ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಶನಿವಾರ 23 ನಕ್ಸಲರು ಪೊಲೀಸರ ಮುಂದೆ ಶರಣಾಗಿದ್ದಾರೆ. 14 ಪುರುಷರು ಮತ್ತು 9 ಮಹಿಳೆಯರ ಈ ತಂಡದ ಮೇಲೆ ಒಟ್ಟು 1.18 ಕೋಟಿ ರೂಪಾಯಿ ಬಹುಮಾನ ಘೋಷಣೆಯಾಗಿತ್ತು ಎಂದು ವರದಿಯಾಗಿದೆ.
ನಿಷೇಧಿತ ಭಾರತ ಕಮ್ಯುನಿಸ್ಟ್ ಪಕ್ಷದ (ಮಾವೋವಾದಿ) ಸಶಸ್ತ್ರ ವಿಭಾಗವಾದ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ (ಪಿಎಲ್‌ಜಿಎ)ಯ ಬಲಿಷ್ಠ ಬೆಟಾಲಿಯನ್ 1ರ ಎಂಟು ಕಟ್ಟಾ ಮಾವೋವಾದಿಗಳು ಶರಣಾದವರಲ್ಲಿ ಸೇರಿದ್ದಾರೆ. ಶರಣಾಗುವಾಗ 23 ಜನರ ಪೈಕಿ ಯಾರ ಬಳಿಯೂ ಶಸ್ತ್ರಾಸ್ತ್ರಗಳು ಇರಲಿಲ್ಲ ಎಂದು ಇಂಡಿಯನ್ ಎಕ್ಸ್‌ಪ್ರೆಸ್.ಕಾಂ ವರದಿ ಮಾಡಿದೆ.
ಒಟ್ಟು 23 ನಕ್ಸಲರು ಶರಣಾಗಿದ್ದಾರೆ. ಅವರೆಲ್ಲರೂ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದರು. ಸರ್ಕಾರದ ನಿಯಮಗಳ ಪ್ರಕಾರ ಅವರಿಗೆ ಸೌಲಭ್ಯಗಳನ್ನು ಒದಗಿಸಲಾಗುವುದು. ನಕ್ಸಲರು ಶಸ್ತ್ರಾಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಬರುವಂತೆ ನಾನು ಈ ಸಂದರ್ಭದಲ್ಲಿ ಮನವಿ ಮಾಡುತ್ತೇನೆ ಎಂದು ಸುಕ್ಮಾ ಎಸ್ಪಿ ಕಿರಣ್ ಚೌಹಾಣ್ ಹೇಳಿದ್ದಾರೆ.
ಶರಣಾದವರಲ್ಲಿ 35 ವರ್ಷದ ಲೋಕೇಶ್ ಅಲಿಯಾಸ್ ಪೋಡಿಯಂ ಭೀಮಾ ಎಂಬ ವಿಭಾಗೀಯ ಸಮಿತಿ ಸದಸ್ಯ (ಡಿವಿಸಿಎಂ) ಸೇರಿದ್ದಾರೆ. 2007ರಿಂದ, ಇವರು ಬಸ್ತಾರ್ ಪ್ರದೇಶದಲ್ಲಿ ಹಲವಾರು ಭದ್ರತಾ ಸಿಬ್ಬಂದಿಯನ್ನು ಕೊಂದ ಕನಿಷ್ಠ ಒಂಬತ್ತು ದಾಳಿ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ರಾಜ್ಯ ಮಟ್ಟದಲ್ಲಿ, ದಂಡಕಾರಣ್ಯ ವಿಶೇಷ ವಲಯ ಸಮಿತಿಯು ಉನ್ನತ ಸಮಿತಿಯಾಗಿದ್ದು, ನಂತರ ಪ್ರತಿ ವಿಭಾಗದಲ್ಲಿ ಡಿವಿಸಿಎಂಗಳು ಇರುತ್ತಾರೆ ಎಂದು ಎಸ್ಪಿ ವಿವರಿಸಿದ್ದಾರೆ.
ಶರಣಾದ ಮತ್ತೊಬ್ಬ ಮಾವೋವಾದಿಯನ್ನು ರಮೇಶ್ ಅಲಿಯಾಸ್ ಕಲ್ಮು (35) ಎಂದು ಗುರುತಿಸಲಾಗಿದ್ದು, ಇವರು ಉನ್ನತ ಮಾವೋವಾದಿ ನಾಯಕ ಮದ್ವಿ ಹಿಡ್ಮಾ ಅವರ ಗಾರ್ಡ್ ಕಮಾಂಡರ್ ಆಗಿದ್ದರು. ಇಬ್ಬರ ಮೇಲೂ ತಲಾ 8 ಲಕ್ಷ ರೂ. ಬಹುಮಾನ ಘೋಷಣೆಯಾಗಿತ್ತು. ಶರಣಾದ ಪ್ರತಿಯೊಬ್ಬ ಮಾವೋವಾದಿಗೂ ಶರಣಾಗತಿ ಮೊತ್ತವಾಗಿ 50,000 ರೂ.ಗಳನ್ನು ನೀಡಲಾಗುತ್ತದೆ ಮತ್ತು ಕೌಶಲ್ಯ ತರಬೇತಿ ಒದಗಿಸಲಾಗುತ್ತದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್.ಕಾಂ ವರದಿ ಹೇಳಿದೆ
ಶುಕ್ರವಾರ, ಡಿವಿಸಿಎಂ ಸದಸ್ಯ ಸೇರಿದಂತೆ 37.50 ಲಕ್ಷ ರೂ. ಬಹುಮಾನ ಘೋಷಣೆಯಾಗಿದ್ದ 22 ಮಾವೋವಾದಿಗಳು ನಾರಾಯಣಪುರದಲ್ಲಿ ಶರಣಾಗಿದ್ದರು.
ಜೂನ್ 18ರಂದು ಛತ್ತೀಸ್‌ಗಢದ ಅವಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯ ತಿಮಾಪುರ-ಮುರ್ದಂಡ ರಸ್ತೆಯಲ್ಲಿ ನಕ್ಸಲರು ಇಟ್ಟಿದ್ದ ಐಇಡಿ ಸ್ಪೋಟಗೊಂಡು ಇಬ್ಬರು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಜವಾನವರು ಗಾಯಗೊಂಡಿದ್ದರು.
ಅವಘಡ ನಡೆದಾಗ ಗಾಯಗೊಂಡ ಸಿರ್‌ಪಿಎಫ್ ಜವಾನರು ಕರ್ತವ್ಯದಲ್ಲಿದ್ದರು. ಅವರಿಗೆ ಘಟನಾ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗೆ ಬಿಜಾಪುರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಜ್ಯವು ಶೀಘ್ರದಲ್ಲೇ ನಕ್ಸಲ್ ಹಿಂಸಾಚಾರದಿಂದ ಮುಕ್ತವಾಗಲಿದೆ. ನಕ್ಸಲ್ ಬಾಧಿತ ಪ್ರದೇಶಗಳು ರಸ್ತೆ, ವಿದ್ಯುತ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಪಡೆಯಲಿದೆ ಎಂದು ಜುಲೈ 5ರಂದು ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಹೇಳಿದ್ದರು.
ಎಲ್ಲಾ ರೀತಿಯಲ್ಲೂ ನಮ್ಮ ರಾಜ್ಯ ಶ್ರೀಮಂತವಾಗಿದೆ. ಶೇಕಡ 44 ಕ್ಕಿಂತ ಹೆಚ್ಚಿನ ಭೂಮಿ ಅರಣ್ಯವನ್ನು ಹೊಂದಿದೆ. ಮಣ್ಣು ಫಲತ್ತವಾಗಿದೆ ಮತ್ತು ರೈತರು ಕಷ್ಟಪಟ್ಟು ದುಡಿಯುತ್ತಿದ್ದಾರೆ. ನಕ್ಸಲಿಸಂ ನಮ್ಮ ಅಭಿವೃದ್ದಿಗೆ ದೊಡ್ಡ ತಡೆಯಾಗಿದೆ. ಆದರೆ, ನಾವು ಅದರಿಂದ ಹೊರ ಬರುತ್ತೇವೆ. ಶರಣಾದ ನಕ್ಸಲರಿಗೆ ನಾವು ಅದ್ಬುತವಾದ ಪುನರ್ವಸತಿ ನಿಯಮಗಳನ್ನು ರೂಪಿಸಿದ್ದೇವೆ. ಶೀಘ್ರದಲ್ಲೇ ಛತ್ತೀಸ್‌ಗಢ ನಕ್ಸಲ್ ಹಿಂಸಾಚಾರ ಮುಕ್ತವಾಗಲಿದೆ ಮತ್ತು ಬಸ್ತಾರ್‌ನಂತಹ ಪ್ರದೇಶಗಳು ರಸ್ತೆ, ವಿದ್ಯುತ್, ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಪಡೆಯಲಿದೆ ಎಂದಿದ್ದರು.
ಕೇಂದ್ರ ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ, 2024 ಒಂದರಲ್ಲೇ 290 ನಕ್ಸಲರನ್ನು ಹತ್ಯೆಗೈಯ್ಯಲಾಗಿದೆ, 1,090 ಜನರನ್ನು ಬಂಧಿಸಲಾಗಿದೆ ಮತ್ತು 881 ಮಂದಿ ಶರಣಾಗಿದ್ದಾರೆ. ಇತ್ತೀಚಿನ ಕಾರ್ಯಾಚರಣೆ, ಅಂದರೆ 2025ರ ಮಾರ್ಚ್ ತಿಂಗಳಲ್ಲಿ ಬಿಜಾಪುರದಲ್ಲಿ 50 ನಕ್ಸಲರು ಶರಣಾಗಿದ್ದಾರೆ. ಸುಕ್ಮಾದಲ್ಲಿ 16, ಕನ್ಕೇರ್ ಮತ್ತು ಬಿಜಾಪುರದಲ್ಲಿ 22 ಜನರನ್ನು ಹತ್ಯೆ ಮಾಡಲಾಗಿದೆ. ಮಾರ್ಚ್ 31, 2026ರೊಳಗೆ ದೇಶದಲ್ಲಿ ನಕ್ಸಲಿಸಂ ಅನ್ನು ನಿರ್ಮೂಲನೆ ಮಾಡುವುದಾಗಿ ಸರ್ಕಾರ ಹೇಳಿಕೊಂಡಿದೆ.
ಐಐಎಂ-ಕಲ್ಕತ್ತಾ ಕ್ಯಾಂಪಸ್‌ನಲ್ಲಿ ಯುವತಿ ಮೇಲೆ ಅತ್ಯಾಚಾರ ಆರೋಪ: ವಿದ್ಯಾರ್ಥಿ ಬಂಧನ


