ಶಾರ್ಜಾದಲ್ಲಿ ಮಹಿಳೆಯೊಬ್ಬರು ತನ್ನ ಒಂದೂವರೆ ವರ್ಷದ ಮಗಳನ್ನು ಕೊಂದು, ತಾನೂ ಆತ್ಮಹತ್ಯೆಗೆ ಶರಣಾಗಿರುವ ಸಂಬಂಧ ಕೇರಳದ ಕೊಲ್ಲಂ ಜಿಲ್ಲೆಯ ಕುಂದರಾ ಪೊಲೀಸರು ಸೋಮವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತ ವಿಪಂಚಿಕಾ ಅವರ ಗಂಡ ನಿತೀಶ್ ಅವರನ್ನು ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿ ಗುರುತಿಸಲಾಗಿದ್ದು, ಎರಡನೇ ಆರೋಪಿಯಾಗಿ ಅತ್ತಿಗೆ ನೀತು ಮತ್ತು ಮೂರನೇ ಆರೋಪಿಯಾಗಿ ಮಾವ ಮೋಹನನ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇವರ ವಿರುದ್ದ ಆತ್ಮಹತ್ಯೆಗೆ ಪ್ರಚೋದನೆ ಮತ್ತು ವರದಕ್ಷಿಣೆ ಕಿರುಕುಳದ ಆರೋಪ ಹೊರಿಸಲಾಗಿದೆ.
ಕಳೆದ ಮಂಗಳವಾರ ಶಾರ್ಜಾದ ಅಲ್ ನಹ್ದಾದಲ್ಲಿ 33 ವರ್ಷದ ವಿಪಂಚಿಕಾ ಮತ್ತು ಅವರ ಮಗಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕಳೆದ ಏಳು ವರ್ಷಗಳಿಂದ ಶಾರ್ಜಾದ ಖಾಸಗಿ ಸಂಸ್ಥೆಯಲ್ಲಿ ಗುಮಾಸ್ತೆ ಕೆಲಸ ಮಾಡುತ್ತಿದ್ದ ವಿಪಂಚಿಕಾ, ನವೆಂಬರ್ 2020 ರಲ್ಲಿ ನಿತೀಶ್ ಅವರನ್ನು ವಿವಾಹವಾಗಿದ್ದರು.
ಸಾವಿಗೂ ಮುನ್ನ ವಿಪಂಚಿಕಾ ಬರೆದಿದ್ದಾರೆ ಎನ್ನಲಾದ ಆತ್ಮಹತ್ಯೆ ಪತ್ರ ಅವರ ಫೇಸ್‌ಬುಕ್ ಪುಟದಲ್ಲಿ ಕಾಣಿಸಿಕೊಂಡಿತ್ತು. ಆದರೆ, ನಂತರ ಅದನ್ನು ಅಳಿಸಲಾಗಿದೆ ಎಂಬ ವರದಿಗಳಿವೆ.
ಫೇಸ್‌ಬುಕ್ ಪೋಸ್ಟ್‌ನಲ್ಲಿ ವಿಪಂಚಿಕಾ, “ತನ್ನ ಪತಿ, ಮಾವ ಮತ್ತು ಅತ್ತಿಗೆಯಿಂದ ತಾನು ಎದುರಿಸಿದ ತೀವ್ರ ಚಿತ್ರಹಿಂಸೆಯನ್ನು ಹೇಳಿಕೊಂಡಿದ್ದರು. ವರದಕ್ಷಿಣೆ ಕಿರುಕುಳ, ದಾಖಲೆಗಳನ್ನು ಬಚ್ಚಿಟ್ಟುಕೊಂಡು ಗಂಡ ತನ್ನಿಂದ ಪ್ರತ್ಯೇಕವಾಗಲು ಪ್ರಯತ್ನಿಸಿದ್ದು ಸೇರಿದಂತೆ ಎಲ್ಲವನ್ನೂ ಆಕೆ ವಿವರಿಸಿದ್ದರು ಎಂದು ವರದಿಗಳು ಹೇಳಿವೆ.
“ಅವರೆಲ್ಲರಿಗೂ ನನ್ನ ಹಣ ಬೇಕು” ಎಂದು ತನ್ನ ಪೋಸ್ಟ್‌ನಲ್ಲಿ ವಿಪಂಚಿಕಾ ಹೇಳಿದ್ದರು. ಅತ್ತೆ-ಮಾವ ತನ್ನ ಗಂಡನೊಂದಿಗೆ ಸಾಮಾನ್ಯ ಸಂಬಂಧ ಹೊಂದುವುದನ್ನು ತಡೆಯುತ್ತಿದ್ದರು. “ಅವನಿಗೆ ನಿನಗಿಂತ ಒಳ್ಳೇ ಹುಡುಗಿ ಸಿಗುತ್ತಿದ್ದಳು” ಎಂದು ಅವಮಾನಿಸುತ್ತಿದ್ದರು” ಎಂದು ವಿಪಂಚಿಕಾ ಆರೋಪಿಸಿದ್ದರು.
ವಿಪಂಚಿಕಾಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡಲಾಗಿದೆ. ಆಕೆಯ ಕೂದಲನ್ನು ಕತ್ತರಿಸಿ ಗಂಡ ಚಿತ್ರಹಿಂಸೆ ನೀಡಿದ್ದಾನೆ. ಇದರಿಂದ ಮನನೊಂದು ಆಕೆ ಸಾವಿಗೆ ಶರಣಾಗಿದ್ದಾರೆ ಎಂದು ಕೆಲ ವರದಿಗಳು ಹೇಳಿವೆ.
ಪೊಲೀಸರು ಪ್ರಕರಣ ದಾಖಲಿಸಿರುವುದು ನಮಗೆ ಭರವಸೆ ಮೂಡಿಸಿದೆ. ಕಾನೂನು ಹೋರಾಟ ಮುಂದುವರಿಸುತ್ತೇವೆ ಎಂದು ವಿಪಂಚಿಕಾ ಅವರ ಕುಟುಂಬ ತಿಳಿಸಿದೆ. ತಮ್ಮ ಮಗಳು ಮತ್ತು ಮೊಮ್ಮಗಳ ಶವಗಳನ್ನು ತಕ್ಷಣ ಭಾರತಕ್ಕೆ ತರಬೇಕು ಮತ್ತು ಇಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ವಿಪಂಚಿಕಾ ಅವರ ತಾಯಿ ಶೈಲಜಾ ಒತ್ತಾಯಿಸಿದ್ದಾರೆ. ಈ ಸಂಬಂಧ ಅವರು ಮುಖ್ಯಮಂತ್ರಿ ಕಚೇರಿ, ರಾಜ್ಯ ಪೊಲೀಸ್ ಮುಖ್ಯಸ್ಥರು, ಭಾರತೀಯ ರಾಯಭಾರ ಕಚೇರಿ ಮತ್ತು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.
“ನನ್ನ ಮಗಳ ಆತ್ಮಹತ್ಯೆ ಹಿಂದಿನ ಕಾರಣ ನನಗೆ ಗೊತ್ತಾಗಬೇಕು. ಇದಕ್ಕೆ ಕಾರಣರಾದ ಎಲ್ಲರನ್ನೂ ಕಾನೂನಿನ ಮುಂದೆ ತರಬೇಕು. ಪಾರದರ್ಶಕ ತನಿಖೆ ನಡೆಯಬೇಕು. ನನಗೆ ನ್ಯಾಯ ಬೇಕು” ಎಂದು ಶೈಲಜಾ ಹೇಳಿದ್ದಾರೆ.
ವಿಪಂಚಿಕಾ ತನ್ನ ಪತಿ ಮತ್ತು ಅವರ ಕುಟುಂಬದಿಂದ ತೀವ್ರ ಕಿರುಕುಳ ಅನುಭವಿಸಿದ್ದಾಳೆ. ನನ್ನ ಮಗಳು ಆಕೆಯ ಗಂಡನನ್ನು ಪ್ರೀತಿಸಿದ್ದೇ ತಪ್ಪು ಮತ್ತು ಮಗಳ ಮೌನವೇ ಈ ದುರಂತಕ್ಕೆ ಕಾರಣ ಎಂದು ಶೈಲಜಾ ಹೇಳಿದ್ದು, ನನ್ನ ಮಗಳಿಗೆ ನ್ಯಾಯ ದೊರಕಿಸಿಕೊಡಲು ಯಾವುದೇ ಹಂತಕ್ಕೂ ಹೋಗುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದಾರೆ.
ನೆನಪಿಡಿ : ಯಾವುದೇ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ತುರ್ತು ಪರಿಸ್ಥಿತಿಯಿದ್ದರೆ ಕರೆ ಮಾಡಿ ವೈದ್ಯರೊಂದಿಗೆ ಮಾತನಾಡಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104
‘ಧರ್ಮಸ್ಥಳಕ್ಕೆ ಹೋಗಿದ್ದ ನನ್ನ ಮಗಳು ಕಾಣೆಯಾದ್ಲು, ದಯವಿಟ್ಟು ನ್ಯಾಯ ಕೊಡಿಸಿ’: ಅನನ್ಯ ಭಟ್ ತಾಯಿ ಕಣ್ಣೀರು


