ಗುಜರಾತ್‌ನ ವಡೋದರಾ ಜಿಲ್ಲೆಯ ಮುಜ್‌ಪುರ ಬಳಿ ನಾಲ್ಕು ದಶಕಗಳಷ್ಟು ಹಳೆಯದಾದ ‘ಗಂಭೀರ ಸೇತುವೆ’ಯ ಒಂದು ಭಾಗ ಬುಧವಾರ (ಜು.9) ಬೆಳಿಗ್ಗೆ ಕುಸಿದಿದ್ದು, ಹಲವು ವಾಹನಗಳು ನದಿಗೆ ಬಿದ್ದಿವೆ.
ಘಟನೆಯಲ್ಲಿ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಐವರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಠಾತ್ ಸೇತುವೆ ಕುಸಿದ ಪರಿಣಾಮ ಎರಡು ಟ್ರಕ್‌ಗಳು, ಒಂದು ಪಿಕಪ್ ವ್ಯಾನ್ ಮತ್ತು ಇನ್ನೊಂದು ವಾಹನ ನದಿಗೆ ಬಿದ್ದಿವೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ಥಳೀಯ ಗ್ರಾಮಸ್ಥರು ಜನರ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ನಂತರ, ಪೊಲೀಸರು ಮತ್ತು ರಕ್ಷಣಾ ತಂಡಗಳು ಕಾರ್ಯಾಚರಣೆ ಪ್ರಾರಂಭಿಸಿದವು ಎಂದು ವರದಿಗಳು ಹೇಳಿವೆ.
In Gujarat’s Vadodara, the Gambhira Bridge connecting Anand and Vadodara collapsed.
Several vehicles, including a truck, a tanker, and cars, plunged into the rive. Rescue and relief operations are currently underway. pic.twitter.com/0FFJ4GPZua— Mohammed Zubair (@zoo_bear) July 9, 2025
ಮಧ್ಯ ಗುಜರಾತ್ ಮತ್ತು ಸೌರಾಷ್ಟ್ರ ಪ್ರದೇಶಗಳನ್ನು ಸಂಪರ್ಕಿಸುವ ಗಂಭೀರ ಸೇತುವೆಯ ಸ್ಲ್ಯಾಬ್ ಕುಸಿದು ದುರಂತ ಸಂಭವಿಸಿದೆ. ಘಟನೆಯಲ್ಲಿ ಐದರಿಂದ ಆರು ವಾಹನಗಳು ಮಹಿಸಾಗರ್ ನದಿಗೆ ಬಿದ್ದಿವೆ ಎಂದು ಗುಜರಾತ್ ಆರೋಗ್ಯ ಸಚಿವ ರುಷಿಕೇಶ್ ಪಟೇಲ್ ತಿಳಿಸಿದ್ದಾರೆ.
ಗಂಭೀರ ಸೇತುವೆ ಬಹಳ ಹಿಂದಿನಿಂದಲೂ ಅಪಾಯಕಾರಿ ಶಿಥಿಲಾವಸ್ಥೆಯಲ್ಲಿತ್ತು. ಸ್ಥಳೀಯರು ಆ ಬಗ್ಗೆ ಪದೇ ಪದೇ ಎಚ್ಚರಿಕೆ ನೀಡುತ್ತಿದ್ದರು. ತುರ್ತು ದುರಸ್ತಿ ಮಾಡಿ ಇಲ್ಲಾ ಹೊಸ ಸೇತುವೆ ನಿರ್ಮಿಸಿ ಎಂದು ಮನವಿ ಮಾಡುತ್ತಿದ್ದರು. ಆದರೆ, ಅವರ ಎಚ್ಚರಿಕೆಗಳನ್ನು ಆಡಳಿತ ನಿರ್ಲಕ್ಷಿಸಿತ್ತು.
ಈಗ ಸೇತುವೆ ಕುಸಿದು ಪರಿಸ್ಥಿತಿ ಗಂಭೀರವಾಗಿದೆ. ಪ್ರಮುಖ ಜಿಲ್ಲೆಗಳಾದ ಆನಂದ್, ವಡೋದರಾ, ಭರೂಚ್ ಮತ್ತು ಅಂಕಲೇಶ್ವರವನ್ನು ಸೌರಾಷ್ಟ್ರಕ್ಕೆ ಸಂಪರ್ಕಿಸುವ ಪ್ರಮುಖ ಕೊಂಡಿ ಮುರಿದಿದೆ. ಪ್ರಾದೇಶಿಕ ಸಾರಿಗೆ ಮತ್ತು ವಾಣಿಜ್ಯ ವ್ಯವಹಾರ ಸ್ಥಗಿತಗೊಂಡಿದೆ.
ಸೇತುವೆಯನ್ನು 1985ರಲ್ಲಿ ನಿರ್ಮಿಸಲಾಗಿದ್ದು, ಅಗತ್ಯವಿದ್ದಾಗ ಮತ್ತು ನಿಯತಕಾಲಿಕವಾಗಿ ಅದರ ನಿರ್ವಹಣೆಯನ್ನು ಕೈಗೊಳ್ಳಲಾಗುತ್ತಿತ್ತು ಎಂದು ಆರೋಗ್ಯ ಸಚಿವ ಋಷಿಕೇಶ್ ಪಟೇಲ್ ಹೇಳಿದ್ದಾರೆ. “ಘಟನೆಯ ಹಿಂದಿನ ನಿಖರವಾದ ಕಾರಣದ ಕುರಿತು ತನಿಖೆ ಮಾಡಲಾಗುವುದು” ಎಂದು ತಿಳಿಸಿದ್ದಾರೆ.
ತಾಂತ್ರಿಕ ತಜ್ಞರು ಸ್ಥಳಕ್ಕೆ ತೆರಳಿ ಸೇತುವೆ ಕುಸಿತದ ಕಾರಣದ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ನಿರ್ದೇಶಿಸಿದ್ದಾರೆ ಎಂದು ಸಚಿವ ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ತಂಡವು ರಕ್ಷಣಾ ಸಲಕರಣೆಗಳೊಂದಿಗೆ ಘಟನಾ ಸ್ಥಳಕ್ಕೆ ತೆರಳಿದೆ ಎಂದು ಅಧಿಕಾರಿ ಹೇಳಿದ್ದಾರೆ.


