ಭಾರತೀಯ ನ್ಯಾಯ ಸಂಹಿತೆಗೆ (ಬಿಎನ್‌ಎಸ್) ಪ್ರಸ್ತಾವಿತ ಬದಲಾವಣೆಗಳ ಕುರಿತು ಕೇಂದ್ರವು ಎತ್ತಿರುವ ಗಂಭೀರ ಆಕ್ಷೇಪಣೆಗಳನ್ನು ಉಲ್ಲೇಖಿಸಿ ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ ಆನಂದ ಬೋಸ್ ಅವರು ‘ಅಪರಾಜಿತ ಮಸೂದೆ’ಯನ್ನು ಮರುಪರಿಶೀಲನೆಗಾಗಿ ವಿಧಾನಸಭೆಗೆ ಹಿಂದಿರುಗಿಸಿದ್ದಾರೆ ಎಂದು ರಾಜಭವನದ ಉನ್ನತ ಮೂಲಗಳನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಸೆಪ್ಟೆಂಬರ್ 2024ರಲ್ಲಿ ವಿಧಾನಸಭೆ ಅಂಗೀಕರಿಸಿರುವ ‘ಅಪರಾಜಿತ ಮಹಿಳೆಯರು ಮತ್ತು ಮಕ್ಕಳ (ಪಶ್ಚಿಮ ಬಂಗಾಳ ಕ್ರಿಮಿನಲ್ ಕಾನೂನುಗಳ ತಿದ್ದುಪಡಿ) ಮಸೂದೆಯು’ ಬಿಎನ್‌ಎಸ್‌ನ ಹಲವು ವಿಭಾಗಗಳ ಅಡಿಯಲ್ಲಿ ಅತ್ಯಾಚಾರಕ್ಕೆ ಶಿಕ್ಷೆ ವಿಧಿಸುವ ನಿಬಂಧನೆಗಳಲ್ಲಿ ಬದಲಾವಣೆ ಮಾಡಲಿವೆ ಎಂದು ಕೇಂದ್ರವು ಕಂಡುಕೊಂಡಿದೆ. ‘ಅತಿ ಕಠಿಣ ಮತ್ತು ಅಸಮಾನ’ ಶಿಕ್ಷೆಗಳನ್ನು ಪ್ರಸ್ತಾಪಿಸಿವೆ ಎಂದು ಕೇಂದ್ರ ಹೇಳಿದೆ.
ಬಿಎನ್‌ಎಸ್ ಸೆಕ್ಷನ್ 64ಕ್ಕೆ ತಿದ್ದುಪಡಿ ತರುವುದು ಮಸೂದೆಯ ಒಂದು ಪ್ರಮುಖ ವಿವಾದದ ಅಂಶವಾಗಿದೆ. ಮಸೂದೆಯು ಅತ್ಯಾಚಾರಕ್ಕೆ ಪ್ರಸ್ತುತ ಇರುವ ಕನಿಷ್ಠ 10 ವರ್ಷಗಳ ಶಿಕ್ಷೆಯನ್ನು ಅಪರಾಧಿಯ ಸಹಜ ಜೀವಿತಾವಧಿಯ ಉಳಿದ ಅವಧಿಗೆ ಜೈಲು ಶಿಕ್ಷೆ ಅಥವಾ ಮರಣದಂಡನೆಗೆ ಹೆಚ್ಚಿಸಲಿದೆ. ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ) ಇದು ಅನಗತ್ಯ ಕಠಿಣ ಮತ್ತು ನೈತಿಕ ತತ್ವಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ಪರಿಗಣಿಸಿರುವುದಾಗಿ ವರದಿಯಾಗಿದೆ.
ಅಪ್ರಾಪ್ತ ವಯಸ್ಕರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಕಠಿಣ ಶಿಕ್ಷೆಯನ್ನು ಸೂಚಿಸುವ ಬಿಎನ್‌ಎಸ್ ಸೆಕ್ಷನ್ 65 ಅನ್ನು ತೆಗೆದುಹಾಕುವುದನ್ನು ಗೃಹ ಸಚಿವಾಲಯ ಆಕ್ಷೇಪಿಸಿದ್ದು ಮತ್ತೊಂದು ಕಾರಣವಾಗಿದೆ. ಮೂಲಗಳ ಪ್ರಕಾರ, ಈ ಸೆಕ್ಷನ್ ರದ್ದುಗೊಳಿಸುವುದರಿಂದ ದುರ್ಬಲ ಗುಂಪುಗಳಿಗೆ ರಕ್ಷಣೆ ದುರ್ಬಲಗೊಳ್ಳುತ್ತದೆ ಮತ್ತು ಅತ್ಯಾಚಾರ ಕಾನೂನುಗಳಲ್ಲಿ ವಯಸ್ಸಿನ ಆಧಾರಿತ ವರ್ಗೀಕರಣದ ಹಿಂದಿನ ಉದ್ದೇಶವನ್ನು ದುರ್ಬಲಗೊಳಿಸುವ ಅಪಾಯವಿದೆ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ.
ಇನ್ನು, ಕೇಂದ್ರವು ಅತ್ಯಂತ ಸಮಸ್ಯಾತ್ಮಕವೆಂದು ಕಂಡುಕೊಂಡಿರುವ ನಿಬಂಧನೆ ಸೆಕ್ಷನ್ 66ರ ಅಡಿಯಲ್ಲಿದ್ದು, ಅತ್ಯಾಚಾರ ಪ್ರಕರಣಗಳಲ್ಲಿ ಬಲಿಪಶು ಸಾವನ್ನಪ್ಪಿದರೆ ಅಥವಾ ಅಸ್ವಸ್ಥ ಸ್ಥಿತಿಯಲ್ಲಿ ಉಳಿದರೆ ಇದು ಅಪರಾಧಿಗೆ ಮರಣದಂಡನೆಯನ್ನು ಕಡ್ಡಾಯಗೊಳಿಸುತ್ತದೆ.
ಮಸೂದೆಯ ಕುರಿತು ಗೃಹ ಸಚಿವಾಲಯವು ಸಾಂವಿಧಾನಿಕ ಕಳವಳಗಳನ್ನು ವ್ಯಕ್ತಪಡಿಸಿದ್ದು, ಶಿಕ್ಷೆ ವಿಧಿಸುವಲ್ಲಿ ನ್ಯಾಯಾಂಗದ ವಿವೇಚನೆಯನ್ನು ತೆಗೆದುಹಾಕುವುದು ಸ್ಥಾಪಿತ ಕಾನೂನು ಮಾನದಂಡಗಳು ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿದೆ ಎಂದು ಮೂಲಗಳು ತಿಳಿಸಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಮಸೂದೆಯ ಕುರಿತ ಅವಲೋಕನಗಳ ಬಗ್ಗೆ ಕೇಂದ್ರ ಅಥವಾ ರಾಜ್ಯಪಾಲರ ಕಚೇರಿಯಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ.
ಈ ಹಿಂದೆ, ಅಪರಾಜಿತ ಮಾದರಿಯಲ್ಲೇ ಎಲ್ಲಾ ಅತ್ಯಾಚಾರ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣಗಳಿಗೆ ಕಡ್ಡಾಯ ಮರಣದಂಡನೆ ವಿಧಿಸಲು ಪ್ರಸ್ತಾಪಿಸಿದ್ದ ಆಂಧ್ರ ಪ್ರದೇಶ ‘ದಿಶಾ ಮಸೂದೆ, 2019’ ಮತ್ತು ಮಹಾರಾಷ್ಟ್ರದ ‘ಶಕ್ತಿ ಮಸೂದೆ, 2020’ ಅನ್ನು ಆಯಾ ರಾಜ್ಯ ಶಾಸಕಾಂಗಗಳು ಸರ್ವಾನುಮತದಿಂದ ಅಂಗೀಕರಿಸಿದ್ದವು, ಆದರೆ, ರಾಷ್ಟ್ರಪತಿ ಅಂಕಿ ಹಾಕಿರಲಿಲ್ಲ.
ತೃಣಮೂಲ ಕಾಂಗ್ರೆಸ್ ಪಕ್ಷವು ಇದನ್ನು ರಾಜಕೀಯ ವಿಷಯವನ್ನಾಗಿ ಮಾಡಲಿದೆ ಎಂದು ಅದರ ವಕ್ತಾರ ಕುನಾಲ್ ಘೋಷ್ ಹೇಳಿದ್ದಾರೆ. “ಅಪರಾಜಿತ ಮಸೂದೆಯನ್ನು ಹಿಂತಿರುಗಿಸಿರುವುದು ದುರದೃಷ್ಟಕರ, ಶೋಚನೀಯ ಮತ್ತು ಖಂಡನೀಯ. ಬಿಜೆಪಿ ಸದಸ್ಯರು ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಗಳಲ್ಲಿ ಭಾಗಿಯಾಗಿರುವುದರಿಂದ ಈ ಪ್ರಕರಣಗಳಲ್ಲಿ ಗರಿಷ್ಠ ಶಿಕ್ಷೆಯನ್ನು ವಿಧಿಸಲು ಅವರು ಸಿದ್ಧರಿಲ್ಲ ಎಂಬುವುದನ್ನು ಇದು ಸಾಬೀತುಪಡಿಸಿದೆ” ಎಂದಿದ್ದಾರೆ.
ಉಪರಾಷ್ಟ್ರಪತಿ ಆಯ್ಕೆ: ಬಿಜೆಪಿಯ ಬಂಡಾರು ದತ್ತಾತ್ರೇಯ ಪರ ಬ್ಯಾಟ್ ಬೀಸಿದ ಕಾಂಗ್ರೆಸ್ ಸಿಎಂ ರೇವಂತ್ ರೆಡ್ಡಿ!


