ದೇವನಹಳ್ಳಿ ರೈತರ ಭೂ ಸ್ವಾಧೀನ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಸುತ್ತಿರುವ ‘ಭೂಮಿ ಸತ್ಯಾಗ್ರಹ’ ಬುಧವಾರ (ಜು.2) ಆರನೇ ದಿನಕ್ಕೆ ಕಾಲಿಟ್ಟಿದೆ. ಫ್ರೀಡಂ ಪಾರ್ಕ್ ಮತ್ತು ಚನ್ನರಾಯಪಟ್ಟಣ ಎರಡೂ ಕಡೆ ರೈತರು, ಹೋರಾಟಗಾರರು ಉಪವಾಸ ಕೈಗೊಂಡಿದ್ದಾರೆ.
ಫ್ರೀಡಂ ಪಾರ್ಕ್‌ನಲ್ಲಿ ಹೋರಾಟಗಾರರಾದ ಡಿ.ಎಚ್ ಪೂಜಾರಿ, ಯಶವಂತ, ಎಸ್. ವರಲಕ್ಷ್ಮಿ, ದೇವಿ, ಲಕ್ಷ್ಮಣ ಮಂಡಲಗೇರಾ, ಮಲ್ಲಿಗೆ ಸಿರಿಮನೆ, ಯಾಮ್ರೋಸ್ ಮತ್ತು ಪ್ರಭಾ ಬೆಳವಂಗಲ ಉಪವಾಸ ಕುಳಿತಿದ್ದಾರೆ. ಉಳಿದವರು ಅವರಿಗೆ ಸಾಥ್ ನೀಡಿದ್ದಾರೆ.
ಚನ್ನರಾಯಪಟ್ಟಣದಲ್ಲಿ ನಾಡ ಕಚೇರಿ ಮುಂಭಾಗದ ಧರಣಿ ಸ್ಥಳದಲ್ಲಿ ನೂರಾರು ರೈತರು ಉಪವಾಸದಲ್ಲಿದ್ದಾರೆ.
ಭೂ ಸ್ವಾಧೀನ ವಿರೋಧಿಸಿ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರು ನಡೆಸುತ್ತಿದ್ದ ನಿರಂತರ ಹೋರಾಟ 2025 ಜೂನ್ 25ಕ್ಕೆ 1,180 ದಿನಗಳನ್ನು ಪೂರೈಸಿತ್ತು. ಹಾಗಾಗಿ, ಅಂದು ದೇವನಹಳ್ಳಿ ಪಟ್ಟಣದ ಸಂತೆ ಮೈದಾನದಲ್ಲಿ ದೊಡ್ಡ ಮಟ್ಟದಲ್ಲಿ ನಿರ್ಣಾಯಕ ‘ದೇವನಹಳ್ಳಿ ಚಲೋ’ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.
ಬಹುಭಾಷಾ ನಟ ಪ್ರಕಾಶ್ ರಾಜ್, ಎಎಪಿ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ರಾಜ್ಯ ರೈತ ಸಂಘದ ನಾಯಕ ಬಡಗಲಪುರ ನಾಗೇಂದ್ರ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಕರ್ನಾಟಕ ಪ್ರಾಂತ ರೈತ ಸಂಘದ ನಾಯಕ ಯಶವಂತ, ಸಿಐಟಿಯು ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮಿ, ಹೋರಾಟಗಾರರಾದ ಚುಕ್ಕಿ ನಂಜುಂಡಸ್ವಾಮಿ ಸೇರಿದಂತೆ ಪ್ರಮುಖರು ಸಮಾವೇಶದಲ್ಲಿ ಭಾಗವಹಿಸಿದ್ದರು. ಚನ್ನರಾಯಪಟ್ಟ ಹೋಬಳಿ ಮಾತ್ರವಲ್ಲದೆ ಇತರೆಡೆಗಳಿಂದಲೂ ರೈತರು ಆಗಮಿಸಿದ್ದರು.
ಆರಂಭದಲ್ಲಿ ಸಮಾವೇಶಕ್ಕೆ ಆಗಮಿಸುವವರಿಗೆ ಪೊಲೀಸರು ಕೊಂಚ ಅಡ್ಡಿಪಡಿಸಿದರೂ, ಬೆಳಿಗ್ಗೆಯಿಂದ ಸಂಜೆಯವರೆಗೆ ಪ್ರತಿಭಟನಾ ಸಮಾವೇಶ ಸುಸೂತ್ರವಾಗಿ ನಡೆದಿತ್ತು. ಆದರೆ, ಸಂಜೆ 6.30ರ ಸುಮಾರಿಗೆ ರೈತರು ಮತ್ತು ಹೋರಾಟಗಾರರನ್ನು ಪೊಲೀಸರು ಅಮಾನುಷವಾಗಿ ಬಂಧಿಸಿದ್ದರು.
ಇದರಿಂದ ಆಕ್ರೋಶಗೊಂಡ ಹೋರಾಟಗಾರರು, ಜೂನ್ 27ರಿಂದ ಫ್ರೀಡಂ ಪಾರ್ಕ್‌ನಲ್ಲಿ ಬಿಡಾರ ಹೂಡಿ ‘ಭೂಮಿ ಸತ್ಯಾಗ್ರಹ’ ಹಮ್ಮಿಕೊಂಡಿದ್ದಾರೆ.
ಸಚಿವ ಸಂಪುಟ ಮತ್ತು ಸಿಎಂ ಸಭೆ
ಜೂನ್ 26ರಂದು ನಟ ಪ್ರಕಾಶ್ ರಾಜ್ ನೇತೃತ್ವದಲ್ಲಿ ಹೋರಾಟಗಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಬಲವಂತದ ಭೂ ಸ್ವಾಧೀನ ಕೈ ಬಿಡುವಂತೆ ಆಗ್ರಹಿಸಿದ್ದಾರೆ. ಈ ಕುರಿತು ಜುಲೈ4ರಂದು ಸಮಗ್ರ ಸಭೆ ನಡೆಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ.
ಈ ನಡುವೆ ಜುಲೈ 2ರಂದು ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಈ ಸಭೆಯಲ್ಲಿ ರೈತ ಪರ ತೀರ್ಮಾನ ಕೈಗೊಳ್ಳುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸಲಾಗ್ತಿದೆ. ರೈತರು ಮತ್ತು ಹೋರಾಟಗಾರರು ನಂದಿ ಬೆಟ್ಟದ ಸಂಪುಟ ಸಭೆಯಿಂದ ನಿಟ್ಟುಸಿರು ಬಿಡುವ ಸುದ್ದಿ ಬರಲು ಕಾಯುತ್ತಿದ್ದಾರೆ. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ.
ದೇವನಹಳ್ಳಿ ಭೂಸ್ವಾಧೀನ ಮಾಡಿದರೆ ಸರಕಾರಕ್ಕೆ ಎಚ್ಚರಿಕೆ: ಸಂಯುಕ್ತ ಹೋರಾಟದ ನಾಯಕರೊಂದಿಗೆ ವಿಶೇಷ ಸಂದರ್ಶನ


