ಧರ್ಮಸ್ಥಳ ಪ್ರಕರಣದ ಚರ್ಚೆ ನಡೆಸುವಾಗ ಅವಹೇಳನಕಾರಿ ಪದ ಬಳಕೆ ಮಾಡಿದ ಆರೋಪದ ಮೇಲೆ ಪವರ್ ಟಿವಿ ನ್ಯೂಸ್ ಚಾನೆಲ್ ಎಂ.ಡಿ ರಾಕೇಶ್ ಶೆಟ್ಟಿ ವಿರುದ್ಧ ಎರಡು ದೂರು ನೀಡಲಾಗಿದ್ದು, ಒಂದರಲ್ಲಿ ಎಫ್‌ಐಆರ್ ದಾಖಲಾಗಿದೆ.
ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆಗೆ ಬಿ.ಆರ್ ಭಾಸ್ಕರ್ ಪ್ರಸಾದ್ ಅವರು ದೂರು ನೀಡಿದ್ದು, ಈ ಸಂಬಂಧ ನ್ಯಾಯಾಲಯದ ಅನುಮತಿ ಪಡೆದು ಜುಲೈ 24ರಂದು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಇನ್ನು ಜುಲೈ 25ರಂದು ಕಾಡುಗೋಡಿ ಪೊಲೀಸ್ ಠಾಣೆಗೆ ಪರಮೇಶ್ ವಿ ಬೆಳತ್ತೂರು ಎಂಬವರು ದೂರು ನೀಡಿದ್ದಾರೆ. ರಾಕೇಶ್ ಶೆಟ್ಟಿ ವಿರುದ್ದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, 1989 ಅಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
“ಟಿವಿ ಚರ್ಚೆ ವೇಳೆ ರಾಕೇಶ್ ಶೆಟ್ಟಿ ಸೌಜನ್ಯ ಪರ ಹೋರಾಟಗಾರರ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿ ನಿಂದಿಸಿದ್ದಾರೆ. ಹೋರಾಟಗಾರರ ತಾಯಂದಿರನ್ನು ಅವಮಾನಿಸುವ ರೀತಿಯಲ್ಲಿ, ಅವರ ಶೀಲಕ್ಕೆ ಮತ್ತು ಗುಣ ನಡತೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಮಾತನಾಡಿದ್ದಾರೆ. ದೇವರು ಧರ್ಮದ ಹೆಸರುಗಳನ್ನು ಮುಂದಿಟ್ಟುಕೊಂಡು ಹೆಣ್ಣಿನ ಶೀಲ ಮತ್ತು ಚಾರಿತ್ರ್ಯ ಹರಣ ಮಾಡುವಂತಹ ಪದ ಬಳಕೆ ಮಾಡುವ ಮೂಲಕ ದೇವರು ಧರ್ಮವನ್ನು ಅಪಮಾನ ಮಾಡಿದ್ದಾರೆ” ಎಂದು ಭಾಸ್ಕರ್ ಪ್ರಸಾದ್ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.
ಮುಂದುವರಿದು, “ಸೌಜನ್ಯ ಪರ ನ್ಯಾಯಕ್ಕಾಗಿ ಧ್ವನಿ ಎತ್ತಿರುವ ಹೋರಾಟಗಾರರನ್ನು ಕೊಲೆ ಮಾಡಿಸುವ ಮತ್ತು ಅವರ ಮೇಲೆ ಹಲ್ಲೆ ಮಾಡಿಸುವ ಪ್ರಚೋದನಕಾರಿಯಾದಂತಹ ಹೇಳಿಕೆಗಳನ್ನು ತನ್ನ ನ್ಯೂಸ್ ಚಾನೆಲ್ ಮೂಲಕ ನೀಡುವುದು ಮುಂತಾದ ಕಾನೂನುಬಾಹಿರ ಮತ್ತು ಸಮಾಜದ ಶಾಂತಿ ಕದಡುವ ದುಷ್ಕೃತ್ಯಗಳನ್ನು ರಾಕೇಶ್ ಶೆಟ್ಟಿ ಮಾಡಿಕೊಂಡು ಬರುತ್ತಿದ್ದಾರೆ. ಸೌಜನ್ಯ ಪರ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವ ಹೋರಾಟಗಾರರನ್ನು ಹಿಂದೂ ಧರ್ಮದ ವಿರೋಧಿಗಳು ಮತ್ತು ದೈವದ ವಿರೋಧಿಗಳು ಎಂದು ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ. ಧರ್ಮಸ್ಥಳ ಪ್ರಕರಣದ ಸಾಕ್ಷಿ ದೂರುದಾರನ ಬಗ್ಗೆ ಮಾತನಾಡುವಾಗ ಇಸ್ಲಾಂ ಧರ್ಮದ ಭಾವನೆಗಳಿಗೆ ಧಕ್ಕೆ ತಂದು, ಹಿಂದೂ-ಮುಸ್ಲಿಂ ನಡುವೆ ಶಾಂತಿ ಕದಡುವ ಮೂಲಕ ಸಮಾಜ ರಕ್ತಪಾತಕ್ಕೆ ಇಳಿಯುವಂತಹ ದುಷ್ಕೃತ್ಯಗಳನ್ನು ಮಾಡುತ್ತಿದ್ದಾನೆ ಎಂದು ಹೇಳಿದ್ದಾರೆ.
ಇನ್ನು ಕಾಡುಗೋಡಿಯ ಪರಮೇಶ್ ಅವರು ನೀಡಿರುವ ದೂರಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ. ಧರ್ಮಸ್ಥಳ ಪ್ರಕರಣದ ಸಾಕ್ಷಿ ದೂರುದಾರನನ್ನು “ಹುಚ್ಚ”, “ನೀಚರಲ್ಲೆ ನೀಚ” ಎಂದು ಸಾರ್ವಜನಿಕವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಸಾಕ್ಷಿ ದೂರುದಾರ ಖುದ್ದಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಲು ಸಾಧ್ಯವಿಲ್ಲ ಎಂದು ತಿಳಿದು ತಾನು ದೂರು ನೀಡುತ್ತಿರುವುದಾಗಿ ಹೇಳಿದ್ದಾರೆ.
ಪರಮೇಶ್ ಅವರು ನೀಡಿರುವ ದೂರಿನ ಸಂಬಂಧ ಎಫ್‌ಐಆರ್ ದಾಖಲಿಸಲು ಪೊಲೀಸರು ನ್ಯಾಯಾಲಯದ ಅನುಮತಿ ಕೋರಿದ್ದಾರೆ. ಈ ಸಂಬಂಧ ಸೋಮವಾರ ನ್ಯಾಯಾಲಯಕ್ಕೆ ಹಾಜರಾಗಲು ಪರಮೇಶ್ ಅವರಿಗೆ ತಿಳಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.
ಧರ್ಮಸ್ಥಳ ಪ್ರಕರಣ: ತನಿಖೆ ಆರಂಭಿಸಿದ ಎಸ್‌ಐಟಿ; ಸಾಕ್ಷಿ ದೂರುದಾರನ ವಿಚಾರಣೆ


