ಮುಂಬೈನಲ್ಲಿ 2006ರಲ್ಲಿ ನಡೆದ ರೈಲು ಸ್ಫೋಟ ಪ್ರಕರಣದ 12 ಜನರ ಅಪರಾಧಿಗಳ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಸೋಮವಾರ ರದ್ದು ಮಾಡಿದ್ದು, ಅವರನ್ನು ಖುಲಾಸೆಗೊಳಿಸಿದೆ. ಪ್ರಕರಣವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ‘ಸಂಪೂರ್ಣವಾಗಿ ವಿಫಲವಾಗಿದೆ’ ಎಂದು ಕೋರ್ಟ್ ಹೇಳಿದೆ.
ಮುಂಬೈ ನಗರದ ಪಶ್ಚಿಮ ರೈಲ್ವೆ ವಿಭಾಗವನ್ನು ನಡುಗಿಸಿದ್ದ ಈ ಘಟನೆಯಲ್ಲಿ 189 ಮಂದಿ ಪ್ರಾಣ ಕಳೆದುಕೊಂಡಿದ್ದರು. 820 ಜನರು ಗಾಯಗೊಂಡಿದ್ದರು. ಇದೀಗ ಘಟನೆ ನಡೆದು 19 ವರ್ಷಗಳ ನಂತರ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.
ನ್ಯಾಯಮೂರ್ತಿಗಳಾದ ಅನಿಲ್ ಕಿಲೋರ್ ಮತ್ತು ಶ್ಯಾಮ್ ಚಂದಕ್ ಅವರ ವಿಶೇಷ ಪೀಠವು, ಪ್ರಾಸಿಕ್ಯೂಷನ್ ಪ್ರಸ್ತುತಪಡಿಸಿರುವ ಸಾಕ್ಷ್ಯಗಳು ಆರೋಪಿಗಳನ್ನು ಶಿಕ್ಷೆಗೆ ಗುರಿಪಡಿಸಲು ನಿರ್ಣಾಯಕವಾಗಿಲ್ಲ ಎಂದು ಹೇಳಿದೆ.
“ಆರೋಪಿಗಳ ವಿರುದ್ಧದ ಪ್ರಕರಣವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ಸಂಪೂರ್ಣವಾಗಿ ವಿಫಲವಾಗಿದೆ. ಅವರು ಅಪರಾಧ ಮಾಡಿದ್ದಾರೆ ಎಂದು ನಂಬುವುದು ಕಷ್ಟ. ಆದ್ದರಿಂದ ಅವರ ಮೇಲಿನ ಅಪರಾಧವನ್ನು ರದ್ದುಗೊಳಿಸಲಾಗಿದೆ” ಎಂದು ಹೈಕೋರ್ಟ್ ಹೇಳಿದೆ.
ಐವರು ಅಪರಾಧಿಗಳಿಗೆ ವಿಧಿಸಲಾಗಿದ್ದ ಮರಣದಂಡನೆ ಮತ್ತು ಉಳಿದ ಏಳು ಜನರಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ರದ್ದುಪಡಿಸಿರುವ ನ್ಯಾಯಾಲಯ ಎಲ್ಲರನ್ನೂ ಖುಲಾಸೆಗೊಳಿಸಿದೆ.
ಬೇರೆ ಯಾವುದೇ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸದಿದ್ದರೆ, ತಕ್ಷಣ ಜೈಲಿನಿಂದ ಬಿಡುಗಡೆ ಮಾಡಬೇಕೆಂದು ನ್ಯಾಯಾಲಯ ಸೂಚಿಸಿದೆ.
2015ರಲ್ಲಿ ವಿಶೇಷ ನ್ಯಾಯಾಲಯವು ಈ ಪ್ರಕರಣದ 12 ಆರೋಪಿಗಳನ್ನು ದೋಷಿಗಳೆಂದು ಘೋಷಿಸಿತ್ತು. ಅವರಲ್ಲಿ ಐವರಿಗೆ ಮರಣದಂಡನೆ ಮತ್ತು ಉಳಿದ ಏಳು ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಸೋಮವಾರ ಹೈಕೋರ್ಟ್ ತೀರ್ಪು ಪ್ರಕಟವಾದ ನಂತರ, ರಾಜ್ಯದಾದ್ಯಂತದ ವಿವಿಧ ಜೈಲುಗಳಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ಅವರು ತಮ್ಮ ವಕೀಲರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಜುಲೈ 11, 2006ರಂದು ಮುಂಬೈನ ಪಶ್ಚಿಮ ಮಾರ್ಗದ ವಿವಿಧ ಸ್ಥಳಗಳಲ್ಲಿ ಏಳು ಲೋಕಲ್ ರೈಲುಗಳಲ್ಲಿ ಬಾಂಬ್ ಸ್ಫೋಟಗಳು ಸಂಭವಿಸಿತ್ತು. ಘಟನೆಯಲ್ಲಿ 189 ಮಂದಿ ಸಾವನ್ನಪ್ಪಿದ್ದರು ಮತ್ತು 820 ಜನರು ಗಾಯಗೊಂಡಿದ್ದರು.
ಗಮನಾರ್ಹವಾಗಿ, ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (MCOCA) ಅಡಿಯಲ್ಲಿ ಪ್ರಕರಣದ ವಿಚಾರಣೆಗೆ ಗೊತ್ತುಪಡಿಸಿದ್ದ ವಿಶೇಷ ನ್ಯಾಯಾಲಯವು ಸೆಪ್ಟೆಂಬರ್ 2015ರಲ್ಲಿ ಪ್ರಕರಣದ ತೀರ್ಪು ಪ್ರಕಟಿಸಿತ್ತು.
ಆರೋಪಿಗಳಾದ ಕಮಲ್ ಅನ್ಸಾರಿ, ಮೊಹಮ್ಮದ್ ಫೈಸಲ್ ಅತೌರ್ ರೆಹಮಾನ್ ಶೇಖ್, ಎಹ್ತೆಶಾಮ್ ಕುತುಬುದ್ದೀನ್ ಸಿದ್ದಿಕಿ, ನವೀದ್ ಹುಸೇನ್ ಖಾನ್ ಮತ್ತು ಆಸಿಫ್ ಖಾನ್ ಅವರಿಗೆ ಮರಣದಂಡನೆ ವಿಧಿಸಲಾಗಿದ್ದರೆ, ಇತರ ಆರೋಪಿಗಳಾದ ತನ್ವೀರ್ ಅಹಮ್ಮದ್ ಇಬ್ರಾಹಿಂ ಅನ್ಸಾರಿ, ಮೊಹಮ್ಮದ್ ಮಜೀದ್ ಮೊಹಮ್ಮದ್ ಶಫಿ, ಶೇಖ್ ಮೊಹಮ್ಮದ್ ಅಲಿ ಆಲಂ ಶೇಖ್, ಮೊಹಮ್ಮದ್ ಸಾಜಿದ್ ಮಾರ್ಗುಬ್ ಅನ್ಸಾರಿ, ಮುಜಮ್ಮಿಲ್ ಅತೌರ್ ರೆಹಮಾನ್ ಶೇಖ್, ಸುಹೈಲ್ ಮೆಹಮೂದ್ ಶೇಖ್ ಮತ್ತು ಜಮೀರ್ ಅಹ್ಮದ್ ಲತಿಯುರ್ ರೆಹಮಾನ್ ಶೇಖ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಮತ್ತೊಬ್ಬ ಆರೋಪಿ ವಾಹಿದ್ ಶೇಖ್ ಒಂಬತ್ತು ವರ್ಷಗಳ ಜೈಲುವಾಸದ ನಂತರ ವಿಚಾರಣಾ ನ್ಯಾಯಾಲಯವು ಅವರನ್ನು ಖುಲಾಸೆಗೊಳಿಸಿತ್ತು.
ವಿಶೇಷ ನ್ಯಾಯಾಲಯದ ಆದೇಶದ ಬಳಿಕ ರಾಜ್ಯ ಸರ್ಕಾರ ಮತ್ತು ಅಪರಾಧಿಗಳು ಸಲ್ಲಿಸಿದ ಮೇಲ್ಮನವಿಗಳು 2015 ರಿಂದ ಹೈಕೋರ್ಟ್‌ನಲ್ಲಿ ಇತ್ಯರ್ಥಕ್ಕೆ ಬಾಕಿ ಇತ್ತು. ಕೆಲ ಅಪರಾಧಿಗಳು ಪ್ರಕರಣವನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಒತ್ತಾಯಿಸಿದ ನಂತರ, ಅಂತಿಮವಾಗಿ ಜುಲೈ 2024ರಲ್ಲಿ ನ್ಯಾಯಮೂರ್ತಿಗಳಾದ ಕಿಲೋರ್ ಮತ್ತು ಚಂದಕ್ ಅವರನ್ನೊಳಗೊಂಡ ವಿಶೇಷ ಪೀಠವನ್ನು ರಚಿಸಲಾಗಿತ್ತು.
ನ್ಯಾ. ಯಶವಂತ್ ವರ್ಮಾ ಪದಚ್ಯುತಿಗೆ 100ಕ್ಕೂ ಹೆಚ್ಚು ಸಂಸದರಿಂದ ಸಹಿ: ಸಚಿವ ಕಿರಣ್ ರಿಜಿಜು


