ಬೆಂಗಳೂರು: ದೇವನಹಳ್ಳಿಯ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ, ಚನ್ನರಾಯಪಟ್ಟಣದ ರೈತರು ಹಾಗೂ ಸಂಯುಕ್ತ ಹೋರಾಟ-ಕರ್ನಾಟಕ ಮತ್ತು ಸಮಾನ ಮನಸ್ಕ ಸಂಘಟನೆಗಳು ಜಂಟಿಯಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ತಮ್ಮ ನಿರಂತರ ಹೋರಾಟ ನಿರ್ಣಾಯಕ ಹಂತ ತಲುಪಿದೆ ಎಂದು ಘೋಷಿಸಿವೆ. ಜುಲೈ 4ರಂದು ಸರ್ಕಾರ ರೈತ ಮುಖಂಡರು ಮತ್ತು ಹೋರಾಟಗಾರರೊಂದಿಗೆ ಕರೆದಿರುವ ಸಭೆಯು 1190 ದಿನಗಳ ಹೋರಾಟಕ್ಕೆ ಮಹತ್ವದ ತಿರುವು ನೀಡಲಿದೆ ಎಂದು ಸಮಿತಿ ಹೇಳಿದೆ.
ಜುಲೈ 2ರಂದು ದೇವನಹಳ್ಳಿಯಲ್ಲಿ ರೈತರಿಂದ, ಬೆಂಗಳೂರಿನಲ್ಲಿ ಗಣ್ಯರಿಂದ ಉಪವಾಸ ಸತ್ಯಾಗ್ರಹ
ಪ್ರಕಟಣೆಯ ಪ್ರಕಾರ, ಜುಲೈ 2ರಂದು (ಗುರುವಾರ) ಎರಡು ಪ್ರಮುಖ ಪ್ರತಿಭಟನೆಗಳು ನಡೆಯಲಿವೆ. ಚನ್ನರಾಯಪಟ್ಟಣದ 13 ಹಳ್ಳಿಗಳ ಸಂತ್ರಸ್ತ ರೈತರು “ನಮ್ಮ ಬದುಕು ಈ ಮಣ್ಣಿನಲ್ಲಿದೆ, ಈ ಮಣ್ಣಿನ ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲಿದೆ” ಎಂಬ ಘೋಷವಾಕ್ಯದೊಂದಿಗೆ ದೇವನಹಳ್ಳಿಯ ನಾಡ ಕಚೇರಿ ಮುಂಭಾಗದಲ್ಲಿರುವ ಧರಣಿ ಸ್ಥಳದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ರೈತರ ಈ ಹೋರಾಟಕ್ಕೆ ನೈತಿಕ ಬೆಂಬಲ ತುಂಬಲು ಹಿರಿಯ ಗಾಂಧಿವಾದಿ ಸಂತೋಷ್ ಕೌಲಗಿಯವರು ಕೂಡ ಉಪವಾಸದಲ್ಲಿ ಪಾಲ್ಗೊಳ್ಳಲಿದ್ದಾರೆ.
ಅದೇ ದಿನ, ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯುತ್ತಿರುವ ‘ಭೂಮಿ ಸತ್ಯಾಗ್ರಹ’ದಲ್ಲಿ ಖ್ಯಾತ ನಟ ಪ್ರಕಾಶ್ ರೈ ಆದಿಯಾಗಿ ನಾಡಿನ ಅನೇಕ ಸಂವೇದನಾಶೀಲ ಕಲಾವಿದರು, ರಂಗಕರ್ಮಿಗಳು ಉಪವಾಸ ನಿರತ ರೈತರನ್ನು ಬೆಂಬಲಿಸಿ ‘ಬೆಂಬಲ ಉಪವಾಸ ಸತ್ಯಾಗ್ರಹ’ ಕೂರಲಿದ್ದಾರೆ.
ಸಾಹಿತಿಗಳು, ಕಲಾವಿದರು, ಚಿಂತಕರಿಂದ ಕ್ಯಾಬಿನೆಟ್‌ಗೆ ಆಗ್ರಹ
ದೇವನಹಳ್ಳಿ ರೈತ ಹೋರಾಟದ ಪರವಾಗಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯುತ್ತಿರುವ ‘ಭೂಮಿ ಸತ್ಯಾಗ್ರಹ’ ಇಂದು 5ನೇ ದಿನಕ್ಕೆ ಕಾಲಿಟ್ಟಿದ್ದು, ಹಲವು ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ಡಾ. ಜಿ. ರಾಮಕೃಷ್ಣ, ಜಾಣಗೆರೆ ವೆಂಕಟರಾಮಯ್ಯ, ಡಾ. ಬಂಜಗೆರೆ ಜಯಪ್ರಕಾಶ್, ಇಂದೂಧರ ಹೊನ್ನಾಪುರ, ಆರ್.ಜಿ. ಹಳ್ಳಿ ನಾಗರಾಜ್ ಮೊದಲಾದ ಹಲವು ಸಾಹಿತಿಗಳು, ಚಿಂತಕರು ಮತ್ತು ಬರಹಗಾರರು ಮುಖ್ಯಮಂತ್ರಿಗಳು ಹಾಗೂ ಕ್ಯಾಬಿನೆಟ್‌ನ ಎಲ್ಲ ಸಚಿವರಿಗೆ ಜಂಟಿಯಾಗಿ ಆಗ್ರಹಿಸಿದ್ದಾರೆ. ಜುಲೈ 2ರಂದು ನಡೆಯುವ ಕ್ಯಾಬಿನೆಟ್ ವಿಶೇಷ ಸಭೆಯಲ್ಲಿ ದೇವನಹಳ್ಳಿಯ ಚನ್ನರಾಯಪಟ್ಟಣದ 13 ಹಳ್ಳಿಗಳ 1777 ಎಕರೆ ಜಮೀನನ್ನು ಭೂಸ್ವಾಧೀನ ಮಾಡುವ ಪ್ರಕ್ರಿಯೆಯನ್ನು ಸಂಪೂರ್ಣ ರದ್ದುಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಹಿರಿಯ ಭಾಷಾ ಹೋರಾಟಗಾರರೂ, ಪತ್ರಕರ್ತರೂ ಆದ ಜಾಣಗೆರೆ ವೆಂಕಟರಾಮಯ್ಯ ಅವರು ಮಾತನಾಡಿ, “ಜುಲೈ 2ರಂದು ಕ್ಯಾಬಿನೆಟ್ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಕ್ಯಾಬಿನೆಟ್‌ನ ಎಲ್ಲ ಸಚಿವರೂ ರೈತರ ಪರವಾದ ನಿರ್ಣಯಕ್ಕೆ ಬರಲೇಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒಳಗೊಂಡಂತೆ, ಕ್ಯಾಬಿನೆಟ್‌ನ ಎಲ್ಲ ಸಚಿವರೂ ಚಳವಳಿಗಳ ಮಹತ್ವವೇನು ಎಂಬುದನ್ನು ಅರಿತವರೇ ಆಗಿದ್ದಾರೆ. ಒಂದು ವೇಳೆ ಸರ್ಕಾರದ ನಿರ್ಧಾರ ರೈತರ ವಿರುದ್ಧ ಬಂದರೆ, ಈ ಚಳವಳಿ ಇನ್ನಷ್ಟು ತೀವ್ರವಾಗಿ ಮುಂದುವರೆಯಲಿದೆ. ರೈತರ ಈ ಹೋರಾಟಕ್ಕೆ ಕರ್ನಾಟಕದ ಸಾಹಿತಿಗಳು, ಬರಹಗಾರರು, ಚಿಂತಕರು ಮತ್ತು ಕಲಾವಿದರ ಸಂಪೂರ್ಣ ಬೆಂಬಲವಿದೆ” ಎಂದು ಹೇಳಿದರು.
ಜುಲೈ 3ರಂದು ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ನಾಯಕರಾದ ರಾಕೇಶ್ ಟಿಕಾಯತ್, ದರ್ಶನ್ ಪಾಲ್ ಆಗಮನ
ಸಂಯುಕ್ತ ಹೋರಾಟ ಕರ್ನಾಟಕ ಮತ್ತು ಸಮಾನ ಮನಸ್ಕ ಸಂಘಟನೆಗಳ ಪರವಾಗಿ ಬಡಗಲಪುರ ನಾಗೇಂದ್ರ, ಯಶವಂತ್, ನೂರ್ ಶ್ರೀಧರ್, ವರಲಕ್ಷ್ಮಿ ಮೊದಲಾದವರು ಮಾತನಾಡಿ, “ಜುಲೈ 2 ರಿಂದ ಫ್ರೀಡಂ ಪಾರ್ಕ್ ನಿರಂತರ ಚಟುವಟಿಕೆಯ ತಾಣವಾಗಲಿದೆ. ಜುಲೈ 3ರಂದು ದೆಹಲಿಯ ರೈತ ಆಂದೋಲನವನ್ನು ಯಶಸ್ವಿಯಾಗಿ ಮುನ್ನಡೆಸಿದ ಸಂಯುಕ್ತ ಕಿಸಾನ್ ಮೋರ್ಚಾದ ಹಿರಿಯ ರೈತ ನಾಯಕರಾದ ರಾಕೇಶ್ ಟಿಕಾಯತ್, ದರ್ಶನ್ ಪಾಲ್ ಮೊದಲಾದವರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಅವರು ದೇವನಹಳ್ಳಿಗೂ ಭೇಟಿ ನೀಡಿ, ಹಳ್ಳಿಗಳಿಗೆ ತೆರಳಿ ರೈತರಿಗೆ ಭರವಸೆ ತುಂಬಲಿದ್ದಾರೆ” ಎಂದು ಮಾಹಿತಿ ನೀಡಿದರು.
ರೈತರ ಸಭೆ ಬಹಿಷ್ಕರಿಸಿದ ಬಿಜೆಪಿ ಸಂಸದರ ನಡೆಗೆ ಖಂಡನೆ; ಪ್ರಕಾಶ್ ರಾಜ್‌ರಿಂದ ಮಲ್ಲಿಕಾರ್ಜುನ ಖರ್ಗೆ ಭೇಟಿ
ಇದೇ ವೇಳೆ, ದೆಹಲಿಯಲ್ಲಿ ಇಂದು ಭೂಸ್ವಾಧೀನದ ಕುರಿತ ಜಂಟಿ ಸಂಸದೀಯ ಸಭೆಗೆ ಆಹ್ವಾನದ ಮೇರೆಗೆ ರೈತರ ಈ ಭೂಸ್ವಾಧೀನ ವಿಷಯ ಕುರಿತು ಮಾತನಾಡಲು ತೆರಳಿದ್ದ ಮೇಧಾ ಪಾಟ್ಕರ್ ಮತ್ತು ಪ್ರಕಾಶ್ ರೈ ಅವರನ್ನು ಕಂಡ ನಂತರ ಸಭೆಯನ್ನು ಬಹಿಷ್ಕರಿಸಿ ತೆರಳಿದ ಬಿಜೆಪಿ ಸಂಸದರ ವರ್ತನೆಯನ್ನು ಹೋರಾಟ ಸಮಿತಿ ತೀವ್ರವಾಗಿ ಖಂಡಿಸಿತು. ಅಲ್ಲದೆ, ಕೋರಂ ಇದ್ದರೂ ಸಭೆ ನಡೆಸದೆ ರೈತರ ವಿರುದ್ಧವಾದ ನಿಲುವು ತಾಳಿದ ಸಂಸದೀಯ ಸಮಿತಿಯ ಸಂಚಾಲಕರ ನಡೆಯನ್ನೂ ಖಂಡಿಸಲಾಯಿತು. ಈ ಘಟನೆಗಳ ನಂತರ, ಪ್ರಕಾಶ್ ರೈ ಅವರು ವಿರೋಧ ಪಕ್ಷದ ನಾಯಕರೂ, ಎಐಸಿಸಿ ಅಧ್ಯಕ್ಷರೂ ಆದ ಕರ್ನಾಟಕದ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ, ಅವರಿಗೆ ವಿಚಾರ ತಿಳಿಸಿದ್ದಾರೆ. ಅಲ್ಲದೆ, ರೈತರ ಹೋರಾಟಕ್ಕೆ ಬೆಂಬಲಿಸಿ ರಾಜ್ಯಕ್ಕೆ ಬಂದು ಹೋರಾಟ ನಿರತರನ್ನು ಭೇಟಿಯಾಗುವಂತೆ ಮನವಿ ಮಾಡಿದ್ದಾರೆ ಎಂಬ ಮಾಹಿತಿಯನ್ನೂ ಸಮಿತಿ ನೀಡಿತು.
ಜುಲೈ 4ರಂದು “ನಾಡ ಉಳಿಸಿ ಸಮಾವೇಶ”
ಜುಲೈ 4ರಂದು ಮುಖ್ಯಮಂತ್ರಿಗಳು ರೈತರು ಮತ್ತು ಹೋರಾಟಗಾರರೊಂದಿಗೆ ಕರೆದಿರುವ ಸಭೆಯ ವೇಳೆ, ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಬೃಹತ್ “ನಾಡ ಉಳಿಸಿ ಸಮಾವೇಶ” ನಡೆಯಲಿದೆ. ಇದರಲ್ಲಿ ನಾಡಿನ ಎಲ್ಲ ಭಾಗಗಳಿಂದ ಸಂಘಟನೆಗಳ ಕಾರ್ಯಕರ್ತರು, ಪ್ರಜಾಪ್ರಭುತ್ವದ ಪರ ಇರುವ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಮಿತಿ ಮಾಹಿತಿ ನೀಡಿದೆ. “ದೇವನಹಳ್ಳಿ ಹೋರಾಟ ಕೇವಲ ಸ್ಥಳೀಯ ಸಮಸ್ಯೆಯಲ್ಲ, ಇದು ರಾಜ್ಯದ ರೈತರ ಅಸ್ಮಿತೆ ಮತ್ತು ಕೃಷಿ ಸಂಸ್ಕೃತಿಯ ರಕ್ಷಣೆಯ ಹೋರಾಟ” ಎಂದು ಸಮಿತಿ ಮುಖಂಡರು ಪುನರುಚ್ಚರಿಸಿದರು.
ಸಭೆಯಲ್ಲಿ ಡಾ. ಜಿ. ರಾಮಕೃಷ್ಣ, ಜಾಣಗೆರೆ ವೆಂಕಟರಾಮಯ್ಯ, ಡಾ. ಬಂಜಗೆರೆ ಜಯಪ್ರಕಾಶ್, ಇಂದೂಧರ ಹೊನ್ನಾಪುರ, ಆರ್.ಜಿ. ಹಳ್ಳಿ ನಾಗರಾಜ್, ಗುರುಪ್ರಸಾದ್ ಕೆರಗೋಡು, ವಿ. ನಾಗರಾಜ್, ಜೆ.ಎಂ. ವೀರಸಂಗಯ್ಯ, ಚುಕ್ಕಿ ನಂಜುಂಡಸ್ವಾಮಿ, ಮೀನಾಕ್ಷಿ ಸುಂದರಂ, ಲಕ್ಷ್ಮಿ, ದೇವಿ, ಶ್ರೀನಿವಾಸ್ ಕಾರಹಳ್ಳಿ, ಡಿ.ಎಚ್. ಪೂಜಾರ್, ಪ್ರಭಾ ಬೆಳವಂಗಲ, ಕೆ.ವಿ. ಭಟ್, ಮಲ್ಲಿಗೆ ಸಿರಿಮನೆ, ನಾಗರಾಜ್ ಪೂಜಾರ್, ಶ್ರೀಮತಿ ವೀರಸಂಗಯ್ಯ ಮೊದಲಾದವರು ಇದ್ದರು.
ದೇವನಹಳ್ಳಿ ಭೂಸ್ವಾಧೀನ ವಿರೋಧಿ ಹೋರಾಟ: ಜು.2ಕ್ಕೆ ಸಂತ್ರಸ್ತ ರೈತರಿಂದ ಉಪವಾಸ ಸತ್ಯಾಗ್ರಹ-ವೀಡಿಯೋ


