Homeಮುಖಪುಟಮಹಾರಾಷ್ಟ್ರ: ಮುಟ್ಟು ಪರೀಕ್ಷೆಗೆ 10 ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಶಾಲೆ; ಪ್ರಾಂಶುಪಾಲ, ಸಿಬ್ಬಂದಿ ಬಂಧನ

ಮಹಾರಾಷ್ಟ್ರ: ಮುಟ್ಟು ಪರೀಕ್ಷೆಗೆ 10 ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಶಾಲೆ; ಪ್ರಾಂಶುಪಾಲ, ಸಿಬ್ಬಂದಿ ಬಂಧನ

- Advertisement -
- Advertisement -

ಈ ಘಟನೆ ಮುಟ್ಟು ಕುರಿತು ಸಮಾಜದ ಕಾಯಿಲೆಯ ಪ್ರತಿಬಿಂಬ: ಪರಿಹಾರವೇನು?

ಥಾಣೆ, ಮಹಾರಾಷ್ಟ್ರ: ಶಾಲೆಯ ಶೌಚಾಲಯದಲ್ಲಿ ರಕ್ತದ ಕಲೆಗಳು ಕಂಡುಬಂದ ಕಾರಣಕ್ಕೆ, ಯಾರು ಋತುಮತಿಯಾಗಿದ್ದಾರೆಂದು ಪತ್ತೆಹಚ್ಚಲು ಸುಮಾರು 10 ವಿದ್ಯಾರ್ಥಿನಿಯರನ್ನು ಬಟ್ಟೆ ಬಿಚ್ಚಿಸಿ ಪರೀಕ್ಷೆ ನಡೆಸಿದ ಆಘಾತಕಾರಿ ಘಟನೆ ಥಾಣೆ ಜಿಲ್ಲೆಯ ಶಹಾಪುರದ ಆರ್.ಎಸ್. ದಮಾನಿ ಶಾಲೆಯಲ್ಲಿ ನಡೆದಿದೆ. ಈ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ಶಾಲೆಯ ಪ್ರಾಂಶುಪಾಲ ಮತ್ತು ಮಹಿಳಾ ಸಿಬ್ಬಂದಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ವಿವರ

ಮಂಗಳವಾರ ಶಾಲೆಯ ಶೌಚಾಲಯವೊಂದರಲ್ಲಿ ರಕ್ತದ ಕಲೆಗಳನ್ನು ಗಮನಿಸಿದ ಶಾಲಾ ಸಿಬ್ಬಂದಿ, ಈ ವಿಷಯವನ್ನು ಪ್ರಾಂಶುಪಾಲರು ಮತ್ತು ಶಿಕ್ಷಕರ ಗಮನಕ್ಕೆ ತಂದಿದ್ದಾರೆ. ನಂತರ, 5 ರಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿನಿಯರನ್ನು ಶಾಲೆಯ ಸಭಾಂಗಣದಲ್ಲಿ ಒಟ್ಟುಗೂಡಿಸಲಾಗಿದೆ. ಅಲ್ಲಿ, ಶೌಚಾಲಯದಲ್ಲಿ ಕಂಡುಬಂದ ರಕ್ತದ ಕಲೆಗಳ ಚಿತ್ರಗಳನ್ನು ಪ್ರೊಜೆಕ್ಟರ್ ಮೂಲಕ ಪ್ರದರ್ಶಿಸಿ, ಯಾರು ಋತುಮತಿಯಾಗಿದ್ದೀರೆಂದು ಸ್ವಯಂಪ್ರೇರಿತವಾಗಿ ಮುಂದೆ ಬರುವಂತೆ ಸೂಚಿಸಲಾಗಿದೆ.

ಕೆಲವು ವಿದ್ಯಾರ್ಥಿನಿಯರು ತಾವು ಋತುಮತಿಯಾಗಿರುವುದಾಗಿ ಒಪ್ಪಿಕೊಂಡಾಗ, ಅವರಿಂದ ಹೆಬ್ಬೆಟ್ಟಿನ ಗುರುತು ಪಡೆಯಲಾಗಿದೆ. ಉಳಿದ ವಿದ್ಯಾರ್ಥಿನಿಯರನ್ನು ಶೌಚಾಲಯಕ್ಕೆ ಕರೆದೊಯ್ದು, ಮಹಿಳಾ ಸಿಬ್ಬಂದಿಯೊಬ್ಬರ ಮೇಲ್ವಿಚಾರಣೆಯಲ್ಲಿ ಬಟ್ಟೆ ಬಿಚ್ಚಿಸಿ ದೈಹಿಕವಾಗಿ ಪರೀಕ್ಷಿಸಲಾಗಿದೆ. 10 ರಿಂದ 12 ವರ್ಷದೊಳಗಿನ ವಿದ್ಯಾರ್ಥಿನಿಯರ ಒಳಉಡುಪುಗಳನ್ನು ಮುಟ್ಟಿ ಪರೀಕ್ಷಿಸುವಂತೆ ಪ್ರಾಂಶುಪಾಲರು ಮಹಿಳಾ ಸಿಬ್ಬಂದಿಗೆ ಸೂಚಿಸಿದ್ದರು ಎಂದು ಆರೋಪಿಸಲಾಗಿದೆ.

ಈ ವೇಳೆ, ವಿದ್ಯಾರ್ಥಿನಿಯೊಬ್ಬಳು ಸ್ಯಾನಿಟರಿ ಪ್ಯಾಡ್ ಧರಿಸಿದ್ದು ಕಂಡುಬಂದಿದೆ. ಆಗ ಪ್ರಾಂಶುಪಾಲರು, “ನೀನು ಋತುಮತಿಯಾಗಿಲ್ಲದಿದ್ದರೂ ಸ್ಯಾನಿಟರಿ ಪ್ಯಾಡ್ ಏಕೆ ಧರಿಸಿದ್ದೀಯ?” ಎಂದು ಗದರಿಸಿ, ಆಕೆಯನ್ನು ಸುಳ್ಳುಗಾರ್ತಿ ಎಂದು ನಿಂದಿಸಿ, ಬಲವಂತವಾಗಿ ಹೆಬ್ಬೆಟ್ಟಿನ ಗುರುತು ಪಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಘಟನೆಯಿಂದ ವಿದ್ಯಾರ್ಥಿನಿಯು ಶಿಕ್ಷಕರು ಮತ್ತು ಇತರ ವಿದ್ಯಾರ್ಥಿಗಳಿಂದ ಅಪಮಾನಕ್ಕೊಳಗಾಗಿದ್ದಾಳೆ.

ಪೋಷಕರ ಆಕ್ರೋಶ ಮತ್ತು ಪೊಲೀಸ್ ಕ್ರಮ

ಈ ಆಘಾತಕಾರಿ ಘಟನೆಯಿಂದ ಮಾನಸಿಕವಾಗಿ ನೊಂದ ವಿದ್ಯಾರ್ಥಿನಿಯರು ಮನೆಗೆ ತೆರಳಿ ಪೋಷಕರಿಗೆ ವಿಷಯ ತಿಳಿಸಿದ್ದಾರೆ. ಮರುದಿನ ಶಾಲೆಗೆ ಬಂದ ಪೋಷಕರು, ಶಾಲಾ ಆಡಳಿತ ಮಂಡಳಿಯ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಇದು ಶಾಲಾ ಆವರಣದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಯಿತು.

ಪೋಷಕರೊಬ್ಬರು ನೀಡಿದ ದೂರಿನ ಅನ್ವಯ, ಶಹಾಪುರ ಪೊಲೀಸರು ಶಾಲೆಯ ಪ್ರಾಂಶುಪಾಲ, ನಾಲ್ವರು ಶಿಕ್ಷಕರು, ಓರ್ವ ಮಹಿಳಾ ಸಿಬ್ಬಂದಿ ಹಾಗೂ ಇಬ್ಬರು ಟ್ರಸ್ಟಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 74 (ಮಹಿಳೆಯ ಮಾನಭಂಗ ಮಾಡುವ ಉದ್ದೇಶದಿಂದ ಹಲ್ಲೆ) ಮತ್ತು ಸೆಕ್ಷನ್ 76 (ಮಹಿಳೆಯನ್ನು ವಿವಸ್ತ್ರಗೊಳಿಸುವ ಉದ್ದೇಶದಿಂದ ಹಲ್ಲೆ) ಹಾಗೂ ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಂಶುಪಾಲ ಮತ್ತು ಮಹಿಳಾ ಸಿಬ್ಬಂದಿಯನ್ನು ಬುಧವಾರ ಬಂಧಿಸಲಾಗಿದ್ದು, ಅವರನ್ನು ಇಂದು (ಗುರುವಾರ) ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಥಾಣೆ ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.

ಸದ್ಯಕ್ಕೆ ನಾವು ಹೇಳಿಕೆಗಳನ್ನು ಸಂಗ್ರಹಿಸುತ್ತಿದ್ದೇವೆ ಮತ್ತು ಘಟನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದೇವೆ. ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಥಾಣೆ ಗ್ರಾಮಾಂತರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಝಾಲ್ಟೆ ಹೇಳಿದ್ದಾರೆ.

ಥಾಣೆ ಘಟನೆ ಮುಟ್ಟಿನ ಬಗೆಗಿನ ನಮ್ಮ ಸಮಾಜದ ಕಾಯಿಲೆಯ ಪ್ರತಿಬಿಂಬ!

ಮಹಾರಾಷ್ಟ್ರದ ಥಾಣೆಯ ಶಾಲೆಯಲ್ಲಿ ನಡೆದ ವಿದ್ಯಾರ್ಥಿನಿಯರ ವಿವಸ್ತ್ರೀಕರಣ ಘಟನೆಯನ್ನು ಕೇವಲ ಒಂದು ಸ್ಥಳೀಯ ಅಪರಾಧವೆಂದು ಪರಿಗಣಿಸಿದರೆ ಅದು ನಮ್ಮ ದೊಡ್ಡ ತಪ್ಪಾಗುತ್ತದೆ. ವಾಸ್ತವದಲ್ಲಿ, ಇದು ನಮ್ಮ ಸಮಾಜದಲ್ಲಿ ಮುಟ್ಟಿನ (ಋತುಚಕ್ರ) ಬಗ್ಗೆ ಆಳವಾಗಿ ಬೇರೂರಿರುವ ಅಜ್ಞಾನ, ಮೂಢನಂಬಿಕೆ, ಮತ್ತು ಮಹಿಳಾ ವಿರೋಧಿ ಮನಸ್ಥಿತಿಯಾಗಿದೆ.

ಸಮಸ್ಯೆಯ ಮೂಲ ಎಲ್ಲಿದೆ?

ಋತುಚಕ್ರವು ಮಹಿಳೆಯ ದೇಹದಲ್ಲಿ ನಡೆಯುವ ಒಂದು ಸಹಜ ಮತ್ತು ಆರೋಗ್ಯಕರ ಜೈವಿಕ ಪ್ರಕ್ರಿಯೆ. ಆದರೆ ನಮ್ಮ ಸಮಾಜದಲ್ಲಿ ಅದನ್ನು ‘ಅಶುದ್ಧ’, ‘ಮೈಲಿಗೆ’ ಮತ್ತು ಮುಚ್ಚಿಡಬೇಕಾದ ವಿಚಾರವೆಂದು ಬಿಂಬಿಸಲಾಗಿದೆ. ಶಾಲೆಯ ಶೌಚಾಲಯದಲ್ಲಿ ರಕ್ತದ ಕಲೆ ಕಂಡಾಗ, ಅದನ್ನು ನೈರ್ಮಲ್ಯದ ಸಮಸ್ಯೆಯಾಗಿ ನೋಡುವ ಬದಲು, ಒಂದು ‘ಅಪರಾಧ’ ಎಂಬಂತೆ ನೋಡಿ, ‘ಅಪರಾಧಿ’ಯನ್ನು ಪತ್ತೆಹಚ್ಚಲು ಹೊರಟಿದ್ದೇ ಈ ಮನಸ್ಥಿತಿಯ ಫಲವಾಗಿದೆ.

ವಿಜ್ಞಾನವನ್ನು ಬೋಧಿಸಬೇಕಾದ ಶಾಲೆಯಲ್ಲೇ ಇಂತಹ ಅವೈಜ್ಞಾನಿಕ ಮತ್ತು ಅಮಾನವೀಯ ಘಟನೆ ನಡೆದಿದೆ ಎಂದರೆ, ನಮ್ಮ ಶಿಕ್ಷಣ ವ್ಯವಸ್ಥೆ ಎಲ್ಲಿ ಎಡವುತ್ತಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಲೈಂಗಿಕ ಶಿಕ್ಷಣ ಮತ್ತು ಮುಟ್ಟಿನ ಕುರಿತ ಆರೋಗ್ಯಕರ ಚರ್ಚೆಗಳು ಪಠ್ಯಕ್ರಮದ ಭಾಗವಾಗಿದ್ದರೂ, ಶಿಕ್ಷಕರಿಗೇ ಈ ಕುರಿತು ಸರಿಯಾದ ಜ್ಞಾನ ಇಲ್ಲದಿರುವುದು ಈ ಘಟನೆಯಿಂದ ಸ್ಪಷ್ಟವಾಗುತ್ತದೆ.

ಈ ಘಟನೆಯಲ್ಲಿ ಪ್ರಾಂಶುಪಾಲ ಮತ್ತು ಶಿಕ್ಷಕರು ತಮ್ಮ ಅಧಿಕಾರವನ್ನು ಬಳಸಿ, ಮಕ್ಕಳ ಮೇಲೆ ನಡೆಸಿದ ಈ ದೌರ್ಜನ್ಯವು ಪೋಕ್ಸೋ ಕಾಯ್ದೆಯ ವ್ಯಾಪ್ತಿಗೆ ಬರುತ್ತದೆ. ಪೋಕ್ಸೋ ಕಾಯ್ದೆಯು ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸಲು ಇರುವ ಅತ್ಯಂತ ಕಠಿಣ ಕಾನೂನು ಆಗಿದೆ. ಮಕ್ಕಳ ಖಾಸಗಿತನವನ್ನು ಗೌರವಿಸುವುದು, ಅವರ ಘನತೆಗೆ ಧಕ್ಕೆ ತರದಂತೆ ನೋಡಿಕೊಳ್ಳುವುದು ಶಾಲೆಯ ಪ್ರಮುಖ ಜವಾಬ್ದಾರಿ. ಇಲ್ಲಿ ಆ ಜವಾಬ್ದಾರಿಯ ಸಂಪೂರ್ಣ ಉಲ್ಲಂಘನೆಯಾಗಿದೆ.

ಮುಂದೇನು?

ಆರೋಪಿಗಳ ಬಂಧನ ಮತ್ತು ಅವರಿಗೆ ಕಠಿಣ ಶಿಕ್ಷೆಯಾಗುವುದು ಕಾನೂನು ಪ್ರಕ್ರಿಯೆಯ ಒಂದು ಭಾಗವಷ್ಟೇ ಆಗಿದೆ. ಆದರೆ, ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಈ ಕೆಳಗಿನ ಕ್ರಮಗಳು ಅಗತ್ಯವಾಗಿದೆ.

ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪಠ್ಯಕ್ರಮದ ಕಲಿಕೆಯಷ್ಟೇ ಮುಖ್ಯವಾಗಿ, ಮಾನಸಿಕ, ದೈಹಿಕ ಮತ್ತು ಸಾಮಾಜಿಕ ಅಂಶಗಳ ಬಗ್ಗೆ ಅರಿವು ಮೂಡಿಸುವುದು ಅತಿ ಅವಶ್ಯಕ. ಈ ನಿಟ್ಟಿನಲ್ಲಿ ಶಾಲಾ ಶಿಕ್ಷಕರಿಗೆ ಮತ್ತು ಸಿಬ್ಬಂದಿಗೆ ಲಿಂಗ ಸಂವೇದನೆ ಮತ್ತು ಮುಟ್ಟಿನ ನೈರ್ಮಲ್ಯ (ಸ್ಯಾನಿಟರ್ ಪ್ಯಾಡ್‌) ನಿರ್ವಹಣೆ ಕುರಿತು ಕಡ್ಡಾಯವಾಗಿ ತರಬೇತಿ ನೀಡುವುದು ಅಗತ್ಯವಾಗಿದೆ.

ಈ ತರಬೇತಿಯು ಕೇವಲ ಮಾಹಿತಿ ನೀಡುವ ಕಾರ್ಯಕ್ರಮವಾಗಿರದೆ, ಶಿಕ್ಷಕರಲ್ಲಿ ಮತ್ತು ಸಿಬ್ಬಂದಿಯಲ್ಲಿ ಲಿಂಗ ಸಮಾನತೆ ಮತ್ತು ಮುಟ್ಟಿನ ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ತಿಳುವಳಿಕೆ ಮತ್ತು ಸಂವೇದನೆಯನ್ನು ಬೆಳೆಸುವ ಗುರಿ ಹೊಂದಿರಬೇಕು. ಲಿಂಗದ ಆಧಾರದ ಮೇಲೆ ಸಮಾಜದಲ್ಲಿ ಹಾಸುಹೊಕ್ಕಾಗಿರುವ ತಪ್ಪು ಕಲ್ಪನೆಗಳನ್ನು ನಿವಾರಿಸುವ ವಿಧಾನಗಳ ಬಗ್ಗೆ ಶಿಕ್ಷಕರಿಗೆ ಅರಿವು ಮೂಡಿಸುವುದು. ಮುಟ್ಟಿನ ಶಾರೀರಿಕ ಪ್ರಕ್ರಿಯೆ, ಶುಚಿತ್ವದ ಮಹತ್ವ, ಲಭ್ಯವಿರುವ ನೈರ್ಮಲ್ಯ ಉತ್ಪನ್ನಗಳು (ಸ್ಯಾನಿಟರಿ ಪ್ಯಾಡ್‌ಗಳು) ಮತ್ತು ಅವುಗಳ ಸರಿಯಾದ ವಿಲೇವಾರಿ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸುವುದು. ತುರ್ತು ಸಂದರ್ಭಗಳಲ್ಲಿ ವಿದ್ಯಾರ್ಥಿನಿಯರಿಗೆ ನೆರವಾಗುವ ವಿಧಾನಗಳ ಬಗ್ಗೆಯೂ ತಿಳಿಸುವಂತಹ ತರಬೇತಿಯನ್ನು ನೀಡಬೇಕಿದೆ.

ಶಾಲೆಗಳು ಕೇವಲ ಪಾಠ ಹೇಳುವ ಕೇಂದ್ರಗಳಾಗಿರದೆ, ವಿದ್ಯಾರ್ಥಿಗಳು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಮುಕ್ತವಾಗಿ ಚರ್ಚಿಸಲು, ಪ್ರಶ್ನೆ ಕೇಳುವ ಸುರಕ್ಷಿತ ಸ್ಥಳಗಳಾಗಿ ರೂಪುಗೊಳ್ಳಬೇಕು. ಮುಟ್ಟಿನ ಬಗ್ಗೆ ತಜ್ಞರು, ವೈದ್ಯರು ಅಥವಾ ನುರಿತ ಶಿಕ್ಷಕರಿಂದ ನಿಯಮಿತವಾಗಿ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ವಿಜ್ಞಾನ ಮತ್ತು ಆರೋಗ್ಯ ಶಿಕ್ಷಣ ಪಠ್ಯಕ್ರಮದಲ್ಲಿ ಮುಟ್ಟಿನ ನೈರ್ಮಲ್ಯ ಮತ್ತು ಲಿಂಗ ಸಂವೇದನಾ ವಿಷಯಗಳನ್ನು ಸಮಗ್ರವಾಗಿ ಸೇರಿಸಬೇಕು.

ಶಾಲೆಯಲ್ಲಿ ಮುಟ್ಟಿಗೆ ಸಂಬಂಧಿಸಿದ ತಮಾಷೆ ಅಥವಾ ಅವಮಾನವನ್ನು ನಿಷೇಧಿಸಬೇಕು. ಸ್ವಚ್ಛ ಮತ್ತು ಸುಲಭವಾಗಿ ಲಭ್ಯವಿರುವ ಶೌಚಾಲಯಗಳು, ಮುಟ್ಟಿನ ನೈರ್ಮಲ್ಯ ಉತ್ಪನ್ನ(ಸ್ಯಾನಿಟರಿ ಪ್ಯಾಡ್‌ಗಳು)ಗಳು ಮತ್ತು ಅವುಗಳ ವಿಲೇವಾರಿಗೆ ಸೂಕ್ತ ವ್ಯವಸ್ಥೆಗಳನ್ನು ಶಾಲೆಗಳಲ್ಲಿ ಕಡ್ಡಾಯವಾಗಿ ಒದಗಿಸಬೇಕು.

ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸಲು ಇರುವ ಪೋಕ್ಸೋ (POCSO – Protection of Children from Sexual Offences) ಕಾಯ್ದೆ-2012 ಕುರಿತು ಮಕ್ಕಳಿಗೆ ಸಂಪೂರ್ಣ ಅರಿವು ಮೂಡಿಸಬೇಕಾಗಿದೆ. ತಮ್ಮ ಹಕ್ಕುಗಳ ಕುರಿತು ಮತ್ತು ದೌರ್ಜನ್ಯ ನಡೆದಾಗ ಯಾರಿಗೆ ಮತ್ತು ಹೇಗೆ ದೂರು ನೀಡಬೇಕು ಎಂಬುದರ ಬಗ್ಗೆ ಮಕ್ಕಳಿಗೆ ಸ್ಪಷ್ಟವಾಗಿ ತಿಳಿಸಬೇಕು.

ಪೋಕ್ಸೋ ಕಾಯ್ದೆಯು ಜಟಿಲವಾದ ಕಾನೂನು ಭಾಷೆಯಲ್ಲಿದೆ. ಇದನ್ನು ಮಕ್ಕಳಿಗೆ ಅರ್ಥವಾಗುವ ಸರಳ ಭಾಷೆ, ಕಥೆಗಳು, ಚಿತ್ರಗಳು ಮತ್ತು ಸಣ್ಣ ನಾಟಕಗಳ ಮೂಲಕ ವಿವರಿಸಬೇಕು.

ಶಾಲೆಯಲ್ಲಿ ಯಾರನ್ನು ವಿಶ್ವಾಸದಿಂದ ಸಂಪರ್ಕಿಸಬಹುದು (ಉದಾ: ಪ್ರಾಂಶುಪಾಲರು, ಶಿಕ್ಷಕರು, ಸಲಹೆಗಾರರು) ಎಂಬ ಬಗ್ಗೆ ಮಕ್ಕಳಿಗೆ ತಿಳಿಸಬೇಕು. ಮಕ್ಕಳ ಸಹಾಯವಾಣಿ 1098ರ ಬಗ್ಗೆಯೂ ಮಾಹಿತಿ ನೀಡಬೇಕು. ದೂರು ನೀಡಿದಾಗ ಮಕ್ಕಳ ಗೌಪ್ಯತೆಯನ್ನು ಖಚಿತಪಡಿಸಲಾಗುವುದು ಎಂಬ ಭರವಸೆಯನ್ನು ನೀಡಬೇಕು.

ಈ ಪ್ರಮುಖ ಅಂಶಗಳನ್ನು ಶಾಲಾ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳುವ ಮೂಲಕ, ವಿದ್ಯಾರ್ಥಿಗಳಿಗೆ ಹೆಚ್ಚು ಸುರಕ್ಷಿತ, ಸಮಾನತೆ ಆಧಾರಿತ ಮತ್ತು ವೈಜ್ಞಾನಿಕ ಚಿಂತನೆಯ ವಾತಾವರಣವನ್ನು ನಿರ್ಮಿಸಲು ಸಾಧ್ಯ. ಇದು ಮಕ್ಕಳ ಒಟ್ಟಾರೆ ಬೆಳವಣಿಗೆಗೆ ಮತ್ತು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಅಡಿಪಾಯ ಹಾಕುತ್ತದೆ.

ಸೌಜನ್ಯ ಪ್ರಕರಣ| ಹೈಕೋರ್ಟ್ ನ್ಯಾಯಮೂರ್ತಿ ದೇವದಾಸ್ ವಾಗ್ದಂಡನೆಗೆ ಒತ್ತಾಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...