ಮನೆಯಲ್ಲಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರನ್ನು ಪದಚ್ಯುತಗೊಳಿಸುವ ಕ್ರಮದ ಬಗ್ಗೆ ಯಾವುದೇ ಸಂದೇಹವಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಭಾನುವಾರ ಹೇಳಿದ್ದಾರೆ.
ವರ್ಮಾ ಅವರನ್ನು ಪದಚ್ಯುತಗೊಳಿಸಲು ಸಂಸತ್ತಿನಲ್ಲಿ ನಿರ್ಣಯ ಮಂಡಿಸುವ ನೋಟಿಸ್‌ಗೆ 100ಕ್ಕೂ ಹೆಚ್ಚು ಸಂಸದರು ಈಗಾಗಲೇ ಸಹಿ ಹಾಕಿದ್ದಾರೆ. ಈ ಮೂಲಕ ಲೋಕಸಭೆಯಲ್ಲಿ ನಿರ್ಣಯ ಮಂಡಿಸಲು ಅಗತ್ಯವಿರುವ ಬೆಂಬಲದ ಮಿತಿಯನ್ನು ನಾವು ಮೀರಿದ್ದೇವೆ ಎಂದಿದ್ದಾರೆ.
ಸರ್ವಪಕ್ಷ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಿರಣ್ ರಿಜಿಜು, ” ಪದಚ್ಯುತಿಗೊಳಿಸುವ ನಿರ್ಣಯ ಮಂಡಿಸಲು ಬೇಕಾದ ಸಹಿ ಈಗಾಗಲೇ 100 ದಾಟಿದೆ. ಯಾವಾಗ ನಿರ್ಣಯ ಮಂಡಿಸಬೇಕು ಎಂಬುವುದನ್ನು ಸದನಗಳ ವ್ಯವಹಾರ ಸಲಹಾ ಸಮಿತಿಯು ನಿರ್ಧರಿಸಲಿದೆ” ಎಂದು ಹೇಳಿದ್ದಾರೆ.
ನ್ಯಾಯಾಧೀಶರ ಪದಚ್ಯುತಿಗೆ ಲೋಕಸಭೆಯ ಕನಿಷ್ಠ 100 ಸಂಸದರು ಮತ್ತು ರಾಜ್ಯಸಭೆಯ ಕನಿಷ್ಠ 50 ಸಂಸದರು ಸಹಿ ಹಾಕಬೇಕು. ಲೋಕಸಭೆಯ 100 ಸದಸ್ಯರು ಈಗಾಗಲೇ ಸಹಿ ಹಾಕಿರುವ ಹಿನ್ನೆಲೆ, ಮಳೆಗಾಲದ ಅಧಿವೇಶನದಲ್ಲಿ ನಿರ್ಣಯ ಮಂಡಿಸುವುದು ಬಹುತೇಕ ಖಚಿತವಾಗಿದೆ.
ಸೋಮವಾರದಿಂದ ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭವಾಗಲಿದ್ದು, ಪದಚ್ಯುತಿ ನಿರ್ಣಯ ಮಂಡಿಸುವುದಾಗಿ ಸರ್ಕಾರ ಕೂಡ ಈಗಾಗಲೇ ಸ್ಪಷ್ಟಪಡಿಸಿದೆ. ಅಲ್ಲದೆ, ಎಲ್ಲಾ ಪಕ್ಷಗಳಿಂದಲೂ ನ್ಯಾಯಾಧೀಶರ ಪದಚ್ಯುತಿಗೆ ಬೆಂಬಲ ವ್ಯಕ್ತವಾಗುತ್ತಿದೆ.
ನ್ಯಾಯಮೂರ್ತಿ ವರ್ಮಾ ಅವರ ಮನೆಯಲ್ಲಿ ಹಣ ಸಿಕ್ಕಿರುವುದನ್ನು ಸುಪ್ರೀಂ ಕೋರ್ಟ್‌ನ ಆಂತರಿಕ ಸಮಿತಿ ಕೂಡ ಈಗಾಗಲೇ ದೃಢಪಡಿಸಿದೆ. ಇದರ ವಿರುದ್ದ ವರ್ಮಾ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ದೆಹಲಿ ಹೈಕೋರ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಅವರು ಉಳಿದುಕೊಂಡಿದ್ದ ದೆಹಲಿಯ ಮನೆಯಲ್ಲಿ 2025 ಮಾರ್ಚ್ 14ರ ಸಂಜೆ ಬೆಂಕಿ ಅವಘಡ ಸಂಭವಿಸಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಾಗ ಮನೆಯಲ್ಲಿ ಸುಟ್ಟ ನೋಟಿನ ಕಂತೆಗಳು ಪತ್ತೆಯಾಗಿತ್ತು ಎನ್ನಲಾಗಿದೆ. ಈ ವಿಚಾರ ದೇಶದಾದ್ಯಂತ ಸಂಚಲನ ಸೃಷ್ಟಿಸಿತ್ತು. ಆದರೆ, ಮನೆಯಲ್ಲಿ ಹಣ ಪತ್ತೆಯಾಗಿರುವ ಆರೋಪವನ್ನು ನಿರಾಕರಿಸಿದ್ದ ನ್ಯಾ. ವರ್ಮಾ, “ಇದು ನನ್ನನ್ನು ಸಿಲುಕಿಸಲು ನಡೆದಿರುವ ಪಿತೂರಿ” ಎಂದಿದ್ದರು.
ಘಟನೆಯ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಕೊಲಿಜಿಯಂ ನ್ಯಾ. ವರ್ಮಾ ಅವರನ್ನು ಅಲಾಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಿತ್ತು. ವರ್ಗಾವಣೆಯಾದರೂ ಅವರಿಗೆ ಯಾವುದೇ ಕೆಲಸ ವಹಿಸದಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು. ಆದರೆ, ಅವರ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರಾಕರಿಸಿತ್ತು. ಮತ್ತೊಂದೆಡೆ ತನಿಖೆಗೆ ಸಿಜೆಐ ಆಂತರಿಕ ಸಮಿತಿ ರಚಿಸಿದ್ದರು.
ನ್ಯಾ. ವರ್ಮಾ ಮನೆಯಲ್ಲಿ ಹಣ ಪತ್ತೆಯಾದ ಬಳಿಕ ನ್ಯಾಯಾಂಗದ ಪಾರದರ್ಶಕತೆಯ ಬಗ್ಗೆ ದೇಶದಲ್ಲಿ ಚರ್ಚೆಯಾಗಿತ್ತು. ಇದನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿತ್ತು. ಏಪ್ರಿಲ್ 1ರಂದು ನಡೆದ ಪೂರ್ಣ ನ್ಯಾಯಾಲಯದ ಸಭೆಯಲ್ಲಿ, ನ್ಯಾಯಾಧೀಶರು ತಮ್ಮ ಆಸ್ತಿ ವಿವರಗಳನ್ನು ಮುಖ್ಯ ನ್ಯಾಯಮೂರ್ತಿ ಮುಂದೆ ಬಹಿರಂಗಪಡಿಸಲು ನಿರ್ಧರಿಸಿದ್ದರು. ಅದರಂತೆ, ಸಿಜೆಐ ಸೇರಿದಂತೆ ಸುಪ್ರೀಂ ಕೋರ್ಟ್‌ನ 21 ನ್ಯಾಯಾಧೀಶರು ತಮ್ಮ ಆಸ್ತಿ ವಿವರಗಳನ್ನು ಬಹಿರಂಗಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ ನಿಯೋಜಿಸಿದ್ದ ಆಂತರಿಕ ಸಮಿತಿಯು ಮಾರ್ಚ್ 25ರಂದು ತನಿಖೆ ಆರಂಭಿಸಿ, ಮೇ 3ರಂದು ತನ್ನ ವರದಿಯನ್ನು ಅಂತಿಮಗೊಳಿಸಿತ್ತು. ಅದನ್ನು ಮೇ4 ರಂದು ಸಿಜೆಐಗೆ ಸಲ್ಲಿಸಿದೆ. ವರದಿಯಲ್ಲಿ ನ್ಯಾ. ವರ್ಮಾ ಮನೆಯಲ್ಲಿ ಹಣ ಪತ್ತೆಯಾಗಿರುವ ಆರೋಪ ನಿಜ ಎಂದು ಸಮಿತಿ ದೃಢಪಡಿಸಿದೆ.
ಆಂಧ್ರ ಪ್ರದೇಶ ಮದ್ಯ ಹಗರಣ: ಆರೋಪಪಟ್ಟಿಯಲ್ಲಿ ಮಾಜಿ ಸಿಎಂ ಜಗನ್ ಹೆಸರು


