ಚನ್ನರಾಯಪಟ್ಟಣ 13 ಹಳ್ಳಿಗಳ ಬಲವಂತದ ಭೂಸ್ವಾಧೀನ ವಿರೋಧಿಸಿ ನಡೆಯುತ್ತಿರುವ ದೇವನಹಳ್ಳಿ ಭೂಮಿ ಹೋರಾಟಕ್ಕೆ ‘ಸಂಯುಕ್ತ ಕಿಸಾನ್ ಮೋರ್ಚಾ’ ಬೆಂಬಲವಿದೆ ಎಂದು ಸಮಿತಿ ಮುಖಂಡರಾದ ಡಾ. ದರ್ಶನ್ ಪಾಲ್ ಘೋಷಿಸಿದರು.
ಬೆಂಗಳೂರಿನ ಫ್ರೀಡಂ ಪಾರ್ಕಿನ ಭೂಮಿ ಸತ್ಯಾಗ್ರಹ ವೇದಿಕೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಬೆಂಗಳೂರು ನಗರಕ್ಕೆ ಇಷ್ಟು ಹತ್ತಿರವಿದ್ದೂ ತಮ್ಮ ಭೂಮಿಯನ್ನು ಬಿಡುವುದಿಲ್ಲವೆಂದು ಸುಮಾರು ಮೂರೂವರೆ ವರ್ಷಗಳಿಂದ ಹೋರಾಟ ನಡೆಸುತ್ತಿರುವ ರೈತರಿಗೆ ಅಭಿನಂದನೆಗಳು. ಈ ಹೋರಾಟ ಮಾದರಿಯಾದದ್ದು. ಈಚೆಗೆ ಎಸ್.ಕೆ.ಎಂ ಸಭೆ ನಡೆಸಲಾಗಿದ್ದು, ಎರಡು ವಿಚಾರಗಳಿಗೆ ಬೆಂಬಲವನ್ನು ನೀಡಬೇಕೆಂದು ನಿರ್ಧಾರವಾಗಿದೆ. ಮೊದಲನೇಯದ್ದು, ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ನೀಡಿರುವ ‘ಅಖಿಲ ಭಾರತ ಮುಷ್ಕರ’ಕ್ಕೆ ಬೆಂಬಲ ನೀಡಬೇಕೆಂಬುದು. ಹಾಗೆಯೇ, ಭೂಸ್ವಾಧೀನಗಳ ವಿರುದ್ಧದ ರೈತರ ಹೋರಾಟವನ್ನು ಬೆಂಬಲಿಸಲು ನಿರ್ಧರಿಸಲಾಗಿದೆ” ಎಂದು ಮಾಹಿತಿ ನೀಡಿದರು.
“ದೆಹಲಿಯಲ್ಲಿ ಕೇಂದ್ರ ಸರ್ಕಾರದ ಕರಾಳ ಕಾಯ್ದೆಗಳ ವಿರುದ್ಧ ಹದಿಮೂರು ತಿಂಗಳು ನಿರಂತರ ಹೋರಾಟ ನಡೆಸಿ ಗೆಲುವು ಸಾಧಿಸಿದೆವು. ಆದರೆ, ಇಲ್ಲಿನ ರೈತರು ಮೂರೂವರೆ ವರ್ಷ ಹೋರಾಡಿದ್ದಾರೆ. ದೇಶದಾದ್ಯಂತ ಭೂಸ್ವಾಧೀನ ನಡೆಯುವಾಗ ಪ್ಯಾಕೇಜ್ ಬಗ್ಗೆ ಚರ್ಚೆಯಾಗುತ್ತದೆ; ಆದರೆ ಇಲ್ಲಿನ ರೈತರು ಜಮೀನು ಕೊಡುವುದಿಲ್ಲ ಎಂದು ನಿರ್ಧರಿಸಿ, ಇಂದಿಗೂ ಆ ನಿಲುವಿಗೆ ಬದ್ಧರಾಗಿದ್ದಾರೆ. ಆ ಕಾರಣಕ್ಕೆ ಇದು ವಿಶಿಷ್ಟವಾದ ಹೋರಾಟ” ಎಂದು ಅವರು ಹೋರಾಟನಿರತ ರೈತರನ್ನು ಅಭಿನಂದಿಸಿದರು.

ಎಸ್‌ಕೆಎಂ ಮುಖಂಡರಾದ ಡಾ. ಸುನಿಲಮ್ ಮಾತನಾಡಿ, “ಈ ರೈತ ಆಂದೋಲನದ ಸಮಯದಲ್ಲಿ ನಡೆದ ಪೊಲೀಸ್ ದೌರ್ಜನ್ಯ ಖಂಡನೀಯ, ದಬ್ಬಾಳಿಕೆ ನಡೆಸಿದ ಪೊಲೀಸರ ಮೇಲೆ ಕಾನೂನು ಕ್ರಮ ಆಗಬೇಕೆಂದು ಎಸ್.ಕೆ.ಎಂ ಒತ್ತಾಯಿಸುತ್ತದೆ. ದರ್ಶನ್ ಪಾಲ್ ಅವರು ಹೇಳಿದಂತೆ ಇದು ವಿಶಿಷ್ಟ ಹೋರಾಟ, ಈ ಹೋರಾಟದ ಪ್ರತಿನಿಧಿಗಳೊಂದಿಗೆ ನಾಳೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕರೆದಿರುವ ಸಭೆ ಇದೆ. ಅದು ಯಶಸ್ವಿಯಾಗುತ್ತದೆಂದು ನಾವು ಭರವಸೆ ಇಟ್ಟಿದ್ದೇವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಇಡೀ ದೇಶಾದ್ಯಂತ ಸುತ್ತಾಡಿ ಎನ್‌ಡಿಎ ಸರ್ಕಾರದ ಕರಾಳ ಕಾನೂನುಗಳ ವಿರುದ್ಧ ಮಾತನಾಡುವವರು, ತಮ್ಮದೇ ಪಕ್ಷದ ಸರ್ಕಾರ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಅವರು ರೈತರಿಗೆ ನ್ಯಾಯ ಸಿಗುವುದನ್ನು ಖಾತ್ರಿ ಪಡಿಸಬೇಕಲ್ಲವೇ? ಹಾಗೆಯೇ ʼಜನಚಳವಳಿಗಳ ರಾಷ್ಟೀಯ ವೇದಿಕೆʼ (ಎನ್‌ಎಪಿಎಂ) ಮುಖಂಡರಾದ ಮೇಧಾ ಪಾಟ್ಕರ್ ಅವರೂ ಕೂಡಾ ಮುಖ್ಯಮಂತ್ರಿಯವರಿಗೆ ಒಂದು ಪತ್ರ ಬರೆದು ದೇವನಹಳ್ಳಿಯ ರೈತರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಿದ್ಧರಾಮಯ್ಯನವರಿಗೆ ನೆನಪಿಸಲು ಬಯಸುತ್ತೇನೆ, ಅವರ ಸರ್ಕಾರ ಅಧಿಕಾರಕ್ಕೆ ಬರಲು ದಾರಿಮಾಡಿಕೊಟ್ಟ ಎಲ್ಲ ಚಳುವಳಿಗಾರರೂ ಇಂದು ದೇವನಹಳ್ಳಿಯ ಹೋರಾಟದ ಜೊತೆಗಿದ್ದಾರೆ. ಇದನ್ನು ಅವರು ಗಂಭೀರವಾಗಿ ಪರಿಗಣಿಸುತ್ತಾರೆಂದು ನಂಬಿದ್ದೇನೆ” ಎಂದು ಹೇಳಿದರು.

ಉತ್ತರಪ್ರದೇಶದಿಂದ ಬಂದಿರುವ ಎಸ್.ಕೆ.ಎಂನ ರಾಷ್ಟ್ರೀಯ ನಾಯಕರಾದ ಯುಧ್‌ವೀರ್ ಸಿಂಗ್ ಅವರು ಮಾತನಾಡುತ್ತಾ, “ರೈತರು ಹೆಚ್ಚೂಕಡಿಮೆ 1200 ದಿನಗಳ ಕಾಲ ಹೋರಾಟ ನಡೆಸಿದ್ದಾರೆ ಎಂದರೆ ಅದೇನೂ ಕಡಿಮೆ ವಿಚಾರವಲ್ಲ; ಸ್ವತಃ ಸಿದ್ಧರಾಮಯ್ಯ ಅವರು ಈ ರೈತರಿಗೆ ಭೂಸ್ವಾಧೀನವನ್ನು ರದ್ದುಪಡಿಸುವ ಭರವಸೆಯನ್ನು ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ನೀಡಿದ್ದಾರೆ, ಆ ಮಾತನ್ನು ಅವರು ಉಳಿಸಿಕೊಳ್ಳಬೇಕಿದೆ. ಸಿದ್ಧರಾಮಯ್ಯ ಅವರನ್ನು ಮಾತನಾಡಿಸುವಾಗ, ಅವರು ನಮ್ಮಲ್ಲೇ ಒಬ್ಬರೇನೋ ಎಂದು ಅನಿಸುತ್ತದೆ. ಹಾಗೆಯೇ, ರೈತರ ನಡುವಿನಿಂದ ಹೋದವರೊಬ್ಬರು ಮುಖ್ಯಮಂತ್ರಿಗಳಾದಾಗ ಅವರ ಮೇಲೆ ರೈತರ ನಿರೀಕ್ಷೆ ಬಹಳ ಹೆಚ್ಚಿದೆ, ಇಂತಹ ರಾಜ್ಯದಲ್ಲಿ ರೈತರಿಗೆ ಈ ಸ್ಥಿತಿ ಬರಲೇಬಾರದಿತ್ತು” ಎಂದು ಬೇಸರ ವ್ಯಕ್ತಪಡಿಸಿದರು.
ಉತ್ತರ ಪ್ರದೇಶದಿಂದ ಸಾವಿರಾರು ರೈತರನ್ನು ಕರೆದುಕೊಂಡು ಬರುತ್ತೇವೆ
“ನಾವು ಕರ್ನಾಟಕಕ್ಕೆ ಮೊದಲ ಬಾರಿಗೆ ಬರುತ್ತಿರುವುದಲ್ಲ, ಈ ಹಿಂದೆ 90ರ ದಶಕದಲ್ಲಿ ಮಹೇಂದ್ರ ಸಿಂಗ್ ಟಿಕಾಯತ್ ಅವರು ಬಂದಿದ್ದಾಗ 1500 ರೈತರನ್ನು ಕರೆದುಕೊಂಡು ನಾವು ಉತ್ತರ ಪ್ರದೇಶದಿಂದ ಕರ್ನಾಟಕದ ರೈತರಿಗೆ ಬೆಂಬಲ ನೀಡಲು ಬಂದಿದ್ದೆವು; ನಾಳೆಯ ಸಭೆಯಲ್ಲಿ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಈ ಸಮಸ್ಯೆಯನ್ನು ಬಗೆಹರಿಸುತ್ತಾರೆಂಬ ನಿರೀಕ್ಷೆ ವ್ಯಕ್ತಪಡಿಸುತ್ತಿದ್ದೇನೆ. ಒಂದು ವೇಳೆ ಹಾಗಾಗದಿದ್ದರೆ, ಇಲ್ಲಿನ ಸಂಯುಕ್ತ ಹೋರಾಟ-ಕರ್ನಾಟಕ ದೇವನಹಳ್ಳಿಯ ರೈತರ ಜೊತೆಗೂಡಿ ಏನು ನಿರ್ಧಾರ ಕೈಗೊಳ್ಳುತ್ತದೋ ಮುಂದಿನ ಹೋರಾಟದ ಆ ಕಾರ್ಯತಂತ್ರಕ್ಕೆ ಸಂಯುಕ್ತ ಕಿಸಾನ್ ಮೋರ್ಚಾದ ಸಂಪೂರ್ಣ ಬೆಂಬಲ ಇರುತ್ತದೆ, ನಾವು ಸಾವಿರಾರು ರೈತರನ್ನು ಕರೆದುಕೊಂಡು ಇಲ್ಲಿಗೆ ಬಂದಿಳಿಯಬೇಕಾಗುತ್ತದೆ, ಇದನ್ನು ನಾನು ಭಾರವಾದ ಹೃದಯದಿಂದ ಹೇಳುತ್ತಿದ್ದೇನೆ, ಅಂತಹ ಸ್ಥಿತಿ ಬರದಿರಲಿ ಎಂದು ಆಶಿಸುತ್ತೇನೆ” ಎಂದರು.
ಸರ್ಕಾರ ಬಿಜಿನೆಸ್ ಮಾಡುವುದಿದ್ದರೆ ಬೇರೆ ಕಡೆ ಮಾಡಲಿ: ಟಿಕಾಯತ್
ರೈತ ಮುಖಂಡರಾದ ರಾಕೇಶ್ ಟಿಕಾಯತ್ ಮಾತನಾಡಿ, “ಈ ಚಳವಳಿ ನಡೆಯುತ್ತಿರುವುದು ಭೂಮಿಯ ರಕ್ಷಣೆಗಾಗಿ, ಇಡೀ ದೇಶದ ಕಣ್ಣು ಈ ಚಳವಳಿಯ ಮೇಲಿದೆ, ಪೂರ್ತಿ ಮೂರೂವರೆ ವರ್ಷ ನಡೆದಿದೆ. ಬಹಳಷ್ಟು ಚಳವಳಿಗಳಲ್ಲಿ ರೈತರು ಸರ್ಕಾರದ ಜೊತೆಗೆ ಮಾತುಕತೆಗೆ ಕೂರುತ್ತಾರೆ. ಆದರೆ, ಇಲ್ಲಿನ ರೈತರು, ‘ನಮಗೆ ಮಾತುಕತೆ ಬೇಕಾಗಿಯೇ ಇಲ್ಲ, ಭೂಮಿ ಕೊಡುವುದಿಲ್ಲ’ ಎಂದು ಹೇಳಿದ್ದಾರೆ; ಆ ಕಾರಣದಿಂದ ಇದು ಬಹಳ ವಿಶೇಷವಾದ ಹೋರಾಟ. ಇಡೀ ದೇಶದ ರೈತರು, ಹೋರಾಟಗಾರರು ರೈತರ ಜೊತೆಗಿದ್ದಾರೆ. ಸರ್ಕಾರ ಬಿಜಿನೆಸ್ ಮಾಡುವುದಿದ್ದರೆ ಬೇರೆ ಕಡೆ ಮಾಡಲಿ, ರೈತರು ಭೂಮಿ ಕೊಡುವುದಿಲ್ಲ ಎಂದ ಮೇಲೆ ರೈತರಿಗೆ ಅವರ ಭೂಮಿ ಕಸಿಯಲು ಯಾವುದೇ ಅಧಿಕಾರ ಇಲ್ಲ” ಎಂದು ಸರ್ಕಾರಕ್ಕೆ ಸಂದೇಶ ನೀಡಿದರು.
“ದೆಹಲಿಯಲ್ಲಿ ಎಸ್‌ಕೆಎಂ ಸಭೆಯಲ್ಲಿ ಈಗಾಗಲೇ ಈ ಹೋರಾಟದ ವಿಚಾರ ಅಜೆಂಡಾದಲ್ಲಿದೆ, ಒಂದು ವೇಳೆ ನಾಳಿನ ಸಭೆಯಲ್ಲಿ ಒಳ್ಳೆಯ ನಿರ್ಧಾರದ ಜೊತೆಗೆ ಹೋರಾಟ ಮುಕ್ತಾಯ ಆಗದಿದ್ದರೆ, ಮುಂದೆಯೂ ಅದನ್ನು ಚರ್ಚೆಯಲ್ಲಿ ಸೇರಿಸಿಕೊಳ್ಳುತ್ತೇವೆ, ಎಸ್‌ಕೆಎಂ ಇಲ್ಲಿನ ರೈತರು ಮತ್ತು ಸಂಘಟನೆಗಳೂ ಏನು ನಿರ್ಧಾರ ಕೈಗೊಂಡರೂ ಅದರ ಜೊತೆಗಿರುತ್ತದೆ” ಎಂದರು.

ರಾಷ್ಟ್ರೀಯ ರೈತ ನಾಯಕರಾದ ವಿಜು ಕೃಷ್ಣನ್ ಮಾತನಾಡಿ, “ವಿರೋಧ ಪಕ್ಷದ ನಾಯಕರಾಗಿದ್ದಾಗ ಸಿದ್ಧರಾಮಯ್ಯ ಅವರು ರೈತರ ಪರವಾಗಿದ್ದರು, ಈಗ ಸರ್ಕಾರದಲ್ಲಿ ಇರುವಾಗಲೂ ಅವರು ರೈತರೊಂದಿಗೆ ಇರಬೇಕೆಂದು ನಾವು ಆಶಿಸುತ್ತೇವೆ. ನಾಳೆಯ ಸಭೆಯಲ್ಲಿ ಮುಖ್ಯಮಂತ್ರಿಗಳು ರೈತಪರ ನಿಲುವನ್ನು ಕೈಗೊಳ್ಳುತ್ತಾರೆ ಎಂದು ಆಶಿಸುತ್ತೇವೆ. ಆದರೆ, ಒಂದು ವೇಳೆ ಹಾಗೆ ಆಗದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರವಾಗಿ ಮುಂದುವರೆಸುತ್ತೇವೆ, ಜುಲೈ 9ರಂದು ದೇಶಮಟ್ಟದ ಕಾರ್ಮಿಕರ ಸಾರ್ವತ್ರಿಕ ಮುಷ್ಕರ ಇದೆ, ಅದರಲ್ಲೂ ನಾವು ಈ ಹೋರಾಟವನ್ನು ಬೆಂಬಲಿಸುತ್ತೇವೆ” ಎಂದು ಹೇಳಿದರು.
“ಈ ಹಿಂದೆ ಕೇಂದ್ರದಲ್ಲೂ ಒಬ್ಬರು ಪ್ರಧಾನ ಮಂತ್ರಿಗಳಿದ್ದರು, ರೈತರ ಹೋರಾಟವನ್ನು ಕಡೆಗಣಿಸಿದರು. ಆದರೆ, ನಿರಂತರವಾಗಿ 380 ದಿನಗಳ ಕಾಲ ಹೋರಾಟ ನಡೆಸಿದ ರೈತರು, ಚಳಿಗಾಲದಲ್ಲೂ ಬಿರುಗಾಳಿಯಲ್ಲೂ ಮಳೆಗಾಲದಲ್ಲೂ ಹೋರಾಟ ಮುಂದುವರೆಸಿದರು. 736 ರೈತರು ಪ್ರಾಣ ಕಳೆದುಕೊಂಡರೂ ಹೋರಾಟ ನಿಲ್ಲಲಿಲ್ಲ. ನಿಜವಾದ ರೈತ ಹೋರಾಟ ಅಂದರೆ ಹಾಗಿರುತ್ತದೆ. ಇಲ್ಲಿ ಈಗಾಗಲೇ ಸಾವಿರದಿನ್ನೂರು ದಿನ ಇಲ್ಲಿ ದೇವನಹಳ್ಳಿಯ ಹೋರಾಟ ನಡೆದಿದೆ, ಈಗ ಅವರಿಗೆ ಎಲ್ಲ ಸಂಘಟನೆಗಳ ಬೆಂಬಲವಿದೆ, ಎಷ್ಟು ದಿನಗಳಾದರೂ ಹೋರಾಟ ಗೆಲುವು ಸಾಧಿಸುವ ತನಕ ನಿಲ್ಲದು” ಎಂದು ವರದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದರು.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಡಾ. ದರ್ಶನ್ ಪಾಲ್ ಮತ್ತು ಯುಧ್‌ವೀರ್ ಸಿಂಗ್, “ಪಾರ್ಲಿಮೆಂಟಿನಲ್ಲಿ ತೆಗೆದುಕೊಂಡ ಮೂರು ಕರಾಳ ಕಾಯ್ದೆಗಳನ್ನು ಪಾರ್ಲಿಮೆಂಟಿನಲ್ಲೇ ವಾಪಾಸ್ ಪಡೆದುಕೊಳ್ಳುವಂತಹ ಒತ್ತಡವನ್ನು ರೈತಾಂದೋಲನ ಹೇರಿತು. ಈಗ ಕೈಗಾರಿಕಾ ಸಚಿವರು ಒಂದು ನಿರ್ಧಾರ ಕೈಗೊಂಡಿದ್ದಾರೆಂದರೆ ಅವರು ಅದನ್ನು ವಾಪಾಸ್ ಪಡೆಯಬಾರದೆಂದೇನೂ ಇಲ್ಲ, ಅಲ್ಲಿಯವರೆಗೆ ಹೋರಾಟ ನಡೆದಾಗ ರಾಜ್ಯ ಸಚಿವ ಸಂಪುಟ ತನ್ನ ನಿರ್ಧಾರ ಬದಲಿಸಬೇಕಾಗುತ್ತದೆ” ಎಂದರು.
“2013ರ ಭೂಸ್ವಾಧೀನ ಕಾಯ್ದೆಯು ರೈತರ ಒಪ್ಪಿಗೆಯಿಲ್ಲದೆ ಭೂಮಿ ರೈತರಿಂದ ಕಸಿಯಲು ಸಾಧ್ಯವಿಲ್ಲ, 80% ರೈತರು ಒಪ್ಪಿದರೆ ಮಾತ್ರ ಮುಂದುವರೆಯಬಹುದು. ಆದರೆ, ಇಲ್ಲಿ ಪ್ರಶ್ನೆಯಿರುವುದು ಇದನ್ನು ಎಷ್ಟರಮಟ್ಟಿಗೆ ಪಾಲಿಸಲಾಗುತ್ತದೆ ಎಂಬುದು, ಕಾನೂನುಗಳೇನೂ ಕಲ್ಲಿನ ಮೇಲೆ ಬರೆಯಲ್ಪಟ್ಟಿಲ್ಲ ಬದಲಿಸಲು ಆಗುವುದಿಲ್ಲ ಎನ್ನಲು, ಸಾರ್ವಜನಿಕರ ಹಿತಾಸಕ್ತಿಗೆ ವಿರುದ್ಧವಾಗಿದ್ದರೆ ಬದಲಿಸಬೇಕು” ಎಂದರು.
“ಮಧ್ಯಪ್ರದೇಶದ ರಾಯಗಢದಲ್ಲಿ ಎಸ್‌ಇಜಡ್ ಗೆ ಭೂಮಿ ಪಡೆಯುವ ಸಂಧರ್ಭದಲ್ಲಿ ಅಲ್ಲಿದ್ದ ಕಾಂಗ್ರೆಸ್ ಸರ್ಕಾರ ಜನಾಭಿಪ್ರಾಯ ಸಂಗ್ರಹ ಮಾಡಿತು, ಆಗ ಶೇ.90ರಷ್ಟು ರೈತರು ಭೂಮಿ ಕೊಡುವುದಿಲ್ಲ ಎಂದಾಗ ಆ ಯೋಜನೆ ರದ್ದಾಯಿತು. ಅದೇ ಮಾದರಿ ಇಲ್ಲಿಯೂ ಜಾರಿಯಾಗಲಿ, ಈ ಸರ್ಕಾರಗಳು ರೈತರ ಓಟಿನಿಂದ ರಚನೆಯಾಗಿವೆ, ಕಾರ್ಪೊರೇಟ್‌ಗಳ ಓಟಿನಿಂದಲ್ಲ, ಯಾವುದಾದರೂ ಸರ್ಕಾರಕ್ಕೆ ಧೈರ್ಯವಿದ್ದರೆ ಅವರು ಹೇಳಿಬಿಡಲಿ, ರೈತರ ಓಟು ನಮಗೆ ಬೇಕಾಗಿಲ್ಲ ಎಂದು” ಎಂದು ಡಾ. ಸುನಿಲಮ್ ಸವಾಲು ಹಾಕಿದರು.
ಪತ್ರಿಕಾ ಗೋಷ್ಟಿಯಲ್ಲಿ ಹಿರಿಯ ಹೋರಾಟಗಾರರಾದ ಎಸ್.ಆರ್.ಹಿರೇಮಠ್ ಮಾತನಾಡಿದರು. “ಬಹಳ ಗೌರವ ಮತ್ತು ನಂಬಿಕೆಯಿಂದ ಈ ಸಭೆಗೆ ಹೋಗುತ್ತಿದ್ದೇವೆ, ಇದು ಸಕಾರಾತ್ಮಕ ಫಲಿತ ಕಾಣಬೇಕು, ಇಲ್ಲದಿದ್ದರೆ ಇದರ ರಾಜಕೀಯ ಪರಿಣಾಮಗಳು ದೀರ್ಘಕಾಲಿಕವಾಗಿರುತ್ತವೆ” ಎಂದು ಸರ್ಕಾರಕ್ಕೆ ಸಂದೇಶ ನೀಡಿದರು.
ದೇವನಹಳ್ಳಿ ರೈತ ಹೋರಾಟದ ಪರಿಚಯ ನೀಡುವ ಉದ್ದೇಶದಿಂದ ಪತ್ರಕರ್ತ ರವಿಕುಮಾರ್ ಈಚಲಮರ ಅವರು ಬರೆದಿರುವ ʼಪ್ರಾಣ ಹೋದರೂ ಭೂಮಿ ಕೊಡೆವುʼ ಕಿರುಪುಸ್ತಕವನ್ನು ಸಾರ್ವಜನಿಕರ ಓದಿಗೆ ನೀಡಿದರು.

ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ನಾಯಕರುಗಳಾದ ದರ್ಶನ್ ಪಾಲ್, ರಾಕೇಶ್ ಟಿಕಾಯತ್, ಯುಧ್‌ವೀರ್ ಸಿಂಗ್, ವಿಜು ಕೃಷ್ಣನ್, ಡಾ. ಸುನಿಲಮ್ ಮತ್ತು ಕರ್ನಾಟಕದ ಜನಚಳುವಳಿಗಳ ಐಕ್ಯ ವೇದಿಕೆಯಾದ ಸಂಯುಕ್ತ ಹೋರಾಟ ಕರ್ನಾಟಕದ ಪ್ರತಿನಿಧಿಗಳಾದ ಎಚ್ .ಎಂ.ಬಸವರಾಜಪ್ಪ, ಚುಕ್ಕಿ ನಂಜುಂಡಸ್ವಾಮಿ, ಟಿ. ಯಶವಂತ್ ಮತ್ತಯ ಸಾಮಾಜಿಕ ಹೋರಾಟಗಾರರರಾದ ಎಸ್.ಆರ್.ಹಿರೇಮಠ್ ಅವರುಗಳು ಪತ್ರಕರ್ತನ್ನು ಉದ್ದೇಶಿಸಿ ಮಾತನಾಡಿದರು.


