ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಕಲ್ಕತ್ತಾ ಕ್ಯಾಂಪಸ್‌ನಲ್ಲಿ, ಎರಡನೇ ವರ್ಷದ ವಿದ್ಯಾರ್ಥಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿಯೊಬ್ಬರು ಆರೋಪಿಸಿದ್ದಾರೆ.
ಆರೋಪಿ ಕರ್ನಾಟಕ ಮೂಲದ ವಿದ್ಯಾರ್ಥಿಯನ್ನು ಬಂಧಿಸಲಾಗಿದ್ದು, ಶನಿವಾರ ಅಲಿಪೋರ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ವರದಿಗಳು ಹೇಳಿವೆ.
ಬೇರೊಂದು ಸಂಸ್ಥೆಯ ವಿದ್ಯಾರ್ಥಿನಿಯಾಗಿರುವ ಸಂತ್ರಸ್ತೆಯನ್ನು ಕೌನ್ಸೆಲಿಂಗ್ ಅವಧಿಗೆ ಕ್ಯಾಂಪಸ್‌ಗೆ ಆಹ್ವಾನಿಸಿದ್ದ ಆರೋಪಿ ತನ್ನ ಹಾಸ್ಟೆಲ್ ಕೊಠಡಿಗೆ ಕರೆದೊಯ್ದು ಮಾದಕ ವಸ್ತು ಕೊಟ್ಟು ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಆರೋಪಿ ಮತ್ತು ಸಂತ್ರಸ್ತೆ ಇಬ್ಬರೂ ಆನ್‌ಲೈನ್ ಮೂಲಕ ಪರಿಚಯಸ್ಥರಾಗಿದ್ದರು. ತಮ್ಮ ಅಧ್ಯಯನ ಮತ್ತು ವೃತ್ತಿಜೀವನದ ಬಗ್ಗೆ ಅಲ್ಲಿ ಚರ್ಚಿಸುತ್ತಿದ್ದರು. ಶುಕ್ರವಾರ ಕೌನ್ಸೆಲಿಂಗ್‌ಗೆ ಎಂದು ಸಂತ್ರಸ್ತೆ ಐಐಎಂಗೆ ಬಂದಿದ್ದರು. ಈ ವೇಳೆ ಗೇಟ್ ಬಳಿ ಸಂದರ್ಶಕರ ನೋಂದಣಿಗೆ ಸಹಿ ಹಾಕದಂತೆ ಆರೋಪಿ ತಡೆದಿದ್ದ. ನಂತರ ಕೌನ್ಸೆಲಿಂಗ್ ಸ್ಥಳದ ಬದಲು ಕೆಲಸ ಇದೆ ಎಂದು ಆತನ ಹಾಸ್ಟೆಲ್‌ಗೆ ಕರೆದೊಯ್ದಿದ್ದ ಎಂದು ವರದಿಯಾಗಿದೆ.
“ಹಾಸ್ಟೆಲ್‌ನಲ್ಲಿ ಆತ ತನಗೆ ಪಿಝ್ಝಾ ಮತ್ತು ನೀರು ಕೊಟ್ಟಿದ್ದ. ಅದರಲ್ಲಿ ಮಾದಕ ವಸ್ತು ಬೆರೆಸಲಾಗಿತ್ತು. ನಾನು ಅದನ್ನು ತಿಂದು ಪ್ರಜ್ಞೆ ತಪ್ಪಿ ಬಿದ್ದಾಗ ಆತ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಪಿಝ್ಝಾ ತಿಂದ ಬಳಿಕ ಸ್ವಲ್ಪ ಹೊತ್ತು ನಾನು ಅರೆಪ್ರಜ್ಞಾವಸ್ಥೆಯಲ್ಲಿದ್ದೆ. ನಂತರ ಸಂಪೂರ್ಣವಾಗಿ ಪ್ರಜ್ಞೆ ಕಳೆದುಕೊಂಡಿದ್ದೆ. ಪ್ರಜ್ಞೆ ಬಂದಾಗ ನಾನು ಹಾಸ್ಟೆಲ್ ಕೊಠಡಿಯಲ್ಲಿ ಒಬ್ಬಳೇ ಇದ್ದೆ. ತಕ್ಷಣ ನಾನು ಅಲ್ಲಿಂದ ಹೊರ ಬಂದು ಸ್ನೇಹಿತೆಗೆ ಕರೆ ಮಾಡಿದೆ. ನಂತರ ನಾವಿಬ್ಬರು ಒಟ್ಟಿಗೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದೆವು” ಎಂದು ಸಂತ್ರಸ್ಥೆ ದೂರಿನಲ್ಲಿ ಹೇಳಿಕೊಂಡಿದ್ದಾಗಿ ವರದಿಗಳು ತಿಳಿಸಿವೆ.
ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಅತ್ಯಾಚಾರ ಮತ್ತು ಇತರ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಪ್ರಕರಣದಲ್ಲಿ ಇತರ ನಾಲ್ವರು ಭಾಗಿಯಾಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು, ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ ಇಂಡಿಯನ್ ಎಕ್ಸ್‌ಪ್ರೆಸ್ ಹೇಳಿದೆ.
ಘಟನೆ ನಡೆದ ಹಾಸ್ಟೆಲ್ ಕೊಠಡಿಯನ್ನು ಸೀಲ್ ಮಾಡಲಾಗಿದೆ ಮತ್ತು ಘಟನಾ ಸ್ಥಳದಿಂದ ವಿಧಿವಿಜ್ಞಾನ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ವರದಿ ತಿಳಿಸಿದೆ.
ಊರಿಗೆ ರಸ್ತೆ ನಿರ್ಮಿಸುವಂತೆ ಗರ್ಭಿಣಿ ಬೇಡಿಕೆ: ಹೆರಿಗೆ ದಿನಾಂಕ ತಿಳಿಸಿ ಎಂದ ಬಿಜೆಪಿ ಸಂಸದ!


