ಅಸ್ಸಾಂ ಸರ್ಕಾರವು ಗೋಲಾಘಾಟ್ ಜಿಲ್ಲೆಯಲ್ಲಿ 3,600 ಎಕರೆಗೂ ಹೆಚ್ಚು ಭೂಮಿಯ ಅತಿಕ್ರಮಣ ತೆರವು ಕಾರ್ಯಾಚರಣೆ ಕೈಗೊಂಡಿದ್ದು, ಇದರಿಂದ 1,500ಕ್ಕೂ ಹೆಚ್ಚು ಬಂಗಾಳಿ ಮೂಲದ ಮುಸ್ಲಿಂ ಕುಟುಂಬಗಳು ನೆಲೆಯನ್ನು ಕಳೆದುಕೊಳ್ಳಲಿವೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಅರಣ್ಯ ಭೂಮಿಯನ್ನು ಅತಿಕ್ರಮಣ ಮಾಡಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಆದರೆ, ಇದನ್ನು ತಳ್ಳಿ ಹಾಕಿರುವ ಸ್ಥಳೀಯರು, ನಮ್ಮ ಮನೆಗಳನ್ನು ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಲಾಗಿದೆ. ಈ ಮನೆಗಳಿಗೆ ಜಲ ಜೀವನ್ ಮಿಷನ್ ಯೋಜನೆಯಡಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಶಾಲೆಗಳನ್ನು ನಿರ್ಮಿಸಲಾಗಿದೆ. ಮಸೀದಿ, ಮದ್ರಸ, ಚರ್ಚ್, ಮಾರುಕಟ್ಟೆ ಸೇರಿದಂತೆ ಬಹುತೇಕ ಎಲ್ಲಾ ಮನೆಗಳಿಗೆ ವಿದ್ಯುತ್ ಸಂಪರ್ಕವಿದೆ. ಮನೆಗಳು ಅಕ್ರಮ ನಿರ್ಮಾಣವಾಗಿದ್ದರೆ ಈ ಸೌಲಭ್ಯಗಳೆಲ್ಲ ಹೇಗೆ ಸಿಕ್ಕಿತು? ಇವೆಲ್ಲದಕ್ಕೂ ಸೂಕ್ತ ದಾಖಲೆ ಕೊಡುವುದು ಬೇಡವೇ? ಎಂದು ಪ್ರಶ್ನಿಸಿದ್ದಾರೆ.
ಆದಾಗ್ಯೂ, ಸುಮಾರು 3,600 ಎಕರೆಯಿಂದ 4000 ಎಕರೆಯಷ್ಟು ಅರಣ್ಯ ಭೂಮಿಯನ್ನು ಜನರು ಅತಿಕ್ರಮಣ ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
“ಈ ಪ್ರದೇಶಗಳಲ್ಲಿ ಸುಮಾರು 2,000 ಕುಟುಂಬಗಳು ವಾಸಿಸುತ್ತಿವೆ. ಈ ಪೈಕಿ ಸುಮಾರು 1,500 ಕುಟುಂಬಗಳಿಗೆ ನೋಟಿಸ್ ನೀಡಲಾಗಿದೆ. ಅವರು ಇಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ. ಉಳಿದ ಕುಟುಂಬಗಳು ಅರಣ್ಯವಾಸಿಗಳಾಗಿದ್ದು, ಅರಣ್ಯ ಹಕ್ಕು ಸಮಿತಿಯಿಂದ (ಎಫ್‌ಆರ್‌ಸಿ) ಪ್ರಮಾಣಪತ್ರಗಳನ್ನು ಹೊಂದಿವೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮನೆಗಳನ್ನು ಕೆಡವಲಾಗುತ್ತಿರುವ ಕುಟುಂಬಗಳು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದು, ಎಫ್‌ಆರ್‌ಸಿ ಪ್ರಮಾಣಪತ್ರಗಳನ್ನು ಹೊಂದಿರುವವರು ಬೋಡೋ, ನೇಪಾಳಿ, ಮಣಿಪುರಿ ಮತ್ತು ಇತರ ಸಮುದಾಯಗಳಿಗೆ ಸೇರಿದವರು ಎಂದು ಮಾಹಿತಿ ನೀಡಿದ್ದಾರೆ.
“ನೋಟಿಸ್ ಪಡೆದ ಶೇ. 80ರಷ್ಟು ಕುಟುಂಬಗಳು ಕಳೆದ ಕೆಲ ದಿನಗಳಲ್ಲಿ ತಮ್ಮ ಮನೆಗಳನ್ನು ಖಾಲಿ ಮಾಡಿವೆ. ನಾವು ಅವರ ಮನೆಗಳನ್ನು ಮಾತ್ರ ಕೆಡವುತ್ತಿದ್ದೇವೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೋಲಾಘಾಟ್ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಯ ಹಲವಾರು ಹಿರಿಯ ಅಧಿಕಾರಿಗಳು, ಸರುಪಥರ್ ಉಪವಿಭಾಗದ ಅಸ್ಸಾಂ-ನಾಗಾಲ್ಯಾಂಡ್ ಗಡಿಯಲ್ಲಿರುವ ಉರಿಯಮ್‌ಘಾಟ್‌ನ ರೆಂಗ್ಮಾ ಮೀಸಲು ಅರಣ್ಯದಲ್ಲಿ ಸುಮಾರು 3,600 ಎಕರೆಗೂ ಹೆಚ್ಚು ಭೂಮಿಯ ಅತಿಕ್ರಮಣವನ್ನು ತೆರವು ಕಾರ್ಯಾಚರಣೆಯನ್ನು ಮಂಗಳವಾರ ಬೆಳಿಗ್ಗೆಯಿಂದ ಆರಂಭಿಸಿದ್ದಾರೆ ಎಂದು ಪಿಟಿಐ ವರದಿ ಹೇಳಿದೆ.
“ಬಿದ್ಯಾಪುರ ಪ್ರದೇಶದ ಮುಖ್ಯ ಮಾರುಕಟ್ಟೆಯಿಂದ ತೆರವು ಕಾರ್ಯ ಪ್ರಾರಂಭವಾಗಿದೆ. ಕ್ರಮೇಣ ನಾವು ವಸತಿ ಪ್ರದೇಶಗಳಲ್ಲಿ ಅಕ್ರಮ ಕಟ್ಟಡಗಳನ್ನು ಕೆಡವುತ್ತೇವೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದಾಗ್ಯೂ, ಬಾಧಿತ ಕುಟುಂಬಗಳು ಈ ತೆರವು ಕಾರ್ಯಾಚರಣೆಯ ತಾರ್ಕಿಕತೆಯನ್ನು ಪ್ರಶ್ನಿಸಿದ್ದು, ನಾಗಾಲ್ಯಾಂಡ್‌ನ ಆಕ್ರಮಣದಿಂದ ಪ್ರದೇಶವನ್ನು ರಕ್ಷಿಸಲು ಹಿಂದಿನ ಸರ್ಕಾರಗಳು ತಮ್ಮನ್ನು ಈ ಸ್ಥಳಕ್ಕೆ ಕರೆತಂದವು ಎಂದು ಹೇಳಿಕೊಂಡಿದ್ದಾರೆ.
“ಇಲ್ಲಿಂದ ನಾವು ಎಲ್ಲಿಗೆ ಹೋಗೋದು? ನನ್ನ ತಂದೆ ಸುಮಾರು 40 ವರ್ಷಗಳ ಹಿಂದೆ ನಾಗಾಂವ್ ಜಿಲ್ಲೆಯಿಂದ ಇಲ್ಲಿಗೆ ಬಂದವರು. ನಾನು ಇಲ್ಲೇ ಹುಟ್ಟಿ ಬೆಳೆದವ. 1980ರ ದಶಕದಲ್ಲಿ ನಾಗಾಲ್ಯಾಂಡ್‌ನ ಅತಿಕ್ರಮಣದಿಂದ ಅರಣ್ಯ ಭೂಮಿಯನ್ನು ರಕ್ಷಿಸಲು ನಮ್ಮ ಪೂರ್ವಿಕರನ್ನು ಇಲ್ಲಿಗೆ ಕರೆತರಲಾಯಿತು” ಎಂದು ತೆರವು ನೋಟಿಸ್ ಪಡೆದ ಅಲಿ ಕಾಜಿ ಎಂಬವರು ಪಿಟಿಐಗೆ ಹೇಳಿದ್ದಾರೆ.
1978-79ರಲ್ಲಿ ಮಾಜಿ ಮುಖ್ಯಮಂತ್ರಿ ಗೋಲಪ್ ಬೋರ್ಬೊರಾ ನೇತೃತ್ವದ ಜನತಾ ಪಕ್ಷದ ಸರ್ಕಾರ ಮತ್ತು 1985ರಲ್ಲಿ ಅಧಿಕಾರಕ್ಕೆ ಬಂದ ಮೊದಲ ಎಜಿಪಿ ಸರ್ಕಾರವು, ಇಲ್ಲಿನ ಹೆಚ್ಚಿನ ಜನರ ಪೂರ್ವಜರನ್ನುಅರಣ್ಯ ಪ್ರದೇಶದಲ್ಲಿ ನೆಲೆಸುವಂತೆ ಮಾಡಿತು ಎಂದಿದ್ದಾರೆ.
ಗಮನಾರ್ಹವಾಗಿ, ಅಸ್ಸಾಂಗೆ ಸೇರಿದ ಸುಮಾರು 83,000 ಎಕರೆ ಭೂಮಿಯನ್ನು ನಾಲ್ಕು ನೆರೆಯ ರಾಜ್ಯಗಳು ಆಕ್ರಮಿಸಿಕೊಂಡಿವೆ ಎಂದು ಮಾರ್ಚ್‌ನಲ್ಲಿ ವಿಧಾನಸಭೆಗೆ ತಿಳಿಸಲಾಗಿತ್ತು. ಅಸ್ಸಾಂನ ಅತಿ ಹೆಚ್ಚು 59,490.21 ಎಕರೆ ಭೂಮಿಯನ್ನು ನಾಗಾಲ್ಯಾಂಡ್ ತನ್ನ ವಶದಲ್ಲಿರಿಸಿಕೊಂಡಿವೆ ಎಂದು ಹೇಳಲಾಗಿತ್ತು.
“ಈ ತೆರವು ಕಾರ್ಯಾಚರಣೆಯಲ್ಲಿ ನಾವು ಅಧಿಕಾರಿಗಳೊಂದಿಗೆ ಸಹಕರಿಸುತ್ತಿದ್ದೇವೆ. ನಮಗೆ ಬೇರೆಡೆ ನೆಲೆಸಲು ಅವಕಾಶ ಮಾಡಿಕೊಡುವಂತೆ ವಿನಂತಿಸಿದ್ದೇವೆ. ಆದರೆ, ಅವರು ನಿರಾಕರಿಸಿದ್ದಾರೆ. ಈಗ ನಮಗೆ ಡೇರೆಗಳ ಕೆಳಗೆ ಇರುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಕುಡಿಯಲು ನೀರನ್ನು ಕೂಡ ಕೊಡುತ್ತಿಲ್ಲ, ಇನ್ನು ಆಹಾರದ ವಿಷಯ ಮರೆತುಬಿಡಿ. ಇದು ತುಂಬಾ ಅಮಾನವೀಯ” ಎಂದು ಕಾಜಿ ಅಳಲು ತೋಡಿಕೊಂಡಿದ್ದಾರೆ.
“ನಾವು ಅಕ್ರಮ ನಿವಾಸಿಗಳಾಗಿದ್ದರೆ ವಿದ್ಯುತ್ ಸಂಪರ್ಕ ಹೇಗೆ ಸಿಕ್ಕಿತು? ಸರ್ಕಾರ ಶಾಲೆಗಳನ್ನು ಹೇಗೆ ತೆರೆದರು? ನಮಗೆ ನೀರಿನ ಸಂಪರ್ಕ ಹೇಗೆ ಕೊಟ್ಟರು? ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ನಮಗೆ ಮನೆಗಳನ್ನು ನೀಡಲಾಗಿದೆ” ಎಂದು ಮತ್ತೊಬ್ಬರು ಸಂತ್ರಸ್ತೆ ಮುಮ್ತಾಝ್ ಹೇಳಿದ್ದಾರೆ.
ಅಕ್ರಮ ನಿವಾಸಿಗಳು ಎಂದು ಸರ್ಕಾರ ಗುರುತಿಸಿರುವವರಿಗೆ ನೀಡಲಾಗಿರುವ ಸರ್ಕಾರಿ ಸೌಲಭ್ಯಗಳ ಬಗ್ಗೆ ಪ್ರಶ್ನಿಸಿದಾಗ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಈ ಸೌಲಭ್ಯಗಳನ್ನು ಸರ್ಕಾರವೇ ನೀಡಿದೆ ಎಂಬುವುದನ್ನು ಒಪ್ಪಿಕೊಂಡಿದ್ದಾರೆ. 2016ರಲ್ಲಿ ಅಸ್ಸಾಂನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರವೂ ಈ ಜನಗಳಿಗೆ ಸೌಲಭ್ಯಗಳನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಅಕ್ರಮ ನಿವಾಸಿಗಳಾಗಿದ್ದರೆ ಅವರಿಗೆ ಈ ಸೌಲಭ್ಯಗಳನ್ನು ಹೇಗೆ ನೀಡಲಾಯಿತು ಎಂಬುವುದು ನನಗೆ ಗೊತ್ತಿಲ್ಲ. ನಾನು ಇಲ್ಲಿಗೆ ಬರುವ ಮೊದಲೇ ಅವರಿಗೆ ಈ ಸೌಲಭ್ಯಗಳನ್ನು ನೀಡಲಾಗಿತ್ತು ಎಂದು ಅಧಿಕಾರಿ ಹೇಳಿದ್ದಾರೆ.
ಇಲ್ಲಿ ಮುಸ್ಲಿಮರಿಗೆ ಸೇರಿದ ಮಸೀದಿ ಮದ್ರಸಗಳು ಇತ್ತು. ಬೋಡೋಗಳು ಚರ್ಚ್‌ಗಳನ್ನು ನಿರ್ಮಿಸಿದರು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
12 ಹಳ್ಳಿಗಳಲ್ಲಿ ತೆರವು ಕಾರ್ಯಾಚರಣೆ ನಡೆಸಲು, ಅಧಿಕಾರಿಗಳು ಇಡೀ ಪ್ರದೇಶವನ್ನು ಒಂಬತ್ತು ವಲಯಗಳಾಗಿ ವಿಂಗಡಿಸಿ, ಅದಕ್ಕೆ ಅನುಗುಣವಾಗಿ ಸಮೀಕ್ಷೆ ನಡೆಸಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ. ರೆಂಗ್ಮಾ ಮೀಸಲು ಅರಣ್ಯದ ಸುಮಾರು 30 ಹಳ್ಳಿಗಳ ವ್ಯಾಪ್ತಿಯಲ್ಲಿ ಭೂ ಸಮೀಕ್ಷೆ ನಡೆಸಲಾಗಿದೆ ಎಂದಿದ್ದಾರೆ.
12 ಹಳ್ಳಿಗಳಲ್ಲಿ ಶಂಕಿತ ಅತಿಕ್ರಮಣಕಾರರು ಸಾವಿರಾರು ಎಕರೆ ಅರಣ್ಯ ಭೂಮಿಯನ್ನು ಕೃಷಿ ಭೂಮಿಯಾಗಿ ಪರಿವರ್ತಿಸಿರುವುದು ಕಂಡುಬಂದಿದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದು, ಅರಣ್ಯ ಇಲಾಖೆಯಿಂದ ಅತಿಕ್ರಮಣದಾರರಿಗೆ ಸೂಕ್ತ ನೋಟಿಸ್ ನೀಡಲಾಗಿದೆ. ಸ್ಥಳ ಖಾಲಿ ಮಾಡಲು ಏಳು ದಿನಗಳ ಕಾಲಾವಕಾಶ ಕೊಡಲಾಗಿದೆ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಶಂಕಿತ ಅತಿಕ್ರಮಣದಾರರಲ್ಲಿ ಹಲವರು ನಾಗಾಂವ್, ಮೋರಿಗಾಂವ್ ಮತ್ತು ಸೋನಿತ್‌ಪುರ ಜಿಲ್ಲೆಗಳವರು ಎಂದು ವರದಿಯಾಗಿದ್ದಾಗಿ ಅವರು ಹೇಳಿದ್ದಾರೆ.
ತೆರವು ಕಾರ್ಯಾಚರಣೆಯ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡಲು ಅಸ್ಸಾಂ ಪೊಲೀಸ್ ಗೋಲಾಘಾಟ್‌ನಲ್ಲಿರುವ ಪ್ರಧಾನ ಕಚೇರಿಯಿಂದ ಹಿರಿಯ ಅಧಿಕಾರಿಯನ್ನು ನಿಯೋಜಿಸಿದೆ.
“ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನಾವು ಸಂಪೂರ್ಣವಾಗಿ ಸಿದ್ಧರಿದ್ದೇವೆ. ನಮ್ಮ ಸಿಬ್ಬಂದಿಯನ್ನು ಹೊರತುಪಡಿಸಿ, ತೆರವು ಕಾರ್ಯಾಚರಣೆಗೆ ಸಿಆರ್‌ಪಿಎಫ್‌ನ ಬೆಂಬಲವನ್ನು ಪಡೆದುಕೊಂಡಿದ್ದೇವೆ” ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.
ಈ ನಡುವೆ ಅಸ್ಸಾಂನಲ್ಲಿ ನೆಲೆಯನ್ನು ಕಳೆದುಕೊಂಡ ಜನರು ನಾಗಲ್ಯಾಂಡ್ ಪ್ರವೇಶಿಸದಂತೆ ತಡೆಯಲು, ಗಡಿಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಅಲ್ಲಿನ ಸರ್ಕಾರ ಸೂಚಿಸಿದೆ.
ಜುಲೈ 25ರಂದು, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಉರಿಯಮ್‌ಘಾಟ್‌ಗೆ ಭೇಟಿ ನೀಡಿ ಅತಿಕ್ರಮಣಗೊಂಡಿರುವ ಪ್ರದೇಶಗಳನ್ನು ಪರಿಶೀಲಿಸಿದ್ದಾರೆ. ಇಲ್ಲಿ ತೆರವು ಕಾರ್ಯಾಚರಣೆಗೆ ಈಗಾಗಲೇ ನೋಟಿಸ್ ನೀಡಲಾಗಿದೆ.
ಈ ಪ್ರದೇಶದಲ್ಲಿ ನೆಲೆಸಿದವರು ಅಸ್ಸಾಂನ ವಿವಿಧ ಜಿಲ್ಲೆಗಳಾದ ಕ್ಯಾಚರ್, ಶ್ರೀಭೂಮಿ, ಧುಬ್ರಿ, ಬಾರ್ಪೇಟಾ, ಹೊಜೈ, ನಾಗಾಂವ್ ಮತ್ತು ಮೋರಿಗಾಂವ್ ಹಾಗೂ ಪಶ್ಚಿಮ ಬಂಗಾಳ ಮತ್ತು ಬಿಹಾರ ಸೇರಿದಂತೆ ಇತರ ರಾಜ್ಯಗಳಿಂದ ಬಂದವರು ಎಂದು ಸಿಎಂ ಶರ್ಮಾ ಹೇಳಿದ್ದಾರೆ.
Courtesy:newindianexpress.com
ಛತ್ತೀಸ್‌ಗಢ| ಕ್ರಿಶ್ಚಿಯನ್ ಸಮುದಾಯದಲ್ಲಿ ಆತಂಕ ಮೂಡಿಸಿದ ಸನ್ಯಾಸಿನಿಯರ ಬಂಧನ


