ಬೆಂಗಳೂರು: ದೇವನಹಳ್ಳಿಯಲ್ಲಿ ಕೈಗಾರಿಕಾ ಯೋಜನೆಗಳಿಗಾಗಿ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆ ತೀವ್ರ ವಿವಾದಕ್ಕೆ ಕಾರಣವಾಗಿರುವ ಬೆನ್ನಲ್ಲೇ, ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಪ್ರಸ್ತುತ ನಡೆಯುತ್ತಿರುವ ಅನ್ಯಾಯವನ್ನು ತಡೆಯುವಂತೆ ಮನವಿ ಮಾಡಿದ್ದಾರೆ. ರೈತರು ಮತ್ತು ಸಣ್ಣ ವ್ಯಾಪಾರಿಗಳು ನಗದು ಪರಿಹಾರಕ್ಕಿಂತ ಹೆಚ್ಚಾಗಿ ತಮ್ಮ ಪಾರಂಪರಿಕ ಜೀವನೋಪಾಯದ ಭೂಮಿಯ ರಕ್ಷಣೆಗೆ ಆದ್ಯತೆ ನೀಡುತ್ತಿದ್ದಾರೆ ಎಂದು ಅವರು ಪತ್ರದಲ್ಲಿ ಒತ್ತಿ ಹೇಳಿದ್ದಾರೆ.
ದೇವನಹಳ್ಳಿಯಲ್ಲಿ ಈಗಾಗಲೇ 6000 ಎಕರೆಗೂ ಹೆಚ್ಚು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೂ, ಸಂತ್ರಸ್ತರು ಇನ್ನೂ ಸೂಕ್ತ ಪುನರ್ವಸತಿ ಸಿಗದೆ ಸಂಕಷ್ಟದಲ್ಲಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರವು ಬಲವಂತದ ಭೂಸ್ವಾಧೀನಕ್ಕೆ ಮುಂದಾಗಿರುವುದು ಖಂಡನೀಯ ಎಂದು ಪಾಟ್ಕರ್ ಅಭಿಪ್ರಾಯಪಟ್ಟಿದ್ದಾರೆ. ಯುಪಿಎ ಸರ್ಕಾರದ 2013ರ LARR ಕಾಯಿದೆಯು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಜನಪರ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿದರೂ, ಕರ್ನಾಟಕ ಸರ್ಕಾರವು KIADB ಕಾಯಿದೆಯಂತಹ ರಾಜ್ಯ ಮಟ್ಟದ ಕಾನೂನುಗಳನ್ನು ಬಳಸಿ ಈ ಪ್ರಜಾಸತ್ತಾತ್ಮಕ ಮಾನದಂಡಗಳನ್ನು ಮೀರುತ್ತಿರುವುದು ವಿಪರ್ಯಾಸ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಪಾಟ್ಕರ್ ಅವರು ಪೊಲೀಸರ ನಡವಳಿಕೆ ಕುರಿತು ಆಕ್ಷೇಪ ವ್ಯಕ್ತಪಡಿಸಿ, “ಸರ್ಕಾರವು ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಫಲವತ್ತಾದ ಭೂಮಿಯನ್ನು ಉಳಿಸಲು ಆದ್ಯತೆ ನೀಡಬೇಕು” ಎಂದು ಸಲಹೆ ನೀಡಿದ್ದಾರೆ. ಕೈಗಾರಿಕೀಕರಣಕ್ಕೆ ಪೂರ್ಣ ವಿರೋಧವಿಲ್ಲದಿದ್ದರೂ, “ಅನ್ನದಾತ”ರಾದ ರೈತರ ಪ್ರಧಾನ ಕೃಷಿ ಭೂಮಿಯನ್ನು ಬೃಹತ್ ಕೈಗಾರಿಕೆಗಳ ಹೆಸರಿನಲ್ಲಿ ನಾಶಪಡಿಸುವುದು ಸರಿಯಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ಬೃಹತ್ ಯೋಜನೆಗಳ ಬದಲಿಗೆ ಸಣ್ಣ ಮತ್ತು ಗ್ರಾಮ ಆಧಾರಿತ ಕೈಗಾರಿಕೆಗಳಿಗೆ ಉತ್ತೇಜನ ನೀಡುವುದರಿಂದ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಪಾಟ್ಕರ್ ಸಲಹೆ ನೀಡಿದ್ದಾರೆ. ಅಲ್ಲದೆ, ಕೃಷಿಯೇತರ ಉದ್ದೇಶಗಳಿಗೆ ಸರ್ಕಾರಿ ಅಥವಾ ಬಂಜರು ಭೂಮಿಯನ್ನು ಬಳಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಸೇರಿದಂತೆ ಎಲ್ಲ ಸಂಬಂಧಿತ ಸಚಿವರು ಜನರ ಧ್ವನಿಗೆ ಕಿವಿಗೊಟ್ಟು, ದೇವನಹಳ್ಳಿ ಯೋಜನೆಯನ್ನು ಹಿಂತೆಗೆದುಕೊಂಡು, ಸಂವಿಧಾನದ ಅನುಚ್ಛೇದ 21ರಡಿಯಲ್ಲಿ ನೀಡಲಾಗಿರುವ ‘ಜೀವಿಸುವ ಹಕ್ಕನ್ನು’ ರಕ್ಷಿಸಬೇಕು ಎಂದು ಮೇಧಾ ಪಾಟ್ಕರ್ ಮನವಿ ಮಾಡಿದ್ದಾರೆ. ಜುಲೈ 4ರಂದು ನಡೆಯುವ ಸಂವಾದದಲ್ಲಿ ಜನರ ಪರವಾದ ಸಕಾರಾತ್ಮಕ ನಿರ್ಧಾರವನ್ನು ನಿರೀಕ್ಷಿಸುವುದಾಗಿ ಅವರು ತಿಳಿಸಿದ್ದಾರೆ.
ದೇವನಹಳ್ಳಿ ಭೂಮಿ ಹೋರಾಟಕ್ಕೆ ‘ಸಂಯುಕ್ತ ಕಿಸಾನ್ ಮೋರ್ಚಾ’ ಬೆಂಬಲವಿದೆ: ಡಾ. ದರ್ಶನ್ ಪಾಲ್


