ಅನಿಲ್ ಅಂಬಾನಿಗೆ ಸಂಬಂಧಿಸಿದ ಕಂಪನಿಗಳ ಸಮೂಹ ಮತ್ತು ಯೆಸ್ ಬ್ಯಾಂಕ್ ಒಳಗೊಂಡ ರೂ. 3,000 ಕೋಟಿಗೂ ಹೆಚ್ಚಿನ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಸೆಕ್ಷನ್ 17ರ ಅಡಿಯಲ್ಲಿ ಇಡಿ ಅಧಿಕಾರಿಗಳು 35ಕ್ಕೂ ಹೆಚ್ಚು ಪ್ರದೇಶಗಳಲ್ಲಿ 50 ಕಂಪನಿಗಳು ಮತ್ತು 25ಕ್ಕೂ ಹೆಚ್ಚು ವ್ಯಕ್ತಿಗಳ ಮೇಲೆ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ ಎಂದು ಇಡಿ ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕೇಂದ್ರೀಯ ಸಂಸ್ಥೆಯು ಲಂಚ ಮತ್ತು ಸಾಲದ ಶಂಕಿತ ಸಂಬಂಧವನ್ನು ತನಿಖೆ ನಡೆಸುತ್ತಿದೆ ಎಂದು ವರದಿ ಹೇಳಿದೆ.
ಪ್ರಾಥಮಿಕ ತನಿಖೆಯಲ್ಲಿ 2017 ಮತ್ತು 2019 ರ ನಡುವೆ ಯೆಸ್ ಬ್ಯಾಂಕಿನಿಂದ ಸುಮಾರು ರೂ. 3,000 ಕೋಟಿಗಳಷ್ಟು ಅಕ್ರಮ ಸಾಲ ವರ್ಗಾವಣೆ ನಡೆದಿದೆ ಎಂದು ಆರೋಪಿಸಲಾಗಿದೆ. ಸಾಲ ನೀಡುವ ಮೊದಲು, ಯೆಸ್ ಬ್ಯಾಂಕಿನ ಪ್ರವರ್ತಕರು (ಪ್ರಮೋಟರ್ಸ್) ತಮ್ಮ ವೈಯಕ್ತಿಕ ಖಾತೆಗಳಲ್ಲಿ ಹಣವನ್ನು ಪಡೆದಿದ್ದಾರೆ ಎಂದು ಇಡಿ ಪತ್ತೆ ಹಚ್ಚಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ರಿಲಯನ್ಸ್ ಕಮ್ಯುನಿಕೇಷನ್ಸ್‌ನ ಸಾಲದ ಖಾತೆ ಮತ್ತು ಅನಿಲ್ ಅಂಬಾನಿ ಅವರನ್ನು ‘ವಂಚನೆ’ ಎಂದು ವರ್ಗೀಕರಿಸಿ ಇತ್ತೀಚೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ (ಆರ್‌ಬಿಐ) ವರದಿ ಮಾಡಿತ್ತು. ಈ ವಿಷಯವನ್ನು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಸಂಸತ್ತಿಗೆ ತಿಳಿಸಿದ್ದರು. ಎಸ್‌ಬಿಐ ಸಿಬಿಐ ದೂರು ನೀಡಲು ಸಿದ್ದತೆ ನಡೆಸಿದೆ ಎಂದಿದ್ದರು. ಈ ಬೆನ್ನಲ್ಲೇ ಇಡಿ ದಾಳಿ ನಡೆಸಿದೆ. ರಿಲಯನ್ಸ್ ಕಮ್ಯುನಿಕೇಷನ್ಸ್ ಜೂನ್ 2019 ರಿಂದ ದಿವಾಳಿಯಾಗಿದೆ.
ಎಸ್‌ಬಿಐ ವಂಚನೆ ಎಂದು ವರ್ಗೀಕರಿಸಿದ ಬಳಿಕ ಸಿಬಿಐ ಎಫ್‌ಐಆರ್ ದಾಖಲಿಸಿದೆ. ಅದನ್ನು ಅನುಸರಿಸಿ ರಿಲಯನ್ಸ್ ಅನಿಲ್ ಅಂಬಾನಿ ಗ್ರೂಪ್ ಆಫ್ ಕಂಪನೀಸ್ (ಆರ್‌ಎಎಜಿಎ) ವಿರುದ್ದ ಇಡಿ ಹಣ ಅಕ್ರಮ ವರ್ಗಾವಣೆಯ ತನಿಖೆ ಕೈಗೊಂಡಿದೆ. ಅದರ ಭಾಗವಾಗಿ ದಾಳಿ ನಡೆದಿದೆ ಎಂದು ವರದಿಗಳು ಹೇಳಿವೆ.
ನ್ಯಾಷನಲ್ ಹೌಸಿಂಗ್ ಬ್ಯಾಂಕ್, ಸೆಬಿ, ರಾಷ್ಟ್ರೀಯ ಹಣಕಾಸು ವರದಿ ಪ್ರಾಧಿಕಾರ (ಎನ್‌ಎಫ್‌ಆರ್‌ಎ) ಮತ್ತು ಬ್ಯಾಂಕ್ ಆಫ್ ಬರೋಡಾದಂತಹ ಇತರ ಏಜೆನ್ಸಿಗಳು ಮತ್ತು ಸಂಸ್ಥೆಗಳು ಜಾರಿ ನಿರ್ದೇಶನಾಲಯದೊಂದಿಗೆ ಮಾಹಿತಿಯನ್ನು ಹಂಚಿಕೊಂಡಿವೆ ಎಂದು ವರದಿಗಳು ವಿವರಿಸಿವೆ.
ಬ್ಯಾಂಕುಗಳು, ಷೇರುದಾರರು, ಹೂಡಿಕೆದಾರರು ಮತ್ತು ಇತರ ಸಾರ್ವಜನಿಕ ಸಂಸ್ಥೆಗಳನ್ನು ವಂಚಿಸುವ ಮೂಲಕ ಸಾರ್ವಜನಿಕ ಹಣವನ್ನು ಬೇರೆಡೆಗೆ ತಿರುಗಿಸಲು ಅಥವಾ ವಂಚಿಸಲು ರೂಪಿಸಲಾದ ಒಂದು ಯೋಜನೆಯ ಬಗ್ಗೆ ಇಡಿ ನಡೆಸಿದ ಪ್ರಾಥಮಿಕ ತನಿಖೆಯು ಬಹಿರಂಗಪಡಿಸಿದೆ.
ಯೆಸ್ ಬ್ಯಾಂಕ್ ಲಿಮಿಟೆಡ್‌ನ ಪ್ರವರ್ತಕ ಸೇರಿದಂತೆ ಬ್ಯಾಂಕ್ ಅಧಿಕಾರಿಗಳಿಗೆ ಲಂಚ ನೀಡಿದ ಅಪರಾಧವೂ ತನಿಖೆಯಲ್ಲಿದೆ ಎಂದು ವರದಿಯಾಗಿದೆ.
ಸಾಲದ ಅನುಮೋದನೆ ಜ್ಞಾಪಕ ಪತ್ರಗಳಿಗೆ ಹಿಂದಿನ ದಿನಾಂಕ ಹಾಕುವುದು, ಸಾಲದ ವಿಶ್ಲೇಷಣೆ ನಡೆಸದೆ ಮಾಡಲಾದ ಹೂಡಿಕೆ ಪ್ರಸ್ತಾವನೆಗಳು ಮತ್ತು ಯೆಸ್ ಬ್ಯಾಂಕಿನ ಸ್ವಂತ ಸಾಲ ನೀತಿಯ ಬಹು ಉಲ್ಲಂಘನೆಗಳು ಸೇರಿದಂತೆ ರಿಲಯನ್ಸ್ ಅನಿಲ್ ಅಂಬಾನಿ ಗ್ರೂಪ್ ಆಫ್ ಕಂಪನೀಸ್‌ಗೆ ಸಾಲ ಅನುಮೋದನೆ ಪ್ರಕ್ರಿಯೆಯಲ್ಲಿ ಸಂಪೂರ್ಣ ಉಲ್ಲಂಘನೆಗಳು ನಡೆದಿವೆ ಎಂದು ಇಡಿ ಹೇಳಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.


