ರಾಜ್ಯ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕ ಪ್ರಣಬ್ ಮೊಹಂತಿ ಅವರು ಕೇಂದ್ರ ಸೇವೆಗೆ ಅರ್ಹತೆ ಪಡೆದ ಡಿಜಿಪಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗೆ ಸಭೆ ನಡೆಸಿದ ಕೇಂದ್ರ ಸರ್ಕಾರದ ನೇಮಕಾತಿಗಳ ಸಂಪುಟ ಸಮಿತಿಯು, ವಿವಿಧ ರಾಜ್ಯಗಳಲ್ಲಿ ಕರ್ತವ್ಯದಲ್ಲಿರುವ ಐಪಿಎಸ್ ಅಧಿಕಾರಿಗಳನ್ನು ಕೇಂದ್ರ ಸೇವೆಯ ಅರ್ಹರ ಪಟ್ಟಿಗೆ ಆಯ್ಕೆ ಮಾಡಿದೆ ಎಂದು ತಿಳಿದು ಬಂದಿದೆ.
ಸಿಬಿಐ, ಎನ್‌ಎಐ ಸೇರಿ ಕೇಂದ್ರ ಸರ್ಕಾರದ ವಿವಿಧ ತನಿಖಾ ಸಂಸ್ಥೆಗಳ ಮಹಾನಿರ್ದೇಶಕ ಹುದ್ದೆಗೆ ಈ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಬಹುದಾಗಿದೆ. ಈ ಪಟ್ಟಿಯಲ್ಲಿ 35 ಅಧಿಕಾರಿಗಳಿದ್ದು, ಕರ್ನಾಟಕದಿಂದ ಪ್ರಣಬ್ ಮೊಹಂತಿ ಮಾತ್ರ ಇದ್ದಾರೆ ಎಂದು ವರದಿಗಳು ಹೇಳಿವೆ.
ಧರ್ಮಸ್ಥಳದಲ್ಲಿ ನೂರಾರು ಹೆಣಗಳನ್ನು ಹೂತು ಹಾಕಲಾಗಿದೆ ಎಂಬ ದೂರಿಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರದ ರಚಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ)ಯ ನೇತೃತ್ವವನ್ನು ಪ್ರಣಬ್ ಮೊಹಂತಿ ವಹಿಸಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿರುವ ಧರ್ಮಸ್ಥಳ ಪ್ರಕರಣದ ಶವಗಳ ಶೋಧ ಕಾರ್ಯ ಕಳೆದ ಎರಡು ದಿನಗಳಿಂದ ನಡೆಯುತ್ತಿದೆ. ಈ ನಡುವೆ ಪ್ರಣಬ್ ಮೊಹಂತಿ ಕೇಂದ್ರ ಸೇವೆಗೆ ಅರ್ಹತೆ ಪಡೆದವರ ಪಟ್ಟಿಯಲ್ಲಿ ಮೊಹಾಂತಿ ಹೆಸರಿದೆ ಎಂಬ ವರದಿ ಬಂದಿದೆ.
ಮೊಹಾಂತಿ ಕೇಂದ್ರಕ್ಕೆ ಹೋದರೆ ಎಸ್ಐಟಿಗೆ ಬೇರೆ ಅಧಿಕಾರಿಯ ನೇಮಕ ಕುರಿತು ಚರ್ಚೆ: ಗೃಹ ಸಚಿವ ಪರಮೇಶ್ವರ್
ಒಂದು ವೇಳೆ ಪ್ರಣಬ್ ಮೊಹಂತಿ ಕೇಂದ್ರ ಸೇವೆಗೆ ಅಯ್ಕೆಯಾದರೆ ಎಸ್‌ಐಟಿಗೆ ಬೇರೆ ಅಧಿಕಾರಿಯನ್ನು ನೇಮಕ ಮಾಡುವ ಬಗ್ಗೆ ಚರ್ಚಿಸುತ್ತೇವೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, “ಒಂದು ವೇಳೆ ಪ್ರಣಬ್ ಮೊಹಂತಿ ಅವರು ಕೇಂದ್ರ ಸೇವೆಗೆ ಆಯ್ಕೆಯಾದರೆ, ಅವರು ಅಲ್ಲಿದ್ದುಕೊಂಡು ಎಸ್‌ಐಟಿಯ ನೇತೃತ್ವ ವಹಿಸಬಹುದಾ? ಎಂದು ನೋಡುತ್ತೇವೆ. ಒಂದು ವೇಳೆ ಕಾನೂನು ಪ್ರಕಾರ ಅದು ಸಾಧ್ಯವಿಲ್ಲದಿದ್ದರೆ, ಅವರ ಬದಲಿಗೆ ಬೇರೆ ಅಧಿಕಾರಿಯನ್ನು ನೇಮಕ ಮಾಡುತ್ತೇವೆ ಎಂದು ಹೇಳಿದ್ದಾರೆ.
ಎಸ್‌ಐಟಿ ತನಿಖೆ ಬಗ್ಗೆ ಈಗ ಯಾವುದೇ ಹೇಳಿಕೆ ನೀಡುವುದಿಲ್ಲ. ತನಿಖೆ ಸಂಪೂರ್ಣ ಆದ ಬಳಿಕ ನಮಗೆ ವರದಿ ಬರಲಿದೆ. ಆ ಬಳಿಕ ಮಾತನಾಡಬಹುದೇ ವಿನಃ, ಈಗ ಮಧ್ಯದಲ್ಲಿ ಯಾರು ಮಾತನಾಡಬಾರದು ಅಂದುಕೊಂಡು ಯಾವುದೇ ಹೇಳಿಕೆ ನೀಡುತ್ತಿಲ್ಲ ಎಂದಿದ್ದಾರೆ.
ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣ| ಆ.1ಕ್ಕೆ ತೀರ್ಪು ಮುಂದೂಡಿದ ನ್ಯಾಯಾಲಯ


