ಮಲ ಹೊರುವ ಪದ್ದತಿ ಚಾಲ್ತಿಯಲ್ಲಿರುವ ಬಗ್ಗೆ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಿಂದ ವರದಿಗಳು ಬಂದಿಲ್ಲ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ರಾಜ್ಯ ಸಚಿವ ರಾಮದಾಸ್ ಅಠಾವಳೆ ಮಂಗಳವಾರ (ಜುಲೈ 22) ಹೇಳಿದ್ದಾರೆ.
ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅಠಾವಳೆ, ಕೈಯಿಂದ ಶೌಚಗುಂಡಿಗಳನ್ನು ಸ್ವಚ್ಛಗೊಳಿಸುವ ಪದ್ದತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ, 2013, ಡಿಸೆಂಬರ್ 6, 2013 ರಿಂದ ಜಾರಿಗೆ ಬಂದಿದ್ದು, ಕೈಯಿಂದ ಶೌಚಗುಂಡಿಗಳನ್ನು ಸ್ವಚ್ಛಗೊಳಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಶೌಚಗುಂಡಿಗಳು ಅಥವಾ ಮ್ಯಾನ್ ಹೋಲ್‌ಗಳಿಗೆ ಇಳಿದ ಕಾರ್ಮಿಕರು ಉಸಿರುಗಟ್ಟಿ ಸಾಯುತ್ತಿರುವ ಬಗ್ಗೆ ಪದೇ ಪದೇ ವರದಿಯಾಗುತ್ತಿರುತ್ತವೆ. ವಿವಿಧ ಕಾರ್ಮಿಕ ಮತ್ತು ಸಾಮಾಜಿಕ ಸಂಘ, ಸಂಸ್ಥೆಗಳು, ಹೋರಾಟಗಾರರು ಈ ಪದ್ದತಿ ವಿರುದ್ದ ಧ್ವನಿ ಎತ್ತುತ್ತಿದ್ದಾರೆ. ಆದರೂ, ಈ ಪದ್ದತಿ ಚಾಲ್ತಿಯಲ್ಲಿರುವ ಬಗ್ಗೆ ಯಾವುದೇ ವರದಿಗಳಿಲ್ಲ ಎಂದು ಸಚಿವರು ಕೈ ತೊಳೆದುಕೊಂಡಿದ್ದಾರೆ.
ಈ ನಡುವೆ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ನೈರ್ಮಲ್ಯ ಕಾರ್ಮಿಕರ ಸಾವುಗಳನ್ನು ಅಧ್ಯಯನ ಮಾಡಲು ಸಚಿವಾಲಯವು ಸೆಪ್ಟೆಂಬರ್ 2023ರಲ್ಲಿ ಸೋಶಿಯಲ್ ಆಡಿಟ್ ಪ್ರಾರಂಭಿಸಿದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ನಾಲ್ಕು ಜಿಲ್ಲೆಗಳಾದ ಮುಂಬೈ, ಪುಣೆ, ಪರ್ಭಾನಿ ಮತ್ತು ಸತಾರ ಸೇರಿದಂತೆ ಒಟ್ಟು ಎಂಟು ರಾಜ್ಯಗಳ 17 ಜಿಲ್ಲೆಗಳಲ್ಲಿ 2022 ಮತ್ತು 2023 ರಲ್ಲಿ ಸಂಭವಿಸಿದ 54 ಸಾವುಗಳ ಕುರಿತು ಆಡಿಟ್ ಪರಿಶೀಲಿಸಿದೆ.
ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಅಪಾಯಕಾರಿಯಾಗಿ ಸ್ವಚ್ಛಗೊಳಿಸುವುದರಿಂದ ಮತ್ತು 2013ರ ಕಾಯ್ದೆ ಮತ್ತು ಅದಕ್ಕೆ ಸಂಬಂಧಿಸಿದ ನಿಯಮಗಳ ಅಡಿಯಲ್ಲಿ ರೂಪಿಸಲಾದ ಸುರಕ್ಷತಾ ಕಾರ್ಯವಿಧಾನಗಳನ್ನು ಪಾಲಿಸದ ಕಾರಣ ಈ ಸಾವುಗಳು ಸಂಭವಿಸಿವೆ ಎಂದು ಆಡಿಟ್ ಬಹಿರಂಗಪಡಿಸಿದೆ.
ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಸರ್ಕಾರಗಳು ಅಂತಹ ಸಾವುಗಳ ಬಗ್ಗೆ ತನಿಖೆ ನಡೆಸುವಂತೆ ಮತ್ತು ನಿಷೇಧಿತ ಚಟುವಟಿಕೆಗಳಲ್ಲಿ ಕಾರ್ಮಿಕರನ್ನು ತೊಡಗಿಸಿಕೊಳ್ಳಲು ಕಾರಣರಾದವರ ವಿರುದ್ಧ ಕಾಯ್ದೆಯ ಸೆಕ್ಷನ್ 7 ರ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಹೇಳಿದೆ.
ಇನ್ನು ಮಲ ಹೊರುವ ಪದ್ದತಿಗೆ ಇತಿಶ್ರಿ ಹಾಡಲು ಸರ್ಕಾರವು 2023–24ರಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಧೀನದಲ್ಲಿ ರಾಷ್ಟ್ರೀಯ ಯಾಂತ್ರೀಕೃತ ನೈರ್ಮಲ್ಯ ಪರಿಸರ ವ್ಯವಸ್ಥೆಗಾಗಿ ಕಾರ್ಯ ಯೋಜನೆ ರೂಪಿಸಿದೆ.
ಈ ಉಪಕ್ರಮವು ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ (ಯುಎಲ್‌ಬಿ) ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಕಾರ್ಮಿಕರ ಸುರಕ್ಷತೆ ಮತ್ತು ಘನತೆಯನ್ನು ಖಚಿತಪಡಿಸುವುದು ಮತ್ತು ಅವರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ.
ಈ ಯೋಜನೆಯು ಪಿಪಿಇ ಕಿಟ್‌ಗಳು, ಆಯುಷ್ಮಾನ್ ಭಾರತ್-ಪಿಎಂಜೆಎವೈ ಆರೋಗ್ಯ ಕಾರ್ಡ್‌ಗಳು, ಔದ್ಯೋಗಿಕ ಸುರಕ್ಷತಾ ತರಬೇತಿ, ತುರ್ತು ಪ್ರತಿಕ್ರಿಯೆ ನೈರ್ಮಲ್ಯ ಘಟಕಗಳಿಗೆ (ಇಆರ್‌ಎಸ್‌ಯು) ಸುರಕ್ಷತಾ ಸಾಧನಗಳು, ನೈರ್ಮಲ್ಯ ಯಂತ್ರೋಪಕರಣಗಳಿಗೆ ಬಂಡವಾಳ ಸಬ್ಸಿಡಿಗಳು ಮತ್ತು ಅಪಾಯಕಾರಿ ಶುಚಿಗೊಳಿಸುವ ಪದ್ಧತಿಗಳನ್ನು ತಡೆಗಟ್ಟಲು ಕಾರ್ಯಾಗಾರಗಳನ್ನು ಒದಗಿಸುತ್ತದೆ.


