವಂಸಮಾಡಿದ್ದಾರೆ. ಎಲ್ಲ ಕಡೆಯೂ ಸ್ವಾಧೀನ ಮಾಡಿಕೊಳ್ಳುವುದು ಮನಸ್ಸಿಗೆ ಬಂದ ಹಾಗೆ ನಡೆಯುತ್ತಿದೆ. ಹಣದ ದರ್ಪ ಕುಣಿಯುತ್ತಿದೆ. ಅದು “ಕುರುಡು ಕಂಚಾಣ ಕುಣಿಯುತ್ತಲಿತ್ತೋ ಕಾಲಿಗೆ ಬಂದವರ ತುಳಿಯುತ್ತಲಿತ್ತು” ಅಂತ ಇತ್ತಲ್ಲ, ಹಾಗೆ ‘ಮದ’ ತುಳಿಯುತ್ತಿದೆ. ಈ ಮದಕ್ಕೆ ಕಡಿವಾಣ ಹಾಕುವಂತಹ ಹೋರಾಟವಿದು. ಹಾಗಾಗಿ, ಇಡೀ ರಾಜ್ಯದ ಜನ ನಾವೆಲ್ಲರೂ ಸೇರಿ ಈ ಹೋರಾಟವನ್ನು ಗೆಲ್ಲಲೇಬೇಕಾಗಿದೆ. ಈ ಹಣದ ಮದಕ್ಕೆ ಕಡಿವಾಣ ಹಾಕಲೇಬೇಕಾಗಿದೆ. ಹಾಗಾಗಿ, ಇಡೀ ರಾಜ್ಯದಿಂದ ಜನರು ಬರುತ್ತಾರೆ. ಎಲ್ಲಾ ತಾಲ್ಲೂಕುಗಳಿಂದಲೂ ಜನ ಬರುತ್ತಾರೆ. ಎಲ್ಲಾ ಜನವರ್ಗದವರು ಬರುತ್ತಾರೆ. ಅದು ಅಡ್ವೋಕೇಟ್ಸ್ ಇರಬಹುದು, ಮಹಿಳಾ ಸಂಘಟನೆಗಳು ಇರಬಹುದು, ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ದಲಿತ ಸಂಘಟನೆಗಳು – ಇಂತಹ ಸಂಘಟನೆಗಳು ಇಲ್ಲವೆಂದಲ್ಲ. ಎಷ್ಟು ನೀವು ಜನಪರವಾಗಿದ್ದೀರೋ, ನಾಡಿನ ಪರವಾಗಿದ್ದೀರೋ, ಎಲ್ಲರೂ ಕೂಡ ಬರುತ್ತಿದ್ದಾರೆ. ಹಾಗಾಗಿ ಇದನ್ನು “ನಾಡ ಉಳಿಸಿ ಸಮಾವೇಶ” ಅಂತಾನೇ ಮಾಡುತ್ತಿದ್ದೇವೆ. ಅದರ ಪ್ರತಿನಿಧಿಕವಾಗಿ ದೇವನಹಳ್ಳಿ ಇದೆ ನಮಗೆ. ದೇವನಹಳ್ಳಿ ಗೆದ್ದರೆ, ನಾಡನ್ನು ಉಳಿಸಿಕೊಳ್ಳುವ ಒಂದು ಮಾದರಿಗೆ ಒಂದು ದಾರಿ ಮಾಡಿಕೊಳ್ಳುತ್ತೇವೆ. ಒಂದು ವೇಳೆ ಹಾಗೆ ಆಗದಿದ್ದರೆ, ಹಣ ಗೆದ್ದು ಅದು ಇನ್ನೂ ನಾಶವನ್ನು ತರುತ್ತದೆ. ಆ ಕಡಿವಾಣ ಹಾಕುವುದಲ್ಲದೆ, ಈ ನಾಡನ್ನು ಕಾಪಾಡಿಕೊಳ್ಳುತ್ತೇವೆ. ಹಾಗಾಗಿ, ಅದು ಮೇನ್ ಥೀಮ್ ಆಗಿದೆ.

ಮಿಕ್ಕಂತೆ, ಇದಕ್ಕೆಲ್ಲಾ ರಾಷ್ಟ್ರೀಯ ನಾಯಕರು ಬರುತ್ತಾರೆ. ಅಕ್ಕಪಕ್ಕದ ರಾಜ್ಯಗಳಿಂದಲೂ ಬರುತ್ತಾರೆ. ಸರ್ಕಾರ ಹೇಳುತ್ತಿದೆಯಲ್ಲ, ಆಂಧ್ರದಿಂದಲೂ ಈ ಸಮಾವೇಶಕ್ಕೆ ಬರುತ್ತಿದ್ದಾರೆ. ಅವರು ಅಂದು ಬರುತ್ತಾರೆ. ಅಲ್ಲಿ ಏನು ನಡೆಯುತ್ತಿದೆ ಎಂದು ಅವರು ಮಾತನಾಡುತ್ತಾರೆ. ಭೂಸ್ವಾಧೀನದಿಂದ ಅಲ್ಲಿ ಆಗುತ್ತಿರುವ ನಾಶವೇನು? ಚಂದ್ರಬಾಬು ನಾಯ್ಡು ನಮ್ಮ ಸರ್ಕಾರಕ್ಕೆ ಮಾದರಿಯಾಗಿಬಿಟ್ಟಿದ್ದಾರೆ. ಆ ಚಂದ್ರಬಾಬು ನಾಯ್ಡು ತಂದಿರುವಂತಹ ನಾಶ ಏನು? ಇದೆಲ್ಲವೂ ಕೂಡ ಚರ್ಚೆಯಾಗುತ್ತವೆ. ಹಾಗಾಗಿ, ನೆರೆಹೊರೆಯ ರಾಜ್ಯಗಳಿಂದ, ರಾಷ್ಟ್ರೀಯ ಮಟ್ಟದಿಂದ ಎಲ್ಲರೂ ಕೂಡ ಬರುತ್ತಾರೆ. ಒಂದು ರೀತಿಯಲ್ಲಿ ಸರ್ಕಾರದ ಮೇಲೆ ಕಣ್ಗಾವಲು ಇರುತ್ತದೆ. ಅಂದರೆ, ಜನತೆಯ ಕಣ್ಗಾವಲು ಇರುತ್ತದೆ. ಆ ಜನತೆಯ ಕಣ್ಗಾವಲಿನ ನಡುವೆ ಅವರು ಏನು ಹೇಳುತ್ತಾರೆ ಎಂಬುದನ್ನು ನೋಡೋಣ.

 ನಾನುಗೌರಿ: ಯು. ಬಸವರಾಜ್ ಸರ್, ಕೊನೆಯದಾಗಿ ಏನು ಹೇಳುತ್ತೀರಿ?

ಯು. ಬಸವರಾಜ್: ಅದೇ ಒಂದು, ನಾವು ಈ ಹೋರಾಟ ರೈತರ ಪರವಾಗಿ ಆದರೆ ಸರ್ಕಾರಕ್ಕೆ ನಷ್ಟವಾಗುವುದಿಲ್ಲ. ಸರ್ಕಾರಕ್ಕೆ ಲಾಭವಾಗುತ್ತದೆ ಅಂತ ನಾವು ಸರ್ಕಾರಕ್ಕೆ ಹೇಳುವುದಕ್ಕೆ ಬಯಸುತ್ತೇವೆ. ಏಕೆಂದರೆ, ಸರ್ಕಾರ ಸಕಾರಾತ್ಮಕವಾಗಿ ರೈತರ ಪರವಾಗಿ ತೀರ್ಮಾನ ತೆಗೆದುಕೊಂಡಿದೆ ಅನ್ನುವಂತಹ ಸಂದೇಶ ರಾಜ್ಯದ ತುಂಬಾ ಹೋಗುತ್ತದೆ. ರೈತರ ಬೆಂಬಲ ಸರ್ಕಾರಕ್ಕೆ ಸಿಗುತ್ತದೆ. ನೀವು ಕೈಗಾರಿಕೆಗಳನ್ನು ಏನು ಬೆಳೆಸಬೇಕು ಅಂತ ಇದ್ದೀರಿ, ನಾವು ಸಂಯುಕ್ತ ಹೋರಾಟ ಕರ್ನಾಟಕದವರು ಅದರ ಪರವಾಗಿದ್ದೀವಿ. ನಾವು ವಿರೋಧಿಗಳಲ್ಲ. ಸಂಯುಕ್ತ ಹೋರಾಟ-ಕರ್ನಾಟಕವು ಸ್ಪಷ್ಟವಾಗಿ ರಾಜ್ಯದಲ್ಲಿ ಕೈಗಾರಿಕೆ ಬೆಳೆಯಬೇಕು ಎಂದು ಹೇಳಿ ನಾವು ಅದರ ಪರವಾಗಿದ್ದೀವಿ. ಆದರೆ ಕೈಗಾರಿಕೆ ಹೆಸರಿನಲ್ಲಿ ದೊಡ್ಡ ಬಂಡವಾಳಗಾರರ ಲೂಟಿಕೋರತನಕ್ಕೋಸ್ಕರ ನೀವು ಮಾಡಲಿಕ್ಕೆ ಹೊರಟರೆ, ನಾವು ಅದನ್ನು ವಿರೋಧ ಮಾಡುತ್ತೇವೆ. ಹಾಗಾಗಿ ಅದು ಬಹಳ ಸ್ಪಷ್ಟವಿದೆ.

ಆದ್ದರಿಂದ, ನೂರ್‌ ಹೇಳಿದರು – ನಮ್ಮ ಎಂ.ಬಿ. ಪಾಟೀಲರು, “ಇಲ್ಲಿ ಬಂಡವಾಳದಾರರು ಈ ರೀತಿ ಹೋರಾಟ ಮಾಡಿದರೆ, ಈ ರೀತಿ ತೀರ್ಮಾನ ಮಾಡಿದರೆ ಅವರು ಬಿಟ್ಟು ಆಂಧ್ರಕ್ಕೆ ಹೋಗಿಬಿಡುತ್ತಾರೆ, ಅಲ್ಲಿಗೆ ಹೋಗುತ್ತಾರೆ, ಇಲ್ಲಿಗೆ ಹೋಗುತ್ತಾರೆ” ಅಂತ ಹೇಳುತ್ತಾ ಬಂದಿದ್ದಾರೆ. ನಾವೇನು ಹೇಳುತ್ತಿರುವುದು ಎಂದರೆ, ನೀವು ಬಂಡವಾಳಗಾರರಿಗೆ ಹೆದರಿಕೊಂಡು ಕೈಗಾರೀಕರಣ ಮಾಡುವುದಲ್ಲ. ಕರ್ನಾಟಕ ರಾಜ್ಯದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕೈಗಾರೀಕರಣ ಮಾಡಬೇಕು ಅಂತ ನಾವು ಹೇಳುತ್ತಿರುವುದು. ಬಂಡವಾಳಗಾರರಿಗೆ ನೀವು ಎಷ್ಟು ದೊಡ್ಡ ಪ್ರಮಾಣದಲ್ಲಿ ಸಬ್ಸಿಡಿ ಕೊಡುತ್ತಾ ಹೋಗುತ್ತಿದ್ದೀರಿ. ಅದನ್ನೆಲ್ಲಾ ಮಾಡಬಾರದು. ನೀವು ಸರಿಯಾದಂತಹ ಒಂದು ಕೈಗಾರಿಕಾ ನೀತಿಯನ್ನು ಅನುಸರಿಸಬೇಕು ಅಂತ ಒಂದು ಒತ್ತಾಯವನ್ನು ಮಾಡುತ್ತಾ ಇದ್ದೇವೆ.

ಈಗ ಸಿದ್ದರಾಮಯ್ಯನವರ ಸರ್ಕಾರ ಹೆದರುತ್ತಿದೆ. ಕಳೆದ ಬಾರಿ ಅವರು ಸ್ಥಳೀಯರಿಗೆ ಉದ್ಯೋಗ ಕೊಡುವುದಕ್ಕೆ ನಾನು ಕ್ಯಾಬಿನೆಟ್‌ನಲ್ಲಿ ತೀರ್ಮಾನ ಮಾಡುತ್ತೇನೆ ಅಂತ ಘೋಷಣೆ ಮಾಡಿದರು. ಯಾರೋ ನಾಲ್ಕು ಜನ ಬಂಡವಾಳದಾರರು ಗುಡುಗಿದರು ಅನ್ನುವಂತಹ ಕಾರಣಕ್ಕೆ ಕ್ಯಾಬಿನೆಟ್‌ನಲ್ಲಿ ಆ ಸುದ್ದಿನೇ ತರಲಿಲ್ಲ. ಅಷ್ಟು ಹೆದರಿಕೆ ಇದೆ ಅವರಿಗೆ. ಆದರೆ ಆಯ್ಕೆಯಾಗಿರುವುದು ಜನರಿಂದ ಸರ್ಕಾರ, ಬಂಡವಾಳಗಾರರಿಂದಲ್ಲ. ಅದನ್ನು ಸಿದ್ದರಾಮಯ್ಯನವರು ಮತ್ತು ಈ ಸರ್ಕಾರ ನೆನಪಿಡಬೇಕು. ಈ ರಾಜ್ಯದ ಜನತೆಯ ತಲಾ ಆದಾಯ ಹೆಚ್ಚಾಗುವಂತಹ ರೀತಿಯಲ್ಲಿ, ಈ ರಾಜ್ಯದ ಜನತೆಗೆ ಆಹಾರದ ಸ್ವಾವಲಂಬನೆ ಸಿಗುವಂತಹ ರೀತಿಯ ಒಂದು ಕೈಗಾರಿಕಾ ನೀತಿಯನ್ನು ಜಾರಿ ತರಬೇಕು ಅಂತ ನಾವು ಒತ್ತಾಯ ಮಾಡುತ್ತಾ ಇದ್ದೇವೆ. ಆದರೆ ಸರ್ಕಾರ ನೋಡೋಣ, ಏನು ನಿಲುವನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ನೋಡಿ ಜುಲೈ 4ರಂದು ತೀರ್ಮಾನ ತೆಗೆದುಕೊಳ್ಳುತ್ತೇವೆ.

ನಾನುಗೌರಿ: ಸಂದರ್ಶನದಲ್ಲಿ ಇಲ್ಲಿಯವರೆಗೆ ಭಾಗವಹಿಸಿದ್ದಕ್ಕೆ ನೂರ್ ಶ್ರೀಧರ್ ಮತ್ತು ಯು. ಬಸವರಾಜ್ ಅವರಿಗೆ ವಂದನೆಗಳು.

ನೂರ್ ಶ್ರೀಧರ್ ಮತ್ತು ಯು. ಬಸವರಾಜ್: ವಂದನೆಗಳು.

ಸಂದರ್ಶನ: ರವಿಕುಮಾರ್ ಈಚಲಮರ

ಬರಹ ರೂಪ: ಮಹೇಶ್ ಕಣಸೋಗಿ

ದೆಹಲಿಯಲ್ಲಿ ದೇವನಹಳ್ಳಿ ರೈತ ಹೋರಾಟದ ಸದ್ದು: ಜೆಪಿಸಿ ಸಭೆಯಿಂದ ಪಲಾಯನಗೈದ ಬಿಜೆಪಿ ಸದಸ್ಯರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...