ದೇವನಹಳ್ಳಿ ರೈತರ ಭೂ ಸ್ವಾಧೀನಕ್ಕೆ ಸಂಬಂಧಪಟ್ಟಂತೆ ನಾಳೆ (ಜುಲೈ 4, ಶುಕ್ರವಾರ) ರೈತರು ಮತ್ತು ಹೋರಾಟಗಾರರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಿಗದಿ ಮಾಡಿದ್ದಾರೆ.
ಅದಕ್ಕೂ ಮುನ್ನ ಇಂದು (ಗುರುವಾರ) ಸಂಜೆ ಕಾವೇರಿ ನಿವಾಸದಲ್ಲಿ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದಾರೆ.
ಮೂಲಗಳ ಪ್ರಕಾರ ಸಿದ್ದರಾಮಯ್ಯ ಅವರು ರೈತ ಹೋರಾಟಗಾರರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದು, ಇನ್ನೂ ಹತ್ತು ದಿನಗಳ ಸಮಯಾವಕಾಶ ಕೋರಿದ್ದಾರೆ ಎಂದು ತಿಳಿದು ಬಂದಿದೆ. ಸಭೆಯಲ್ಲಿ ಸಿದ್ದರಾಮಯ್ಯ ಅವರು ರೈತರ ಪರವಾಗಿ ನಿಲುವು ವ್ಯಕ್ತಪಡಿಸಿ ಮಾತನಾಡಿದ್ದಾರೆ ಎಂದು ಖಚಿತ ಮೂಲಗಳು ಹೇಳಿವೆ.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಕಾನೂನು ಸಚಿವ ಹೆಚ್.ಕೆ ಪಾಟೀಲ್, ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ, ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್, ಕಂದಾಯ ಸಚಿವ ಕೃಷ್ಣಬೈರೇಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ಐದು ಇಲಾಖೆಗಳ ಉನ್ನತ ಅಧಿಕಾರಿಗಳು ಇಂದಿನ ಸಭೆಯಲ್ಲಿ ಪಾಲ್ಗೊಂಡಿದ್ದರು.
ಭೂ ಸ್ವಾಧೀನಕ್ಕೆ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆ, ನಾಳೆ ಸಮಗ್ರ ಸಭೆ ನಡೆಸುವ ಭರವಸೆಯನ್ನು ಸಿಎಂ ಕೊಟ್ಟಿದ್ದಾರೆ. ದೇವನಹಳ್ಳಿಯವರು ಮಾತ್ರವಲ್ಲದೆ ಇಡೀ ರಾಜ್ಯದ ರೈತರು ಮತ್ತು ಹೋರಾಟಗಾರರ ಚಿತ್ತ ನಾಳೆಯ ಸಭೆಯತ್ತ ನೆಟ್ಟಿದೆ.
ಸಿಎಂ ರೈತಪರ ನಿರ್ಧಾರ ಪ್ರಕಟಿಸುತ್ತಾರೆ ಎಂಬ ತುಂಬು ನಿರೀಕ್ಷೆಯಲ್ಲಿ ಎಲ್ಲರೂ ಇದ್ದಾರೆ. ನಿಟ್ಟಿಸಿರುವ ಬಿಡುವ ಸುದ್ದಿ ಬರದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ.


