ದೇಶದಾದ್ಯಂತ ಸುದ್ದಿಯಾಗಿದ್ದ ಆಂಧ್ರ ಪ್ರದೇಶದ 3,500 ಕೋಟಿ ರೂಪಾಯಿ ಮೊತ್ತದ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಪೊಲೀಸರು 305 ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ದೋಷಾರೋಪ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿಯವರ ಹೆಸರಿದೆ. ಹಗರಣದ ಲಾಭ ಪಡೆದವರಲ್ಲಿ ಜಗನ್ ಕೂಡ ಒಬ್ಬರು ಎಂದು ಉಲ್ಲೇಖಿಸಲಾಗಿದೆ. 2019-24ರ ವೈಎಸ್‌ಆರ್ ಕಾಂಗ್ರೆಸ್ ಆಡಳಿತದಲ್ಲಿ ಸಿಎಂ ಆಗಿದ್ದ ಜಗನ್ ಅವರಿಗೆ ಪ್ರತಿ ತಿಂಗಳು 50 ರಿಂದ 60 ಕೋಟಿ ರೂ. ಸಂದಾಯವಾಗುತ್ತಿತ್ತು ಎಂದು ಹೇಳಲಾಗಿದೆ.
ಆರೋಪಪಟ್ಟಿಯಲ್ಲಿ ಜಗನ್ ಮೋಹನ್ ರೆಡ್ಡಿ ಅವರ ಹೆಸರಿದ್ದರೂ, ಅವರನ್ನು ಆರೋಪಿಯನ್ನಾಗಿ ಹೆಸರಿಸಲಾಗಿಲ್ಲ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಅಕ್ರಮವಾಗಿ ಸಂಗ್ರಹಿಸುತ್ತಿದ್ದ ಹಣವನ್ನು ಅಂತಿಮವಾಗಿ ಪ್ರಕರಣದ ಒಂದನೇ ಆರೋಪಿ ಕೇಸಿರೆಡ್ಡಿ ರಾಜಶೇಖರ್ ರೆಡ್ಡಿ ಅವರು, ಐದನೇ ಆರೋಪಿ ವಿಜಯ್ ಸಾಯಿ ರೆಡ್ಡಿ, ನಾಲ್ಕನೇ ಆರೋಪಿ ಮಿಥುನ್ ರೆಡ್ಡಿ ಮತ್ತು 33ನೇ ಆರೋಪಿ ಬಾಲಾಜಿಗೆ ಹಸ್ತಾಂತರಿಸುತ್ತಿದ್ದರು. ಅವರು ಅದನ್ನು ಜಗನ್ ಮೋಹನ್ ರೆಡ್ಡಿ ಅವರಿಗೆ ವರ್ಗಾಯಿಸುತ್ತಿದ್ದರು. ಇದನ್ನು ಸಾಕ್ಷಿಗಳು ದೃಢೀಕರಿಸಿದ್ದಾರೆ ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.
ರಾಜಶೇಖರ್ ರೆಡ್ಡಿ ಮಾಸ್ಟರ್ ಮೈಂಡ್
ಆರೋಪಪಟ್ಟಿಯ ಪ್ರಕಾರ, ರಾಜಶೇಖರ್ ರೆಡ್ಡಿ ಅವರನ್ನು ಹಗರಣದ ‘ಮಾಸ್ಟರ್ ಮೈಂಡ್ ಮತ್ತು ಸಹ-ಸಂಚುಕೋರ’ ಎಂದು ಗುರುತಿಸಲಾಗಿದೆ. ಇವರು ಮದ್ಯ ನೀತಿಯನ್ನು ದುರುಪಯೋಗಪಡಿಸಿಕೊಂಡಿದ್ದರು. ಆಟೋಮ್ಯಾಟೆಡ್ ಆರ್ಡರ್ ಫಾರ್ ಸಪ್ಲೈ (ಒಎಫ್‌ಸಿ) ವ್ಯವಸ್ಥೆಯನ್ನು ಮ್ಯಾನುಅಲ್ ವ್ಯವಸ್ಥೆಗೆ ಬದಲಾಯಿಸಿದ್ದರು. ಆಂಧ್ರ ಪ್ರದೇಶ ರಾಜ್ಯ ಪಾನೀಯ ನಿಗಮ ಲಿಮಿಟೆಡ್ (ಎಪಿಎಸ್‌ಬಿಸಿಎಲ್) ನಲ್ಲಿ ತಮಗೆ ನಿಷ್ಠರಾಗಿದ್ದ ಅಧಿಕಾರಿಗಳನ್ನು ನಿಯೋಜಿಸಿದ್ದರು. ಅಲ್ಲದೆ, ಪ್ರಕರಣದ ಮತ್ತೊಬ್ಬ ಆರೋಪಿ ಬಾಲಾಜಿ ಗೋವಿಂದಪ್ಪ ಮೂಲಕ ಜಗನ್ ಮೋಹನ್ ರೆಡ್ಡಿಗೆ ಹಣ ತಲುಪಿಸಲು ಶೆಲ್ ಡಿಸ್ಟಿಲರಿಗಳನ್ನು ಬಳಸಿದ್ದರು ಎಂದು ಆರೋಪಪಟ್ಟಿಯಲ್ಲಿ ವಿವರಿಸಲಾಗಿದೆ.
ಮಾಜಿ ಶಾಸಕ ಚೆವಿರೆಡ್ಡಿ ಭಾಸ್ಕರ್ ರೆಡ್ಡಿ ಅವರ ಸಹಯೋಗದೊಂದಿಗೆ ವೈಎಸ್‌ಆರ್‌ಸಿಪಿಯ ಚುನಾವಣಾ ಪ್ರಚಾರಕ್ಕೆ ರಾಜಶೇಖರ್ ರೆಡ್ಡಿ 250 ರಿಂಧ 300 ಕೋಟಿ ರೂ. ಹಣವನ್ನು ನೀಡಿದ್ದರು. ಈ ಹಣವನ್ನು 30ಕ್ಕೂ ಹೆಚ್ಚು ಶೆಲ್ ಕಂಪನಿಗಳ ಮೂಲಕ ಅಕ್ರಮವಾಗಿ ವರ್ಗಾಯಿಸಿ, ದುಬೈ ಮತ್ತು ಆಫ್ರಿಕಾದಲ್ಲಿ ಭೂಮಿ, ಚಿನ್ನ ಮತ್ತು ಐಷಾರಾಮಿ ಆಸ್ತಿಗಳನ್ನು ಖರೀದಿಸಲು ಬಳಸಲಾಗಿದೆ ಆರೋಪಪಟ್ಟಿಯಲ್ಲಿ ಹೇಳಲಾಗಿದೆ.
ವೈಎಸ್‌ಆರ್‌ಸಿಪಿ ಸರ್ಕಾರ ಪರಿಚಯಿಸಿದ ಅಬಕಾರಿ ನೀತಿಯು ಮದ್ಯ ವಿತರಣೆಯ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಲು ರೂಪಿಸಲಾಗಿದೆ. ಇದು ಆರೋಪಿ ಅಧಿಕಾರಿಗಳಿಗೆ ಭಾರೀ ಕಮಿಷನ್ ಪಡೆಯಲು ಅವಕಾಶ ನೀಡುತ್ತದೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.
“ಆರೋಪಿಗಳು ಅಬಕಾರಿ ನೀತಿ ಮತ್ತು ಅದರ ವಿಧಾನಗಳಲ್ಲಿ ಬದಲಾವಣೆ ಮಾಡಲು ಯೋಜಿಸಿದ್ದರು. ಇದರಿಂದಾಗಿ ಅವರಿಗೆ ದೊಡ್ಡ ಪ್ರಮಾಣದ ಕಿಕ್‌ಬ್ಯಾಕ್‌ಗಳು ಸಿಕ್ಕಿವೆ. ಅಂತಹ ಕಿಕ್‌ಬ್ಯಾಕ್‌ಗಳಲ್ಲಿ ಹೆಚ್ಚಿನ ಭಾಗವನ್ನು ನಗದು, ಚಿನ್ನದ ಗಟ್ಟಿಗಳು ಇತ್ಯಾದಿಗಳ ರೂಪದಲ್ಲಿ ಪಡೆಯಲಾಗಿದೆ” ಎಂದು ಆರೋಪಪಟ್ಟಿ ಹೇಳಿದೆ.
ಲಂಚದ ಬೇಡಿಕೆಯನ್ನು ವಿರೋಧಿಸಿದ ಡಿಸ್ಟಿಲರಿಗಳಿಗೆ ಒಎಫ್‌ಸಿ ಅನುಮೋದನೆಯನ್ನು ಆರೋಪಿಗಳು ತಡೆಹಿಡಿದಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ, ವಿಶೇಷ ತನಿಖಾ ತಂಡ (ಎಸ್‌ಐಟಿ) ಹಲವು ಗಂಟೆಗಳ ವಿಚಾರಣೆಯ ನಂತರ ವೈಎಸ್ಆರ್‌ಸಿಪಿ ಸಂಸದ ಪಿವಿ ಮಿಧುನ್ ರೆಡ್ಡಿ ಅವರನ್ನು ಬಂಧಿಸಿದೆ. ಮೇ ತಿಂಗಳಲ್ಲಿ, ಜಾರಿ ನಿರ್ದೇಶನಾಲಯ (ಇಡಿ) ಕೂಡ ಈ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದೆ. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದೆ.
2019ರಲ್ಲಿ ಹೈದರಾಬಾದ್‌ನ ಹೋಟೆಲ್ ಪಾರ್ಕ್ ಹಯಾತ್‌ನಲ್ಲಿ ಸಜ್ಜಲ ಶ್ರೀಧರ್ ರೆಡ್ಡಿ (ಆರನೇ ಆರೋಪಿ) ಅವರು ನಡೆಸಿದ ಸಭೆಯನ್ನು ಆರೋಪಪಟ್ಟಿ ಉಲ್ಲೇಖಿಸಿದೆ. ಈ ಸಭೆಯಲ್ಲಿ ಡಿಸ್ಟಿಲರಿ ಮಾಲೀಕರಿಗೆ ಮ್ಯಾನುಅಲ್ ಒಎಫ್‌ಎಸ್ ವ್ಯವಸ್ಥೆಯೊಂದಿಗೆ ಸಹಕರಿಸಲು ಸೂಚಿಸಲಾಗಿತ್ತು ಎಂದಿದೆ.
ಮೂಲ ಬೆಲೆಯ ಮೇಲೆ ಶೇ. 12 ರಷ್ಟು ಕಿಕ್‌ಬ್ಯಾಕ್ ಪಡೆಯಲು ಪ್ರಾರಂಭಿಸಲಾಗಿತ್ತು. ನಂತರ ಅದನ್ನು ಶೇ. 20 ಕ್ಕೆ ಹೆಚ್ಚಿಸಲಾಗಿತ್ತು ಎಂದು ಪೊಲೀಸರು ಆರೋಪಿಸಿದ್ದಾರೆ.
ಈ ನಡುವೆ ಹಲವಾರು ವೈಎಸ್‌ಆರ್‌ಸಿಪಿ ನಾಯಕರು ಮಿಧುನ್ ರೆಡ್ಡಿ ಬಂಧನವನ್ನು ಖಂಡಿಸಿದ್ದು, ಇದು ರಾಜಕೀಯ ಪ್ರೇರಿತ ಎಂದಿದ್ದಾರೆ.
ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಪ್ರತಿಪಕ್ಷ ನಾಯಕರನ್ನು ಗುರಿಯಾಗಿಸಲು ಆಡಳಿತ ಯಂತ್ರವನ್ನು ಬಳಸುತ್ತಿದ್ದಾರೆ ಎಂದು ಮಾಜಿ ಸಚಿವರಾದ ಬೊಚ್ಚಾ ಸತ್ಯನಾರಾಯಣ, ಪೆರ್ಣಿ ವೆಂಕಟರಾಮಯ್ಯ (ನಾನಿ), ಅಂಬಟಿ ರಾಂಬಾಬು, ಮೇರುಗು ನಾಗಾರ್ಜುನ ಮತ್ತು ವೈಎಸ್‌ಆರ್‌ಸಿಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಜಿ ಶ್ರೀಕಾಂತ್ ರೆಡ್ಡಿ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಕಲ್ಪಿತ ನರೇಟಿವ್ -ಜಗನ್ ಮೋಹನ್ ರೆಡ್ಡಿ
ಮದ್ಯ ಹಗರಣದ ಆರೋಪಟ್ಟಿಯಲ್ಲಿ ತಮ್ಮ ಹೆಸರು ಉಲ್ಲೇಖಿಸಿರುವ ಬಗ್ಗೆ ಮತ್ತು ಸಂಸದ ಮಿಧುನ್ ಬಂಧನ ಕುರಿತು ಭಾನುವಾರ ಪ್ರತಿಕ್ರಿಯೆ ನೀಡಿರುವ ಜಗನ್ ಮೋಹನ್ ರೆಡ್ಡಿ, “ಇದನ್ನು ಮಾಧ್ಯಮಗಳ ಮುಂದೆ ನಾಟಕವಾಡಲು ಮಾತ್ರ ಸೃಷ್ಟಿಸಲಾಗಿದೆ. ಇದೊಂದು ಕಲ್ಪಿತ ನರೇಟಿವ್ ಎಂದಿದ್ದಾರೆ.
ವಿಜಯವಾಡದ ಸ್ಥಳೀಯ ನ್ಯಾಯಾಲಯವು ಸಂಸದ ಪಿವಿ ಮಿಧುನ್ ರೆಡ್ಡಿ ಅವರನ್ನು ಆಗಸ್ಟ್ 1 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಈ ಬೆನ್ನಲ್ಲೇ ಜಗನ್ ಮೋಹನ್ ರೆಡ್ಡಿ ಹೇಳಿಕೆ ನೀಡಿದ್ದಾರೆ.
ಸೌಜನ್ಯ : hindustantimes.com
ಕೇರಳದಲ್ಲಿ ಮುಸ್ಲಿಂ ಪ್ರಾಬಲ್ಯ, ಸಿಎಂ ಹುದ್ದೆಗೆ IUML ಬೇಡಿಕೆ: ವೆಳ್ಳಾಪಳ್ಳಿ ನಟೇಶನ್‌ರಿಂದ ದ್ವೇಷ ಭಾಷಣ


