ಬೆಂಗಳೂರು: ಧರ್ಮಸ್ಥಳದ ಸಾಮೂಹಿಕ ಅತ್ಯಾಚಾರ, ಕೊಲೆಗಳು ಮತ್ತು ನೂರಾರು ಹೆಣಗಳನ್ನು ಹೂತ ಪ್ರಕರಣವನ್ನು ತನಿಖೆ ಮಾಡಲು ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು SIT ನೇಮಕ ಮಾಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸುತ್ತೇವೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ವಿಚಾರಣೆಗಾಗಿ ರೆಗ್ಯುಲರ್ ನ್ಯಾಯಾಲಯದ ಬದಲು ‘ವಿಶೇಷ ಫಾಸ್ಟ್ ಟ್ರಾಕ್ ನ್ಯಾಯಾಲಯ’ವನ್ನು ರಚಿಸಲು ಸರಕಾರವನ್ನು ಒತ್ತಾಯಿಸಬೇಕಾಗಿದೆ ಎಂದು ಹಿರಿಯ ವಕೀಲ ಸಿ.ಎಸ್.ದ್ವಾರಕಾನಾಥ್ ಅವರು ತಿಳಿಸಿದ್ದಾರೆ.
SIT ನೇಮಕ ಸಂಬಂಧ ಅನೇಕ ಜನಪರ ವ್ಯಕ್ತಿಗಳು, ಸಂಘಟನೆಗಳು ಮತ್ತು ಯೂಟ್ಯೂಬ್ ಚಾನೆಲ್‌ಗಳು ಸರ್ಕಾರಕ್ಕೆ ನಿರಂತರವಾಗಿ ತಾಕೀತು ಮಾಡುತ್ತಲೇ ಬಂದಿದ್ದಾರೆ. ಸಮೀರ್ ಎಂ.ಡಿ., ಈದಿನ ಯೂಟ್ಯೂಬ್ ಚಾನೆಲ್ ನಿಂದ ಹಿಡಿದು ಗಿರೀಶ್ ಮಟ್ಟಣ್ಣನವರ್, ಡಿಟಾಕ್ ನ ದಿನೇಶ್ ಕುಮಾರ್, ಹರ್ಷಕುಮಾರ್ ಕುಗ್ವೆ , ಥರ್ಡ್ ಐ, ಲಾಯರ್ ಜಗದೀಶ್, ಬಾಲನ್, ನವೀನ್ ಸೂರಿಂಜೆ, ನ್ಯಾಯಮೂರ್ತಿ ಗೋಪಾಲಗೌಡರು, ರವಿಕೃಷ್ಣಾರೆಡ್ಡಿ, ನಟ ಚೇತನ್, ನಟ ಪ್ರಕಾಶ್ ರಾಜ್, ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಮುಂತಾಗಿ ಇನ್ನೂ ಅನೇಕ, ನಾನು ಮರೆತಿರಬಹುದಾದ ನಾಮಧೇಯರು ಮತ್ತು ಅನಾಮಧೇಯರು ಸರ್ಕಾರದ ಮೇಲೆ ಒತ್ತಡ ಹಾಕಿದ್ದಾರೆ ಎಂದು ಅವರು ಹೇಳಿದರು.
ದಿನೇದಿನೇ ಈ ಪ್ರಕರಣವು ಪಕ್ಕದ ರಾಜ್ಯಗಳಾದ ಕೇರಳ, ತಮಿಳುನಾಡಿಗೆ ಹರಡಿದ್ದು, ಅಲ್ಲಿನ ಮಾಧ್ಯಮಗಳೂ ವರದಿ ಮಾಡಲಾರಂಭಿಸಿವೆ. ರಾಷ್ಟ್ರೀಯ ಸುದ್ದಿ ಚಾನಲ್ ಗಳು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಸಾರ್ವಜನಿಕರೂ ಈ ಪ್ರಕರಣದ ಬಗ್ಗೆ ಹಾದಿಬೀದಿಯಲ್ಲಿ ಮಾತಾಡಲು ಆರಂಭಿಸಿದ್ದೇ ಮುಂತಾಗಿ ಅನೇಕ ನೇರ ಮತ್ತು ಪರೋಕ್ಷ ಒತ್ತಡಗಳೂ ಕೂಡ SIT ಮಾಡಲು ಕಾರಣಗಳಾಗಿವೆ ಎಂದು ಅವರು ತಿಳಿಸಿದರು.
ಈ ಮಧ್ಯೆ ನಮ್ಮ ವಕೀಲರ ನಿಯೋಗ ಮುಖ್ಯಮಂತ್ರಿ ಗಳನ್ನು ಭೇಟಿಯಾಗಿ SIT ಮಾಡಬೇಕೆಂಬ ವಿನಂತಿಯ ಜತೆಗೆ ಕೆಲವು ಮುಖ್ಯ ಸೂಚನೆಗಳನ್ನು ನಮ್ಮ ಪತ್ರದಲ್ಲಿ ನಮ್ರವಾಗಿ ನೀಡಿದ್ದೆವು. ಅದರಲ್ಲಿ SIT ತನಿಖೆಯನ್ನು ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಮೂರ್ತಿಗಳ ಮೇಲುಸ್ತುವಾರಿಯಲ್ಲಿ ನಡೆಸಬೇಕು, ಶವಗಳನ್ನು ಹೊರ ತೆಗೆಯುವಾಗ(exhume) ಇಡೀ ಪ್ರಕ್ರಿಯೆಯನ್ನು ವಿಡಿಯೋಗ್ರಾಫ್ ಮಾಡಬೇಕು, ಕಡ್ಡಾಯವಾಗಿ FSL(forensic science) ತಜ್ಞರು ಇರಬೇಕು, ಮತ್ತು ನುರಿತ ಪ್ರಾಸಿಕ್ಯೂಟರ್ ಒಬ್ಬರನ್ನು ಸಹಾಯಕರಾಗಿ ನೇಮಿಸಿಕೊಳ್ಳಬೇಕು ಎಂದು ವಿನಂತಿಸಿದ್ದೆವು. ಇದು ಅತ್ಯಂತ ಸೂಕ್ಷ್ಮ ಮತ್ತು ಪ್ರಭಾವಿಗಳಂತವರು ಒಳಗೊಂಡಿರಬಹುದಾದ ಪ್ರಕರಣ ಆಗಿರುವುದರಿಂದ ಇಷ್ಟೆಲ್ಲಾ ಕಾನೂನಾತ್ಮಕ ಮುನ್ನೆಚ್ಚರಿಕೆಗಳು ಅವಶ್ಯಕ ಎಂದಿದ್ದಾರೆ.
ಗೌರಿ ಲಂಕೇಶ್ ಹತ್ಯೆಯಾಗಿ ಹಲವು ವರ್ಷಗಳೇ ಕಳೆದರೂ ಅದರ ವಿಚಾರಣೆ ಇನ್ನೂ ಮುಗಿದಿಲ್ಲ, ಆರೋಪಿಗಳು ಜಾಮೀನು ಪಡೆದು ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಧರ್ಮಸ್ಥಳ ಪ್ರಕರಣವನ್ನು ಗಮನಿಸಿದಾಗ ಇದು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದ ವಿಶೇಷ ಪ್ರಕರಣವಾಗಿದೆ. ಇಲ್ಲಿನ ಅತ್ಯಾಚಾರ ಮತ್ತು ಕೊಲೆಗಳ ಸಂಖ್ಯೆ ನೂರಾರು ಇರುವುದರಿಂದ ಈ ಪ್ರಕರಣವನ್ನು ರೆಗ್ಯುಲರ್ ಕೋರ್ಟುಗಳಲ್ಲಿ ನಡೆಸಲು ಸಾಧ್ಯವೇ ಇಲ್ಲ. ನೂರು ವರ್ಷಗಳಾದರೂ ನಮ್ಮ ರೆಗ್ಯುಲರ್ ಕೋರ್ಟುಗಳಲ್ಲಿ ಈ ಪ್ರಕರಣ ಅಂತ್ಯ ಕಾಣಲಾರದು! ಹೀಗಾಗಿ ಈ ಪ್ರಕರಣಕ್ಕೆಂದೇ “ವಿಶೇಷ ಫಾಸ್ಟ್ ಟ್ರಾಕ್ ಕೋರ್ಟ”ನ್ನು ನೇಮಿಸಬೇಕೆಂಬುದನ್ನೂ ಸರ್ಕಾರದ ಗಮನಕ್ಕೆ ನಾವೆಲ್ಲ ತರಬೇಕಿದೆ ಎಂದು ಆಗ್ರಹಿಸಿದ್ದಾರೆ.
SIT ನೇಮಕ ಮಾಡಿರುವುದು ಸ್ವಾಗತಾರ್ಹ. ಆದರೆ ಇದಷ್ಟೇ ಅಂತ್ಯವಲ್ಲ, ಇದು ಆರಂಭ ಮಾತ್ರ ಎಂದು ಕೂಡ ಅವರು ತಿಳಿಸಿದ್ದಾರೆ.


