ನವದೆಹಲಿ: ಡಾಬರ್ ಚ್ಯವನ್‌ಪ್ರಾಶ್‌ಗೆ ಕಳಂಕ ತರುವಂತಹ ಜಾಹೀರಾತುಗಳನ್ನು ಪ್ರಸಾರ ಮಾಡದಂತೆ ಯೋಗ ಗುರು ರಾಮದೇವ್ ನೇತೃತ್ವದ ಪತಂಜಲಿ ಆಯುರ್ವೇದ್ ಸಂಸ್ಥೆಗೆ ದೆಹಲಿ ಹೈಕೋರ್ಟ್ ಗುರುವಾರ ನಿರ್ಬಂಧ ವಿಧಿಸಿದೆ ಎಂದು ಪಿಟಿಐ ವರದಿ ಮಾಡಿದೆ. ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರು, ಡಾಬರ್ ಇಂಡಿಯಾ ಸಲ್ಲಿಸಿದ್ದ ಮಧ್ಯಂತರ ಪರಿಹಾರದ ಅರ್ಜಿಯನ್ನು ಅನುಮತಿಸಿದ್ದಾರೆ. ಮುಂದಿನ ವಿಚಾರಣೆ ಜುಲೈ 14ಕ್ಕೆ ನಿಗದಿಯಾಗಿದೆ.
ತಮ್ಮ ಬ್ರ್ಯಾಂಡ್‌ಗೆ ಕಳಂಕ ಹಚ್ಚುವ ಉದ್ದೇಶದಿಂದ ಪತಂಜಲಿ ಸರಣಿ ಟಿವಿ ಜಾಹೀರಾತುಗಳನ್ನು ಪ್ರಸಾರ ಮಾಡುತ್ತಿದೆ ಎಂದು ಡಾಬರ್ ಆರೋಪಿಸಿತ್ತು. ಈ ಸಂಬಂಧ ಡಾಬರ್ ಎರಡು ಮಧ್ಯಂತರ ತಡೆಯಾಜ್ಞೆ ಅರ್ಜಿಗಳನ್ನು ಸಲ್ಲಿಸಿದ್ದು, ನ್ಯಾಯಾಲಯ ಈಗಾಗಲೇ ಡಿಸೆಂಬರ್ 2023ರಲ್ಲಿ ಪತಂಜಲಿಗೆ ಸಮನ್ಸ್ ಜಾರಿ ಮಾಡಿತ್ತು. ನ್ಯಾಯಾಲಯದ ನಿರ್ದೇಶನಗಳ ಹೊರತಾಗಿಯೂ, ಪತಂಜಲಿ ಒಂದೇ ವಾರದಲ್ಲಿ ಬರೋಬ್ಬರಿ 6,182 ಜಾಹೀರಾತುಗಳನ್ನು ಪ್ರಸಾರ ಮಾಡಿದೆ ಎಂದು ಡಾಬರ್ ತನ್ನ ಎರಡನೇ ತಡೆಯಾಜ್ಞೆ ಅರ್ಜಿಯಲ್ಲಿ ತಿಳಿಸಿದೆ.
ಡಾಬರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂದೀಪ್ ಸೇಥಿ, ಪತಂಜಲಿ ತಮ್ಮ ಚ್ಯವನ್‌ಪ್ರಾಶ್‌ನಲ್ಲಿ “51ಕ್ಕೂ ಹೆಚ್ಚು ಗಿಡಮೂಲಿಕೆಗಳಿವೆ” ಎಂದು ಸುಳ್ಳು ಜಾಹೀರಾತು ನೀಡಿದೆ, ಆದರೆ ವಾಸ್ತವವಾಗಿ 47 ಗಿಡಮೂಲಿಕೆಗಳನ್ನು ಮಾತ್ರ ಬಳಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಅಷ್ಟೇ ಅಲ್ಲ, ಪತಂಜಲಿಯ ಉತ್ಪನ್ನದಲ್ಲಿ ಪಾದರಸ (ಮರ್ಕ್ಯುರಿ) ಅಂಶವಿದ್ದು, ಇದು ಮಕ್ಕಳಿಗೆ ಸೂಕ್ತವಲ್ಲ ಎಂಬ ಗಂಭೀರ ಆರೋಪವನ್ನೂ ಅವರು ಎತ್ತಿದರು.
ಸುಮಾರು 40 ಗಿಡಮೂಲಿಕೆಗಳಿಂದ ತಯಾರಾದ ಡಾಬರ್‌ನ ಚ್ಯವನ್‌ಪ್ರಾಶ್ ಅನ್ನು ಪತಂಜಲಿ “ಸಾಮಾನ್ಯ” ಎಂದು ಬಿಂಬಿಸಿದೆ. ಪತಂಜಲಿಯ ಉತ್ಪನ್ನ ಮಾತ್ರ ಆಯುರ್ವೇದ ತತ್ವಗಳನ್ನು ಅನುಸರಿಸುತ್ತದೆ ಎಂದು ಹೇಳುವ ಮೂಲಕ ಡಾಬರ್‌ನ ಉತ್ಪನ್ನದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಲಾಗಿದೆ. ಇದು ಉದ್ದೇಶಪೂರ್ವಕವಾಗಿ ಕಳಂಕ ಹಚ್ಚುವ ಪ್ರಯತ್ನ ಎಂದು ಸೇಥಿ ವಾದಿಸಿದರು.
ಚ್ಯವನ್‌ಪ್ರಾಶ್ ಮಾರುಕಟ್ಟೆಯಲ್ಲಿ 61.6% ಪಾಲನ್ನು ಹೊಂದಿರುವ ಡಾಬರ್, ಪತಂಜಲಿ “ನಮ್ಮನ್ನು ಸಾಮಾನ್ಯ ಎಂದು ಉಲ್ಲೇಖಿಸುತ್ತಾರೆ. ಮಾರುಕಟ್ಟೆ ನಾಯಕನನ್ನೇ ಸಾಮಾನ್ಯಗೊಳಿಸುತ್ತಾರೆ” ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು.
ಪತಂಜಲಿಯ ಜಾಹೀರಾತು “ಆಯುರ್ವೇದ ಮತ್ತು ವೇದಗಳ ಜ್ಞಾನವಿಲ್ಲದವರು, ಚರಕ, ಸುಶ್ರುತ, ಧನ್ವಂತರಿ ಮತ್ತು ಚ್ಯವನ ಋಷಿಗಳ ಪರಂಪರೆಯಲ್ಲಿ ‘ಮೂಲ’ ಚ್ಯವನ್‌ಪ್ರಾಶ್ ಅನ್ನು ಹೇಗೆ ತಯಾರಿಸಲು ಸಾಧ್ಯ?” ಎಂದು ಪ್ರಶ್ನಿಸಿದೆ. ಈ ಜಾಹೀರಾತಿನಲ್ಲಿ ಸ್ವತಃ ಸ್ವಾಮಿ ರಾಮದೇವ್ ಅವರೇ ಕಾಣಿಸಿಕೊಂಡು ಸ್ಪರ್ಧಾತ್ಮಕ ಉತ್ಪನ್ನಗಳ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದರು. ಡಾಬರ್‌ನ ಆಯುರ್ವೇದ ಪರಂಪರೆಯನ್ನು ಹಾಳುಮಾಡುವ ನೇರ ಪ್ರಯತ್ನ ಇದು ಎಂದು ಡಾಬರ್ ವಾದಿಸಿದೆ.
ಪತಂಜಲಿಯ ಜಾಹೀರಾತು ತಮ್ಮ ಪದಾರ್ಥಗಳ ಸಂಯೋಜನೆಯನ್ನು ತಪ್ಪಾಗಿ ನಿರೂಪಿಸುವುದು, ಡಾಬರ್‌ನ ಆಯುರ್ವೇದ ಸಂಬಂಧದ ಮೇಲೆ ದಾಳಿ ಮಾಡುವುದು ಮತ್ತು ಡಾಬರ್ ಉತ್ಪನ್ನವನ್ನು ಕೀಳು ಎಂದು ಬಿಂಬಿಸುವುದು ಸೇರಿದಂತೆ ಮೂರು ರೀತಿಯಲ್ಲಿ ಕಳಂಕ ಹಚ್ಚುತ್ತಿದೆ ಎಂದು ಡಾಬರ್ ವಿವರಿಸಿದೆ.
ಆರೋಪಗಳನ್ನು ನಿರಾಕರಿಸಿದ ಪತಂಜಲಿ ಪರ ಹಿರಿಯ ವಕೀಲ ಜಯಂತ್ ಮೆಹ್ತಾ, ಡಾಬರ್‌ನ ಎಲ್ಲಾ ಹಕ್ಕುಗಳನ್ನು ತಳ್ಳಿಹಾಕಿದರು. ಪತಂಜಲಿ ಚ್ಯವನ್‌ಪ್ರಾಶ್‌ನಲ್ಲಿರುವ ಪದಾರ್ಥಗಳು ಅನುಮೋದಿತ ಆಯುರ್ವೇದ ಸೂತ್ರೀಕರಣಗಳಿಗೆ ಸಂಪೂರ್ಣವಾಗಿ ಅನುಗುಣವಾಗಿವೆ ಮತ್ತು ಉತ್ಪನ್ನವು ಸೇವನೆಗೆ ಸುರಕ್ಷಿತವಾಗಿದೆ ಎಂದು ಅವರು ಹೇಳಿದ್ದಾರೆ. ಡಿಸೆಂಬರ್ 24ರಿಂದ ಪ್ರಾರಂಭವಾದ ಈ ಕಾನೂನು ಸಮರ ಜುಲೈ 14ರ ಮುಂದಿನ ವಿಚಾರಣೆಯಲ್ಲಿ ಹೊಸ ತಿರುವು ಪಡೆಯುವ ಸಾಧ್ಯತೆಯಿದೆ.
ಕೋಮುಭಾಷಣ: ಅಣ್ಣಾಮಲೈ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು; ತಮಿಳುನಾಡು ರಾಜಕಾರಣದಲ್ಲಿ ಬಿರುಗಾಳಿ


