ಬೆಂಗಳೂರು: ಅಭಿವೃದ್ಧಿಯ ಹೆಸರಿನಲ್ಲಿ ದೇವನಹಳ್ಳಿ ಭಾಗದಲ್ಲಿ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆಗಳ ವಿರುದ್ಧ ರೈತರ ಆಕ್ರೋಶ ಭುಗಿಲೆದ್ದಿದೆ. ಇಂದು, ಜುಲೈ 2ರಂದು, ರೈತರು ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣದ ನಾಡಕಚೇರಿ ಎದುರು ಬೃಹತ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೆ, ರಾಜಧಾನಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕೆಲ ಹೋರಾಟಗಾರರು ಸಹ ಉಪವಾಸದಲ್ಲಿ ತೊಡಗಿದ್ದಾರೆ. ಒಂದು ಕಡೆ ನಂದಿಬೆಟ್ಟದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯುತ್ತಿದ್ದರೆ, ಇನ್ನೊಂದೆಡೆ ತೀವ್ರಗೊಂಡಿರುವ ರೈತರ ಭೂ ವಿರೋಧಿ ಹೋರಾಟವು ಸರ್ಕಾರಕ್ಕೆ ನೇರ ಸವಾಲೊಡ್ಡಿದೆ. ಈ ಹೋರಾಟಕ್ಕೆ ನಟ ಕಿಶೋರ್ ಕುಮಾರ್ ಧ್ವನಿಗೂಡಿಸಿದ್ದು, ರೈತರ ಭವಿಷ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
“ರೈತರು ತಮ್ಮ ಹೊಲ, ಗದ್ದೆಗಳಲ್ಲಿ ಮಾಡುವ ಕೌಶಲ್ಯಪೂರ್ಣ ಕೆಲಸಗಳನ್ನು ಫ್ಯಾಕ್ಟರಿಗಳಿಂದ ಕೊಡಲು ಸಾಧ್ಯವೇ? ಫ್ಯಾಕ್ಟರಿಗಳಿಂದ ಅನ್ನ ಬೆಳೆಯಲು ಸಾಧ್ಯವೇ?” ಎಂದು ಪ್ರಶ್ನಿಸಿರುವ ನಟ ಕಿಶೋರ್, ಆಧುನಿಕ ಕೈಗಾರಿಕೀಕರಣದ ಭ್ರಮೆಯಲ್ಲಿ ರೈತರ ಮೂಲ ಬದುಕು ಕಸಿದುಕೊಳ್ಳಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ದೇವನಹಳ್ಳಿ ರೈತರು ಭೂಸ್ವಾಧೀನದಿಂದಾಗಿ ತಮ್ಮ ಬದುಕಿನ ಮೂಲಾಧಾರವಾದ ಭೂಮಿಯನ್ನು ಕಳೆದುಕೊಂಡು ನಿರುದ್ಯೋಗಿಗಳಾಗುತ್ತಾರೆ ಎಂಬ ಆತಂಕವನ್ನು ನಟ ಕಿಶೋರ್ ಮತ್ತಷ್ಟು ಸ್ಪಷ್ಟಪಡಿಸಿದ್ದಾರೆ. “ಈ ರೈತರನ್ನೆಲ್ಲಾ ನಗರಕ್ಕೆ ವಲಸೆ ಬರುವಂತೆ ಮಾಡುತ್ತಾರೆ. ಇಲ್ಲಿ ಯಾವುದೋ ಒಂದು ಸೆಕ್ಯೂರಿಟಿ ಕೆಲಸ, ಕಸ ಗುಡಿಸುವ ಕೆಲಸವನ್ನು ಅವರು ಮಾಡಬೇಕಾಗುತ್ತದೆ. ಒಟ್ಟಿನಲ್ಲಿ ತನ್ನ ಮನಸ್ಸಿಗೆ ಬೇಕಾದಂತೆ ಸ್ವಾಭಿಮಾನದಿಂದ ಬದುಕಿದ್ದ ರೈತರನ್ನು ನಗರದಲ್ಲಿ ಕೂಲಿ ಕೆಲಸಕ್ಕೆ ಹಚ್ಚಲಾಗುತ್ತದೆ” ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಹಳ್ಳಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದವರು ಸಹ ಒಂದು ರೀತಿಯ ನೆಮ್ಮದಿಯ ಜೀವನ ನಡೆಸುತ್ತಿದ್ದರು ಎಂಬುದನ್ನು ಸ್ಮರಿಸಿದ ಅವರು, ಭೂಮಿ ಇಲ್ಲದವರು ಸಹ ಹಳ್ಳಿಯಲ್ಲೇ ಕೂಲಿ ಮಾಡುತ್ತಿದ್ದರೂ ಬದುಕು ನೆಮ್ಮದಿಯಿಂದಿತ್ತು ಎಂದಿದ್ದಾರೆ. “ಒಟ್ಟಾರೆ, ರೈತರ ಈಗಿನ ನೆಮ್ಮದಿಯ ಜೀವನವನ್ನು ಕೆಡಿಸಿ, ಸರ್ಕಾರ ಅಥವಾ ಕಾರ್ಪೊರೇಟ್‌ಗಳು ಕೊಟ್ಟ ಸಂಬಳಕ್ಕೆ ಜೀವನಪೂರ್ತಿ ದುಡಿಯಬೇಕಾಗುತ್ತದೆ. ಅಲ್ಲಿಗೆ ಅವರ ಜೀವನ ಮುಗಿದು ಹೋಗುತ್ತದೆ” ಎಂದು ಭೂಸ್ವಾಧೀನದಿಂದ ರೈತರ ಬದುಕಿನ ಮೇಲೆ ಆಗುವ ತೀವ್ರ, ದೀರ್ಘಕಾಲೀನ ಪರಿಣಾಮವನ್ನು ಕಟುವಾಗಿ ವಿವರಿಸಿದ್ದಾರೆ.
ಅಭಿವೃದ್ಧಿಯ ಹೆಸರಿನಲ್ಲಿ ಈಗಾಗಲೇ ರಾಜ್ಯದ ಹಲವು ಕಡೆಗಳಲ್ಲಿ ಭೂ ಕಬಳಿಕೆಯಿಂದಾಗಿ ಸಾವಿರಾರು ರೈತರು ಏನೆಲ್ಲಾ ಅನುಭವಿಸುತ್ತಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು, “ಮುಖ್ಯವಾಗಿ ನಮ್ಮ ನಾಡಿನ ಜನತೆ ಇದನ್ನು ನಮ್ಮ ಹೋರಾಟ ಎಂದು ತಿಳಿದುಕೊಂಡು, ಅರ್ಥಮಾಡಿಕೊಂಡು ಇಲ್ಲಿಗೆ ಬಂದು ರೈತರನ್ನು, ಇಲ್ಲಿಯ ಹೋರಾಟಗಾರರನ್ನು ಬೆಂಬಲಿಸಬೇಕು” ಎಂದು ನಟ ಕಿಶೋರ್ ಕುಮಾರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ದೇವನಹಳ್ಳಿ ರೈತರ ಭೂ ವಿರೋಧಿ ಹೋರಾಟದ ಕುರಿತು ನಾಡಿನೆಲ್ಲೆಡೆ ಸಾಕಷ್ಟು ಚರ್ಚೆ ನಡೆಯುತ್ತಿದ್ದು, ರಾಜ್ಯದಲ್ಲಿ ಇದು ಒಂದು ಪ್ರಮುಖ ವಿಷಯವಾಗಿ ಮಾರ್ಪಟ್ಟಿದೆ. ರೈತರ ಈ ಹೋರಾಟಕ್ಕೆ ನಂದಿಬೆಟ್ಟದಲ್ಲಿ ಸಭೆ ಸೇರಿರುವ ರಾಜ್ಯ ಸರ್ಕಾರ ಯಾವ ರೀತಿ ಸ್ಪಂದಿಸುತ್ತದೆ, ಯಾವ ನಿರ್ಧಾರಗಳನ್ನು ಕೈಗೊಳ್ಳುತ್ತದೆ ಎಂಬುದನ್ನು ಎಲ್ಲರೂ ಕಾದು ನೋಡುತ್ತಿದ್ದಾರೆ.
ಫ್ರೀಡಂ ಪಾರ್ಕ್‌ನಲ್ಲಿ ಹೋರಾಟಗಾರರಾದ ಡಿ.ಎಚ್ ಪೂಜಾರಿ, ಯಶವಂತ, ಎಸ್. ವರಲಕ್ಷ್ಮಿ, ದೇವಿ, ಲಕ್ಷ್ಮಣ ಮಂಡಲಗೇರಾ, ಮಲ್ಲಿಗೆ ಸಿರಿಮನೆ ಮತ್ತು ಪ್ರಭಾ ಬೆಳವಂಗಲ ಉಪವಾಸ ಕುಳಿತಿದ್ದಾರೆ. ಉಳಿದವರು ಅವರಿಗೆ ಸಾಥ್ ನೀಡಿದ್ದಾರೆ.
ಆರನೇ ದಿನಕ್ಕೆ ಕಾಲಿಟ್ಟ ‘ಭೂಮಿ ಸತ್ಯಾಗ್ರಹ’: ಫ್ರೀಡಂ ಪಾರ್ಕ್, ಚನ್ನರಾಯಪಟ್ಟಣದಲ್ಲಿ ನಿರಶನ


