ಕರ್ನಾಟಕ ಸರಕಾರವು ದೇವನಹಳ್ಳಿಯ ಫಲವತ್ತಾದ ಕೃಷಿ ಭೂಮಿಯನ್ನು ನಾಶಗೊಳಿಸದೇ, ರೈತರ ಸರಳ ಜೀವನಗಳನ್ನು ಹಾಳಮಾಡದೇ ಇರಲಿದೆಯೇ? ಒಂದು ಪಕ್ಷ ಇದರಲ್ಲಿ ಸರಕಾರ ತಪ್ಪು ಹೆಜ್ಜೆ ಇಟ್ಟರೆ, ದೃಢವಾದ ಹೋರಾಟ ಮುಂದೆ ಚಿಮ್ಮಲಿದೆ, ಎಲ್ಲೆಡೆ ಹರಡಲಿದೆ. ರಾಷ್ಟ್ರ ಮಟ್ಟದಲ್ಲಿ ಎಲ್ಲಾ ಸಾಮಾಜಿಕ ಹೋತಾದ ವೇದಿಕೆಗಳು ಒಂದು ಗಂಭೀರವಾದ ಎಚ್ಚರಿಕೆ ಕಳಿಸುತ್ತಿವೆ.
ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದ 13 ಹಳ್ಳಿಯಗಳಿಗೆ ಸೇರಿದ 800 ಕುಟುಂಬಗಳು ಕೃಷಿಯ ಮೇಲೆಯೇ ಆಶ್ರಿತರಾಗಿದ್ದು, ತಲೆತಲಾಂತರಿಂದ ಬಂದಿರುವ ಭೂಮಿಯ ಮೇಲೆ ಅವಲಂಬಿತರಾಗಿದ್ದಾರೆ. ಅನೇಕ ವರ್ಷಗಳಿಂದ ಶ್ರಮ ಹಾಕಿ ಈ ಭೂಮಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಸುಪಾಸಿನಲ್ಲಿದ್ದ ಕಾರಣಕ್ಕಾಗಿ ಪ್ರೈಮ್ ಲ್ಯಾಂಡ್ ಆಗಿ ಪರಿವರ್ತನೆಯಾಗಿದೆ. ಹರಲೂರು ಕೈಗಾರಿಕಾ ಪ್ರದೇಶಕ್ಕಾಗಿ ಈ ಸುತ್ತಲಿನ ಹಳ್ಳಿಗಳ 6000 ಎಕರೆ ಭೂಮಿಯನ್ನು ಕರ್ನಾಟಕ ಕೈಗಾರಿಕೆ ಪ್ರದೇಶಗಳ ಅಭಿವೃದ್ಧಿ ನಿಗಮವು (Karnataka Industrial Areas Development Board – KIADB) ಈಗಾಗಲೇ ಸ್ವಾಧೀನಪಡಿಸಿಕೊಂಡಿದೆ. 2022ರ ಜನವರಿಯಲ್ಲಿ ಆಗಿನ ಆಡಳಿತಾರೂಢ ಬಿಜೆಪಿ ಸರಕಾರವು ಇದೇ 13 ಹಳ್ಳಿಗಳ ಇನ್ನೂ ಹೆಚ್ಚಿನ 1777 ಎಕರೆ ಭೂಮಿಯನ್ನು ರೈತರನ್ನು ಬಲವಂತವಾಗಿ ಒಕ್ಕಲೆಬ್ಬಿಸಿ ಸ್ವಾಧೀನಪಡಿಸಿಕೊಳ್ಳಲು ತೀರ್ಮಾನಿಸಿತ್ತು, ಅವುಗಳನ್ನು ಕಾರ್ಪೊರೇಟ್ ಕಂಪನಿಗಳಿಗೆ ಮತ್ತು ರಿಯಲ್ ಎಸ್ಟೇಟ್ ಮಾಫಿಯಾಗೆ ಮಾರುವ ಉದ್ದೇಶದಿಂದ ಈ ತೀರ್ಮಾನಕ್ಕೆ ಬಂದಿತ್ತು.
ಈ ಮುಂಚೆ ಭೂಮಿಯನ್ನು ಇಂತಹ ಭೂಸ್ವಾಧೀನದಿಂದ ಕಳೆದುಕೊಂಡ ರೈತರು ಮತ್ತು ಗ್ರಾಮಸ್ಥರಿಗೆ ಆದ ಕೆಟ್ಟ ಪರಿಸ್ಥಿತಿಯನ್ನು ನೋಡಿದ ರೈತರು ಆರಂಭದಿಂದಲೇ ಈ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿದ್ದರು. ಈ ಪ್ರತಿರೋಧವು ಹಲವಾರು ಸ್ವರೂಪಗಳನ್ನು ಪಡೆದುಕೊಂಡು ನಂತರ ‘ಕೆಐಎಡಿಬಿ ಲ್ಯಾಂಡ್ ಅಕ್ವಿಸಿಷನ್ ರೆಸಿಸ್ಟನ್ಸ್ ಸ್ಟ್ರಗಲ್ ಕಮಿಟಿʼ ಎಂಬ ವೇದಿಕೆ ಹುಟ್ಟುಕೊಂಡಿತ್ತು.
ಆಗ ವಿರೋಧಪಕ್ಷದ ಸ್ಥಾನದಲ್ಲಿದ್ದ ಕಾಂಗ್ರೆಸ್ ಪಕ್ಷವು ಈ ಭೂಸ್ವಾಧೀನ ಕ್ರಮವನ್ನು ವಿರೋಧಿಸಿತ್ತು ಹಾಗೂ ಅದರ ನಾಯಕರಾದ ಸಿದ್ದರಾಮಯ್ಯನವರು ಹೋರಾಟದ ಸ್ಥಳಕ್ಕೆ ಭೇಟಿ ನೀಡಿ, ತಾವು ಅಧಿಕಾರಕ್ಕೆ ಬಂದರೆ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದ ಮೇಲೆ ತಮ್ಮ ನಿಲುವನ್ನು ಬದಲಿಸಿ, ರೈತರ ಭೂಮಿಯನ್ನು ಪಡೆಯಲು ಬಿಜೆಪಿ ನಡೆದ ಹೆಜ್ಜೆಯಲ್ಲೇ ಅವರೂ ನಡೆದರು.
ಸುಮಾರು 80% ರೈತರು ಭೂಸ್ವಾಧೀನ ಪ್ರಕ್ರಿಯೆಗೆ ಒಪ್ಪಿಗೆ ನೀಡಲು ನಿರಾಕರಿಸಿದರು ಹಾಗೂ 1180 ದಿನಗಳಿಂದ (ಸುಮಾರು ಮೂರೂವರೆ ವರ್ಷಗಳು) ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಸರಕಾರವು ಈ ಭೂಮಿಯನ್ನು ಪಡೆದೇ ತೀರುತ್ತೇವೆ ಎಂದು ತೀರ್ಮಾನಿಸಿದಂತಿದೆ. ಇದು ಒಕ್ಕೂಟ ಸರಕಾರ ತಂದಿದ್ದ (ಆಗಿನ ಯುಪಿಎ ಸರಕಾರ) ʻಲ್ಯಾಂಡ್ ಅಕ್ವಿಸಿಷನ್ ಆಂಡ್ ರಿಹಾಬಿಲಿಟೇಷನ್ ಪಾಲಿಸಿ- 2023’ ಯ ಸಂಪೂರ್ಣ ಉಲ್ಲಂಘನೆಯಾಗಿದೆ.
ಇತ್ತೀಚಿಗೆ ಕರ್ನಾಟಕ ಸರಕಾರವು ರೈತರಿಗೆ ಅಂತಿಮ ನೋಟಿಸ್ ನೀಡಿದ್ದ, ಹೋರಾಟವು ತೀವ್ರ ಸ್ವರೂಪ ಪಡೆದುಕೊಂಡಿದೆ. ಸಂಯುಕ್ತ ಕಿಸಾನ್ ಸಂಯುಕ್ತ ಕಿಸಾನ್ ಮೋರ್ಚಾ ಭಾಗವಾದ ʻಸಂಯುಕ್ತ ಹೋರಾಟ ಕರ್ನಾಟಕʼವು (ರೈತರು, ಕಾರ್ಮಿಕರು, ದಲಿತರು, ವಿದ್ಯಾರ್ಥಿಗಳು, ಯುವಜನರು ಹಾಗೂ ಮಹಿಳೆಯರ ಸಂಘಟನೆ) ಈ ಹೋರಾಟವನ್ನು ಮುಂದುವರೆಸಿ, ‘ದೇವನಹಳ್ಳಿ ಚಲೋʼಗೆ ಕರೆ ನೀಡಲಾಗಿತ್ತು.
ಹೆಚ್ಚುತ್ತಿರುವ ಪ್ರತಿರೋಧದ ಒತ್ತಡವನ್ನು ಗಮನಿಸಿದ ಸರಕಾರವು ಭೂಸ್ವಾಧೀನ ಪ್ರಕ್ರಿಯೆಯನ್ನು ಭಾಗಶಃ ಹಿಂಪಡೆಯುವ ಘೋಷಣೆ ಮಾಡಿತು: ಮೂರು ಹಳ್ಳಿಗಳ 495 ಎಕರೆ ಭೂಸ್ವಾಧೀನವನ್ನು ಕೈಬಿಡಿವುದಾಗಿ ಹೇಳಿತು. ಈ ಹಿಂಪಡೆಯುವ ಕ್ರಮಕ್ಕೆ ಕಾರಣ ದಟ್ಟವಾದ ಜನವಸತಿ ಮತ್ತು ನೀರಾವರಿ ಎಂದು ಅಧಿಕಾರಿಗಳು ಹೇಳಿದರು. ಈ ಎರಡು ವಿಷಯಗಳು ಬಹುಶಃ ಮುಂಚೆ ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೇನೋ! ವಾಸ್ತವ ಏನೆಂದರೆ, ಈ ಭೂಸ್ವಾಧೀನಕ್ಕೆ ವಿರುದ್ಧವಾಗಿ ಮುಂಚೆಯಿಂದಲೇ ಪ್ರತಿರೋಧವಿಟ್ಟು, ಏಕೆಂದರೆ, ಈ ಪ್ರಕ್ರಿಯೆಯು 1978ರ ಎಸ್‌ಸಿ-ಎಸ್‌ಟಿ ಕಾನೂನನ್ನು ಉಲ್ಲಂಘಿಸುತ್ತದೆ; ಈ ಕಾನೂನಿನ ಪ್ರಕಾರ ಗ್ರ್ಯಾಂಟೆಡ್ ಭೂಮಿಯನ್ನು ವರ್ಗಾವಣೆ ಮಾಡುವಂತಿಲ್ಲ. ಆಗಿನ ದೇವರಾಜ ಅರಸ್ ಸಮಯದಲ್ಲಿ ಹಂಚಿಕೆ ಮಾಡಿದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ನಾಚಿಕೆಗೇಡಿನ ಸಂಗತಿಯೇ ಸರಿ. ಆದರೆ, ಇನ್ನೂ 1232 ಎಕರೆ ಭೂಮಿಯು ಅಪಾಯದಲ್ಲಿದೆ. “ಇದು ಒಡೆದು ಆಳುವ ತಂತ್ರದಂತೆ ಕಾಣುತ್ತಿದೆ. ಆದರೆ ಇದರಿಂದ ನಾವು ಮೋಸ ಹೋಗುವುದಿಲ್ಲ” ಎಂದು ಅಲ್ಲಿನ ಜನರ ಭಾವನೆಗಳನ್ನು ಪ್ರತಿನಿಧಿಸುತ್ತ ಹೋರಾಟದ ನಾಯಕರಾದ ನರಸಿಂಹ ಅವರು ಹೇಳಿದರು.

ಜೂನ್ 24ರಂದು ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಎಂ.ಬಿ. ಪಾಟೀಲ್ ಮತ್ತು ಮುನಿಯಪ್ಪ ಅವರು ಒಂದು ಎಕರೆಗೆ 10,771 ಚದರ ಅಡಿ ವಾಣಿಜ್ಯ ನಿವೇಶನಗಳನ್ನು ನೀಡಲು ಮುಂದಾದರು. ಆದರೆ, ಗ್ರಾಮಸ್ಥರು ಈ ಬಲೆಯಲ್ಲೂ ಬೀಳಲಿಲ್ಲ. “ನಾವು ನಮ್ಮ ಭೂಮಿ ಕಳೆದುಕೊಂಡ ಮೇಲೆ ನಿವೇಶನಗಳನ್ನು ತೊಗೊಂಡು ಏನು ಮಾಡಬೇಕು?” ಎಂದು 67 ವರ್ಷದ ಲಚ್ಚಮ್ಮ ಕೇಳಿದರು, “ನಮ್ಮ ನೋವಿನ ಅಂಗಡಿ ಕಟ್ಟಬೇಕೆ?”
ದೇವನಹಳ್ಳಿ ಚಲೋ ಕರೆಯು ಕರ್ನಾಟಕದಾದ್ಯಂತ ಪ್ರತಿಧ್ವನಿಸಿತು ಹಾಗೂ ಸಾವಿರಾರು ಹೋರಾಟಗಾರು, ಜನಾಂದೋಲನದ ನಾಯಕರು, ಕಲಾವಿದರು, ವಕೀಲರು ಹಾಗೂ ಬರಹಗಾರರು ಜೂನ್ 25ರಂದು ದೇವನಹಳ್ಳಿಯಲ್ಲಿ ಸೇರಿಕೊಂಡರು. ಅಲ್ಲಿನ ವಾತಾವರಣ ಪ್ರಕ್ಷುಬ್ದವಾಗಿದ್ದರೂ, ಪ್ರತಿಭಟನೆಯು ಶಾಂತಿಯುತವಾಗಿತ್ತು.
ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾದ ಬಡಗಲಪುರ ನಾಗೇಂದ್ರ ಅವರು ಮಾತನಾಡುತ್ತ, “ಎಲ್ಲ ಪಕ್ಷಗಳು ಕಾರ್ಪೊರೇಟ್ ಕಂಪನಿಗಳ ದಲ್ಲಾಳಿಗಳಾಗಿವೆ ಎಂದು ಆರೋಪಿಸಿದರು. ಕಾರ್ಪೋರೇಟ್ ಕಂಪನಿಗಳ ಸೇವೆ ಮಾಡುವುದೇ ಅವರು ನೀತಿಯಾಗಿದ್ದು, ದೇಶದಲ್ಲಿ ಸಂಪತ್ತು ಸೃಷ್ಟಿಸುವ ರೈತರು, ಕಾರ್ಮಿಕರು ಮತ್ತು ದಲಿತರನ್ನು ರಸ್ತೆಗೆ ತಳ್ಳುವ ಕೆಲಸ ಮಾಡುತ್ತಿದ್ದಾರೆ.. ನಾವು ಅಭಿವೃದ್ಧಿಯನ್ನು ವಿರೋಧಿಸುವುದಿಲ್ಲ. ಆದರೆ ಜನರಿಗೆ ಸಹಾಯವಾಗುವಂತಹ ಅಭಿವೃದ್ಧಿ ಬೇಕು. ದುಡಿದು ತಿನ್ನುವ ಜನರ ವಿರುದ್ಧವಾಗಿ ಆಡಳಿತ ನಡೆಸುವವರು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ… ಅವರು ಸಾವಿರಾರು ಜನರ ಜೀವಗಳೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ.. ಅದನ್ನು ನಾವು ಬಿಡುವುದಿಲ್ಲ.. ಒಂದು ವೇಳೆ ಕಾನೂನುಗಳು ಜನರ ವಿರುದ್ಧವಾಗಿದ್ದರೆ, ನಾವು ಉಲ್ಲಂಘಿಸಬೇಕಾಗುತ್ತದೆ – ನಮಗೆ ನ್ಯಾಯ ಬೇಕು… ನಾವು ಗೆಲ್ಲುತ್ತೇವೆ” ಎಂದರು.
ಈ ಹೊರಾಟಕ್ಕೆ ಬಲತುಂಬಿದ ಬಹಭಾಷಾ ನಟ ಪ್ರಕಾಶ್ ರಾಜ್ ಅವರು ಸರಕಾರವನ್ನು ತಮ್ಮ ಪ್ರಶ್ನೆಗಳಿಂದ ತರಾಟೆಗೆ ತೆಗೆದುಕೊಂಡರು. “ನೀವು ರಾಜಕಾರಿಣಿಗಳು ಗೆದ್ದಿಲ್ಲ, ಜನರು ನಿಮ್ಮನ್ನು ಗೆಲ್ಲಿಸಿದ್ದಾರೆ. ನೀವು ಜನರನ್ನು ಆಳಲು ಬಂದಿಲ್ಲ. ನಿಮ್ಮನ್ನು ಆಯ್ಕೆ ಮಾಡಿದ ಜನರನ್ನು ಪ್ರತಿನಿಧಿಸಲು ಬಂದಿದ್ದೀರಿ. ನೀವು ಮಾತು ಕೊಟ್ಟಿದ್ದೀರಿ; ಕೊಟ್ಟಿದ್ದೀರಿ ತಾನೇ? ನಿಮ್ಮ ಮಾತಿಗೆ ಬದ್ಧರಾಗಿರುತ್ತೀರಾ? ಅಥವಾ ಮಾತಿಗೆ ತಪ್ಪಿ ನಡೆಯುತ್ತೀರಾ? ನಮ್ಮ ರೈತರನ್ನು ಏನು ಮಾಡಲು ಹೊರಟಿದ್ದೀರಿ? ಅವರನ್ನು ವಾಚ್‌ಮನ್, ಭದ್ರತಾ ಸಿಬ್ಬಂದಿ ಮಾಡುತ್ತೀರಾ?” ಸಿದ್ದರಾಮಯ್ಯನವರಿಗೆ ಪ್ರಶ್ನೆ ಕೇಳುತ್ತ, “ದಯವಿಟ್ಟು ನಿಮ್ಮ ಕಣ್ಣು ಕಿವಿಗಳನ್ನು ತೆರೆಯಿರಿ ಮತ್ತು ಅಂತಃಸಾಕ್ಷಿಯಿಂದ ಪ್ರತಿಕ್ರಿಯೆ ನೀಡಿ. ನಮಗೆ ನಮ್ಮ ಭೂಮಿ, ಹಕ್ಕು ಹಾಗೂ ಜೀವನ ಬೇಕು” ಎಂದರು. ಸಂಯುಕ್ತ ಹೋರಾಟದ ಸಂಚಾಲಕರು ಮತ್ತು ಕರ್ನಾಟಕ ಜನಶಕ್ತಿಯ ಅಧ್ಯಕ್ಷರಾದ ನೂರ್ ಶ್ರೀಧರ್ ಮಾತನಾಡಿ, “ಎಂ ಬಿ ಪಾಟೀಲರು ಈ ಭೂಮಿಯ ಹಿಂದೆಯೇ ಯಾಕೆ ಬಿದ್ದಿದ್ದಾರೆ? ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಪಾಳು ಬಿದ್ದಿರುವ ಭೂಮಿಯಲ್ಲಿ ಏಕೆ ಕೈಗಾರಿಕೆಗಳನ್ನು ಸ್ಥಾಪಿಸುವುದಿಲ್ಲ? ದೇವನಹಳ್ಳಿಯ ಭೂಮಿಯ ಮೇಲೆ ಏಕೆ ತಮ್ಮ ಕಣ್ಣು ಹಾಕಿದ್ದಾರೆ? ಏಕೆಂದರೆ, ಇದು ಅಮೂಲ್ಯವಾದ ರತ್ನ.., ಇದೊಂದು ನೈತಿಕ, ರಾಜಕೀಯ ಪ್ರಶ್ನೆಯಾಗಿದ್ದು, ಇದನ್ನು ಕೇವಲ ಸಿದ್ದರಾಮಯ್ಯನವರಲ್ಲ, ರಾಹುಲ್ ಗಾಂಧಿ ಮತ್ತು ಒಟ್ಟಾರೆ ಕಾಂಗ್ರೆಸ್ ಪಕ್ಷವೂ ಉತ್ತರಿಸಬೇಕು. ಈಗ ಉತ್ತರಿಸಲಿ. ತಮ್ಮದೇ 2013ರ ನೀತಿ ತಪ್ಪು ಎಂದು ಹೇಳಲಿ. ಇದನ್ನು ಅನುಷ್ಠಾನಗೊಳಿಸಲಾಗದು ಎಂದು ಹೇಳಲಿ. ವಾಸ್ತವದಲ್ಲಿ ಅವರ ನೀತಿ ಭೂಮಿಯನ್ನು ಲೂಟಿ ಮಾಡುವುದು, ಅದನ್ನು ಅತ್ಯಂತ ದೊಡ್ಡ ಶ್ರೀಮಂತರಿಗೆ ಧಾರೆಯೆರದು ಕೊಡುವುದು ಹಾಗೂ ಶ್ರಮಪಟ್ಟು ಕೆಲಸ ಮಾಡುವ ಜನರನ್ನು ನೌಕರಿಗಾಗಿ ಭಿಕ್ಷೆ ಬೇಡವಂತೆ ಮಾಡುವುದಾಗಿದೆ. ಈ ಹೋರಾಟ ನಿಲ್ಲುವುದಿಲ್ಲ.”
ಈ ಪ್ರಕ್ರಿಯೆಯಿಂದ ಪರಣಾಮಕ್ಕೊಳಗಾದ ಜನರು ಜಾಗೃತಗೊಂಡಿದ್ದಾರೆ. ಅಭಿವೃದ್ಧಿಯ ಕಾರ್ಪೊರೇಟ್ ಮಾದರಿಯ ಅರ್ಥ ಏನೆಂದು ಅವರು ಅರಿತುಕೊಂಡಿದ್ದಾರೆ, ಈ ಮಾದರಿಯ ಅರ್ಥ ಜನರನ್ನು ಒಕ್ಕಲೆಬ್ಬಿಸುವುದು ಮಾತ್ರ, ಅವರು ರೈತರಾಗಿರಲಿ, ಆದಿವಾಸಿಗಳಾಗಿರಲಿ ಅಥವಾ ಸ್ಲಂ ನಿವಾಸಿಗಳಾಗಿರಲಿ, ಅವರನ್ನು ಒಕ್ಕಲೆಬ್ಬಿಸುವುದೇ ಈ ಮಾದರಿಯ ವಾಸ್ತವ ಎಂದು ತಿಳಿದುಕೊಂಡಿದ್ದಾರೆ. ಅದರೊಂದಿಗೆ ಆ ಸಮುದಾಯಗಳ ಮೂಲ ಸಂಸ್ಕೃತಿಯನ್ನು ನಾಶಗೊಳಿಸಿವುದು ಹಾಗೂ ಪರಿಸರದ ಸಮತೋಲನವನ್ನು ಹಾಳುಗೆಡುವುದಾಗಿದೆ ಎಂಬುದು ಜನರಿಗೆ ಸ್ಪಷ್ಟವಾಗಿದೆ.
ಅವರು ಹೇಳುವುದೇನೆಂದರೆ, “ನಾವು ಈ ಭೂಮಿಯಲ್ಲಿ ವಾಸಿಸುತ್ತಿದ್ದೇವೆ. ನಮ್ಮಲ್ಲಿ ಬಹುತೇಕರು ನಮ್ಮ ಹೊಟ್ಟೆಪಾಡಿಗಾಗಿ ಕೃಷಿಯ ಮೇಲೆ ಅವಲಂಬಿತರಾಗಿದ್ದೇವೆ. ನಮ್ಮ ಪೂರ್ವಜರ ಸಮಾಧಿಗಳು ಇವೇ ಭೂಮಿಯಲ್ಲಿವೆ. ನಾವು ನಮ್ಮ ಇಡೀ ಜೀವನದ ಆದಾಯವನ್ನು ಹೂಡಿಕೆ ಮಾಡಿದ್ದೇವೆ; ಅದನ್ನು ನೀರಾವರಿಗಾಗಿ ಹಾಗೂ ತೋಟಗಳನ್ನು ಬೆಳೆಸಲು ವಿನಿಯೋಗಿಸಿದ್ದೇವೆ. ನಾವೆಲ್ಲ ಪಶುಸಂಗೋಪನೆ, ಹೈನುಗಾರಿಕೆ ಹಾಗೂ ಕೋಳಿ ಸಾಕಾಣಿಕೆಯಂತಹ ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇವೆ. ನಾವು ನಮ್ಮ ಕುಟುಂಬ ಹಾಗೂ ಸಂಬಂಧಿಕರೊಂದಿಗೆ ಇಲ್ಲಿಯೇ ಜೀವನ ಮಾಡಬಯಸುತ್ತೇವೆ. ಏನೆ ಆಗಲಿ. ನಾವು ಈ ಜೀವನವನ್ನು ತೊರೆಯಲು ಸಿದ್ಧರಿಲ್ಲ.”
ಕರ್ನಾಟಕ ಸರಕಾರ ಕಳಿಸಿದ ಅಂತಿಮ ನೋಟಿಸ್‌ಅನ್ನು ಅವರು ಸುಟ್ಟುಹಾಕಿದ್ದರು ಹಾಗೂ ಅದಕ್ಕೆ ಉತ್ತರವಾಗಿ ಹೋರಾಟದ ಪರವಾಗಿ ಸರಕಾರಕ್ಕೆ ಅಂತಿಮ ನೋಟೀಸ್‌ಅನ್ನು ಕಳಿಸಲಾಗಿದೆ. ಅದರಲ್ಲಿ, “ಈ ಅಧಿಸೂಚನೆಯನ್ನು ಹಿಂಪಡೆಯಲಾಗುತ್ತಿದೆ ಎಂದು ಸರಕಾರ ಘೋಷಿಸಬೇಕು ಹಾಗೂ ನಮಗೆ ನಮ್ಮ ಜೀವನ ಸಾಗಿಸಲು ಅನುವು ಮಾಡಿಕೊಡಬೇಕು. ಇಲ್ಲವಾದರೆ ನಾವು ನಮ್ಮ ಹೋರಾಟವನ್ನು ತೀವ್ರಗೊಳಿಸುತ್ತೇವೆ ಹಾಗೂ ನೀವು ನಿಮ್ಮ ಯೋಜನೆಯನ್ನು ಮುಂದುವರೆಸುವುದಕ್ಕಿಂತ ಮುನ್ನ ನಮ್ಮ ಎಲ್ಲ 800 ಕುಟುಂಬಗಳನ್ನು ಜೈಲಿಗೆ ಹಾಕಬಹುದು” ಎಂದು ಸ್ಪಷ್ಟಪಡಿಸಲಾಗಿದ್ದು, ಸರಕಾರಕ್ಕೆ ಒಂದು ಗಡುವನ್ನೂ ಕೊಡಲಾಗಿದೆ; ಅದರ ಅನುಗುಣವಾಗಿ, “ಒಂದು ವೇಳೆ ಸರಕಾರವು ಮುಂದಿನ 24 ಗಂಟೆಗಳಲ್ಲಿ ಸ್ಪಂದಿಸದೇ ಇದ್ದಲ್ಲಿ, ನಾವು ತಾಲೂಕು ಕಚೇರಿಗೆ ಮುತ್ತಿಗೆ ಹಾಕುತ್ತೇವೆ” ಎಂತಲೂ ಹೇಳಲಾಗಿದೆ.
ದೇವನಹಳ್ಳಿಯ ರೈತರ ಪ್ರತಿಭಟನೆಯನ್ನು ಸರಕಾರ ಆರಂಭದಿಂದಲೇ ಹೆಚ್ಚಿನ ಪೊಲೀಸ್ ಬಲದಿಂದ ಸರಕಾರವು ಹತ್ತಿಕ್ಕಲು ಪ್ರಯತ್ನಿಸಿತು ಹಾಗೂ ಸಂಜೆಯ ಹೊತ್ತಿಗೆ ಪ್ರತಿಭಟನಾಕಾರರನ್ನು ಬಂಧಿಸಿ ಅಮಾನವೀಯ ರೀತಿಯಲ್ಲಿ ಎಳೆದುಕೊಂಡು ಹೋಗಲಾಯಿತು. ಈ ಕ್ರಮವು ಜನರನ್ನು ರೊಚ್ಚಿಗೇಳಿಸುವಂತೆ ಮಾಡಿತು.
ಜೂನ್ 26ರಂದು, ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಪೊಲೀಸರ ಕ್ರೂರ ವರ್ತನೆಯನ್ನು ಖಂಡಿಲಾಯಿತು; ಡಿಸಿಪಿ ಆದ ಸಚಿನ್ ಕುಮಾರ್ ಅವರನ್ನು ಅಮಾನತ್ತುಗೊಳಿಸಬೇಕು ಎಂದು ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರಿನಲ್ಲಿ ಮುಖ್ಯಮಂತ್ರಿಯ ನಿವಾಸದ ಎದುರಿಗೆ ಕಲಾವಿದರು, ಲೇಖಕರು ಹಾಗೂ ಪ್ರಗತಿಪರ ಗುಂಪೊಂದು ಖ್ಯಾತ ನಟ ಪ್ರಕಾಶ್ ರಾಜ್ ಅವರ ನೇತೃತ್ವದಲ್ಲಿ ಪ್ರತಿಭಟನೆ ಮಾಡಿತು. ಒಂದು ವಾರದ ಕಾಲಾವಧಿಯಲ್ಲಿ ಈ ಬಿಕ್ಕಟ್ಟನ್ನು ಬಗೆಹರಿಸುವುದಾಗಿ ಹಾಗೂ ಜನಪರ ಸಂಘಟನೆಗಳೊಂದಿಗೆ ಜುಲೈ 4ರಂದು ಸಭೆ ನಡೆಸುವುದಾಗಿ ಮುಖ್ಯಮಂತ್ರಿಯವರು ಆಶ್ವಾಸನೆ ನೀಡಬೇಕಾಗಿ ಬಂತು.
ಮುಖ್ಯಮಂತ್ರಿ ಅವರು ಆಶ್ವಾಸನೆ ನೀಡಿದ್ದರೂ, ಇದನ್ನು ಇಷ್ಟು ಸುಲಭವಾಗಿ ಬಗೆಹರಿಸಲಾಗುವುದೆಂಬ ನಂಬಿಕೆ ಸಂಯುಕ್ತ ಹೋರಾಟಕ್ಕೆ ಇಲ್ಲ. ಕಾಂಗ್ರೆಸ್‌ನ ಪ್ರಮುಖ ನಾಯಕರಾದ ಹಾಗೂ ಬೃಹತ್ ಕೈಗಾರಿಕೆ ಸಚಿವರಾದ ಎಂ.ಬಿ. ಪಾಟೀಲ್ ಅವರು ಎಐಸಿಸಿಯಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದು, ಈ ಭೂಸ್ವಾಧೀನ ಪ್ರಕ್ರಿಯೆನ್ನು ಮುಂದುವರೆಸುವ ಪಟ್ಟು ಹಿಡಿದಿದ್ದಾರೆ. ಹಾಗಾಗಿ, ರಾಜಕೀಯ ಮತ್ತು ಆರ್ಥಿಕತೆಯ ಮೇಲೆ ಕಾರ್ಪೊರೇಟ್‌ಗಳ ಹಿಡಿತ ನೋಡಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಂದು ವೇಳೆ ಬಯಸಿದರೂ ತಮ್ಮ ಕ್ಯಾಬಿನೆಟ್‌ನ ಮನವೊಲಿಸಬಹುದಾ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ಆದರೆ, ಸಂಯುಕ್ತ ಹೋರಾಟವು ಈ ಎಲ್ಲ ಅಡೆತಡೆಗಳನ್ನು ಎದುರಿಸುತ್ತ ಹೋರಾಟವನ್ನು ಮುಂದುವರೆಸುವ ದೃಢ ನಿಶ್ಚಯ ಮಾಡಿದೆ. ದೇವನಹಳ್ಳಿ ಕೃಷಿ ಸಮುದಾಯವೂ ಹಿಂದಕ್ಕೆ ಸರಿಯವ ಪ್ರಶ್ನೆಯೇ ಇಲ್ಲ ಎಂದು ಪ್ರತಿಜ್ಞೆ ಮಾಡಿದೆ. ದೇಶದ ಬಹುತೇಕ ಕಡೆ ಆಗುತ್ತಿರುವಂತೆ, ಕರ್ನಾಟಕವೂ ಕಾರ್ಪೊರೇಟ್ ಪರವಾಗಿ ನಡೆಯುತ್ತಿರುವ ಭೂಅತಿಕ್ರಮಣದ ಭಾರದಿಂದ ನರಳುತ್ತಿದೆ. ಇದರಿಂದ ಸ್ಪೋಟಗೊಳ್ಳಲು ಅಣಿಯಾದ ಜ್ವಾಲಾಮುಖಿಯಂತ ಸನ್ನಿವೇಶ ನಿರ್ಮಾಣವಾಗಿದೆ. ಭೂಮಿ ಮತ್ತು ವಸತಿಗಾಗಿ ಸಂಘಟಿಸುತ್ತಿರುವ ಭೂರಹಿತ ಮತ್ತು ಸಣ್ಣ ರೈತರು ಕಳೆದ ಒಂದು ದಶಕದಿಂದ ದೀರ್ಘವಾದ, ಅನೇಕ ಸುತ್ತಿನ ಗಂಭೀರ ಹೋರಾಟಗಳನ್ನು ನೋಡಿದ್ದಾರೆ. ಭಾಗಶಃ ಯಶಸ್ಸನ್ನು ಕೆಲವೊಮ್ಮೆ ಕಂಡಿದ್ದರೂ, ಈ ಹೋರಾಟಗಳು ಕ್ರಮಿಸಬೇಕಾದ ದಾರಿ ದೀರ್ಘವಾಗಿದೆ.
ಒಂದು ತಾರ್ಕಿಕ ಅಂತ್ಯಕ್ಕೆ ತಲುಪುವವರೆಗೂ ಈ ಹೋರಾಟವನ್ನು ಮುಂದುವರೆಸುವುದಾಗಿ ಹೋರಾಟದಲ್ಲಿ ನಿರತರಾದ ಕರ್ನಾಟಕದ ಜನರು ತೀರ್ಮಾನಿಸಿದ್ದಾರೆ. ಹಾಗಾಗಿ, ಇದೊಂದು ಬೃಹತ್ ಜನಾಂದೋಲನವಾಗಿಲದೆ ಹಾಗೂ ಒಂದು ದೊಡ್ಡ ರಾಜಕೀಯ ಹೋರಾಟವಾಗಿ ಪರಿವರ್ತನೆಯಾಗಲಿದೆ. ಈ ನಿಟ್ಟಿನಲ್ಲಿ, ಸಂಯುಕ್ತ ಹೋರಾಟವು ಕಾಂಗ್ರೆಸ್ಸಿನ ಕೆಂದ್ರೀಯ ನಾಯಕತ್ವಕ್ಕೂ ಕರೆ ನೀಡಿ, ಪರಿಸ್ಥಿತಿಗೆ ಅನುಗುಣವಾಗಿ ಎಚ್ಚೆತ್ತುಕೊಳ್ಳಬೇಕಾಗಿ ಮನವಿ ಮಾಡಿದೆ ಹಾಗೂ ಇಂತಹ ಸಂಕಷ್ಟದ ಸಮಯದಲ್ಲಿ ಇನ್ನೊಂದು ರಾಜಕೀಯ ಬ್ಲಂಡರ್ ಮಾಡುವ ಸಾಹಸದಲ್ಲಿ ತೊಡಗಬಾರದು ಎಂದು ತಾಕೀತು ಮಾಡಿದೆ. ಹೀಗೆ ಮುಂದುವರೆದರೆ ತನ್ನ ಪತನಕ್ಕೇ ದಾರಿ ಮಾಡಿಕೊಟ್ಟಂತೆ ಎಂದು ಎಚ್ಚರಿಕೆ ನೀಡಿದೆ.
ದೊಡ್ಡ ದೊಡ್ಡ ಕಾರ್ಪೊರೇಟ್ ಶಕ್ತಿಗಳ ವಿರುದ್ಧ ಈ 13 ಹಳ್ಳಿಗಳ ಜನರ ಗಟ್ಟಿಯಾದ ಹೋರಾಟದ ಮನೋಭಾವವು ಶ್ಲಾಘನೀಯವಾಗಿದೆ. ರೈತರೊಂದಿಗೆ ಗಟ್ಟಿಯಾಗಿ ನಿಂತು ಈ ಹೋರಾಟವನ್ನು ಮುಂದುವರೆಸುವುದರಲ್ಲಿ ಸಂಯುಕ್ತ ಹೋರಾಟ ಕರ್ನಾಟಕವು ವಹಿಸುತ್ತಿರುವ ಪಾತ್ರವೂ ಶ್ಲಾಘನೀಯವಾಗಿದೆ.
ದೆಹಲಿಯ ಗಡಿಗಳಲ್ಲಿ ಐತಿಹಾಸಿಕ ಹೋರಾಟ ಮುನ್ನೆಡೆಸಿದ ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ನಾಯಕರು ಈಗಾಗಲೇ ಸಂಯುಕ್ತ ಹೋರಾಟ ಕರ್ನಾಟಕದ ರೈತರು ಹಾಗೂ ನಾಯಕರೊಂದಿಗೆ ಸೇರಿಕೊಂಡಿದ್ದಾರೆ; ಇದರಿಂದ ಹೋರಾಟಕ್ಕೆ ಇನ್ನಷ್ಟು ಹೆಚ್ಚಿನ ಹುರುಪು ಬಂದಿದೆ. ದೇಶದ ಹಲವು ಅಖಿಲ ಭಾರತ ರೈತರ ಹಾಗೂ ಕಾರ್ಮಿಕರ ವೇದಿಕೆಗಳು, ವಿಶಾಲವಾದ ಜನಪರ ಹೋರಾಟದ ಜಾಲಗಳು ಹಾಗೂ ಸಂಘಟನೆಗಳು ಈ ಹೋರಾಟದೊಂದಿಗೆ ಇದ್ದೇವೆ ಎಂದು ಸಂದೇಶಗಳನ್ನು ಕಳಿಸಿದ್ದಾರೆ. ಅವರು ನೀಡುತ್ತಿರುವ ಈ ಬೆಂಬಲ ಹಾಗೂ ಗೌರವವು ಹೋರಾಟದ ಕಿಚ್ಚನ್ನು ಇನ್ನಷ್ಟು ಹೆಚ್ಚಿಸಿದೆ. ಹೋರಾಟದ ಜಾಗಕ್ಕೆ ಹಳ್ಳಿಯ ಜನರು, ಭೂಮಿ ಮತ್ತು ವಸತಿಯ ಹೋರಾಟದಲ್ಲಿ ಭಾಗಿಯಾದ ಪ್ರತಿಭಟನಾಕಾರರು ಹಾಗೂ ಈ ಪ್ರತಿರೋಧಕ್ಕೆ ಬೆಂಬಲ ಸೂಚಿಸುವ ನಾಗರಿಕರೆಲ್ಲರೂ ಬಂದು ಸೇರುತ್ತಿದ್ದಾರೆ. ಅಧಿಸೂಚನೆಯನ್ನು ಹಿಂಪಡೆಯಬೇಕು, ಕೃಷಿ ಸಮುದಾಯದ ಭೂಮಿಯ ಹಕ್ಕುಗಳನ್ನು ಮತ್ತು ನೈಸರ್ಗಿಕ ಜೀವನವನ್ನು ಮರುಸ್ಥಾಪಿಸಬೇಕು ಎಲ್ಲರೂ ಒಂದೇ ಧ್ವನಿಯಲ್ಲಿ ಬೇಡಿಕೆ ಇಟ್ಟಿದ್ದಾರೆ.
ಇದು ಕೇವಲ ಆರ್ಥಿಕ ಪರಿಹಾರಕ್ಕೆ ನಡೆಸುತ್ತಿರುವ ಹೋರಾಟವಲ್ಲ; ಇದೊಂದು ಅತ್ಯಂತ ಸೈದ್ಧಾಂತಿಕವಾದ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಹೋರಾಟವಾಗಿದ್ದು, ಅದರೊಂದಿಗೆ ತಮ್ಮ ಭೂಮಿಯ ಮೇಲೆ ತಮಗೆ, ರೈತರಿಗೆ ಇರುವ ಮೂಲಭೂತ ಹಕ್ಕುಗಳು ಹಾಗೂ ತಮಗನುಗುಣವಾಗಿ ಜೀವಿಸುವ ಹಕ್ಕುಗಳಿಗಾಗಿ ನಡೆಯುತ್ತಿರವ ಹೋರಾಟವಾಗಿದೆ. ಖಾಸಗಿ ಆಸ್ತಿಯ ಹಕ್ಕಿಗೆ ಏನೂ ಮಾಡಬಾರದು ಎಂತಿದ್ದಾಗ, ಹಾಗೂ ಶ್ರೀಮಂತರೆಲ್ಲರೂ ಕಾನೂನುಬಾಹಿರವಾದ, ಅನ್ಯಾಯದಿಂದ ಸಂಪಾದಿಸಿದ ತಮ್ಮ ಆಸ್ತಿಯನ್ನು ಇಟ್ಟುಕೊಳ್ಳಬಹುದು ಎಂತಿದ್ದಾಗ, ಜನರು ತಮ್ಮ ಕನಿಷ್ಠ ಹೊಟ್ಟೆಪಾಡಿಗಾಗಿ ಇರುವ ಸಂಪನ್ಮೂಲಗಳನ್ನು ಉಳಿಸಿಕೊಳ್ಳಬಾರದೇ? ಇದು ಆಡಳಿತ ನಡೆಸುತ್ತಿರುವವ ಮುಂದಿರುವ ಗಂಭೀರ ಪ್ರಶ್ನೆಯಾಗಿದೆ. ಸಿದ್ದರಾಮಯ್ಯ ಸರಕಾರವು ಈ ಎಲ್ಲದಕ್ಕೂ ಕಣ್ಣುಮುಚ್ಚಿ ಕುಳಿತುಕೊಳ್ಳಬಾರದು. ತನ್ನದೇ ಪತನಕ್ಕೆ ಕಾರಣವಾಗುವ ಗಂಭೀರ ತಪ್ಪನ್ನು ಎಸಗಬಾರದು. ಕೋಮುವಾದವನ್ನು ಬಳಸಿ ಮತ್ತು ಕಾರ್ಪೊರೇಟ್‌ಗಳ ಹುನ್ನಾರದಿಂದ ದೇಶವನ್ನು ಮುಳಗಿಸುವ ಪ್ರತಿಜ್ಞೆ ಮಾಡಿರುವ ಬಿಜೆಪಿಯ ತರಹ ತಾನು ಅಲ್ಲ ಎಂದು ಜನರ ಮಾತುಗಳನ್ನು ಆಲಿಸುವ ಮೂಲಕ ಕಾಂಗ್ರೆಸ್ ಬದ್ಧತೆ ತೋರಿಸಲಿ.
ಹೋರಾಟವು ನಮ್ಮ ಹಕ್ಕಾಗಿದ್ದು, ಈ ಜನರ ಆಂದೋಲನಕ್ಕೆ ಬೆಂಬಲ ನೀಡುವುದು ನಮ್ಮ ಜವಾಬ್ದಾರಿಯಾಗಿದೆ.
- ಲಲಿತಾ


