ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ಹಠಾತ್ ರಾಜೀನಾಮೆ ಬೆನ್ನಲ್ಲೇ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ಯಶವಂತ್ ವರ್ಮಾ ಅವರ ಪದಚ್ಯುತಿ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ.
ಕೇಂದ್ರ ಸಚಿವ ಅಮಿತ್ ಶಾ ಅವರು ಬುಧವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ರಾಜ್ಯಸಭೆಯ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಅವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
ಸಂಸತ್ತಿನಲ್ಲಿ ಬಿರ್ಲಾ ಮತ್ತು ಹರಿವಂಶ್ ಅವರು ಸಭೆ ನಡೆಸಿದರು. ನಂತರ ಅಮಿತ್ ಶಾ ಅವರನ್ನು ಭೇಟಿಯಾದರು ಎಂದು ವರದಿಗಳು ಹೇಳಿವೆ.
ಈ ಬೆಳವಣಿಗೆ ಬಗ್ಗೆ ತಿಳಿದಿರುವ ಜನರ ಪ್ರಕಾರ, ನ್ಯಾ.ಯಶವಂತ್ ವರ್ಮಾ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ಪರಿಶೀಲಿಸಲು ಲೋಕಸಭಾ ಸ್ಪೀಕರ್ ಶಾಸನಬದ್ಧ ಸಮಿತಿ ರಚಿಸಲಿದ್ದಾರೆ. ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಾಧೀಶರು, ಹೈಕೋರ್ಟ್‌ನ ಹಾಲಿ ಮುಖ್ಯ ನ್ಯಾಯಾಧೀಶರು ಮತ್ತು ಖ್ಯಾತ ನ್ಯಾಯಶಾಸ್ತ್ರಜ್ಞರನ್ನು ಒಳಗೊಂಡ ಸಮಿತಿಯು ತನಿಖೆ ನಡೆಸಿ ಮೂರು ತಿಂಗಳಲ್ಲಿ ವರದಿ ನೀಡಲಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಸಮಿತಿಯು ನ್ಯಾ.ಯಶವಂತ್ ವರ್ಮಾ ತಪ್ಪಿತಸ್ಥರೆಂದು ಕಂಡುಕೊಂಡರೆ, ತನಿಖಾ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ. ನಂತರ ಉಭಯ ಸದನಗಳಲ್ಲಿ ಚರ್ಚೆ ನಡೆಯುತ್ತದೆ. ಬಳಿಕ ನ್ಯಾಯಾಧೀಶರ ಪದಚ್ಯುತಿಗೆ ಸಂಬಂಧಿಸಿದಂತೆ ನಿರ್ಣಯದ ಮೇಲೆ ಮತದಾನ ನಡೆಯಲಿದೆ.
ನ್ಯಾ. ಯಶವಂತ್ ವರ್ಮಾ ಅವರ ಪದಚ್ಯುತಿ ವಿಷಯವೇ ಜಗದೀಪ್ ಧನಕರ್ ಅವರ ಹಠಾತ್ ರಾಜೀನಾಮೆಗೆ ಕಾರಣವಾಯಿತು ಎಂದು ವರದಿಯಾಗಿರುವುದರಿಂದ ಉಭಯ ಸದನಗಳ ಮುಖ್ಯಸ್ಥರ ಜೊತೆ ಅಮಿತ್ ಶಾ ನಡೆಸಿದ ಸಭೆ ಮಹತ್ವ ಪಡೆದುಕೊಂಡಿದೆ.
ಧನಕರ್ ಅವರ ಹಠಾತ್ ರಾಜೀನಾಮೆಯ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆದರೂ, ನ್ಯಾ. ವರ್ಮಾ ಅವರ ಪದಚ್ಯುತಿ ಸಂಬಂಧ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳು ನೀಡಿದ ನೋಟಿಸ್ ಅಂಗೀಕರಿಸಿದ್ದಕ್ಕೆ ಈ ಬೆಳವಣಿಗೆ ನಡೆದಿದೆ. ಏಕೆಂದರೆ, ವರ್ಮಾ ಅವರ ಪದಚ್ಯುತಿ ವಿಷಯದಲ್ಲಿ ಕೇಂದ್ರ ಸರ್ಕಾರದ ಯೋಜನೆ ಬೇರೆಯೇ ಇತ್ತು ಎಂದು ಹೇಳಲಾಗುತ್ತಿದೆ.
ಸೋಮವಾರ 145 ಲೋಕಸಭೆ ಮತ್ತು 63 ರಾಜ್ಯಸಭಾ ಸಂಸದರು ನ್ಯಾ. ವರ್ಮಾ ಅವರನ್ನು ಪದಚ್ಯುತಗೊಳಿಸುವಂತೆ ಸಭಾಧ್ಯಕ್ಷರಿಗೆ ನೋಟಿಸ್ ನೀಡಿದ್ದರು. ಧನಕರ್ ಅವರು ವಿರೋಧ ಪಕ್ಷದ ನೋಟಿಸ್ ಪರಿಗಣಿಸಿ ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದ್ದರು.
ಸೋಮವಾರ ರಾಜ್ಯಸಭೆಯಲ್ಲಿ ಮಾತನಾಡಿದ್ದ ಧನಕರ್ ಅವರು “ಲೋಕಸಭೆಯಲ್ಲಿ ಇದೇ ರೀತಿಯ ಪ್ರಸ್ತಾವನೆ ಮಂಡಿಸಲಾಗಿದೆಯೇ ಎಂದು ತಿಳಿದುಕೊಳ್ಳಲು ನಾನು ಪ್ರಧಾನ ಕಾರ್ಯದರ್ಶಿಗೆ ನಿರ್ದೇಶಿಸುತ್ತೇನೆ. ಉಭಯ ಸದನಗಳಲ್ಲಿ ಬೇರೆ ಬೇರೆ ದಿನಾಂಕಗಳಲ್ಲಿ ಪ್ರಸ್ತಾವನೆಯನ್ನು ಮಂಡಿಸಿದರೆ, ಮೊದಲು ಸದನದಲ್ಲಿ ಮಂಡಿಸಲಾದ ಪ್ರಸ್ತಾವನೆಯನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ ಮತ್ತು ಎರಡನೇ ಪ್ರಸ್ತಾವನೆಯು ನ್ಯಾಯವ್ಯಾಪ್ತಿಯಿಂದ ಹೊರಗಿರುತ್ತದೆ” ಎಂದು ಅವರು 1968ರ ನ್ಯಾಯಾಧೀಶರ (ವಿಚಾರಣಾ) ಕಾಯ್ದೆಯನ್ನು ಉಲ್ಲೇಖಿಸಿ ಹೇಳಿದ್ದರು.
ರಾಜ್ಯಸಭೆಯ ನೋಟಿಸ್ ಪ್ರಸ್ತುತ ಸಕ್ರಿಯವಾಗಿದೆ
“ನ್ಯಾ. ವರ್ಮಾ ಅವರ ವಿರುದ್ಧ ರಾಜ್ಯಸಭೆಯಲ್ಲಿ ನೋಟಿಸ್ ನೀಡಲಾಗಿತ್ತು. ಅದನ್ನು ಸಭಾಧ್ಯಕ್ಷರು ಬಹುತೇಕ ಒಪ್ಪಿಕೊಂಡಿದ್ದಾರೆ. ಸಭಾಧ್ಯಕ್ಷರು ನಿಗದಿತ ಅವಶ್ಯಕತೆಯನ್ನು ಪೂರೈಸಿದ್ದಾರೆ” ಎಂಬುವುದಾಗಿ ರಾಜ್ಯಸಭೆಯ ಸದಸ್ಯರೊಬ್ಬರು ಹೇಳಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.


